ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣ, ಪುನೀತ್‌, ಸುದೀಪ್‌, ಯಶ್‌, ರಮೇಶ್‌ ‘ಗೃಹ’ಬಂಧನ

Last Updated 20 ಮಾರ್ಚ್ 2020, 5:56 IST
ಅಕ್ಷರ ಗಾತ್ರ

ಕೊರೊನಾ ಭಯದಲ್ಲಿ ಕನ್ನಡದ ಸ್ಟಾರ್‌ ನಟರೆಲ್ಲ ಮನೆ ಸೇರಿಕೊಂಡಿದ್ದಾರೆ. ಚಿತ್ರರಂಗ ಸ್ತಬ್ಧ ಆಗಿರುವುದರಿಂದ ಈ ಗೃಹಬಂಧನ ಅನಿವಾರ್ಯ. ಆದರೆ ಮನೆಯಲ್ಲೂ ಅವರು ಸುಮ್ಮನೆ ಕುಳಿತಿಲ್ಲ.

‘ಏನ್‌ ಮಾಡ್ತಿದೀರಿ?’ ಎಂದು ಶಿವರಾಜ್‌ಕುಮಾರ್‌ ಅವರನ್ನು ‘ಪ್ರಜಾಪ್ಲಸ್‌’ ಕೇಳಿದಾಗ ಬಂದ ಉತ್ತರವಿದು; ‘ಸಿನಿಮಾಗಳನ್ನು ನೋಡುತ್ತಿದ್ದೇನೆ. ಸ್ಕ್ರಿಪ್ಟ್‌ ಕೇಳುವುದರಲ್ಲಿ ತೊಡಗಿಸಿಕೊಂಡಿದ್ದೇನೆ. ಮನೆ ಸಮೀಪವೇ ಬೆಳಿಗ್ಗೆ ವಾಕಿಂಗ್ ಮಾಡಿ ಮನೆ ಸೇರಿಕೊಂಡರೆ ಮತ್ತೆ ಹೊರಬರುವುದು ಮರುದಿನ ಬೆಳಿಗ್ಗೆಯೇ’ ಎಂದರು.

ಮನೆಯಲ್ಲಿ ಕುಳಿತು ಶಿವಣ್ಣ ಯಾವ ಸಿನಿಮಾಗಳನ್ನು ನೋಡಿದ್ದಾರೆ?

ಕನ್ನಡದ ‘ಲವ್‌ ಮಾಕ್ಟೇಲ್‌’, ಸೂರಜ್‌ ಪಾಂಚೋಲಿ ನಟನೆಯ ‘ಸ್ಯಾಟಲೈಟ್‌ ಶಂಕರ್‌’ ಹಾಗೂಸನ್ನಿ ಡಿಯೋಲ್‌ ಪುತ್ರ ಕರಣ್‌ ಡಿಯೋಲ್‌ ನಟನೆಯ ‘ಪಲ್‌ ಪಲ್‌ ದಿಲ್‌ಕೆ ಪಾಸ್’ ಹಿಂದಿಸಿನಿಮಾ ನೋಡಿದೆ. ‘ದಿಯಾ’ ಸಿನಿಮಾ ನೋಡುವವನಿದ್ದೇನೆ. ನನ್ನ ‘ಆರ್‌ಡಿಎಕ್ಸ್‌’ ಸಿನಿಮಾದ ಪ್ಯಾನಲ್‌ ರೀಡಿಂಗ್‌ ಮುಗಿಸಿದ್ದೇನೆ. ‘ರಥಾವರ’ ಚಿತ್ರದ ನಿರ್ದೇಶಕ ಚಂದ್ರು ಅವರಿಂದ ಕರಗ ಆಧರಿಸಿದ ಸಿನಿಮಾವೊಂದರ ಸ್ಕ್ರಿಪ್ಟ್‌ ಆಲಿಸಿದ್ದೇನೆ ಎಂದರು.

ನಟ ಪುನೀತ್‌ ರಾಜ್‌ಕುಮಾರ್‌ ಕೂಡ ಮನೆಯಲ್ಲೇ ಕುಟುಂಬದ ಸದಸ್ಯರ ಜತೆಗೆ ಕಾಲ ಕಳೆಯುತ್ತಿದ್ದಾರೆ. ಹೊಸ ಸಿನಿಮಾಗಳ ಕಥೆ ಕೇಳುತ್ತಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸುವಜತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದಾರೆ. ಹಾಗೆಯೇ ಪಿಆರ್‌ಕೆ ಪ್ರೊಡಕ್ಷನ್‌ ಕಂಪನಿಯ ಕೆಲಸ ಕಾರ್ಯಗಳತ್ತ ಗಮನ ಹರಿಸಿದ್ದಾರೆ– ಎನ್ನುತ್ತಾರೆ ಅವರ ಆಪ್ತರು.

ನಟ ಸುದೀಪ್‌ ಅವರು ಮನೆಯ ಕೆಲಸಗಾರರಿಗೂ ರಜೆ ಕೊಟ್ಟು ಕಳುಹಿಸಿದ್ದುತಮ್ಮ ತಂದೆ, ತಾಯಿ ಜತೆಗೆ ಹಾಗೂ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ವೃದ್ಧರು ಇರುವುದರಿಂದ ಹೊರಗಿನವರನ್ನು ಅವರು ಭೇಟಿಯಾಗುತ್ತಿಲ್ಲ. ಹಾಗೆಯೇ ಸುದೀಪ್‌ ಅವರೇ ನಿರ್ದೇಶಿಸಬೇಕೆಂದಿರುವ ಸಿನಿಮಾದ ಸ್ಕ್ರಿಪ್ಟ್‌ ತಯಾರಿಗೆ ಈ ಬಿಡುವಿನ ಸಮಯ ಬಳಸಿಕೊಳ್ಳುತ್ತಿದ್ದಾರಂತೆ. ಜತೆಗೆ ಬೇರೆ ಬೇರೆ ಭಾಷೆಗಳ ಸಿನಿಮಾ ನೋಡುವುದರಲ್ಲೂ ನಿರತರಾಗಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ನಟ ಯಶ್‌ ಕೂಡ ಮನೆ ಸೇರಿಕೊಂಡಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಹಾಗೆಯೇ ಸಿನಿಮಾ ಸಂಬಂಧಿ ಕೆಲಸಗಳನ್ನು ಮನೆಯಿಂದಲೇ ಮಾಡುತ್ತಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

ರಮೇಶ್‌ ಅರವಿಂದ್‌ ಅವರದ್ದೂ ಡಿಟ್ಟೋ. ‘‘ನನ್ನ ‘100’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮತ್ತು ‘ನಂದಿನಿ’ ಸೀರಿಯಲ್‌ನ ಕೆಲಸಗಳನ್ನು ಮನೆಯಲ್ಲೇ ಕುಳಿತು ಮಾಡಿಕೊಳ್ಳುತ್ತಿದ್ದೇನೆ. ನಿನ್ನೆಯಷ್ಟೇ‘ಶಿವಾಜಿ ಸುರತ್ಕಲ್‌ 2’ ಸಿನಿಮಾದ ಸ್ಕ್ರಿಪ್ಟ್‌ ಕೂಡ ಕೇಳಿದ್ದು, ಆಕಾಶ್‌ ಶ್ರೀವತ್ಸ ಜತೆಗೆ ಸ್ಕ್ರಿಪ್ಟ್‌ ಬಗ್ಗೆ ಚರ್ಚಿಸಿದೆ. ಅಲ್ಲದೆ, ಒಳ್ಳೆಯ ಸಿನಿಮಾಗಳನ್ನು ನೋಡುವ ಅವಕಾಶ ಸಿಕ್ಕಿದೆ. ಕನ್ನಡ ಸೇರಿ ಬೇರೆ ಬೇರೆ ಭಾಷೆಗಳ ಚಿತ್ರಗಳನ್ನು ನೋಡುತ್ತಿದ್ದೇನೆ. ‘ದಿಯಾ’ ಮತ್ತು ‘ಲವ್‌ಮಾಕ್ಟೇಲ್‌’ ಚಿತ್ರಗಳನ್ನು ನೋಡಿರಲಿಲ್ಲ. ಈ ಎರಡು ಸಿನಿಮಾಗಳನ್ನು ಅಮೆಜಾನ್‌ ಪ್ರೈಮ್‌ನಲ್ಲಿ ವೀಕ್ಷಿಸಿದೆ. ಹೊಸ ಸಿನಿಮಾ ಸಂಬಂಧಿ ಮಾತುಕತೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸುತ್ತಿದ್ದೇನೆ’’ ಎಂದರು.

ನಟ ನೀನಾಸಂ ಸತೀಶ್‌, ಕೊರೊನಾದಿಂದ ಸೃಷ್ಟಿಯಾಗಿರುವ ಬಿಡುವನ್ನು ಬಾಡಿ ವರ್ಕೌಟ್‌ ಮತ್ತು ಹೊಸ ಸಿನಿಮಾದ ಚಿತ್ರಕಥೆ ಹೆಣೆಯುವುದಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ. ‘ಮೈನೇಮ್‌ ಈಸ್‌ ಸಿದ್ದೇಗೌಡ’ ಚಿತ್ರದ ಸ್ಕ್ರಿಪ್ಟ್‌ ತಯಾರಿ ನಡೆಯುತ್ತಿದೆ. ‘ಗೋದ್ರಾ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮತ್ತು ಸಾಂಗ್‌ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸಮಯ ಸಿಕ್ಕಿರುವಾಗ ಕನ್ನಡ ಸೇರಿ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿದ್ದೇನೆ. ‘ಲವ್‌ ಮಾಕ್ಟೇಲ್‌’ ಸಿನಿಮಾ ನಿನ್ನೆಯಷ್ಟೆ ನೋಡಿದೆ ಎಂದರು ಸತೀಶ್‌.

ನಟ ದರ್ಶನ್‌ ಕೂಡ ಮೈಸೂರಿನ ಬಳಿ ಇರುವ ತಮ್ಮ ಫಾರ್ಮ್‌ಹೌಸ್‌ ಸೇರಿಕೊಂಡಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT