ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಭರಾಟೆ: ಯಾರಾಗ್ತಾರೆ ಅಧ್ಯಕ್ಷರು?

Published 21 ಸೆಪ್ಟೆಂಬರ್ 2023, 20:00 IST
Last Updated 21 ಸೆಪ್ಟೆಂಬರ್ 2023, 20:00 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತ ಮಂಡಳಿಯ ಅವಧಿ ಮುಗಿದು ನಾಲ್ಕು ತಿಂಗಳಾದ ಬಳಿಕ ಅಂತಿಮವಾಗಿ ಸೆಪ್ಟೆಂಬರ್‌ 23ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಈಗಿನ ಆಡಳಿತ ಮಂಡಳಿಯ ಅವಧಿ ಮೇ 28ಕ್ಕೆ ಮುಕ್ತಾಯಗೊಂಡಿದ್ದು, ಜೂನ್‌ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಲೆಕ್ಕಪರಿಶೋಧನೆಯ ಕಾರಣ ನೀಡಿ ಹಾಲಿ ಆಡಳಿತ ಮಂಡಳಿ ಚುನಾವಣೆ ನಡೆಸಿರಲಿಲ್ಲ. ಹೀಗಾಗಿ ದೂರು ದಾಖಲಾಗಿತ್ತು. ಬಳಿಕ ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಯು ಮಂಡಳಿ ಅಧ್ಯಕ್ಷರಿಗೆ ನೋಟಿಸ್‌ ನೀಡಿದ್ದರು.

‘65 ವರ್ಷಗಳ ವಾಣಿಜ್ಯ ಮಂಡಳಿ ಇತಿಹಾಸದಲ್ಲಿ ಇದೇ ಮೊದಲು ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಸ್ಪರ್ಧಿಗಳು ಕಣದಲ್ಲಿದ್ದಾರೆ. ಈ ವರ್ಷ ಒಟ್ಟಾರೆ ಸ್ಪರ್ಧಿಗಳ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ’ ಎನ್ನುತ್ತಾರೆ ಹಾಲಿ ಆಡಳಿತ ಮಂಡಳಿ ಪದಾಧಿಕಾರಿಯೊಬ್ಬರು.

ನಿರ್ಮಾಪಕ, ಹಂಚಿಕೆದಾರ, ಪ್ರದರ್ಶಕ ವಲಯಗಳಿಂದ ಒಟ್ಟು 93 ಸ್ಥಾನಗಳಿಗೆ 158 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಿಂದಿನ ವರ್ಷ ಈ ಅಭ್ಯರ್ಥಿಗಳ ಸಂಖ್ಯೆ 100ರ ಆಸುಪಾಸಿನಲ್ಲಿತ್ತು. 

ಪದಾಧಿಕಾರಿಗಳ ಸ್ಥಾನಕ್ಕೆ ತೀವ್ರ ಪೈಪೋಟಿ: ಪ್ರತಿ ವರ್ಷ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾಗಿ ಒಬ್ಬರು ಅಧ್ಯಕ್ಷ, ಮೂರು ವಲಯಗಳಿಂದ ತಲಾ ಒಬ್ಬರು ಖಜಾಂಚಿ, ಮೂರು ವಲಯಕ್ಕೆ ಪ್ರತ್ಯೇಕ ಉಪಾಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ನಡೆಯುತ್ತದೆ. 

ಈ ಸಲ ಅಧ್ಯಕ್ಷ ಸ್ಥಾನಕ್ಕೆ ‘ಎಕ್ಸ್‌ಕ್ಯೂಸ್‌ ಮಿ’ ಸೇರಿದಂತೆ ಕೆಲ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ಎನ್.ಎಮ್. ಸುರೇಶ್, ವಿತರಕ ಮಾರ್ಸ್‌ ಸುರೇಶ್‌, ವಿತರಕ ಹಾಗೂ ನಿರ್ಮಾಪಕ ಶಿಲ್ಪ ಶ್ರೀನಿವಾಸ್‌, ವಿತರಕ ಎ.ಗಣೇಶ್‌ ಕಣದಲ್ಲಿದ್ದಾರೆ. 

ಹಾಲಿ ಅಧ್ಯಕ್ಷ ಭಾ.ಮಾ. ಹರೀಶ್‌ ಸಹೋದರ ಭಾ.ಮಾ. ಗಿರೀಶ್‌ ನಿರ್ಮಾಪಕ ವಲಯದಿಂದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಪತ್ರಕರ್ತ ವೀರೇಶ್‌ ಕೆ.ಎಂ ಹಾಗೂ ರಾಜೇಶ್‌ ಬ್ರಹ್ಮಾವರ ಕೂಡ ಈ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ.

ವಿತರಕ ವಲಯದಿಂದ ಕಾರ್ಯದರ್ಶಿ ಸ್ಥಾನಕ್ಕೆ ನಟ ಕರಿಸುಬ್ಬು ಸೇರಿದಂತೆ ಇನ್ನಿಬ್ಬರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಪ್ರದರ್ಶಕ ವಲಯದಿಂದ ಗೌರವ ಕಾರ್ಯದರ್ಶಿಯಾಗಿ ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಆರ್‌.ಸುಂದರರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಟಿ ಪ್ರಮೀಳಾ ಜೋಷಾಯ್‌, ನಿರ್ಮಾಪಕ ಸೂರಪ್ಪ ಬಾಬು, ಚಿಂಗಾರಿ ಮಹದೇವ್‌, ರೂಪಾ ಅಯ್ಯರ್‌ ಆಯ್ಕೆ ಬಯಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ನಿರ್ದೇಶಕ ದಯಾಳ್ ಪದ್ಮನಾಭನ್‌ ಸ್ಪರ್ಧಿಯಾಗಿದ್ದಾರೆ.

ಭರವಸೆಗಳ ಮಹಾಪೂರ: ₹5 ಲಕ್ಷ ಕಲ್ಯಾಣ ನಿಧಿ, ಸರ್ಕಾರದಿಂದ ಸುಲಭ ಕೆಲಸ, ಸಬ್ಸಿಡಿ ಸಿನಿಮಾಗಳ ಸಂಖ್ಯೆ ಏರಿಕೆ, ಚಿತ್ರಮಂದಿರಗಳಿಗೆ ಸಿನಿಮಾ ಅಪ್‌ಲೋಡ್‌ ಮಾಡಲು ಬೆಂಗಳೂರಿನಲ್ಲಿಯೇ ವ್ಯವಸ್ಥೆ ಮೊದಲಾದ ಭರವಸೆಗಳನ್ನು ಅಭ್ಯರ್ಥಿಗಳು ನೀಡುತ್ತಿದ್ದಾರೆ.

ಸಕಲೇಶಪುರ ಭಾಗ್ಯ!

ಮತದಾರರನ್ನು ಸೆಳೆಯಲು ಪ್ರಮುಖ ಅಭ್ಯರ್ಥಿಗಳು ಹಲವು ರೀತಿಯ ಕಸರತ್ತು ನಡೆಸಿದ್ದಾರೆ.  ‘2016–17ರ ನಂತರ ವಾಣಿಜ್ಯ ಮಂಡಳಿ ಚುನಾವಣೆ ರಂಗೇರಿದೆ.  ಈ ವರ್ಷ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಮತದಾರರಿಗೆ ಸಕಲೇಶಪುರ ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ. ಮತ್ತೊಬ್ಬರು ಮೈಸೂರಿನತ್ತ ಕರೆದುಕೊಂಡು ಹೋಗಿದ್ದಾರೆ. ಈ ಸಲ ಒಬ್ಬರು ಅಧ್ಯಕ್ಷ ಅಭ್ಯರ್ಥಿ ಮಾತ್ರ ಯಾವ ಆಮಿಷವನ್ನೂ ಒಡ್ಡದೆ ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತಿದ್ದಾರೆ’ ಎನ್ನುತ್ತಾರೆ ಮತದಾರರೊಬ್ಬರು. ಗಿಫ್ಟ್‌ ಬಾಕ್ಸ್‌ ಹಂಚಿಕೆ ಆರೋಪವೂ ಕೇಳಿಬಂದಿದೆ. ‘ವಾಣಿಜ್ಯ ಮಂಡಳಿ ಚುನಾವಣೆಯೂ ಸಾಮಾನ್ಯ ಚುನಾವಣೆಯಷ್ಟೇ ಮಹತ್ವ ‍ಪಡೆದುಕೊಳ್ಳುತ್ತಿದೆ. ಮತದಾರರನ್ನು ಸೆಳೆಯಲು ಪ್ರಮುಖ ಸ್ಥಾನದ ಆಕಾಂಕ್ಷಿಗಳು ಏನಿಲ್ಲವೆಂದರೂ ₹80 ಲಕ್ಷದಿಂದ ₹1 ಕೋಟಿವರೆಗೂ ಖರ್ಚು ಮಾಡುತ್ತಿದ್ದಾರೆ. ಗೆದ್ದ ನಂತರ ಈ ಹಣವನ್ನು ಹೇಗೆ ಮರಳಿ ಪಡೆಯುತ್ತಾರೆ ಎಂಬುದೇ ಪ್ರಶ್ನಾರ್ಥಕವಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಪರ್ಧಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT