ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 17ಕ್ಕೆ ಒಟಿಟಿಯಲಿ ಕನ್ನಡ ಸಿನಿಮಾ ‘ಲಾ’ ಬಿಡುಗಡೆ

Last Updated 26 ಜೂನ್ 2020, 8:40 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಪರಿಣಾಮ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪೂರ್ಣಗೊಳಿಸಿರುವ ಕೆಲವು ಸಿನಿಮಾಗಳ ಬಿಡುಗಡೆಗೆ ಒಟಿಟಿ ವೇದಿಕೆಗಳು ಅನಿವಾರ್ಯವಾಗಿರುವುದು ಸಹಜ. ಪಿಆರ್‌ಕೆ ಪ್ರೊಡಕ್ಷನ್ಸ್‌‌ನಡಿ ನಿರ್ಮಾಣವಾಗಿರುವ ಕನ್ನಡದ ‘ಲಾ’ ಮತ್ತು ‘ಫ್ರೆಂಚ್‌ ಬಿರಿಯಾನಿ’ ಸಿನಿಮಾಗಳು ಈಗಾಗಲೇ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುವುದು ಖಾತ್ರಿಯಾಗಿದೆ.

ಈ ಚಿತ್ರಗಳು ಯಾವಾಗ ತೆರೆ ಕಾಣುತ್ತವೆ ಎಂಬ ಪ್ರಶ್ನೆ ಸಿನಿಪ್ರೇಕ್ಷಕರಿಗೆ ಕಾಡುತ್ತಿತ್ತು. ಈಗ ಬಿಡುಗಡೆಯ ದಿನಾಂಕವನ್ನು ನಟ ಹಾಗೂ ನಿರ್ಮಾಪಕ ಪುನೀತ್‌ ರಾಜ್‌ಕುಮಾರ್‌ ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದಾರೆ.

‘ಲಾ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ರಘು ಸಮರ್ಥ. ಜುಲೈ 17ರಂದು ಈ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಎಂ. ಗೋವಿಂದ ಬಂಡವಾಳ ಹೂಡಿದ್ದಾರೆ.

ಪ್ರಜ್ವಲ್ ದೇವರಾಜ್‌ ಅವರ ಪತ್ನಿ ರಾಗಿಣಿ ಚಂದನ್‌ ಇದರ ನಾಯಕಿ. ಚಿತ್ರದಲ್ಲಿ ಅವರ ಪಾತ್ರದ ಹೆಸರು ನಂದಿನಿ. ಕ್ರೈಮ್‌ ಥ್ರಿಲ್ಲರ್‌ ಚಿತ್ರ ಇದು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಪಾತ್ರ ಅವರದು. ಆಕೆಯ ಹೋರಾಟ ಯಾವ ಹಂತಕ್ಕೆ ತಲುಪುತ್ತದೆ; ಕೊನೆಗೆ ಆಕೆಯ ಹೋರಾಟಕ್ಕೆ ನ್ಯಾಯ ಸಿಗುತ್ತದೆಯೇ ಎಂಬುದು ಇದರ ತಿರುಳು.

ರಾಗಿಣಿ ಮಾಡೆಲಿಂಗ್‌ ಲೋಕದಿಂದ ಬಣ್ಣದ ಬದುಕಿಗೆ ಕಾಲಿಡುವ ಮೊದಲು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ತೆರೆ ಕಾಣಲು ಸಿದ್ಧವಾಗಿರುವ ಪ್ರಜ್ವಲ್‌ ದೇವರಾಜ್‌ ನಟನೆಯ ‘ಇನ್‌ಸ್ಪೆಕ್ಟರ್‌ ವಿಕ್ರಂ’ ಚಿತ್ರದಲ್ಲೂ ಅವರು ಅತಿಥಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

‘ಲಾ’ ಚಿತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು, ಸಿರಿ ಪ್ರಹ್ಲಾದ್‌, ಅಚ್ಯುತ್‌ ಕುಮಾರ್‌ ಮತ್ತು ಸುಧಾರಾಣಿ ನಟಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣವಿದೆ. ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ಶ್ರೀಕಾಂತ್‌ ಸಂಕಲನ ನಿರ್ವಹಿಸಿದ್ದಾರೆ.

ಅಂದಹಾಗೆ ಪನ್ನಗ ಭರಣ ನಿರ್ದೇಶನದ ‘ಫ್ರೆಂಚ್‌ ಬಿರಿಯಾನಿ’ ಸಿನಿಮಾವೂ ಅಮೆಜಾನ್‌ ಪ್ರೈಮ್‌ನಲ್ಲಿಯೇ ಜುಲೈ 24ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT