ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ ಹುಡ್ಗ ರಿಯಲ್ ಹೀರೊ: ಚೇತನ್ ಬಗ್ಗೆ ಮೇಘಾ ಮಾತು

ನಟ ಚೇತನ್ ಪತ್ನಿ ಮೇಘಾ ಮನದ ಮಾತು
Last Updated 5 ಫೆಬ್ರುವರಿ 2020, 20:30 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಟ್‌ ನಟ ಚೇತನ್–ಮೇಘಾ ಮದುವೆ ಸುದ್ದಿ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ವಲ್ಲಭನಿಕೇತನ ಅನಾಥಾಶ್ರಮದ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ಒದಗಿಸಿದ್ದ ಈ ಜೋಡಿ ಶಿಥಿಲವಾಗಿದ್ದ ಆಶ್ರಮದ ಗೋಡೆಯನ್ನು ರಿಪೇರಿ ಮಾಡಿ, ಅದಕ್ಕೆ ಬಣ್ಣ ಬಳಿಯುವ ಮೂಲಕವೂ ತಮ್ಮ ಸಾಮಾಜಿಕ ಕಳಕಳಿ ಮೆರೆದಿತ್ತು.

ಬಣ್ಣದ ಬದುಕಿನ ನಂಟು ಇರದಿದ್ದರೂ, ನಟ ಚೇತನ್ ಕೈಹಿಡಿದಿರುವ ಮೇಘ, ತಮ್ಮ ಬಾಳಸಂಗಾತಿಯ ಬಗ್ಗೆ ‘ಪ್ರಜಾಪ್ಲಸ್‌’ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಚೇತನ್ ಅವರನ್ನು ಹೀರೊ ಅನ್ನುವ ಕಾರಣಕ್ಕಾಗಿ ಇಷ್ಟಪಟ್ರಾ ಅಂತ ಪ್ರಶ್ನಿಸಿದರೆ, ‘ನನ್ ಹುಡ್ಗ ರೀಲ್ ಹೀರೊ ಅಲ್ಲ. ರಿಯಲ್ ಹೀರೊ’ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮೇಘಾ.

‘ಚೇತನ್ ಬಗ್ಗೆ ಮಾಧ್ಯಮಗಳಲ್ಲಿ ಓದಿದ್ದೆ. ನಟನಾಗಿಯೂ ಅವರ ಸಾಮಾಜಿಕ ಕಳಕಳಿ ನನಗೆ ತುಂಬಾ ಇಷ್ಟವಾಗುತ್ತಿತ್ತು. ಅದರಲ್ಲೂ ಮಹಿಳೆಯರ ಬಗ್ಗೆ ಅವರಿಗಿರುವ ಗೌರವದ ನನ್ನ ಮನದಲ್ಲಿ ಸಾಫ್ಟ್‌ ಕಾರ್ನರ್ ಸೃಷ್ಟಿಸಿತ್ತು. ಆಕಸ್ಮಿಕವಾಗಿ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭೇಟಿಯಾದೆವು. ನಂತರ ಸ್ನೇಹಿತರಾದೆವು...’ ಎಂದು ಅವರು ತಮ್ಮ ಲವ್‌ಸ್ಟೋರಿಯ ಆರಂಭಿಕ ದಿನಗಳನ್ನು ಮೆಲುಕು ಹಾಕಿದರು.

‘ನಾನು ಸ್ತ್ರೀವಾದಿ. ಚೇತನ್‌ಗೂ ಅದರಲ್ಲಿ ನಂಬಿಕೆ ಇದೆ. ಈ ಕಾಲದಲ್ಲಿ ಫೆಮಿನಿಸ್ಟ್ ಹುಡುಗ ಸಿಗುವುದು ದೊಡ್ಡ ಸಂಗತಿ. ಇಬ್ಬರೂ ಸಮಾಜದಲ್ಲಿ ಮಹಿಳೆ ಮತ್ತು ಪುರುಷನ ಸಮ ಪ್ರಮಾಣದ ಜವಾಬ್ದಾರಿಗಳ ಬಗ್ಗೆ ಮಾತಾಡಿಕೊಳ್ಳುತ್ತಿದ್ದೆವು. (ನಮ್ಮ ಮದುವೆ ವಿವಾಹ ಬೋಧನೆಯಲ್ಲೂ ನಾವು ಈ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದೆವು) ಆಗೆಲ್ಲ ಈ ಹುಡುಗ ನನ್ನ ಬಾಳಸಂಗಾತಿ ಆದರೆ ಚೆನ್ನಾಗಿರುತ್ತೆ ಅಂತ ಅಂದುಕೊಳ್ಳುತ್ತಿದ್ದೆ. ಆದರೆ, ಪ್ರಪೋಸ್ ಮಾಡಿರಲಿಲ್ಲ. ನಿಜ ಹೇಳಬೇಕೆಂದರೆ ಇಬ್ಬರೂ ಒಬ್ಬರಿಗೊಬ್ಬರು ಪ್ರಪೋಸ್ ಮಾಡಲೇ ಇಲ್ಲ. ಯಾರು ಐ ಲವ್ ಯೂ ಅಂತ ಮೊದಲು ಹೇಳಿದರೋ ಅದೂ ನೆನಪಿಲ್ಲ. ಆದರೆ, ಇಬ್ಬರ ಮನದ ಮಾತು ಒಂದೇ ಆಗಿತ್ತು... ಅದುವೇ ನಮ್ಮನ್ನು ಸಂಗಾತಿಗಳನ್ನಾಗಿ ಮಾಡಿತು’ ಅನ್ನುತ್ತಾರೆ ಮೇಘಾ.

‘ಚೇತನ್ ಎಲ್ಲ ನಟರಂತಲ್ಲ. ಅವರ ಸಿನಿಮಾಗಳ ಆಯ್ಕೆ ವಿಷಯದಲ್ಲೂ ಇದನ್ನು ಗುರುತಿಸಬಹುದು. ಅವರ ಜತೆ ನೀವು ಎಲ್ಲೇ ಹೋಗಿ ಸುತ್ತಮುತ್ತಲಿನ ಜನರ ಜೊತೆ ಅವರು ನಡೆದುಕೊಳ್ಳುವ ರೀತಿಯೇ ಭಿನ್ನ. ಹೋಟೆಲ್ ಹೋದಾಗ ವೇಟರ್, ಸೆಕ್ಯೂರಿಟಿ ಗಾರ್ಡ್ ಯಾರೇ ಆಗಲಿ ಚೇತನ್ ಅವರಿಗೆ ತೋರುವ ಗೌರವ ಅನುಕರಣೀಯ. ಆಗಲೇ ನನಗೆ ‘ಅರೆ, ಈ ಬಂದಾ ಬಹುತ್ ಅಲಗ್‌ ಹೈ’ ಅಂತ ಅನಿಸಿದ್ದು. ನಮ್ಮಿಬ್ಬರಿಗೂ ಸುತ್ತಾಟ ಇಷ್ಟ. ಹಲವು ವಿಚಾರಗಳಲ್ಲಿಇಬ್ಬರ ಅಭಿರುಚಿಯೂ ಒಂದೇ ಆಗಿತ್ತು. ಒಬ್ಬರಿಗೊಬ್ಬರು ಇಷ್ಟಪಟ್ಟೆವು... ಎನ್ನುತ್ತಾರೆ ಅವರು.

‘ಚೇತನ್ ಯಾರಿಗೆ ಆಗಲಿ ತುಂಬಾ ಕಾಳಜಿ ವಹಿಸುತ್ತಾರೆ. ಅದು ಬರೀ ಅವರ ಕುಟುಂಬ ಅಥವಾ ನನ್ನ ಬಗ್ಗೆಯಾಗಲೀ ಅಷ್ಟೇ ಅಲ್ಲ ಅವರಿಗೆ ಸಮಾಜದ ಬಗ್ಗೆಯೂ ಕಾಳಜಿ ಇದೆ ಅದುವೇ ನನಗಿಷ್ಟವಾದ ಗುಣ.ನನ್ನನ್ನು ಯಾರೇ ಮದುವೆಯಾಗಿದ್ದರೂ ಅವರು ನನ್ನನ್ನು ಹೆಂಡತಿ ಅಂತ ಪ್ರೀತಿಸುವುದರಲ್ಲಿ ವಿಶೇಷ ಸಂಗತಿಯಿಲ್ಲ. ಆದರೆ, ಚೇತನ್ ಹಾಗಲ್ಲ. ಕುಟುಂಬದ ಸದಸ್ಯರಷ್ಟೇ ಅಲ್ಲ ಅಪರಿಚಿತರನ್ನೂ ಗೌರವಿಸುವ, ಕಾಳಜಿ ವಹಿಸುವ ಅವರ ಗುಣ ನನಗಿಷ್ಟ.ದೊಡ್ಡ ಹೋಟೆಲ್‌ಗೆ ಹೋದರೂ ಚೇತನ್ ಕನ್ನಡದಲ್ಲಿಯೇ ಮಾತನಾಡುತ್ತಾರೆ. ಕನ್ನಡದ ಬಗ್ಗೆ ಅವರಿಗಿರುವ ಮೋಹ ಅತೀತವಾದದ್ದು. ತಾಯ್ನುಡಿಯನ್ನು ಇಷ್ಟೊಂದು ಪ್ರೀತಿಸುವ ಯುವಕನನ್ನು ನಾನಂತೂ ನೋಡಿಲ್ಲ’ ಎಂದು ಮಾತು ಮುಗಿಸಿದರು ಮೇಘಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT