ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಭಾಷೆಯಲ್ಲಿ ಸಿದ್ಧವಾಗುತ್ತಿದೆ ‘ಮದಕರಿ ನಾಯಕ’

ಶಕ್ತಿ ದೇವತೆಗಳಿಗೆ ನಟ ದರ್ಶನ, ರಾಕಲೈನ್‌ ವೆಂಕಟೇಶ್‌ ಪೂಜೆ
Last Updated 2 ಡಿಸೆಂಬರ್ 2019, 14:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಮದಕರಿ ನಾಯಕ’ ಚಿತ್ರೀಕರಣಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಕೋಟೆ ನಾಡಿನ ಶಕ್ತಿದೇವತೆಗಳಿಗೆ ಚಿತ್ರತಂಡ ಸೋಮವಾರ ಪೂಜೆ ಸಲ್ಲಿಸಿತು. ಮದಕರಿ ನಾಯಕ ಪ್ರತಿಮೆಗೆ ನಮಿಸಿ ಆಶೀರ್ವಾದ ಪಡೆಯಿತು.

ನಾಯಕ ನಟ ದರ್ಶನ್‌, ನಿರ್ಮಾಪಕ ರಾಕಲೈನ್‌ ವೆಂಕಟೇಶ್‌ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ನೇತೃತ್ವದಲ್ಲಿ ಕೋಟೆ ನಾಡಿಗೆ ಭೇಟಿ ನೀಡಿದ ಚಿತ್ರತಂಡ ಗ್ರಾಮ ದೇವತೆ ಉಚ್ಚಂಗೆಮ್ಮ ಹಾಗೂ ಬರಗೇರಮ್ಮ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿತು. ಬಿ.ಡಿ.ರಸ್ತೆಯಲ್ಲಿರುವ ನೀಲಕಂಠೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆಯಿತು.

‘ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಡಿ.6ರಂದು ಬೆಂಗಳೂರಿನಲ್ಲಿ ಮುಹೂರ್ತ ನೆರವೇರಲಿದೆ. 150 ದಿನ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, ಶೇ 25ರಷ್ಟು ಚಿತ್ರೀಕರಣ ಏಳು ಸುತ್ತಿನ ಕೋಟೆಯಲ್ಲಿ ನಡೆಯಲಿದೆ’ ಎಂದು ನಿರ್ಮಾಪಕ ರಾಕಲೈನ್‌ ವೆಂಕಟೇಶ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪಾಳೆಗಾರರ ಆಡಳಿತ ವೈಖರಿಯ ಬಗ್ಗೆ ಹಿಂದಿನಿಂದಲೂ ಆಸಕ್ತಿ ಇತ್ತು. ಮದಕರಿ ನಾಯಕರ ಮೇಲೆ ಸಿನಿಮಾ ಮಾಡಲು ಸಾಧ್ಯವಾ ಎಂಬ ಆಲೋಚನೆ ಮೂಡಿತ್ತು. ನಾಲ್ಕು ವರ್ಷಗಳಿಂದ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ‘ಕುರುಕ್ಷೇತ್ರ’ ಸಿನಿಮಾ ನಿರ್ಮಿಸಿದ ಮುನಿರತ್ನ ಅವರು ಧೈರ್ಯ ತುಂಬಿದ್ದಾರೆ’ ಎಂದರು.

‘ಐತಿಹಾಸಿಕ ಕಥೆಗಳನ್ನು ತೆರೆಗೆ ತರುವುದು ಸುಲಭವಲ್ಲ. ‘ಕುರುಕ್ಷೇತ್ರ’ ಸಿನಿಮಾದಲ್ಲಿನ ದರ್ಶನ್‌ ಅಭಿನಯಇಷ್ಟವಾಯಿತು. ಮದಕರಿ ನಾಯಕ ಪಾತ್ರಕ್ಕೆ ದರ್ಶನ್‌ ಸೂಕ್ತ ಎಂದು ಆಯ್ಕೆ ಮಾಡಲಾಯಿತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜನವರಿಯಿಂದ ಚಿತ್ರೀಕರಣ:ಸಿನಿಮಾ ನಿರ್ಮಾಣಕ್ಕೆ ಅದ್ಭುತ ಸೆಟ್‌ ತಯಾರಿಸಲಾಗುತ್ತಿದೆ. ಆನೆ, ಕುದುರೆಗಳನ್ನು ಬಳಸಲಾಗುತ್ತಿದೆ. ಇದಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಜನವರಿಯಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದರು.

‘ಮದಕರಿ ನಾಯಕ ಸಿನಿಮಾ ರೂಪಿಸಲು ಎರಡು ಬಾರಿ ಕೈಹಾಕಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಬಾಲಿವುಡ್‌ ಸಿನಿಮಾದಷ್ಟೇ ಅದ್ದೂರಿಯಾಗಿ ನಿರ್ಮಿಸಲಾಗುತ್ತಿದೆ. ದೇಶದ ಎಲ್ಲೆಡೆ ಕನ್ನಡದ ಭಾವುಟ ಹಾರಾಡಲಿದೆ’ ಎಂದರು.

‘ಕಾದಂಬರಿಕಾರ ಬಿ.ಎಲ್‌.ವೇಣು ಅವರು ಕಥೆ ಬರೆದಿದ್ದಾರೆ. ಇತಿಹಾಸಕಾರ ಲಕ್ಷ್ಮಣ್‌ ತೆಲಗಾವಿ ಅವರೊಂದಿಗೆ ಸಾಕಷ್ಟು ಬಾರಿ ಚರ್ಚೆ ಮಾಡಲಾಗಿದೆ. ಸಂಶೋಧನಾ ಕೃತಿಗಳನ್ನು ಅಧ್ಯಯನ ಮಾಡಲಾಗಿದೆ. ಮಣ್ಣಿನ ವಾಸನೆ ಇರುವ ಇಂತಹ ಚಿತ್ರಗಳು ಕನ್ನಡದಲ್ಲಿ ಇನ್ನೂ ಬರಬೇಕಿದೆ’ ಎಂದು ನುಡಿದರು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಚಿತ್ರನಟರಾದ ದೊಡ್ಡಣ್ಣ, ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT