ಗುರುವಾರ , ಡಿಸೆಂಬರ್ 3, 2020
19 °C

‘ಕನ್ನಡಿಗ’ನ ಪಟ್ಟದರಸಿಯಾದ ಪಾವನಾ!

ಸಂದರ್ಶನ: ಕೆ.ಎಂ. ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

‘ಜಟ್ಟ’ ಮತ್ತು ‘ಗೊಂಬೆಗಳ ಲವ್‌’ ಚಿತ್ರಗಳ ಖ್ಯಾತಿಯ ನಟಿ ಪಾವನಾ ಗೌಡ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರು ನಾಯಕಿಯಾಗಿ ನಟಿಸಿರುವ ಆರು ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಲಾಕ್‌ಡೌನ್‌ ನಂತರ ಹೊಸ ಮೂರು ಚಿತ್ರಗಳಿಗೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ಟಾರ್‌ ನಟ ರವಿಚಂದ್ರನ್‌ ಜತೆಗೆ ಈಗ ‘ಕನ್ನಡಿಗ’ ಚಿತ್ರದಲ್ಲಿ ನಟಿಸುವ ಅವಕಾಶವು ಈ ಪ್ರತಿಭಾನ್ವಿತ ನಟಿಯ ಪಾಲಿಗೆ ಸಿಕ್ಕಿದೆ. ಈ ಚಿತ್ರಕ್ಕೆ ‘ಜಟ್ಟ’ ಮತ್ತು ‘ಮೈತ್ರಿ’ಯಂತಹ ಚಿತ್ರಗಳನ್ನು ನಿರ್ದೇಶಿಸಿದ ಬಿ.ಎಂ. ಗಿರಿರಾಜ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಟಿಯಾಗಿ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ‘ಮೆಂಟರ್‌’ ಗಿರಿರಾಜ್‌ ನಿರ್ದೇಶನ ಮತ್ತು ಎನ್‌.ಎಸ್‌. ರಾಜ್‌ಕುಮಾರ್‌ ನಿರ್ಮಾಣದ ಬಹು ನಿರೀಕ್ಷೆಯ ದೊಡ್ಡ ಚಿತ್ರದಲ್ಲಿ ನಟಿಸುತ್ತಿರುವ ಖುಷಿ ಪಾವನಾ ಅವರದು. ‘ಕನ್ನಡಿಗ’ ಗುಣಭದ್ರನ ಪಟ್ಟದರಸಿ ಪಾತ್ರದಲ್ಲಿ ಮಿನುಗಲು ಸಜ್ಜಾಗಿರುವ ಪಾವನಾ ಈ ಚಿತ್ರದ ಕುರಿತು ಹಲವು ಸಂಗತಿಗಳನ್ನು ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

‘ಕನ್ನಡಿಗ’ದ ಕಥೆ ಮತ್ತು ನಿಮ್ಮ ಪಾತ್ರವೇನು?

ಕನ್ನಡದ ಮೊದಲ ಲಿಪಿಯ ಹಿಂದಿರುವ ಯಶೋಗಾಥೆ ಮತ್ತು ಕಿಟೆಲ್‌ ಡಿಕ್ಷನರಿಯ ಹಿನ್ನೆಲೆಯನ್ನು ತೆರೆದಿಡುವ ಕಥೆ ಇದು. ಇದರಲ್ಲಿ ಒಂದು ಕುಟುಂಬ ನಿರ್ವಹಿಸಿರುವ ಪಾತ್ರ ಮತ್ತು ಹೋರಾಟವನ್ನು ಚಿತ್ರ ಕೇಂದ್ರೀಕರಿಸಿದೆ. ಇದೊಂದು ಐತಿಹಾಸಿಕ ಕಥಾಹಂದರದ ಚಿತ್ರ. ಈ ಚಿತ್ರದಲ್ಲಿ ರವಿಚಂದ್ರನ್‌ ಅವರ ಪತ್ನಿಯ ಪಾತ್ರ ನಿರ್ವಹಿಸುತ್ತಿರುವೆ. 

ಸ್ವಲ್ಪ ಹಳೆಗನ್ನಡಕ್ಕೆ ಹತ್ತಿರವಾದ ಡಿಕ್ಷನರಿ ಕನ್ನಡ ಭಾಷಾ ಬಳಕೆ ಸಂಭಾಷಣೆಯಲ್ಲಿದೆ. ಸಂಸ್ಕೃತವೂ ಇದೆ. ಸಂಭಾಷಣೆಯಲ್ಲಿ ಸಾಮಾನ್ಯ ಕನ್ನಡವಿರುವುದಿಲ್ಲ, ಕುಂದ್ರಾಪದ ಭಾಷೆಯಂತಿರಲಿದೆ. ‘ಜಟ್ಟಾ’ ಸಿನಿಮಾದಲ್ಲಿನ ಸಂಭಾಷಣೆಗೆ ತುಸು ಹೋಲಿಕೆ ಇರಲಿದೆ. ನನ್ನ ಪಾತ್ರ ತುಂಬಾ ಟ್ರೆಡಿಷನ್‌ ಆಗಿರುವಂತದ್ದು.

ಪಾತ್ರಕ್ಕೆ ನೀವು ಆಯ್ಕೆಯಾದ ಬಗ್ಗೆ ಹೇಳಿ...

ನಿರ್ದೇಶಕ ಬಿ.ಎಂ. ಗಿರಿರಾಜ್‌ ಅವರ ಜತೆಗೆ ಈ ಹಿಂದೆ ಎರಡು ಸಿನಿಮಾಗಳಲ್ಲಿ ನಟಿಸಿರುವೆ. ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಮಾಡಲು ಪಾತ್ರ ಬಯಸುವ ಭಾಷೆಯನ್ನು ಬಳಸುವ ಮತ್ತು ಪಾತ್ರ ನಿಭಾಯಿಸುವ ಶಕ್ತಿ ಯಾರಲ್ಲಿದೆ ಎಂದು ನಿರ್ದೇಶಕರು ಹುಡುಕುತ್ತಿದ್ದರಂತೆ, ಆ ಶಕ್ತಿ ನನ್ನಲ್ಲಿ ಜಾಸ್ತಿಯೇ ಇದೆ ಎನಿಸಿ, ಈ ಪಾತ್ರವನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿಭಾಯಿಸಬಲ್ಲೆ ಎನ್ನುವ ನಂಬಿಕೆಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅದೂ ಕೊನೆ ಗಳಿಗೆಯಲ್ಲಿ ಅಂದರೆ ಚಿತ್ರದ ಮುಹೂರ್ತದ ಹಿಂದಿನ ದಿನ ನನ್ನ ಆಯ್ಕೆ ಅಂತಿಮವಾಗಿದೆ.

ಈ ಪಾತ್ರಕ್ಕಾಗಿ ತಯಾರಿ ಹೇಗಿದೆ?

ಈ ಪಾತ್ರಕ್ಕೆ ಎಷ್ಟು ತಯಾರಿ ಮಾಡಿದರೂ ಸಾಲದು. ನನಗೆ ಸ್ಕ್ರಿಪ್ಟ್‌ ಸಿಕ್ಕಿರುವುದೇ ಎರಡು ದಿನಗಳ ಹಿಂದೆ. ಸ್ಕ್ರಿಪ್ಟ್ ಅನ್ನು ರಾತ್ರಿ– ಹಗಲು ಓದಿ, ಒಂದಿಷ್ಟು ರಿಹರ್ಸಲ್‌ ನಡೆಸಿರುವೆ. ಈಗಾಗಲೇ ಶೂಟಿಂಗ್‌ ಶುರುವಾಗಿದೆ. ನನಗೆ ತುಂಬಾ ಕಡಿಮೆ ಕಾಲಾವಧಿ ಇದೆ. ನನ್ನ ಪಾತ್ರದ ಶೂಟಿಂಗ್‌ ಅ.29ರಿಂದಲೇ ಚಿಕ್ಕಮಗಳೂರಿನ ತಾಣಗಳಲ್ಲಿ ಆರಂಭವಾಗಿದೆ. 20 ದಿನಗಳ ಶೂಟಿಂಗ್‌ ಮುಗಿಸಿ, ನಂತರ ಸಾಗರದಲ್ಲಿ ಚಿತ್ರೀಕರಣ ನಡೆಯಲಿದೆ.

ನಟಿಸಿರುವ ಚಿತ್ರಗಳು ಯಾವ ಹಂತದಲ್ಲಿವೆ?

ನನ್ನ ನಟನೆಯ ‘ರುದ್ರಿ’, ‘ಮೈಸೂರ್‌ ಡೈರೀಸ್‌’, ‘ಕಲಿವೀರ’ ಹಾಗೂ ‘ತೂತು ಮಡಿಕೆ’ ಈ ನಾಲ್ಕು ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಇನ್ನು ‘ಮೆಹಬೂಬಾ’ ಮತ್ತು ‘ಫೈಟ್‌’ ಚಿತ್ರಗಳ ಹಾಡುಗಳು ಮಾತ್ರ ಚಿತ್ರೀಕರಣಕ್ಕೆ ಬಾಕಿ ಇವೆ. ಇವೆಲ್ಲವೂ ಲಾಕ್‌ಡೌನ್‌ಗೂ ಮೊದಲೇ ಮಾಡಿರುವಂತಹ ಚಿತ್ರಗಳು.

ಮುಂದಿನ ಯೋಜನೆಗಳು?

ಲಾಕ್‌ಡೌನ್‌ ನಂತರ ನನ್ನ ಪಾಲಿಗೆ ಮೊದಲ ಚಿತ್ರ ‘ಕನ್ನಡಿಗ’. ಇದಲ್ಲದೇ ಇನ್ನೆರಡು ಚಿತ್ರಗಳಿಗೆ ಸಹಿ ಮಾಡಿದ್ದೇನೆ. ಆ ಚಿತ್ರಗಳಿಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಇದರಲ್ಲಿ ಒಂದು ಚಿತ್ರವಂತೂ ದೊಡ್ಡ ಬ್ಯಾನರ್‌ನಡಿ ತಯಾರಾಗುತ್ತಿರುವ ಥ್ರಿಲ್ಲರ್‌ ಕ್ರೈಂ ಕಥಾಹಂದರದ ಚಿತ್ರ ಎಂದು ಮಾತಿಗೆ ಅಲ್ಪವಿರಾಮ ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು