ಸೋಮವಾರ, ಅಕ್ಟೋಬರ್ 18, 2021
26 °C

ಕುಂವೀ ಕಾದಂಬರಿ ‘ಕುಬುಸ’ ತೆರೆಗೆ: ಅಡ್ಡಾ ರಮೇಶ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಸಾಹಿತಿ ಕುಂ.ವೀರಭದ್ರಪ್ಪನವರ ‘ಕುಬುಸ’ ಕಾದಂಬರಿ ಆಧರಿತ ಚಿತ್ರ ಬೆಳ್ಳಿ ತೆರೆ ಮೇಲೆ ಬರಲು ಸಿದ್ಧವಾಗಿದೆ.

ಹೂವಿನಹಡಗಲಿ ತಾಲ್ಲೂಕಿನ ಅಡ್ಡಾ ರಮೇಶ ನಿರ್ದೇಶನದ ಈ ಚಿತ್ರವನ್ನು ತಾಲ್ಲೂಕಿನ ಡಣಾಪುರದಲ್ಲಿ 37 ದಿನಗಳಲ್ಲಿ  ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ನವೆಂಬರ್‌ ಅಂತ್ಯಕ್ಕೆ ತೆರೆ ಮೇಲೆ ಬರಲಿದೆ.

ಭೋವಿ ಮಹಿಳೆಯರ ಕಷ್ಟ ಕೋಟಲೆಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ. ಸುಂಕವ್ವ, ಪ್ರಧಾನ ಪಾತ್ರದಲ್ಲಿ ರಂಗಭೂಮಿ ಕಲಾವಿದೆ ಡಿ. ಹನುಮಕ್ಕ ನಟಿಸಿದ್ದಾರೆ. ಚಿತ್ರದ ಇನ್ನೊಂದು ಪ್ರಮುಖ ಪಾತ್ರವಾಗಿರುವ ಸಂಚಾರಿ ದ್ಯಾಮವ್ವನ ಪಾತ್ರಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಮುಖ್ಯ ಹಾಗೂ ಸಹ ಕಲಾವಿದರು ಬಳ್ಳಾರಿ, ವಿಜಯನಗರ ಜಿಲ್ಲೆಯವರು ಎನ್ನುವುದು ವಿಶೇಷ. ಚಿತ್ರದುದ್ದಕ್ಕೂ ಸ್ಥಳೀಯ ಭಾಷೆಯ ಬಳಕೆ ಮಾಡಲಾಗಿದೆ.

‘ಕುಂ. ವೀರಭದ್ರಪ್ಪನವರ ಕಥೆ ಓದಿದ ನಂತರ ಇದನ್ನು ಚಿತ್ರ ಮಾಡಬೇಕು ಅನ್ನಿಸಿತು. ಅವರ ಒಪ್ಪಿಗೆಯ ಮೇರೆಗೆ ಚಿತ್ರ ಮಾಡಿದ್ದೇನೆ. ದೇಸಿ ಸೊಗಡಿನ ಚಿತ್ರದಲ್ಲಿ ಒಂಬತ್ತು ಜನಪದ ಹಾಡುಗಳಿವೆ. ಚಿತ್ರದ ಎಲ್ಲಾ 60 ಕಲಾವಿದರು ಸ್ಥಳೀಯರು’ ಎಂದು ನಿರ್ದೇಶಕ ಅಡ್ಡಾ ರಮೇಶ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಕುಬುಸ’ ಕಾದಂಬರಿ ಎಂಟು ಭಾಷೆಗಳಿಗೆ ತರ್ಜುಮೆಗೊಂಡಿದೆ. ಕಲ್ಲು ಕಡಿಯುವ ಭೋವಿ ಮಹಿಳೆಯರ ಸಂಕಷ್ಟಗಳನ್ನು ತೆರೆದಿಡುತ್ತದೆ. ಚಿತ್ರ ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದು ಕುಂ. ವೀರಭದ್ರಪ್ಪ ಹೇಳಿದರು.
‘ನಾನು ಮೂಲತಃ ಹೊಸಪೇಟೆಯ ಮರಿಯಮ್ಮನಹಳ್ಳಿಯವಳು. ಕಷ್ಟದಿಂದ ಮೇಲೆ ಬಂದವಳು. ಸುಂಕವ್ವನ ಪಾತ್ರ ನನ್ನ ನಿಜ ಜೀವನಕ್ಕೆ ಬಹಳ ಹತ್ತಿರವಾದುದು. ಈ ಪಾತ್ರ ಸುಲಭವಾಯಿತು’ ಎಂದು ಡಿ. ಹನುಮಕ್ಕ ನುಡಿದರು.

‘ಬಳ್ಳಾರಿ, ವಿಜಯನಗರ ಜಿಲ್ಲೆಯ ಕಲಾವಿದರನ್ನೇ ಸೇರಿಸಿಕೊಂಡು ಚಿತ್ರ ಮಾಡಿರುವುದು ವಿಶೇಷ. ಎಲ್ಲರೂ ರಂಗಭೂಮಿಯ ಕಲಾವಿದರೇ ಎನ್ನುವುದು ಮತ್ತೊಂದು ವಿಶೇಷ’ ಎಂದು ಮಂಜಮ್ಮ ಜೋಗತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು