ಕುತೂಹಲ ಮೂಡಿಸುವ ‘ಮನರೂಪ’ ಪೋಸ್ಟರ್

7

ಕುತೂಹಲ ಮೂಡಿಸುವ ‘ಮನರೂಪ’ ಪೋಸ್ಟರ್

Published:
Updated:
Deccan Herald

ವಿಭಿನ್ನ ಕಥಾವಸ್ತು ಮತ್ತು ನವೀನ ಮಾದರಿಯ ಪ್ರಯೋಗಗಳೊಂದಿಗೆ ತೆರೆಗೆ ಬರಲು ಸಿದ್ಧವಾಗಿರುವ ‘ಮನರೂಪ‘ ಚಿತ್ರವು ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಚಿತ್ರೀಕರಣದ ಸ್ವಲ್ಪವೂ ವಿವರಣೆ ನೀಡದೇ, ಕಲಾವಿದರ ಚಿತ್ರಗಳನ್ನು ಹೆಚ್ಚು ಬಹಿರಂಗಪಡಿಸದೆ ಮತ್ತು ಕಥೆಯ ಸಣ್ಣ ಸುಳಿವೂ ನೀಡದೆ ತಯಾರಾದುದು. ಸದ್ಯಕ್ಕೆ ಪೋಸ್ಟರ್‌ಗಳ ಮೂಲಕ ಗಮನ ಸೆಳೆಯುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಉಮೇದಿನಲ್ಲಿರುವ ’ಮನರೂಪ‘ ಚಿತ್ರದ ತಂಡದಲ್ಲಿ ಬಹುತೇಕ ಮಂದಿ ಹೊಸಬರೇ ಇದ್ದಾರೆ. ರಂಗಭೂಮಿ, ಚಿತ್ರಕಲೆ, ಮಾಧ್ಯಮ, ಸಂವಹನ ಮುಂತಾದ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅವರು ಕೊಂಚ ಬಿಡುವು ಮಾಡಿಕೊಂಡು ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಚಿತ್ರ ನಿರ್ಮಾಣ, ಚಿತ್ರೀಕರಣ ಮತ್ತು ಅದಕ್ಕೆ ಸಂಬಂಪಟ್ಟ ಕಾರ್ಯಗಳು ಎಲ್ಲವೂ ಅವರಿಗೆ ಹೊಸ ಅನುಭವ.

ಮನೋವಿಜ್ಞಾನ, ಭ್ರಮೆ, ಸಾಹಸ ಮತ್ತು ವಾಸ್ತವಾಂಶಗಳನ್ನು ಆಧರಿಸಿದ ಈ ಚಿತ್ರವು ಯುವಜನರನ್ನು ಕೇಂದ್ರೀಕರಿಸಿದೆ. ಅಲ್ಲದೇ ಅವರ ಜೀವನಶೈಲಿಯಲ್ಲಿ ಆಗುತ್ತಿರುವ ಪರಿವರ್ತನೆ ಮತ್ತು ತಂತ್ರಜ್ಞಾನ ಉಂಟು ಮಾಡಿರುವ ಪ್ರಭಾವವನ್ನು ತೋರಿಸಿಕೊಟ್ಟಿದೆ. ಮುಖವಾಡದ (ಮಾಸ್ಕೋಫೋಬಿಯಾ) ಭಯ ಯಾವ ಹಂತಕ್ಕೆ ಪರಿಣಾಮ ಬೀರಬಲ್ಲದು ಎಂಬುದನ್ನು ತೋರಿಸಿಕೊಡುವ ಪ್ರಯತ್ನ ಈ ಚಿತ್ರ ಮಾಡಿದೆ.

ಚಿಂತನೆಗೆ ಎಡೆ ಮಾಡಿಕೊಡುವ ಮತ್ತು ಸೋಜಿಗ ಉಂಟು ಮಾಡುವಂತಹಹ ಪೋಸ್ಟರ್‌ಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುತ್ತಿರುವ ಚಿತ್ರ ತಂಡವು ಚಿತ್ರವನ್ನು ತೆರೆಗೆ ತರುವ ವೇಳೆಗೆ ಚಿತ್ರರಸಿಕರಿಗೆ ಒಟ್ಟಾರೆ ಹೊಸ ರೀತಿಯ ಅನುಭೂತಿ ಉಣಡಿಸುವ ಗುರಿ ಹೊಂದಿದೆ. ಅದಕ್ಕೆಂದೇ ಚಿತ್ರಕಲೆಯ ಪರಿಣಿತರು, ತಂತ್ರಜ್ಞರು, ಸೃಜನಾತ್ಮಕ ವಿನ್ಯಾಸಕರರು ಇದಕ್ಕೆ ಕೈ ಜೋಡಿಸಿದ್ದಾರೆ. ಅದಕ್ಕಾಗಿ ಪಣತೊಟ್ಟಿದ್ದಾರೆ.

ಆಸಕ್ತಿಮಯ ಸಂಗತಿಯೆಂದರೆ, ಕಥೆಯ ಒಂದೊಂದೇ ಎಳೆಯನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಪಡಿಸುವ ಉದ್ದೇಶದಿಂದ ಒಟ್ಟು 16 ಪೋಸ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ. ಈವರೆಗೆ ಎರಡು ಅಥವಾ ಮೂರು ಪೋಸ್ಟರ್‌ಗಳನ್ನು ಒಂದು ಅಥವಾ ಎರಡು ಪೋಸ್ಟರ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಒಂದೊಂದು ಪೋಸ್ಟರ್ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಲು ಕನಿಷ್ಠ 6 ತಿಂಗಳು ಸಮಯ ಪಡೆದಿದೆ ಎಂಬುದೇ ವಿಶೇಷ!

’ಮೊದಲ ಬಾರಿ ಕಥೆಯನ್ನು ಆಲಿಸಿ, ಅದಕ್ಕೆ ತಕ್ಕಂತೆ ಪೋಸ್ಟರ್ ಸಿದ್ಧಪಡಿಸಿದಾಗ ಚಿತ್ರನಿರ್ದೇಶಕ ಕಿರಣ್ ಹೆಗಡೆ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಸಂತೃಪ್ತಿ ತರಲಿಲ್ಲ. ಪೋಸ್ಟರ್‌ನಲ್ಲಿ ಇನ್ನೇನೋ ಇರಬೇಕಿತ್ತು ಅಥವಾ ತೆಗೆಯಬೇಕಿತ್ತು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆವು. ಒಟ್ಟಾರೆ 36 ಬಾರಿ ತಿದ್ದುಪಡಿಯಾದ ಬಳಿಕ ಪೋಸ್ಟರ್‌ವೊಂದು ಸಿದ್ಧವಾಯಿತು' ಎಂದು ಚಿತ್ರ ಕಲಾವಿದ ನವೀನ ರೇವಣಸಿದ್ಧಪ್ಪ ತಿಳಿಸಿದರು.

’ಸಾಮಾನ್ಯವಾಗಿ ನಟ, ನಟಿಯರ ಚಿತ್ರಗಳನ್ನು ಪ್ರದರ್ಶಿಸಿ ಸಿನಿಮಾ ಕುರಿತು ಪ್ರಚಾರ ಮಾಡಲಾಗುತ್ತದೆ. ಆದರೆ ನಾವು ಪೋಸ್ಟರ್‌ಗಳ ಮೂಲಕ ಚಿತ್ರರಸಿಕರನ್ನು ಸೆಳೆಯಲು ಪ್ರಯತ್ನ ನಡೆಸಿದ್ದೇವೆ. ಪೋಸ್ಟರ್‌ನಲ್ಲಿನ ಒಂದೊಂದು ರೇಖೆ, ಚುಕ್ಕಿ, ಚಂದ್ರ, ಹಕ್ಕಿ ಎಲ್ಲವೂ ಚಿತ್ರದಲ್ಲಿನ ಪಾತ್ರಗಳ ಸಂಕೇತ. ಚಿತ್ರ ನೋಡುವವರೆಗೆ ಅವು ಏನನ್ನೂ ಪ್ರತಿನಿಧಿಸುತ್ತವೆ ಮತ್ತು ಅವು ಪೋಸ್ಟರ್‌ನಲ್ಲಿ ಯಾಕೆ ಇವೆ ಎಂಬುದು ಗೊತ್ತಾಗುವುದಿಲ್ಲ' ಎಂದರು.

’ಒಂದೊಂದು ಪೋಸ್ಟರ್ ಸಿದ್ಧಪಡಿಸುವುದರ ಹಿಂದೆಯೇ ಅಪಾರ ಶ್ರಮವಿದೆ. ಒಂದೊಂದು ಚುಕ್ಕಿ ಹಾಕುವಾಗಲೂ ಮತ್ತು ಗೆರೆ ಎಳೆಯುವಾಗಲೂ ಅದರ ಬಗ್ಗೆ ಸಾಕಷ್ಟು ಯೋಚಿಸಿದೆವು. ಹಾಲಿವುಡ್ ಮಾದರಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದೇವೆ. ಇನ್ನೂ ಡಿಫೆರೆಂಟ್ ಆದ ಪೋಸ್ಟರ್‌ಗಳನ್ನು ನೀಡದಿದ್ದರೆ ಹೇಗೆ’ ಎಂದರು ನವೀನ ರೇವಣಸಿದ್ಧಪ್ಪ.

ಯುವಜನರ ನೋಡಲೇಬೇಕಾದ ಸಿನಿಮಾ 
 ಚಿತ್ರ ನಿರ್ದೇಶಕ ಕಿರಣ್ ಹೆಗಡೆ ಚಿತ್ರರಂಗದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರಲ್ಲ. ಆದರೆ ಚಿತ್ರರಂಗದಲ್ಲಿನ ಆಗುಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಅರಿತುಕೊಂಡವರು.

ಸಾರ್ವಜನಿಕ ಸಂಪರ್ಕ ಸಂವಹನ ಕ್ಷೇತ್ರದಲ್ಲಿರುವ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಲ್ಲದೇ ಯಶಸ್ಸು ಗಳಿಸುವ ಆತ್ಮವಿಶ್ವಾಸ ಹೊಂದಿದ್ದಾರೆ. ಚಿತ್ರ ನಿರ್ಮಾಣ ಕುರಿತು ಕಿರಣ್‌ ಸಾಕಷ್ಟು ಅಧ್ಯಯನವನ್ನೂ ಮಾಡಿದ್ದಾರೆ. ಅಗತ್ಯ ಮಾರ್ಗದರ್ಶನವನ್ನೂ ಪಡೆದಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವೀಧರರಾದ ಕಿರಣ್ ಕಲಿಕಾ ಹಂತದಲ್ಲೇ ಅರ್ಧ ಗಂಟೆಯ ಕಿರುಚಿತ್ರವನ್ನು ನಿರ್ಮಿಸಿದವರು. ಪತ್ರಿಕೋದ್ಯಮ ವಿಭಾಗದಲ್ಲಿ ಲಭ್ಯವಿದ್ದ ಕ್ಯಾಮೆರಾ ಬಳಸಿಕೊಂಡು ಮತ್ತು ಗೆಳೆಯರನ್ನೇ ಪಾತ್ರಧಾರಿಗಳಾಗಿಸಿಕೊಂಡು ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣ ಮಾಡಿದವರು.

ವಿಶ್ವವಿದ್ಯಾಲಯದಲ್ಲಿ ನಾಟಕೋತ್ಸವ ಸ್ಪರ್ಧೆ ನಡೆದ ಸಂದರ್ಭದಲ್ಲಿ ಕಿರಣ್ ಅವರಿಗೆ ತಾವೇ ನಿರ್ದೇಶಿಸಿದ ನಾಟಕಕ್ಕೆ ಮನುಷ್ಯರ ಬುರುಡೆಯೊಂದು ಬೇಕಾಯಿತು. ವಿಜ್ಞಾನ ವಿಭಾಗದಿಂದ ಕೃತಕ ಬುರುಡೆಯೊಂದನ್ನು ತರಲು ಪ್ರಯತ್ನಿಸಿ, ವಿಫಲರಾದರು.

ಕೊನೆಗೆ ತಾವೇ ಸ್ಮಶಾನವೊಂದಕ್ಕೆ ಹೋಗಿ ಬುರುಡೆಯೊಂದನ್ನು ತಂದು ನಾಟಕ ಪ್ರದರ್ಶಿಸಿ, ಎಲ್ಲರ ಗಮನ ಸೆಳೆದರು. ನಾಟಕದ ಪಾತ್ರ, ವಸ್ತುಗಳ ವಿಷಯದಲ್ಲಿ ರಾಜಿಯಾಗಲಿಲ್ಲ. ಹಾಗೆಯೇ ಸಿನಿಮಾದಲ್ಲೂ ಕೂಡ.

‘ಮನರೂಪ ಸಿನಿಮಾದ ಮೂಲಕ ಬಹುತೇಕ ಮಂದಿ ಮೊದಲ ಬಾರಿಗೆ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ಒಂದೊಂದು ಪಾತ್ರವೂ ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುತ್ತದೆ. ಅಲ್ಲದೇ ಮಹತ್ತರವಾದ ಸಂದೇಶವನ್ನೂ ನೀಡುತ್ತದೆ. ಆಧುನಿಕ ದಿನಮಾನಗಳಲ್ಲಿ ಬಗೆಬಗೆಯ ಜೀವನಶೈಲಿಗೆ ಹೊಂದಿಕೊಳ್ಳುತ್ತಿರುವ ಯುವಜನರು ನೋಡಲೇಬೇಕಾದ ಸಿನಿಮಾ ಇದು’ ಎಂಬುದು ಕಿರಣ್ ಹೆಗಡೆ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !