ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕಪ್‌ ಕಲಾವಿದ ಕೃಷ್ಣ ನಿಧನ

Last Updated 13 ಜನವರಿ 2020, 12:38 IST
ಅಕ್ಷರ ಗಾತ್ರ

ಬೆಂಗಳೂರು:ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್‌ ಸೇರಿ ಹಲವು ಮೇರು ನಟರಿಗೆ ಬಣ್ಣ ಹಚ್ಚಿದ ಪ್ರಸಾದನ ಕಲಾವಿದ ಮೇಕಪ್ ಕೃಷ್ಣ (55) ಸೋಮವಾರ ನಿಧನರಾಗಿದ್ದಾರೆ.

ಅವರಿಗೆ ಪತ್ನಿ ವತ್ಸಲಾ ಕೃಷ್ಣ ಮತ್ತು ಪುತ್ರಿ ‌ವರ್ಷಾ ಕೃಷ್ಣ ಇದ್ದಾರೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ ಕೊನೆ ಉಸಿರೆಳೆದಿದ್ದಾರೆ. ಅವರ ಹುಟ್ಟೂರಾದ ಕುಂಬಳಗೋಡು ಬಳಿಯ ಗೊಲ್ಲಹಳ್ಳಿಯಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಿತು.

ಕನ್ನಡದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಸಾದನ ಕಲಾವಿದನಾಗಿ ದುಡಿದಿದ್ದರು. ಬಾಲಿವುಡ್‌ ನಟರಿಗೂ ಅವರು ಮೇಕಪ್‌ ಮಾಡಿದ್ದರು. ರಾಜ್‌ ಕುಟುಂಬದೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದ ಕೃಷ್ಣ, ರಾಜ್‌ಕುಮಾರ್‌ ಅವರ ಮಕ್ಕಳಿಗೂ ಹಲವು ಚಿತ್ರಗಳಲ್ಲಿ ಪ್ರಸಾದನ ಕಲಾವಿದನಾಗಿ ಬಣ್ಣ ಹಚ್ಚಿದ್ದಾರೆ.

ಮೇಕಪ್‌ ರಾಮಕೃಷ್ಣ ಅವರ ಶಿಷ್ಯರಾಗಿದ್ದ ಕೃಷ್ಣ, ಚಿತ್ರರಂಗದಲ್ಲಿ‌ ಒಂದೊಂದೆ ಹೆಜ್ಜೆ ಮುಂದಿಟ್ಟು, ಯಶಸ್ಸು ಸಂಪಾದಿಸಿಕೊಂಡಿದ್ದರು. ವರ್ಷಾ ಕ್ರಿಯೇಷನ್ಸ್‌ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದ ಅವರು ‘ಚಂದ್ರ ಚಕೋರಿ’, ‘ಓ ನನ್ನ ಚೇತನ’, ‘ನೀನೆಲ್ಲಿರುವೆ’ ಸೇರಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು.

ಡಾ.ರಾಜ್ ಕುಮಾರ್ ಜೀವನಕಥೆ ಕುರಿತು ದೂರದರ್ಶನಕ್ಕಾಗಿ ಅವರು ‘ನಟಸಾರ್ವಭೌಮ’ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಇದು ಅವರಿಗೆಖ್ಯಾತಿ ತಂದುಕೊಟ್ಟಿತ್ತು. ಇದು ಡಿಡಿ1 ಮತ್ತು ಉದಯ ಟಿ.ವಿ ಸೇರಿ ಹಲವು ಟಿ.ವಿ ವಾಹಿನಿಗಳಲ್ಲಿ108 ಎಪಿಸೋಡ್‌ಗಳಲ್ಲಿ ಪ್ರಸಾರವಾಯಿತು. ಎರಡು ತಿಂಗಳ ಹಿಂದಷ್ಟೇ ಚಲನಚಿತ್ರ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡರ ಬದುಕಿನ ಕುರಿತು ‘ಬೆಳ್ಳಿ ಹೆಜ್ಜೆ’ ಸಾಕ್ಷ್ಯಚಿತ್ರವನ್ನು ಕೃಷ್ಣ ವಾರ್ತಾ ಇಲಾಖೆಗಾಗಿನಿರ್ಮಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT