ಶನಿವಾರ, ಜನವರಿ 25, 2020
22 °C

ಯಶ್‌ ಅಭಿಮಾನಿಗಳಲ್ಲಿ ಕಾತರ: 'ಕೆಜಿಎಫ್‌ 2' ಫಸ್ಟ್‌ಲುಕ್‌ ಡಿ. 21ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಶ್‌ ನಾಯಕನಾಗಿ ಮತ್ತು ಮತ್ತು ಬಾಲಿವುಡ್‌ ನಟ ಸಂಜಯ್‌ ದತ್‌ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವ ಪ್ರಶಾಂತ್‌ ನೀಲ್‌ ನಿರ್ದೇಶನದ ಬಹು ನಿರೀಕ್ಷೆಯ ‘ಕೆಜಿಎಫ್‌ ಚಾಪ್ಟರ್‌ –2’ ಚಿತ್ರದ ಫಸ್ಟ್‌ಲುಕ್‌ ಇದೇ 21ರಂದು ಬಿಡುಗಡೆಯಾಗಲಿದೆ.

‘ಕೆಜಿಎಫ್‌ ಚಾಪ್ಟರ್‌ 1’ ಪ್ಯಾನ್‌ ಇಂಡಿಯಾ ಸಿನಿಮಾವು ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಈ ಚಿತ್ರದ ನಾಯಕ ‘ರಾಖಿ ಭಾಯ್‌’ ಪಾತ್ರದಲ್ಲಿ ನಟ ಯಶ್‌ ಮಿಂಚು ಹರಿಸಿದ್ದರು. ಈ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದರು.

ಭಾರತೀಯ ಸಿನಿಮಾ ಪ್ರೇಕ್ಷಕರು ಬಹು ಕುತೂಹಲದಿಂದ ಎದುರು ನೋಡುತ್ತಿರುವ ಕೆಜಿಎಫ್‌ ಸರಣಿಯ ಎರಡನೇ ಭಾಗವೂ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಪ್ರೇಕ್ಷಕರಿಗೆ ಮೊದಲ ಸಿಹಿ ಸುದ್ದಿ ನೀಡಲು ಚಿತ್ರತಂಡ ಸಜ್ಜಾಗಿದೆ.

‘ಡಿಸೆಂಬರ್‌ 21ರಂದು ಸಂಜೆ 5.45ಕ್ಕೆ ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಲು ನಾವು ಸಂಪೂರ್ಣ ಉತ್ಸುಕರಾಗಿದ್ದೇವೆ. ಸಂಭ್ರಮಕ್ಕೆ ಇದೇ ಸೂಕ್ತ ಸಮಯ’ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚಿತ್ರರಸಿಕರಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಫಸ್ಟ್‌ ಲುಕ್‌ ಹೇಗಿರಬಹುದೆಂಬ ಕುತೂಹಲದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಚರ್ಚೆಯೂ ನಡೆಯುತ್ತಿದೆ. ಯಶ್‌ ಅಭಿಮಾನಿಗಳು ಅವರದೇ ಕಲ್ಪನೆಗಳಲ್ಲಿ ಚಿತ್ರದ ಫಸ್ಟ್‌ ಲುಕ್‌ಗಳನ್ನು ಸಿದ್ಧಪಡಿಸಿ ಹಂಚಿಕೊಳ್ಳುತ್ತಿರುವುದು ಟ್ರೆಂಡಿಂಗ್‌ನಲ್ಲಿದೆ. ರಾಖಿಭಾಯ್‌ ಹೊಸ ಗೆಟ‍ಪ್ಪಿನ ಫೋಟೊಗಳು ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಮೊದಲ ಚಾಪ್ಟರ್‌ನಲ್ಲಿನ ರಾಖಿಭಾಯ್‌ ಕೇಶವಿನ್ಯಾಸ, ಡ್ರೆಸ್‌ಕೋಡ್‌, ಲುಕ್‌, ಮ್ಯಾನರಿಸಂ, ಡೈಲಾಗ್‌ಗಳಿಗೆ ಅವರ ಅಭಿಮಾನಿಗಳು ಅಕ್ಷರಶಃ ಫಿದಾ ಆಗಿದ್ದರು. ಎರಡನೇ ಅವತರಣಿಕೆಯಲ್ಲಿನ ರಾಖಿ ಭಾಯ್‌ ಹೊಸ ಗೆಟಪ್‌, ಕೇಶ ವಿನ್ಯಾಸ, ಗಡ್ಡದ ಶೈಲಿ, ಬ್ಲೇಜರ್‌ ಶೂಟ್‌ ಯುವಜನರಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕುವ ನಿರೀಕ್ಷೆ ಮೂಡಿಸುತ್ತಿದೆ. 

ಹಾಗೆಯೇ ಚಿತ್ರದ ಖಳನಾಯಕ ಅಧೀರನ ಪಾತ್ರದಲ್ಲಿ ಸಂಜಯ್‌ದತ್‌ ಅಭಿನಯಿಸುತ್ತಿರುವುದು ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ‘ಕೆಜಿಎಫ್‌ ಚಾಪ್ಟರ್‌ 1’ರ ಪ್ರಮುಖ ಖಳನಾಯಕ ಸೂರ್ಯವರ್ಧನ್. ಆತನ ಸಹೋದರನೇ ಈ ಅಧೀರ. ಮೊದಲ ಚಾಪ್ಟರ್‌ನಲ್ಲಿ ಸೂರ್ಯವರ್ಧನ್‌ನ ಸಾವಿನ ಬಳಿಕ ‘ನರಾಚಿ’ ಗಣಿಯ ಅಧಿಕಾರದ ಗದ್ದುಗೆ ಹಿಡಿಯುವುದು ಅವನ ಪುತ್ರ ಗರುಡ. ಸುಪಾರಿ ಪಡೆದು ನರಾಚಿ ಗಣಿ ಪ್ರವೇಶಿಸುವ ರಾಕಿ ಭಾಯ್‍(ಯಶ್‌) ಗರುಡನನ್ನು ಹತ್ಯೆ ಮಾಡಿದ್ದಾನೆ. ಎರಡನೇ ಚಾಪ್ಟರ್‌ನಲ್ಲಿ ಸೂರ್ಯವರ್ಧನನ ಸಹೋದರ ಅಧೀರನ ಪಾತ್ರ ಪ್ರವೇಶವಾಗಲಿದ್ದು, ಈ ಪಾತ್ರಕ್ಕೆ ಸಂಜಯ್‌ ದತ್ ಜೀವ ತುಂಬುತ್ತಿದ್ದಾರೆ.

ಇನ್ನು ಮೊದಲ ಚಾಪ್ಟರ್‌ನಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟಿದ್ದ ಶ್ರೀನಿಧಿ ಶೆಟ್ಟಿ, ಎರಡನೇ ಚಾಪ್ಟರ್‌ನಲ್ಲೂ ನಾಯಕಿಯಾಗಿ ಮುಂದುವರಿದಿದ್ದಾರೆ. ಡೆಬು ಸಿನಿಮಾದಲ್ಲೇ ಶ್ರೀನಿಧಿ ಅಭಿನಯದಲ್ಲಿ ಭರವಸೆ ಮೂಡಿಸಿದ್ದರು. ಇದರಲ್ಲಿ ಅವರ ನಟನೆ ಮತ್ತು ಪಾತ್ರ ಹೇಗಿರಬಹುದೆಂದು ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

‘ಕೆಜಿಎಫ್‌ ಚಾಪ್ಟರ್‌–1’ಕ್ಕೆ ಬಹುಕೋಟಿ ಬಂಡವಾಳ ಹೂಡಿದ್ದ ವಿಜಯ್‌ ಕಿರಗಂದೂರು ಅವರೇ ‘ಹೊಂಬಾಳೆ ಫಿಲ್ಮ್ಸ್‌’ ಲಾಂಛನದಡಿ ಎರಡನೇ ಚಾಪ್ಟರ್‌ಗೂ ಬಂಡವಾಳ ಹೂಡಿದ್ದಾರೆ. ಇದು ಕೂಡ ಬಿಗ್‌ಬಜೆಟ್‌ ಸಿನಿಮಾ ಎನ್ನಲಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು