ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಗರು ಪುಟ್ಟಿಯ ಮನೋಗತ

Last Updated 19 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‘ಟಗರು’ ಚಿತ್ರಕ್ಕೂ ಮೊದಲ ನಿರ್ದೇಶಕರು ಹೇಳಿದಂತೆ ಕ್ಯಾಮೆರಾದ ಮುಂದೆ ನಟಿಸುತ್ತಿದ್ದೆ. ಈಗ ಅಭಿನಯದಲ್ಲಿ ಮೆಚ್ಯುರಿಟಿಯಂತೂ ಬಂದಿದೆ’

–‘ಟಗರು’ ಬಳಿಕ ತಮ್ಮ ನಟನೆಯಲ್ಲಾಗಿರುವ ಪರಿಪಕ್ವತೆಯನ್ನು ನಟಿ ಮಾನ್ವಿತಾ ಹರೀಶ್‌ ಅರ್ಥೈಸಿದ್ದು ಹೀಗೆ. ‘ಕೆಂಡಸಂಪಿಗೆ’ಯ ಗೌರಿಯಂತೆ ಎಷ್ಟೋ ವಿಚಾರದಲ್ಲಿ ಇರಬೇಕೆಂದು ಅವರಿಗೆ ಅನಿಸಿದ್ದು ಇದೆಯಂತೆ. ಇಂದಿಗೂ ಅವಳ ಮುಗ್ಧತೆ ಕಾಡುತ್ತಿದೆಯಂತೆ. ‘ಟಗರು’ವಿನ ಪುನರ್ವಸುವಿನಿಂದ ಕಲಿಯುವುದು ಏನೂ ಇಲ್ಲ. ಕುಡಿದ ಮತ್ತಿನಲ್ಲಿ ಆಕೆ ಅಜ್ಜಿಯ ಗುಡಿಸಲನ್ನು ಸುಟ್ಟು ಹಾಕುತ್ತಾಳೆ. ಅಲ್ಲಿಂದ ಅವಳಲ್ಲೊಂದು ಬದಲಾವಣೆಯಾಗುತ್ತದೆ. ನಾನು ಆ ಪಾತ್ರದಲ್ಲಿ ನಟನೆ ಮಾಡಿಲ್ಲ; ಆ ಪಾತ್ರದಲ್ಲಿ ನಾನಿದ್ದೇನೆ’ ಎಂದು ನೆನಪಿಸಿಕೊಳ್ಳುತ್ತಾರೆ.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದಲ್ಲಿ ಮೇದಿನಿಯಾಗಿ ವೈವಿಧ್ಯಮಯ ಪಾತ್ರಕ್ಕೆ ಬಣ್ಣ ಹಚ್ಚಿದ ಖುಷಿಯಲ್ಲಿದ್ದಾರೆ ಮಾನ್ವಿತಾ. ಆ ಚಿತ್ರ ಒಪ್ಪಿಕೊಳ್ಳುವುದಕ್ಕೆ ಅವರಿಗೆ ಬಲವಾದ ಕಾರಣವೂ ಇದೆಯಂತೆ. ‘ನನ್ನ ಪಾಲಿಗೆ ಇದು ಸ್ಪೆಷಲ್‌ ಸಿನಿಮಾ. ಈ ಕಥೆ ಬರೆದಿರುವುದು ಹುಡುಗಿ. ಮಹಿಳಾ ಬರಹಗಾರರು ಬದುಕನ್ನು ಆಳವಾಗಿ ಅಧ್ಯಯನ ಮಾಡುತ್ತಾರೆ. ಹಾಗಾಗಿಯೇ, ಅವರ ಮೇಲೆ ಅಗಾಧ ಅಭಿಮಾನವಿದೆ. ಅದಕ್ಕಾಗಿಯೇ ಒಪ್ಪಿಕೊಂಡೆ’ ಎಂದು ಚಂದದ ನಗು ಚೆಲ್ಲುತ್ತಾರೆ.

‘ಮೇದಿನಿ ದೇಶಭಕ್ತೆಯಲ್ಲ. ವಾಚಾಳಿಯೂ ಅಲ್ಲ. ಆಕೆಯದ್ದು ಎಲ್ಲವನ್ನೂ ಸಮತೋಲನದಿಂದ ನೋಡುವ ಗುಣ. ಮೊದಲ ಬಾರಿಗೆ ವಿದೇಶಕ್ಕೆ ಹಾರುತ್ತಾಳೆ. ಅಲ್ಲಿನ ವೀಸಾ ಸಮಸ್ಯೆ ಕಂಡಾಗ ಅವಳಲ್ಲಿ ಧುತ್ತನೆ ಪ್ರಶ್ನೆಗಳು ಏಳುತ್ತವೆ. ನೀವು ಹಡಗಿನಲ್ಲಿ ಭಾರತಕ್ಕೆ ಬಂದಾಗ ವೀಸಾ ಇತ್ತೇ? ಎಂದು ಪ್ರಶ್ನಿಸುವ ಹುಡುಗಿ. ಲಂಡನ್‌ ಮ್ಯೂಸಿಯಂನಲ್ಲಿ ಕೊಹಿನೂರ್‌ ವಜ್ರ ನೋಡಿದಾಗ ಅದನ್ನು ಕದಿಯಬೇಕೆಂದು ಆಕೆಗೆ ಅನಿಸುತ್ತದೆ. ಅವಳ ಮುಗ್ಧತೆಯಲ್ಲಿಯೂ ದೇಶಭಕ್ತಿಯಿದೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

ಮಾನ್ವಿತಾ ಚಿತ್ರರಂಗ ಪ್ರವೇಶಿಸಿ ನಾಲ್ಕು ವರ್ಷವಾದರೂ ನಟಿಸಿದ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು. ಹಾಗೆಂದು ಸಂಖ್ಯೆಗಳ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಆ ಹಾದಿಯಲ್ಲಿಯೂ ಅವರು ಇಲ್ಲ. ಸಿನಿಮಾಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚ್ಯೂಸಿ. ಎಂದಿಗೂ ಸ್ಟಾರ್‌ಪಟ್ಟಕ್ಕೆ ಇಷ್ಟಪಟ್ಟವರಲ್ಲ. ಸಿನಿಮಾವನ್ನು ಫ್ಯಾಷನ್‌ ಆಗಿ ನೋಡುವುದೇ ಅವರಿಗೆ ಇಷ್ಟವಂತೆ. 10 ಸಿನಿಮಾದಲ್ಲಿ ನಟಿಸಿದರೆ ಆ ಎಲ್ಲಾ ಚಿತ್ರಗಳೂ ಜನರ ಮನದಲ್ಲಿ ಉಳಿಯಬೇಕು ಎನ್ನುವುದು ಅವರ ಆಸೆ.

‘ಹಾಲಿವುಡ್‌ನಲ್ಲಿ ಅಂತಹದೊಂದು ಟ್ರೆಂಡ್‌ ಇದೆ. ಬಾಲಿವುಡ್‌ನಲ್ಲೂ ಅಮಿತಾಭ್‌ ಬಚ್ಚನ್‌ ಇಂತಹದ್ದೇ ಟ್ರಂಡ್‌ ಹುಟ್ಟು ಹಾಕಿದ್ದಾರೆ. ಅವರು ನಟಿಸುವ ಸಿನಿಮಾಗಳಿಗಾಗಿ ಜನರು ಕಾಯುತ್ತಾರೆ. ರಜನಿಕಾಂತ್‌, ಕಮಲ ಹಾಸನ್‌, ಮೋಹನ್‌ಲಾಲ್‌ ಅವರ ಸಿನಿಮಾಗಳಿಗೂ ನಾವು ಕಾಯುತ್ತಿರುತ್ತೇವೆ. ಆ ಟ್ರೆಂಡ್‌ ಬೆಳೆಸಿಕೊಂಡು ಹೋಗಬೇಕೆಂಬುದು ನನ್ನಾಸೆ’ ಎನ್ನುತ್ತಾರೆ.

‘ದುಡ್ಡಿಗಾಗಿಯೇ ಸಿನಿಮಾ ಮಾಡಬಾರದು. ನಾನು ಕೂಡ ದುಡ್ಡಿಗಾಗಿಯೇ ಚಿತ್ರ ಮಾಡಿರುವೆ. ಆದರೆ, ಅಂತಹ ಚಿತ್ರಗಳ ಬಿಡುಗಡೆ ಸಮಯದಲ್ಲಿ ಒತ್ತಡಕ್ಕೆ ಒಳಗಾಗುತ್ತೇವೆ. ‘ಕೆಂಡಸಂಪಿಗೆ’, ‘ಟಗರು’ ಬಿಡುಗಡೆ ವೇಳೆ ಇದ್ದಂತಹ ಎಕ್ಸೈಟ್‌ಮೆಂಟ್‌ ಸಾಮಾನ್ಯ ಸಿನಿಮಾಗಳನ್ನು ಮಾಡಿದಾಗ ನನಗೆ ಇರುವುದಿಲ್ಲ. ಆಗ ನನಗೆ ನಾನು ಮೋಸ ಮಾಡಿಕೊಂಡಿದ್ದೇನೆ ಅನಿಸುತ್ತದೆ. ನೀನು ಯಾವ ಕಾರಣಕ್ಕೆ ಸಾಕಷ್ಟು ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದು ಬೈಯುವವರು ಇದ್ದಾರೆ. ಅದಕ್ಕೆ ಬೇರೆಯವರನ್ನೂ ಉದಾಹರಿಸುತ್ತಾರೆ. ಆದರೆ, ಪ್ರತಿಯೊಂದು ಸ್ಕ್ರಿಪ್ಟ್‌ ಕೂಡ ನನ್ನ ಒಪ್ಪಿಗೆಯಲ್ಲಿ ಮುಖ್ಯಪಾತ್ರವಹಿಸುತ್ತದೆ’ ಎನ್ನುವುದು ಅವರ ವಿವರಣೆ.

‘ನಟನೆಯ ಕಲಿಕೆ ಕೆಲವರಿಗೆ ಅನುಕೂಲವಾಗಬಹುದು. ಇದರ ಮೇಲೆ ನನಗೆ ನಂಬಿಕೆ ಇಲ್ಲ. ನಟನೆಯೆಂಬುದು ನಮ್ಮ ಸುತ್ತಮುತ್ತಲಿನವರ ವೀಕ್ಷಣೆಯಿಂದ ಅನುಭವಕ್ಕೆ ಬರಬೇಕು. ಯಾರದ್ದೋ ಹಾವಭಾವವು ನಮ್ಮ ನಟನೆಗೆ ಸಹಕಾರಿಯಾಗಬಹುದು. ವಿದೇಶದಲ್ಲಿ ಭೇಟಿಯಾದ ವ್ಯಕ್ತಿ, ಗಗನಸಖಿಯರ ನೆನಪು ಕೂಡ ನಟನೆಗೆ ಅನುಕೂಲವಾಗುತ್ತವೆ’ ಎಂದುತಮ್ಮ ನಟನಾಮೀಮಾಂಸೆಯನ್ನು ಅರುಹುತ್ತಾರೆ.

ಮಾನ್ವಿತಾ ನಟನೆಯ‘ರಾಜಸ್ಥಾನ್‌ ಡೈರೀಸ್‌’ ಚಿತ್ರದ ಶೂಟಿಂಗ್‌ ಮುಗಿದಿದೆ. ಕನ್ನಡ ಸೇರಿದಂತೆ ನಾಲ್ಕು ಭಾಷೆಯಲ್ಲಿ ಇದರ ಬಿಡುಗಡೆಗೆ ಚಿತ್ರತಂಡ ಯೋಚಿಸಿದೆ. ‘ಶಿವ 143’ ಚಿತ್ರದ ಒಂದು ಹಾಡಷ್ಟೇ ಬಾಕಿಯಿದೆ.

ನಟನೆಯ ಜೊತೆಗೆ ಓದು ಮತ್ತು ಬರವಣಿಗೆಯಲ್ಲಿಯೂ ಅವರಿಗೆ ವಿಶೇಷ ಆಸಕ್ತಿ. ಶೂಟಿಂಗ್‌ ವೇಳೆ ಬಿಡುವು ಸಿಕ್ಕಿದಾಗಲೆಲ್ಲಾ ಕಥೆ ಬರೆಯುವುದು ಅವರ ಹವ್ಯಾಸ. ‘ಕಥೆಗಳನ್ನು ಬರೆಯುವುದೆಂದರೆ ನನಗಿಷ್ಟ. ಸಾಕಷ್ಟು ಕಥೆಗಳನ್ನು ಬರೆದಿಟ್ಟಿದ್ದೇನೆ. ಪ್ರತಿದಿನವೂ ಕ್ರಿಯೇಟಿವ್‌ ಥಾಟ್‌ ಪ್ರೋಸಸ್‌ ನಡೆಯತ್ತಲೇ ಇರುತ್ತದೆ. ಅದು ನನಗೂ ಮತ್ತು ನನ್ನ ಮನಸ್ಸಿಗಷ್ಟೇ ಗೊತ್ತು. ಸಿನಿಮಾ ನಿರ್ದೇಶನ ಮಾಡುವ ಆಸೆಯಂತೂ ಇದೆ. ಅದಕ್ಕಾಗಿ ತಯಾರಿಯೂ ನಡೆಯುತ್ತಿದೆ’ ಎಂದು ಹೇಳುತ್ತಾರೆ.

ಮುಂದಿನ ಯೋಜನೆ ಬಗ್ಗೆ ಕೇಳಿದರೆ, ‘ಉತ್ತಮ ಕಥೆ; ಒಳ್ಳೆಯ ಪಾತ್ರ’ ಎಂಬುದನ್ನು ಮಂತ್ರದ ಹಾಗೆ ಹೇಳುತ್ತಾರೆ. ‘ಸಾಕಷ್ಟು ಸ್ಕ್ರಿಪ್ಟ್‌ಗಳು ಬರುತ್ತಿವೆ. ಆದರೆ, ಒಳ್ಳೆಯ ಕಥೆಗಷ್ಟೇ ನನ್ನ ಪ್ರಥಮ ಆದ್ಯತೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT