ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡೆಮುರುಗನ ಸಿನಿಮಾ ಕಥೆ

Last Updated 12 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಾಗ ಅದರ ಟ್ರೇಲರ್‌ ತೋರಿಸುವುದು ಸರ್ವೇ ಸಾಮಾನ್ಯ. ಆದರೆ, ಮೊದಲೇ ಎಂಟು ನಿಮಿಷದ ಟ್ರೇಲರ್‌ ಮಾಡಿ ಬಳಿಕ ಶೂಟಿಂಗ್‌ ಆರಂಭಿಸಿದ್ದು, ‘ಕೊಡೆಮುರುಗ’ ಚಿತ್ರದ ವಿಶೇಷ. ಇದಕ್ಕೆ ನಿರ್ದೇಶಕ ಸುಬ್ರಮಣ್ಯ ಪ್ರಸಾದ್‌ ಕಾರಣಗಳನ್ನೂ ಸುದ್ದಿಗೋಷ್ಠಿಯಲ್ಲಿ ಬಿಡಿಸಿಟ್ಟರು.

ಕಿರುತೆರೆಯಲ್ಲಿ ನಾಲ್ಕು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ಅವರು ಬೆಳ್ಳಿತೆರೆಯಲ್ಲಿ ಮೊದಲ ಹೆಜ್ಜೆ ಇಡುವ ಖುಷಿಯಲ್ಲಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಅವರು ಹಲವು ನಿರ್ಮಾಪಕರ ಬಳಿ ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಾಗ ಅವರಿಂದ ಎದುರಿಸಿದ ಅವಮಾನವೇ ಈ ಸಿನಿಮಾದ ಕಥಾವಸ್ತುವಾಗಿದೆಯಂತೆ.

‘ನನ್ನ ಪತ್ನಿಗೆ ಕಥೆಯ ಒಂದು ಎಳೆ ಹೇಳಿದೆ. ಮೊದಲಿಗೆ ಅವಳಿಂದಲೂ ತಿರಸ್ಕಾರ ಬಂತು. ಕೊನೆಗೆ, ಕಥೆಯ ಬಗ್ಗೆ ಸಂಪೂರ್ಣ ವಿವರ ನೀಡಿದಾಗ ಆಕೆ ಮಾನಸಿಕ ಸ್ಥೈರ್ಯ ತುಂಬಿದಳು’ ಎಂದು ನೆನಪಿಸಿಕೊಂಡರು.

‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಖಳನ ಪಾತ್ರ ನಿರ್ವಹಿಸುತ್ತಿರುವ ಮುನಿಕೃಷ್ಣ ಅವರೇ ಚಿತ್ರದ ನಾಯಕ. ಮುರುಗನ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ತೆರೆಯ ಮೇಲೆ ಅವರನ್ನು ಅವಮಾನ ಮಾಡಿಕೊಂಡೇ ಕಥೆ ಹೊಸೆಯಲಾಗಿದೆಯಂತೆ. ಸಿನಿಮಾದಲ್ಲೊಂದು ಸಿನಿಮಾ ನಡೆಯುವುದೇ ಇದರ ವಿಶೇಷ ಎಂಬುದು ಚಿತ್ರತಂಡದ ವಿವರಣೆ. ಪಲ್ಲವಿಗೌಡ ಈ ಚಿತ್ರದ ನಾಯಕಿ. ‘ರೆಟ್ರೊ, ಕ್ಯೂಟ್‌, ಪೊಲೀಸ್‌ ಹೀಗೆ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಖುಷಿಯಿದೆ’ ಎಂದು ಹೇಳಿಕೊಂಡರು.

ನಾಯಕ ಮುನಿರತ್ನ ಕಥೆಯ ಬಗ್ಗೆ ಹೇಳಿದಾಗ ತಕ್ಷಣಕ್ಕೆ ಒಪ್ಪಿಕೊಳ್ಳಲಿಲ್ಲವಂತೆ. ನಾನು ಖಳನಟನ ಪಾತ್ರ ಮಾಡುತ್ತೇನೆ. ಹೀರೊ ಆಗಿ ನಟಿಸುವುದಿಲ್ಲ ಎಂದು ಹೇಳಿದರಂತೆ. ‘ಕೊನೆಗೆ, ನನ್ನ ಪಾತ್ರದ ಮಹತ್ವ ಕುರಿತು ಹೇಳಿದಾಗ ಒಪ್ಪಿಕೊಂಡೆ’ ಎಂದರು.

ಚಿತ್ರದ ನಾಲ್ಕು ಹಾಡುಗಳಿಗೆ ಎಂ.ಎಸ್‌. ತ್ಯಾಗರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಕೈಲಾಸ್‌ ಖೇರ್‌, ವಿಜಯಪ್ರಕಾಶ್‌, ಚಂದನ್‌ಶೆಟ್ಟಿ, ಶಿವಂ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಹಿಂದೆ ‘ಮಮ್ಮಿ’ ಚಿತ್ರ ನಿರ್ಮಿಸಿದ್ದ ಕೆ. ರವಿಕುಮಾರ್‌ ಮತ್ತು ಅಶೋಕ್‌ ಶಿರಾಲಿ ಬಂಡವಾಳ ಹೂಡಿದ್ದಾರೆ. ರುದ್ರಮುನಿ ಬೆಳಗೆರೆ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT