ಶನಿವಾರ, ಜನವರಿ 29, 2022
23 °C

ನಟನಿಂದ ದೌರ್ಜನ್ಯಕ್ಕೆ 5 ವರ್ಷ: ಕನ್ನಡದಲ್ಲೂ ನಟಿಸಿದ್ದ ಟಾಪ್ ನಟಿಯ ಮನದ ಮಾತು

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಕೊಚ್ಚಿ: 2017 ರಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಟಾಪ್ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಘಟನೆ ನಡೆದು ಇಂದಿಗೆ 5 ವರ್ಷಗಳಾಗಿವೆ. ಈ ಸಂಬಂಧ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮಲಯಾಳಂ ನಟ ದಿಲೀಪ್ ವಿರುದ್ಧ ಜಾಮೀನು ರಹಿತ ಹೊಸ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ನಟಿ, 'ಸಂತ್ರಸ್ತೆಯಾಗಿ ಪ್ರಯಾಣ ನಡೆಸುವುದು ಸುಲಭವಲ್ಲ' ಎಂದಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಮಲಯಾಳಂನ ಹಲವಾರು ಸೆಲೆಬ್ರಿಟಿಗಳು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. 'ಸಂತ್ರಸ್ತೆಯಾಗಿ ಬದುಕುಳಿದಿರುವುದು ಸುಲಭದ ಪ್ರಯಾಣವಲ್ಲ' ಎಂದಿದ್ದಾರೆ.

'ಇಂದಿಗೆ ಐದು ವರ್ಷ. ಅಂದಿನಿಂದ ನನ್ನ ಮೇಲೆ ಮಾಡಿದ ಹಲ್ಲೆಯ ಭಾರದಲ್ಲಿ ನನ್ನ ಹೆಸರು ಮತ್ತು ನನ್ನ ಗುರುತನ್ನು ಹತ್ತಿಕ್ಕಲಾಗಿದೆ. ಅಪರಾಧ ಎಸಗಿದ್ದು ನಾನಲ್ಲದಿದ್ದರೂ, ನನ್ನನ್ನು ಅವಮಾನಿಸುವ, ಮೌನವಾಗಿಸುವ ಮತ್ತು ಪ್ರತ್ಯೇಕಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ, ನನ್ನ ಧ್ವನಿಯನ್ನು ಜೀವಂತವಾಗಿಡಲು ಮುಂದೆ ಬಂದು ಪ್ರಯತ್ನಿಸಿದ ಕೆಲವರನ್ನಾದರೂ ನಾನು ಹೊಂದಿದ್ದೇನೆ. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುತ್ತವೆ. ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ನಾನು ಒಬ್ಬಂಟಿಯಲ್ಲ ಎಂಬುದು ನನಗೆ ತಿಳಿದಿದೆ' ಎಂದಿದ್ದಾರೆ.

'ನ್ಯಾಯವು ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಮತ್ತು ಬೇರೆ ಯಾರಿಗೂ ಅಂತಹ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳುವ ಸಲುವಾಗಿ ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ನಿಂತಿರುವ ಎಲ್ಲರಿಗೂ- ನಿಮ್ಮ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು' ಎಂದು ನಟಿ ಬರೆದಿದ್ದಾರೆ.

ಈ ಮಧ್ಯೆ, ಭಾನುವಾರ ಕೇರಳ ಪೊಲೀಸರು ನಟ ದಿಲೀಪ್ ವಿರುದ್ಧ ಹೊಸದಾಗಿ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ನಟ ದಿಲೀಪ್ 2017ರಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿಯ ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು