ಮಂಗಳವಾರ, ಜನವರಿ 28, 2020
24 °C

ತೆಲುಗು ನಿರ್ದೇಶಕ ಕೊರಟಾಲ ಶಿವ ಸಂಭಾವನೆ ₹ 15 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಟಾಲಿವುಡ್‌ ಹೀರೊ ಕೇಂದ್ರಿತ ಚಿತ್ರರಂಗ ಎನ್ನುವ ಮಾತು ಜನಜನಿತ. ಉತ್ತಮ ಚಿತ್ರಗಳ ಮೂಲಕವೇ ತೆಲುಗಿನ ನಟಿಯರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚುತ್ತಿರುವುದು ಉಂಟು. ಮತ್ತೊಂದೆಡೆ ಸಿನಿಮಾ ತಂತ್ರಜ್ಞರು ಮತ್ತು ನಟರಿಗಿಂತಲೂ ದಪ್ಪಟ್ಟು ಸಂಭಾವನೆ ಪಡೆಯುವುದರಲ್ಲಿಯೂ ಈ ನಟೀಮಣಿಯರು ಒಂದು ಹೆಜ್ಜೆ ಮುಂದಿದ್ದಾರೆ. ಆದರೆ, ತೆಲುಗಿನ ಖ್ಯಾತ ನಿರ್ದೇಶಕರು ನಟ, ನಟಿಯರಿಗಿಂತಲೂ ದುಬಾರಿ ಸಂಭಾವನೆ ಪಡೆಯುತ್ತಾರೆ ಎಂಬ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಆ ಪಟ್ಟಿಯಲ್ಲಿ ಎಸ್.ಎಸ್‌. ರಾಜಮೌಳಿ ಅವರದ್ದು ಅಗ್ರಸ್ಥಾನ.

‘ಸ್ಟೂಡೆಂಟ್‌ ನಂ. 1’ ಚಿತ್ರದಿಂದ ಆರಂಭಗೊಂಡ ಅವರ ಯಶಸ್ಸಿನ ಸಿನಿಯಾನ ಈಗ ‘ಆರ್‌ಆರ್‌ಆರ್‌’ ಚಿತ್ರದವರೆಗೂ ಬಂತು ನಿಂತಿದೆ. ರಾಜಮೌಳಿ ಮುಟ್ಟಿದೆಲ್ಲಾ ಚಿನ್ನವಾಗುತ್ತದೆ ಎನ್ನುವುದು ತೆಲುಗು ಚಿತ್ರರಂಗದ ಅಂಗಳದಲ್ಲಿ ಕೇಳಿಬರುವ ಸಾಮಾನ್ಯ ಮಾತು. ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಚಿತ್ರದ ಭರ್ಜರಿ ಯಶಸ್ಸೇ ಇದಕ್ಕೆ ಮೂಲ ಕಾರಣ.

ಈ ಎರಡೂ ಚಿತ್ರಗಳಿಗೆ ರಾಜಮೌಳಿ ಜೇಬಿಗಿಳಿಸಿಕೊಂಡ ಸಂಭಾವನೆ ಬರೋಬ್ಬರಿ ₹ 50 ಕೋಟಿ. ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ ಸಿನಿಮಾಕ್ಕೆ ಅವರು ಪಡೆದಿರುವ ಸಂಭಾವನೆಯ ಮೊತ್ತ ₹ 30 ಕೋಟಿಯಂತೆ. ಇದು ತೆಲುಗು ಚಿತ್ರರಂಗದಲ್ಲಿ ಇದುವರೆಗೂ ನಿರ್ದೇಶಕರೊಬ್ಬರು ಪಡೆದಿರುವ ಅತ್ಯಧಿಕ ಸಂಭಾವನೆಯೂ ಹೌದು.  ರಾಜಮೌಳಿ ಅವರ ಬಳಿಕ ಟಾಲಿವುಡ್‌ನಲ್ಲಿ ಅತಿಹೆಚ್ಚು ಸಂಭಾವನೆ ಪಡೆದಿರುವ ನಿರ್ದೇಶಕ ಯಾರು? ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ. ಆ ಸಾಲಿಗೆ ನಿರ್ದೇಶಕ ಕೊರಟಾಲ ಶಿವ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ರಾಜಮೌಳಿ ಮತ್ತು ಕೊರಟಾಲ ಶಿವ ಅವರ ಆಲೋಚನೆ, ಕಾರ್ಯ ವಿಧಾನದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇಬ್ಬರ ನಿರ್ದೇಶನದ ಶೈಲಿಯೂ ಭಿನ್ನವಾದುದು. ಆದರೆ, ಯಶಸ್ಸಿನ ವಿಷಯಕ್ಕೆ ಬಂದಾಗ ಇಬ್ಬರದ್ದೂ ಒಂದೇ ದೋಣಿಯ ಪಯಣ. ‘ಮಿರ್ಚಿ’, ‘ಶ್ರೀಮಂತುಡು’, ‘ಜನತಾ ಗ್ಯಾರೇಜ್‌’ ಮತ್ತು ‘ಭರತ ಆನೆ ನೇನು’ ಅಂತಹ ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಶಿವ ಅವರದ್ದು.

ಪ್ರಸ್ತುತ ಮ್ಯಾಟ್ನಿ ಎಂಟರ್‌ಟೈನ್‌ಮೆಂಟ್‌ನಡಿ ನಿರ್ಮಾಣವಾಗುತ್ತಿರುವ ‘ಮೆಗಾಸ್ಟಾರ್‌’ ಚಿರಂಜೀವಿ ನಾಯಕರಾಗಿರುವ ಹೊಸ ಚಿತ್ರಕ್ಕೆ ಕೊರಟಾಲ ಶಿವ ಅವರೇ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಈ ಸಿನಿಮಾಕ್ಕೆ ಅವರು ₹ 15 ಕೋಟಿ ಸಂಭಾವನೆ ಪಡೆದಿದ್ದಾರೆ.

ನಿರ್ದೇಶಕನಿಗೆ ಕನಸುಗಳಿರಬೇಕು. ಅವುಗಳಿಗೆ ಕಸುವು ತುಂಬಿದಾಗಲಷ್ಟೇ ಯಶಸ್ಸಿನ ಏಣಿ ಏರಲು ಸಾಧ್ಯ. ರಾಜಮೌಳಿಯ ಬಳಿಕ ಕೊರಟಾಲ ಶಿವ ಆ ಏಣಿ ಹತ್ತಿದ್ದಾರೆ. ರಾಜಮೌಳಿ, ಶಿವ ಅವರ ಹಾದಿಯಲ್ಲಿ ಸಾಗುತ್ತಿರುವ ಮತ್ತೊಬ್ಬ ತೆಲುಗು ನಿರ್ದೇಶಕ ಎಂದರೆ ಅನಿಲ್‌ ರವಿಪುರಿ. ಅವರು ನಿರ್ದೇಶಿಸುತ್ತಿರುವ  ಮಹೇಶ್‌ಬಾಬು ನಟನೆಯ ‘ಸರಿಲೇರು ನೀಕೆವ್ವೆರು’ ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದ್ದು, ಅದ್ದೂರಿ ಮೇಕಿಂಗ್‌ ಮತ್ತು ಕಥೆಯಿಂದ ಕುತೂಹಲ ಹೆಚ್ಚಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು