ಶನಿವಾರ, ಸೆಪ್ಟೆಂಬರ್ 26, 2020
23 °C

‘ಮಹಾನಟಿ’ ಕೀರ್ತಿ ಸುರೇಶ್‌ಗೆ ಪ್ರೇಮಪತ್ರ ಬರೆದ ಆ ಕಿಲಾಡಿ ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮಹಾನಟಿ’ ಚಿತ್ರದ ಖ್ಯಾತಿಯ ನಟಿ ಕೀರ್ತಿ ಸುರೇಶ್‌ ಬಹುಮುಖ ಪ್ರತಿಭೆ. ನಾಗ್‌ ಅಶ್ವಿನ್‌ ನಿರ್ದೇಶಿಸಿದ ಈ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ರಾಷ್ಟ್ರಪ್ರಶಸ್ತಿಯೂ ಆಕೆಯ ಮುಡಿಗೇರಿತ್ತು. ಸಿನಿಮಾದಿಂದ ಸಿನಿಮಾಕ್ಕೆ ಆಕೆ ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರಗಳನ್ನು ಕಂಡು ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ. ಒಂದು ಚಿತ್ರದಲ್ಲಿ ಕಾಲೇಜು ಹುಡುಗಿಯಾದರೆ, ಮತ್ತೊಂದರಲ್ಲಿ ಪಕ್ಕದ ಮನೆಯ ಹುಡುಗಿಯ ಪಾತ್ರಕ್ಕೆ ಜೀವ ತುಂಬುವ ಕಲೆ ಕೀರ್ತಿಗೆ ಸಿದ್ಧಿಸಿದೆ.

ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡ ತಮಿಳಿನ ‘ಪೆಂಗ್ವಿನ್‌’ ಚಿತ್ರದಲ್ಲಿನ ಆಕೆಯ ನಟನೆ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ರೊಮ್ಯಾಂಟಿಕ್‌ ಸಿನಿಮಾಗಳಲ್ಲೂ ಆಕೆ ನಟಿಸಿದ್ದಾರೆ. ಹಲವು ಸ್ಟಾರ್‌ನಟರ ಜೊತೆಗೆ ತೆರೆ ಹಂಚಿಕೊಂಡರೂ ಯಾರೊಬ್ಬರ ಹೆಸರಿನೊಟ್ಟಿಗೂ ಕೀರ್ತಿಯ ಹೆಸರು ತಳುಕು ಹಾಕಿಕೊಂಡಿಲ್ಲ. ಇತ್ತೀಚೆಗೆ ಆಕೆ ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಕೊನೆಗೆ, ಇದೊಂದು ಗಾಳಿಸುದ್ದಿ ಎಂದು ಆಕೆಯೇ ತಿರಸ್ಕರಿಸಿದ್ದು ಉಂಟು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಕೆ ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗುವಂತೆ ಹಿಂದೆ ಬಿದ್ದಿದ್ದ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಅದೊಂದು ಸಾರ್ವಜನಿಕ ಕಾರ್ಯಕ್ರಮ. ಅದರಲ್ಲಿ ಕೀರ್ತಿ ಸುರೇಶ್‌ ಕೂಡ ಪಾಲ್ಗೊಂಡಿದ್ದರಂತೆ. ತನ್ನ ಇಷ್ಟದೇವತೆಯೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮೊದಲೇ ಊಹಿಸಿದ್ದ ಆ ಕಿಲಾಡಿ ಅಭಿಮಾನಿ ದಿಢೀರನೇ ಆಕೆಯ ಮುಂದೆ ಪ್ರತ್ಯಕ್ಷನಾದನಂತೆ. ಏನನ್ನೂ ಯೋಚಿಸದೆ ಕೀರ್ತಿಯ ಕೈಗೆ ಗಿಫ್ಟ್‌ ಬಾಕ್ಸ್‌ವೊಂದನ್ನು ನೀಡಿದನಂತೆ. ಕುತೂಹಲದಿಂದ ಅದನ್ನು ತೆರೆದಾಗ ಕೀರ್ತಿಗೆ ಅಚ್ಚರಿಯೊಂದು ಕಾದಿತ್ತು.

ಆಲ್ಬಂ ತುಂಬೆಲ್ಲಾ ಕೀರ್ತಿ ಸುರೇಶ್‌ ಅವರ ಫೋಟೊಗಳು ಇದ್ದವು. ಜೊತೆಗೆ, ಆ ಅಭಿಮಾನಿ ಬರೆದಿದ್ದ ಪ್ರೇಮಪತ್ರವೂ ಇತ್ತಂತೆ. ವೇದಿಕೆಯಲ್ಲಿಯೇ ‘ನೀನು ನನ್ನನ್ನು ಮದುವೆಯಾಗಬೇಕು’ ಎಂದು ಕೇಳಿಯೇ ಬಿಟ್ಟನಂತೆ.

ಅಭಿಮಾನಿ ಬರೆದ ಲವ್‌ ಲೆಟರ್‌ ತನ್ನ ಪಾಲಿಗೆ ಎಷ್ಟು ಅಮೂಲ್ಯ ಎಂಬುದನ್ನು ಕೀರ್ತಿ ಹೇಳಿರುವುದು ಅಸಕ್ತಿದಾಯಕವಾಗಿದೆ. ‘ನನ್ನ ಕಾಲೇಜಿನ ದಿನಗಳಲ್ಲಿ ನನಗೆ ಒಂದೂ ಪ್ರೇಮಪತ್ರವೂ ಬರಲಿಲ್ಲ. ಹಾಗಾಗಿ, ನನ್ನ ಅಪ್ಪಟ ಅಭಿಮಾನಿ ನೀಡಿದ ಪ್ರೇಮಪತ್ರ ಅಮೂಲ್ಯವಾದುದು. ಜೊತೆಗೆ ಮೌಲ್ಯಯುತವಾದುದು’ ಎಂದಿದ್ದಾರೆ ಕೀರ್ತಿ.

ಪ್ರಸ್ತುತ ಕೀರ್ತಿ ‘ಸೂಪರ್‌ಸ್ಟಾರ್‌’ ರಜನಿಕಾಂತ್‌ ನಟನೆಯ ‘ಅಣ್ಣಾತೆ’ಯಲ್ಲಿ ತಲೈವನ ಪುತ್ರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಿತಿನ್‌ ನಟನೆಯ ‘ರಂಗ್‌ ದೇ’ ಚಿತ್ರಕ್ಕೂ ಅವರೇ ನಾಯಕಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು