ಸೋಮವಾರ, ಅಕ್ಟೋಬರ್ 3, 2022
24 °C

ನಟಿ ಮಾಲಾಶ್ರೀ ಪುತ್ರಿ ರಾಧನಾ ಬೆಳ್ಳಿತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದನವನದ ‘ಕನಸಿನ ರಾಣಿ’ ನಟಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್‌ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದಾರೆ. ನಟ ದರ್ಶನ್‌ ಅವರ 56ನೇ ಸಿನಿಮಾದಲ್ಲಿ ನಾಯಕಿಯಾಗಿ ರಾಧನಾ ಆಯ್ಕೆಯಾಗಿದ್ದು, ವರಮಹಾಲಕ್ಷ್ಮಿ ಹಬ್ಬದಂದು ಹೊಸ ಸಿನಿಮಾ ಸೆಟ್ಟೇರಿದೆ.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆಯೂ ಅವರದ್ದೇ. ತರುಣ್‌ ಹಿಂದಿನ ಚಿತ್ರ ‘ರಾಬರ್ಟ್’ನಲ್ಲಿ ಕೆಲಸ ಮಾಡಿದ್ದ ಬಹುತೇಕರು ಹೊಸ ಚಿತ್ರದಲ್ಲೂ ಇರಲಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ತಂಡ ಶೀಘ್ರದಲ್ಲೇ ಘೋಷಿಸಲಿದ್ದು, ಆಗಸ್ಟ್ 16ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದಿದೆ ಚಿತ್ರತಂಡ.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದರ ಕುರಿತು ಮಾತನಾಡಿದ ರಾಧನಾ, ‘ನನಗೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಬಹಳ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿತು. ಎರಡು ವರ್ಷ ತರಬೇತಿ ಪಡೆದು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಚಿತ್ರಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲೂ ಭಾಗವಹಿಸುತ್ತಿದ್ದೇನೆ’ ಎಂದರು.

‘ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಈಗ ನನ್ನ ಮಗಳೂ ಕಾಲಿಡುತ್ತಿದ್ದಾಳೆ. ರಾಕ್‌ಲೈನ್ ವೆಂಕಟೇಶ್ ಅವರು ನನ್ನ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಪ್ರಾರಂಭಿಸಿದರು. ನನ್ನ ಮಗಳೂ ಅವರ ನಿರ್ಮಾಣದ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಅವಳು 14ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬರಬೇಕು, ಅಭಿನಯಿಸಬೇಕು ಎಂಬ ಆಸೆ ಹೊಂದಿದ್ದಳು. ಮುಂಬೈನಲ್ಲಿ ನಟನೆ, ಡ್ಯಾನ್ಸ್ ತರಬೇತಿ ಪಡೆದಿದ್ದಾಳೆ’ ಎಂದರು ಮಾಲಾಶ್ರೀ. ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಮತ್ತು ಮಾಸ್ತಿ ಅವರ ಸಂಭಾಷಣೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು