ಶನಿವಾರ, ಸೆಪ್ಟೆಂಬರ್ 18, 2021
26 °C

ಶಿವಣ್ಣನ ‘ನೀ ಸಿಗೋವರೆಗೂ’ ಚಿತ್ರಕ್ಕೆ ಸುದೀಪ್‌ ಕ್ಲ್ಯಾಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಶಿವರಾಜ್‌ಕುಮಾರ್‌ ಅಭಿನಯಿಸುತ್ತಿರುವ 124ನೇ ಸಿನಿಮಾ ‘ನೀ ಸಿಗೋವರೆಗೂ’ ಚಿತ್ರದ ಮುಹೂರ್ತ ಮಂಗಳವಾರ ನಡೆದಿದ್ದು, ನಟ ಸುದೀಪ್‌ ಕ್ಲ್ಯಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು. 

ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಾಮ್ ಧುಲಿಪುಡಿ ಇದನ್ನು ನಿರ್ದೇಶಿಸಲಿದ್ದಾರೆ. ‘ಆ.19ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯಲಿದೆ. ಜನವರಿಯಲ್ಲಿ ಚಿತ್ರೀಕರಣ ಪೂರ್ಣಗೊಂಡು, 2022ರ ಏಪ್ರಿಲ್‌ ವೇಳೆಗೆ ಚಿತ್ರವು ತೆರೆಗೆ ಬರುವ ಸಾಧ್ಯತೆ ಇದೆ’ ಎಂದು ಶಿವರಾಜ್‌ಕುಮಾರ್‌ ಹೇಳಿದರು.

‘ಇದೊಂದು ಭಾವನಾತ್ಮಕ ಪ್ರೇಮಕಥೆ. ಇದರಲ್ಲಿ ಎರಡು ಶೇಡ್‌ಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಸೇನಾ ಅಧಿಕಾರಿಯ ಪಾತ್ರದಲ್ಲೂ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಕಳೆದ ಮೂರು ವರ್ಷದಿಂದ ‘ಮಫ್ತಿ’, ‘ಟಗರು’, ‘ದಿ ವಿಲನ್‌’ ರೀತಿಯ ಚಿತ್ರಗಳಲ್ಲಿ ನಾನು ನಟಿಸಿದ್ದೆ. ಇದೀಗ ಪ್ರೇಮಕಥೆಯ ಚಿತ್ರ. ಈ ಚಿತ್ರಕ್ಕೆ ನಾನೇ ಶೀರ್ಷಿಕೆಯ ಸಲಹೆ ನೀಡಿದ್ದೆ. ‘ಭಜರಂಗಿ–2’ ಚಿತ್ರದಲ್ಲಿ ಬರುವ ಹಾಡಿನಲ್ಲಿ ಈ ಸಾಲಿದೆ’ ಎನ್ನುತ್ತಾರೆ ಶಿವರಾಜ್‌ಕುಮಾರ್.

ಮಾತಿನಲ್ಲೇ ಶಿವಣ್ಣನ ಕಾಲೆಳೆದ ಸುದೀಪ್‌: ‘ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬಂದ ಹಾಗೆ ನಟರಿಗೆ ಬೇಡಿಕೆ ಕಡಿಮೆ ಆಗುತ್ತದೆ. ಇದು ಸಾಮಾನ್ಯ. ಆದರೆ, ಒಬ್ಬ ವ್ಯಕ್ತಿಯಲ್ಲಿ ಸಿನಿಮಾ ಮೇಲಿರುವ ಪ್ರೀತಿ, ಶಿಸ್ತು ಇದ್ದಾಗ ಮಾತ್ರ ಈ ರೀತಿ ಸಾಧನೆ ಮಾಡುವುದು ಸಾಧ್ಯ. ಇದು ಶಿವಣ್ಣ ತಮ್ಮನ್ನು ತಾವು ಹೇಗೆ ಸಿನಿಮಾಗೆ ಅರ್ಪಿಸಿಕೊಂಡಿದ್ದಾರೆ ಎನ್ನುವುದನ್ನು ವಿವರಿಸುತ್ತದೆ. ನಾವು 124ನೇ ಸಿನಿಮಾ ಮಾಡುವಷ್ಟರಲ್ಲಿ ತಂದೆಯ ಪಾತ್ರ ಮಾಡುವ ಸ್ಥಿತಿಗೆ ಬಂದಿರುತ್ತೇವೆ. ಈ ಸಂದರ್ಭದಲ್ಲಿ ನನಗೆ ಖುಷಿಯೂ ಇದೆ ಬೇಸರವೂ ಇದೆ. ನಮಗೆ ಯಾರೂ ಪ್ರೇಮಕಥೆಯೇ ಬರೆಯುತ್ತಿಲ್ಲ. ಆದರೆ ಶಿವಣ್ಣ ಇವತ್ತೂ ಪ್ರೇಮಕಥೆಯ ಚಿತ್ರಗಳನ್ನೇ ಮಾಡುತ್ತಿದ್ದಾರೆ. ನಾನೂ ಶಿವಣ್ಣ ಅವರಿಗೆ ಚಿತ್ರವೊಂದನ್ನು ನಿರ್ದೇಶಿಸುವ ಆಸೆ ಹೊಂದಿದ್ದೇನೆ. ಈ ಕುರಿತು ಅವರ ಬಳಿಯೂ ಈಗಷ್ಟೇ ಮಾತನಾಡಿದ್ದೇನೆ. ಶಿವಣ್ಣನೂ ಇದಕ್ಕೆ ಒಪ್ಪಿದ್ದಾರೆ’ ಎಂದರು.

ಇನ್ನು ‘ಶಿವರಾಜ್‌ಕುಮಾರ್‌ ಅವರನ್ನು ‘ಶಿವಣ್ಣ’ ಎಂದು ಕರೆಯಬೇಡಿ. ಇದೊಂದು ಪ್ರೇಮಕಥೆಯ ಸಿನಿಮಾ. ಚಿತ್ರೀಕರಣ ಮುಗಿಯುವವರೆಗೂ ಅವರನ್ನು ಡಾರ್ಲಿಂಗ್‌ ಎನ್ನಿ’ ಎಂದು ಚಿತ್ರದ ನಾಯಕಿ ಮೆಹ್ರೀನ್ ಪಿರ್ಝಾದಾ ಅವರಿಗೆ ಸುದೀಪ್‌ ಹೇಳಿದರು.

ಕುಡಿಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ರವಿಕುಮಾರ್ ಸನಾ‌ ಅವರ ಛಾಯಾಗ್ರಹಣವಿದೆ. ‘ಟಗರು’ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ‌ ಸಂತೆಹಕ್ಲು ಕಲಾ ನಿರ್ದೇಶನ ಈ ಹೊಸ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು