ಚೆನ್ನೈ: ‘ಕಿರಣ್ ರಾವ್ ನಿರ್ದೇಶನದ ಹಿಂದಿ ಚಿತ್ರ ‘ಲಾಪತಾ ಲೇಡೀಸ್’ 2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿರುವ ಭಾರತದ ಚಲನಚಿತ್ರವಾಗಿದೆ’ ಎಂದು ಭಾರತೀಯ ಚಲನಚಿತ್ರ ಫೆಡರೇಷನ್ (ಎಫ್‌ಎಫ್‌ಐ) ಸೋಮವಾರ ಪ್ರಕಟಣೆ ಹೊರಡಿಸಿದೆ.
ಆಯ್ಕೆ ಪಟ್ಟಿಯಲ್ಲಿ ಬಾಲಿವುಡ್‌ನ ಜನಪ್ರಿಯ ಚಿತ್ರ ‘ಅನಿಮಲ್’, ರಾಷ್ಟ್ರಪ್ರಶಸ್ತಿ ಪಡೆದ ಮಲೆಯಾಳ ಚಿತ್ರ ‘ಆಟ್ಟಂ’ ಸೇರಿ ಒಟ್ಟು 29 ಚಿತ್ರಗಳಿದ್ದವು. ಪ್ರಮುಖ ಐದರ ಪಟ್ಟಿಯಲ್ಲಿ ‘ಲಾಪತಾ ಲೇಡೀಸ್’ ಜತೆ ಹಿಂದಿ ಚಿತ್ರ ‘ಶ್ರೀಕಾಂತ್’, ತಮಿಳು ಚಿತ್ರಗಳಾದ ‘ವಾಳೈ’ ಮತ್ತು ‘ತಂಗಲಾನ್’ ಮತ್ತು ಮಲೆಯಾಳ ಚಿತ್ರ ‘ಉಳ್ಳೋಳುಕ್ಕು’ ಇದ್ದವು.
ಅಸ್ಸಾಂಮಿ ಚಿತ್ರ ನಿರ್ದೇಶಕ ಜಹ್ನು ಬರುವಾ ಅವರ ನೇತೃತ್ವದ 13 ಸದಸ್ಯರ ಆಯ್ಕೆ ಸಮಿತಿಯು ಪುರುಷ ಪ್ರಧಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ‘ಲಾಪತಾ ಲೇಡೀಸ್’ ಚಿತ್ರವನ್ನು ಅವಿರೋಧವಾಗಿ ಆಯ್ಕೆ ಮಾಡಿತು. ಈ ಚಿತ್ರವು ಈ ವರ್ಷ ಮಾರ್ಚ್‌ನಲ್ಲಿ ಬಿಡುಗಡೆ ಆಗಿತ್ತು. ನಟ ಅಮೀರ್ ಖಾನ್ ಈ ಚಿತ್ರವನ್ನು ನಿರ್ಮಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ದೇಶಕಿ ಕಿರಣ್ ರಾವ್, ‘ನಮ್ಮ ಚಿತ್ರವು ಭಾರತವನ್ನು ಪ್ರತಿನಿಧಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಆಯ್ಕೆ ಸಮಿತಿಗೆ ಹೃತ್ಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದಿದ್ದಾರೆ.