ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಮತ್ತೊಂದು ‘ಗಂಧದ ಗುಡಿ’!

ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ ರ್ದೇಶಕ ರಾಜೇಂದ್ರ ಸಿಂಗ್‌ ಬಾಬು. 
Last Updated 8 ಜೂನ್ 2020, 5:54 IST
ಅಕ್ಷರ ಗಾತ್ರ

1973ರಲ್ಲಿ ತೆರೆಕಂಡ ವಿಜಯ್‌ ನಿರ್ದೇಶನ ಮತ್ತು ಡಾ.ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ ‘ಗಂಧದ ಗುಡಿ’ ಚಿತ್ರ ಪ್ರೇಕ್ಷಕರ ಮೇಲೆ ಎಂಥಾ ಮೋಡಿ ಮಾಡಿತು ಎನ್ನುವುದನ್ನು ಇಂದಿಗೂ ಯಾರೂ ಮರೆಯುವುದಿಲ್ಲ. ಈ ಚಿತ್ರದಲ್ಲಿ ವಿಷ್ಣುವರ್ಧನ್‌, ಟೈಗರ್‌ ಪ್ರಭಾಕರ್‌, ಬಾಲಕೃಷ್ಣ ಅವರಂತಹ ಘಟಾನುಘಟಿ ನಟರ ದಂಡೇ ಇತ್ತು. ಎಂ.ಪಿ. ಶಂಕರ್‌ ಪ್ರಮುಖ ಪಾತ್ರವೊಂದನ್ನು ನಿಭಾಯಿಸುವ ಜತೆಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಅದೇ ಚಿತ್ರದ ಮಾದರಿಯಲ್ಲಿ ಮತ್ತೊಂದು ‘ಗಂಧದಗುಡಿ’ ನಿರ್ಮಿಸುವ ತಯಾರಿಯಲ್ಲಿದ್ದಾರಂತೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು.ದರ್ಶನ್‌ ಅಭಿನಯದ ‘ವೀರ ಮದಕರಿ ನಾಯಕ’ ಚಿತ್ರ ಪೂರ್ಣಗೊಂಡ ನಂತರ ಹೊಸ ಗಂಧದ ಗುಡಿ ಸೆಟ್ಟೇರಲಿದೆಯಂತೆ.

‘ನಾನು ಮಾಡಲಿರುವ ಚಿತ್ರ ‘ಅಂತರರಾಷ್ಟ್ರೀಯಮಟ್ಟದ ಗಂಧದ ಗುಡಿ’. ನಾಗರಹೊಳೆ ಮತ್ತು ಸಿಂಹದಮರಿ ಸೈನ್ಯದ ನಂತರ ವನ್ಯಸಂಪತ್ತಿನ ಜಾಗೃತಿ ಮೂಡಿಸುವಂತಹ ಚಿತ್ರವನ್ನು ನಾನು ಮತ್ತೆ ಮಾಡಿರಲಿಲ್ಲ. ನಮ್ಮ ವನಸಿರಿಯ ಅರಿವನ್ನು ಈಗಿನ ಪೀಳಿಗೆಯ ಹೃದಯ ಮತ್ತು ಮಸ್ತಿಷ್ಕಕ್ಕೆ ಇಳಿಸುವ ಚಿತ್ರವನ್ನು ಮಾಡಬೇಕೆನ್ನುವ ಆಲೋಚನೆ ಹಲವು ವರ್ಷಗಳಿಂದ ಇತ್ತು. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಅಂಥದ್ದೊಂದು ಚಿತ್ರಕಥೆಯನ್ನು ಸಿದ್ಧಪಡಿಸಿರುವೆ. ನನ್ನ ಈ ಹೊಸ ಗಂಧದ ಗುಡಿಯಲ್ಲಿ ನಟ ದರ್ಶನ್‌ ಅವರೇ ನಾಯಕನಾಗಲಿದ್ದಾರೆ. ಈಗಾಗಲೇ ಸ್ಟೋರಿಯ ಒಂದೆಳೆಯನ್ನು ಅವರಿಗೆ ಹೇಳಿರುವೆ. ವನ್ಯಜೀವಿಗಳ ಮೇಲೆ ವಿಶೇಷ ಒಲವು ಹೊಂದಿರುವ ದರ್ಶನ್‌, ವನ್ಯಜೀವಿ ಛಾಯಾಗ್ರಹಣದಲ್ಲೂ ಅಪಾರ ಆಸಕ್ತಿ ಹೊಂದಿದ್ದಾರೆ.ದರ್ಶನ್‌ ಕಥೆಯ ಒಂದೆಳೆ ಕೇಳಿ ಥ್ರಿಲ್‌ ಕೂಡ ಆಗಿದ್ದಾರೆ. ಈ ಚಿತ್ರದಲ್ಲಿ ಐಎಫ್‌ಎಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿರುವ ಅವರು ಪಾತ್ರಕ್ಕೆ ನಿಜವಾದ ನ್ಯಾಯ ಸಲ್ಲಿಸಲಿದ್ದಾರೆ’ ಎಂದು ‘ಪ್ರಜಾಪ್ಲಸ್‌’ ಜತೆಗೆ ರಾಜೇಂದ್ರ ಸಿಂಗ್‌ ಬಾಬು ಮಾತು ವಿಸ್ತರಿಸಿದರು.

ಬಾಬು ಕಥೆಯ ಒಂದೆಳೆ ಹೇಳುವುದಕ್ಕೂ ಎರಡು ದಿನ ಮುಂಚೆ ಕಾಕತಾಳೀಯ ಎನ್ನುವಂತೆ ದರ್ಶನ್‌ ಮತ್ತು ಅವರ ಸ್ನೇಹಿತರು ‘ಮೃಗಾಲಯ’ ಮತ್ತು ‘ನಾಗರಹೊಳೆ’ಯಂತಹ ಚಿತ್ರಗಳನ್ನು ಮಾಡಬೇಕೆಂದು ಗಹನವಾದ ಚರ್ಚೆ ನಡೆಸಿದ್ದರಂತೆ.

‘ಆಫ್ರಿಕಾದ ತಾಂಜೇನಿಯಾ ಕಾಡಿನಲ್ಲಿ ನಡೆಯುವ ಘೆಂಡಾಮೃಗ ಮತ್ತು ಆನೆಗಳ ಅವ್ಯಾಹತಬೇಟೆ ಕುರಿತ ಪುಸ್ತಕಗಳನ್ನು ಓದುವಾಗ ಈ ಚಿತ್ರ ಮಾಡುವ ಆಲೋಚನೆ ಹೊಳೆಯಿತು. ಜೂಲಿಯನ್‌ ರೀಡ್‌‌ಮೈರ್‌‌ ಅವರ ‘ಕಿಲ್ಲಿಂಗ್‌ ಫಾರ್‌ ಪ್ರಾಫಿಟ್‌’ ಪುಸ್ತಕಮತ್ತು ಪೆಟ್ರೀಷಿಯಾ ಲೀ ಶಾರ್ಪ್ ಅವರ ‘ಪೋಚರ್: ಸೀಕಿಂಗ್‌ ಎ ನ್ಯೂ ಲೈಫ್‌ ಇನ್‌ ತಾಂಜೇನಿಯಾ‌’ ಕಾದಂಬರಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿವೆ. ಈ ಪುಸ್ತಕಗಳ ಪ್ರೇರಣೆಯಿಂದ ಕಥೆಯನ್ನು ಭಾರತೀಯತೆಗೆ ಒಗ್ಗಿಸಿ ಐಎಫ್‌ಎಸ್‌ ಅಧಿಕಾರಿಯ ಪಾತ್ರವೊಂದನ್ನು ಚಿತ್ರಿಸಿದ್ದೇನೆ. ಈ ಅಧಿಕಾರಿಯ ಪಯಣ ಇಂಡಿಯಾದಿಂದ ಆಫ್ರಿಕಾ, ಹಾಂಕಾಂಗ್‌, ಲಂಡನ್‌ವರೆಗೆ ಇರಲಿದೆ’ ಎಂದು ಪಾತ್ರದ ಬಗ್ಗೆಯೂ ಸುಳಿವು ಬಿಟ್ಟುಕೊಟ್ಟರು.

‘ಆಫ್ರಿಕಾದಲ್ಲಿ ರಾಜಕಾರಣಿಗಳು, ನಿವೃತ್ತ ಸೈನಿಕರು ಮತ್ತು ಕಳ್ಳಬೇಟೆಗಾರರು ಚಕ್ರವ್ಯೂಹ ರಚಿಸಿಕೊಂಡು ನಡೆಸುವ ಕಳ್ಳಬೇಟೆಯ ದಂಧೆಯನ್ನು ಈ ಅಧಿಕಾರಿ ಹೇಗೆ ಮಟ್ಟ ಹಾಕಲಿದ್ದಾರೆ ಎನ್ನುವುದು ಚಿತ್ರದ ಕಥಾಹಂದರ. ಹಾಗೆಯೇ ಈ ಅಧಿಕಾರಿಯ ತಂದೆ ಸಸ್ಯವಿಜ್ಞಾನಿ ಆಗಿರುತ್ತಾರೆ. ಮಗ ವನ್ಯಜೀವಿಗಳನ್ನು ರಕ್ಷಿಸಲು ಹೋರಾಡಿದರೆ, ಅಪ್ಪ ಅಮೂಲ್ಯ ಔಷಧಿ ಸಸ್ಯಗಳ ರಕ್ಷಣೆಗೆ ಹೋರಾಡುತ್ತಾರೆ. ಸಸ್ಯ ವಿಜ್ಞಾನಿಯ ಪಾತ್ರಕ್ಕೆ ಲೇಖಕ ಕೆ.ಎನ್‌. ಗಣೇಶಯ್ಯ ಅವರ ಬದುಕು ಮತ್ತು ಸಾಹಿತ್ಯ ನನಗೆ ಪ್ರೇರಣೆ ನೀಡಿದೆ. ಈ ಪಾತ್ರದಲ್ಲಿ ಅವರು ಮತ್ತು ಅವರ ಸಾಹಿತ್ಯದ ಛಾಯೆಯೂ ಇರಲಿದೆ. ಚಿತ್ರವನ್ನು ಆಫ್ರಿಕಾದ ಕಾಡುಗಳಲ್ಲೇ ಚಿತ್ರೀಕರಿಸು ಉದ್ದೇಶವೂ ಇದೆ’ ಎನ್ನುವ ಮಾತು ಸೇರಿಸಿದರು ಬಾಬು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT