ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್‌ಗೂ ಜಿಗಿದ ‘ದುಬಾರಿ’ ನಾಯಕಿ ಶ್ರೀಲೀಲಾ

Last Updated 14 ಜನವರಿ 2021, 19:30 IST
ಅಕ್ಷರ ಗಾತ್ರ

‘ಕಿಸ್‌’ ಮತ್ತು ‘ಭರಾಟೆ’ಯ ಬೆಡಗಿ ಶ್ರೀಲೀಲಾಗೆ ಭರ್ಜರಿ ಅವಕಾಶಗಳು ಅರಸಿ ಬರಲಾರಂಭಿಸಿವೆ. ಸ್ಯಾಂಡಲ್‌ವುಡ್‌ನಲ್ಲಿ ಒಂದರ ಹಿಂದೆ ಇನ್ನೊಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡಿರುವ ಈ ಸುಂದರಿ ಈಗ ಟಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ.

‘ಬಜಾರ್’ ಖ್ಯಾತಿಯ ಧನ್ವೀರ್ ನಾಯಕನಾಗಿ ನಟಿಸುತ್ತಿರುವ ಮತ್ತು ಹರಿ ಸಂತೋಷ್‌ ನಿರ್ದೇಶನದ ‘ಬೈಟು ಲವ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ‘ಆ್ಯಕ್ಷನ್‌ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ಮುಂದಿನ ಚಿತ್ರ ‘ದುಬಾರಿ’ಗೂ ಅವರು ನಾಯಕಿ. ಸ್ಯಾಂಡಲ್‌ವುಡ್‌ ಆಚೆಗೂ ಈ ನಟಿಗೆ ಬೇಡಿಕೆ ಕುದುರುತ್ತಿದೆ. ‘ಬೈಟು ಲವ್‌’ ಚಿತ್ರದಲ್ಲಿ ತುಂಬಾ ಕ್ಯೂಟ್‌ ಆದ ಪಾತ್ರ ನಿಭಾಯಿಸುತ್ತಿರುವ ಖುಷಿಯಲ್ಲೇ ಶ್ರೀಲೀಲಾ ‘ಪ್ರಜಾಪ್ಲಸ್‌’ ಜತೆಗೆ ಮಾತಿಗಾರಂಭಿಸಿದರು.

ಕ್ರಿಸ್ಮಸ್ ದಿನವೇ ‘ಬೈಟು ಲವ್‌’ಗೆ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತ್ತು. ಎಚ್ಎಂಟಿ ಕಾರ್ಖಾನೆ ಬಳಿ ಹಾಕಿರುವ ಅದ್ಧೂರಿ ಸೆಟ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

‘ಬೈಟು ಲವ್’ಗೆ ನಿಶಾ ವೆಂಕಟ್‌ ಬಂಡವಾಳ ಹೂಡಿದ್ದಾರೆ. ‘ಟಗರು’ ಚಿತ್ರ ಖ್ಯಾತಿಯ ಮಹೀಂದ್ರ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಹರಿ ಸಂತೋಷ್‌ ಅವರದೇ ಕಥೆ ಮತ್ತು ಚಿತ್ರಕಥೆ. ಸಾಧುಕೋಕಿಲ, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ ಅವರಂತಹ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಚಿತ್ರದ ಕಥೆಯ ಬಗ್ಗೆ ಮಾತಿಗಿಳಿದ ಶ್ರೀಲೀಲಾ, ‘ಇದೊಂದು ವಿಭಿನ್ನ ಪ್ರೇಮಕಥೆಯ ಚಿತ್ರ. ನಾನು ಇಂತಹ ಶೈಲಿಯ ಸಿನಿಮಾ ನೋಡಿಯೇ ಇಲ್ಲ. ಸ್ಕ್ರಿಪ್ಟ್‌ ಬಹಳ ಆಸಕ್ತಿದಾಯಕವಾಗಿಯೂ ಇದೆ. ತುಂಬಾ ದಿನಗಳಿಂದ ಇಂತಹ ಪಾತ್ರ ಮಾಡಬೇಕೆಂದು ಅಂದುಕೊಳ್ಳುತ್ತಲೇ ಇದ್ದೆ. ಲಾಕ್‌ಡೌನ್‌ ವೇಳೆ ಕಥೆ ಕೇಳಿದಾಗ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡೆ. ನನಗೆ ಪಾತ್ರ ಹೊಂದಲಿದೆಯೇ ಎನ್ನುವುದನ್ನು ವಿಶ್ಲೇಷಿಸಿದ ನಂತರ ಈ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಸಿದ್ಧ ಸೂತ್ರದಂತೆ ಚಿತ್ರದ ಕಥೆಯಲ್ಲಿ ಲವ್‌ ಶುರುವಾಗುವುದಿಲ್ಲ. ಇದು ಸಂಪೂರ್ಣ ಭಿನ್ನ’ ಎಂದು ಮಾತು ವಿಸ್ತರಿಸಿದರು.

‘ಬೇರೆ ಬೇರೆ ಹಂತದಲ್ಲಿ ಹೆಣ್ಮಕ್ಕಳು ಹೇಗಿರುತ್ತಾರೆನ್ನುವುದನ್ನು ಕಾಣಿಸುವಂತಹ ವಿಭಿನ್ನ ಪಾತ್ರವಿದು. ಹೆಣ್ಮಕ್ಕಳೆಂದರೆ ಬರೀ ಬಬ್ಲಿ ಅಲ್ಲ, ಅವರಿಗೂ ಕೋಪ ಬರುತ್ತದೆ ಎನ್ನುವುದನ್ನು ಈ ಪಾತ್ರದಲ್ಲಿ ನೋಡಲಿದ್ದೀರಿ. ಎಲ್ಲ ರೀತಿಯ ಭಾವನೆಗಳನ್ನು ತೋರಿಸುವ ಮತ್ತು ಅಭಿನಯಕ್ಕೂ ಅವಕಾಶವಿರುವ ಪಾತ್ರ ಕೂಡ ಹೌದು. ನನ್ನ ವ್ಯಕ್ತಿತ್ವ ಮತ್ತು ನಡವಳಿಕೆಗೆ ಕೆಲವು ವಿಚಾರಗಳಲ್ಲಿ ತುಂಬಾ ಸಾಮಿಪ್ಯವಿರುವಂತಹ ಪಾತ್ರವಿದು. ಪ್ರತಿ ದೃಶ್ಯವೂ ನನಗೆ ತೃಪ್ತಿ ಕೊಡುತ್ತಿದೆ’ ಎಂದು ಪಾತ್ರದ ಬಗ್ಗೆಯೂ ಒಂದಿಷ್ಟು ವಿವರ ಹಂಚಿಕೊಂಡರು.

ಧನ್ವೀರ್‌ ಜತೆಗಿನ ಕೆಮಿಸ್ಟ್ರಿ ಬಗ್ಗೆ ಮಾತು ಹೊರಳಿದಾಗ, ‘ಇಂತಹ ವಿಷಯವಿರುವ ಸಿನಿಮಾಕ್ಕೆ ಕೆಮಿಸ್ಟ್ರಿ ತುಂಬಾ ಮುಖ್ಯವಾಗುತ್ತದೆ. ಧನ್ವೀರ್‌ ಸಾದು ಸ್ವಭಾವದವರು, ತುಂಬಾ ಸಹಕಾರ ಕೊಡುವ ಗುಣವುಳ್ಳ ನಟ. ಚಿತ್ರದ ಕಥೆಗೆ ನಮ್ಮಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿಯೇ ವರ್ಕೌಟ್‌ ಆಗಿದೆ. ಪಾತ್ರಗಳಿಗೆ ಜೀವ ತುಂಬುವಂತೆ ನಿರ್ದೇಶಕರು ನಮ್ಮನ್ನು ತೆರೆಯ ಮೇಲೆ ತರುತ್ತಿದ್ದಾರೆ. ಚಿಕ್ಕ ಮಗುವಿನಿಂದ ಹಿಡಿದು ಅಜ್ಜಿ–ತಾತನವರೆಗೂ ಎಲ್ಲರೂ ನನ್ನ ಪಾತ್ರವನ್ನು ಮನಸಾರೆ ಮೆಚ್ಚಿಕೊಳ್ಳುವ ವಿಶ್ವಾಸವಿದೆ’ ಎನ್ನುವ ಮಾತು ಸೇರಿಸಿದರು.

‘ಯಾವುದೇ ಪಾತ್ರವಾಗಲಿ ಅದಕ್ಕೆ ನ್ಯಾಯ ಸಲ್ಲಿಸಬೇಕೆಂದರೆ ನಟನೆಯಲ್ಲಿ ಕಲಾವಿದರಿಗೆ ಮುಕ್ತ ಸ್ವಾತಂತ್ರ್ಯವಿರಬೇಕು, ಆ ಸ್ವಾತಂತ್ರ್ಯವನ್ನು ನಿರ್ದೇಶಕರು ನಮಗೆ ನೀಡಿದ್ದಾರೆ. ಪಾತ್ರದ ಸೊಬಗನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವನ್ನೂ ಕೊಟ್ಟಿದ್ದಾರೆ. ನಿರ್ದೇಶಕರ ದೃಷ್ಟಿಕೋನ ಏನಿದೆಯೋ ಅದಕ್ಕಿಂತಲೂ ಈ ಚಿತ್ರ ಚೆನ್ನಾಗಿ ಮೂಡಿಬರಬೇಕೆಂಬ ಆಸೆ ಇಟ್ಟುಕೊಂಡು ನಟಿಸುತ್ತಿದ್ದೇವೆ. ಈ ವಿಷಯದಲ್ಲಿ ನಿರ್ದೇಶಕರೂ ತುಂಬಾ ಖುಷಿಯಾಗಿದ್ದಾರೆ’ ಎನ್ನುವುದು ಅವರ ಅನಿಸಿಕೆ.

‘ದುಬಾರಿ’ ಚಿತ್ರದ ಬಗ್ಗೆ ಹೆಚ್ಚು ಮಾತನಾಡದ ಶ್ರೀಲೀಲಾ, ಟಾಲಿವುಡ್‌ಗೆ ಎಂಟ್ರಿಕೊಡುತ್ತಿರುವ ಸಂಭ್ರಮವನ್ನು ಹಂಚಿಕೊಂಡರು. ‘ತೆಲುಗಿನ ಖ್ಯಾತ ನಟ ಶ್ರೀಕಾಂತ್ ಅವರ ಪುತ್ರ ರೋಶನ್ ಮೆಕಾ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ‘ಪೆಳ್ಳಿ ಸಂದದಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವೆ. 25 ವರ್ಷಗಳ ಹಿಂದೆ ಶ್ರೀಕಾಂತ್‌ ನಟಿಸಿ, ರಾಘವೇಂದ್ರ ರಾವ್‌ ನಿರ್ದೇಶಿಸಿದ್ದ ‘ಪೆಳ್ಳಿ ಸಂದದಿ’ ಚಿತ್ರದ ಶೀರ್ಷಿಕೆಯನ್ನೇ ಮರು ಬಳಕೆ ಮಾಡಲಾಗುತ್ತಿದೆ. ಶೀರ್ಷೀಕೆ ಹಳೆಯದಾದರೂ ಕಥೆ ಹೊಸತೇ. ಈ ಚಿತ್ರವನ್ನು ಗೌರಿ ನಿರ್ದೇಶಿಸಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದೇನೆ. ‘ದುಬಾರಿ’ ಚಿತ್ರೀಕರಣ ಆರಂಭವಾಗುವುದಕ್ಕೂ ಮೊದಲು‘ಪೆಳ್ಳಿ ಸಂದದಿ’ಯ ಚಿತ್ರೀಕರಣ ಮುಗಿಸುವ ಯೋಜನೆ ಇದೆ’ ಎಂದು ಶ್ರೀಲೀಲಾ ಮಾತಿಗೆ ವಿರಾಮ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT