ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಕೆದಾಟು ಪಾದಯಾತ್ರೆಗೆ ಕನ್ನಡ ಚಿತ್ರೋದ್ಯಮದ ಬೆಂಬಲ

Last Updated 7 ಜನವರಿ 2022, 8:31 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಕೆದಾಟು ನಮ್ಮ ಹಕ್ಕು. ಈ ಹಕ್ಕು ಉಳಿಸಿಕೊಳ್ಳಲು ಪಕ್ಷಾತೀತವಾಗಿ ನಡೆಯುತ್ತಿರುವ ಪಾದಯಾತ್ರೆಗೆ ಚಿತ್ರೋದ್ಯಮದ ಸಂಪೂರ್ಣ ಬೆಂಬಲವಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌ ಹೇಳಿದರು.

ಶುಕ್ರವಾರ ಮಂಡಳಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೊಂದು ಪಕ್ಷಾತೀತವಾದ ಕಾರ್ಯಕ್ರಮ. ಇದಕ್ಕೆ ಬೆಂಬಲ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ವಾಣಿಜ್ಯ ಮಂಡಳಿಗೇ ಬಂದು ನಮ್ಮನ್ನು ಆಹ್ವಾನಿಸಿದ್ದರು. ಪಕ್ಷಾತೀತವಾದ ಹೋರಾಟ ಇದಾಗಿರುವ ಕಾರಣ ನಾವೂ ಇದರಲ್ಲಿ ಭಾಗವಹಿಸಬೇಕು ಎನ್ನುವ ನಿರ್ಧಾರ ಮಾಡಿದ್ದೇವೆ. ಕಲಾವಿದರನ್ನು ಭೇಟಿಯಾಗಿ ಇದರಲ್ಲಿ ಭಾಗವಹಿಸಬೇಕು ಎಂದು ವೈಯಕ್ತಿಕವಾಗಿ ಹಾಗೂ ಪತ್ರ ಮುಖೇನ ಕೇಳಿದ್ದೇವೆ. ಪ್ರಸ್ತುತ ಕೋವಿಡ್‌ ತೀವ್ರಗತಿಯಲ್ಲಿ ಹರಡುತ್ತಿದ್ದು, ಈ ಸಂದರ್ಭದಲ್ಲಿ ನಾವು ವೈಯಕ್ತಿಕವಾಗಿ ಭಾಗವಹಿಸುವುದು ಕಷ್ಟ. ಆದರೆ ನೈತಿಕ ಬೆಂಬಲ ಇದ್ದೇ ಇರುತ್ತದೆ ಎಂದು ಹಲವರು ತಿಳಿಸಿದ್ದಾರೆ. ವಾರಾಂತ್ಯ ಕರ್ಫ್ಯೂ ಇರುವುದರಿಂದ ಭಾನುವಾರ ಪಾದಯಾತ್ರೆಯಲ್ಲಿ ಭಾಗವಹಿಸುವುದು ಕಷ್ಟ. ಅವಕಾಶ, ಅನುಕೂಲ ಸಿಕ್ಕಿದ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಸದಸ್ಯರಿಗೆ ತಿಳಿಸಿದ್ದೇವೆ’ ಎಂದರು.

ಪಾದಯಾತ್ರೆಯ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ,ನಟ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ‘ನಾಡು, ನುಡಿ, ಗಡಿ ಹಾಗೂ ಜಲದ ವಿಚಾರ ಪಕ್ಷಾತೀತ. ಸಿನಿಮಾ ಕ್ಷೇತ್ರದ ಎಲ್ಲ ಅಂಗಸಂಸ್ಥೆಗಳೂ ಇದಕ್ಕೆ ಬೆಂಬಲ ನೀಡಿವೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಪರಿಸ್ಥಿತಿಯನ್ನು ನೋಡಿಕೊಂಡು ಕಲಾವಿದರು ಭಾಗವಹಿಸಬಹುದು. ಅಥವಾ ನೈತಿಕ ಬೆಂಬಲ ನೀಡಿ, ಸಾಮಾಜಿಕ ಜಾಲತಾಣ ಬಳಸಿಕೊಂಡು ಈ ಕುರಿತು ಹೇಳಿಕೆಗಳನ್ನು ನೀಡಬಹುದು. ರಾಜ್ಯ, ಕೇಂದ್ರ ಸರ್ಕಾರದ ಜೊತೆ ಘರ್ಷಣೆ ಇದಲ್ಲ. ನಿಧಾನಗತಿಯಲ್ಲಿ ಈ ಯೋಜನೆ ಸಾಗುತ್ತಿರುವುದರಿಂದ ಶೀಘ್ರದಲ್ಲೇ ಅನುಮೋದನೆಗೆ ಒತ್ತಡ ಹೇರಲು ಈ ಕಾರ್ಯಕ್ರಮವಷ್ಟೇ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಮಾರ್ಗಸೂಚಿಗಳನ್ನೂ ನಾವು ಪಾಲಿಸುತ್ತೇವೆ. ರಾಜ್ಯ ಸರ್ಕಾರ ಇದನ್ನು ಜಿದ್ದಾಗಿ ತೆಗೆದುಕೊಳ್ಳಬಾರದು’ ಎಂದರು.

‘ಕಲಾವಿದರು ಇಂಥ ಸಂದರ್ಭದಲ್ಲೇ ಋಣ ಸಂದಾಯ ಮಾಡಬೇಕಾಗುತ್ತದೆ. ಜನರ ಬೆಂಬಲ ಇಲ್ಲದೇ ಇದ್ದರೆ ಕಲಾವಿದರು ಬದುಕಲು ಸಾಧ್ಯವಿಲ್ಲ. ಇದೀಗ ಜನರಿಗೋಸ್ಕರವೇ ಹೋರಾಟಕ್ಕಿಳಿಯುವ ಸಮಯ ಬಂದಿದೆ. ಮಂಡಳಿಯು ನೀಡಿದ ಬೆಂಬಲಕ್ಕೆ ಧನ್ಯವಾದ. ಎಲ್ಲ ಸ್ತರದ ನಾಯಕ, ನಾಯಕಿಯರು, ಪೋಷಕ ನಟರು, ಕಲಾವಿದರು ಈ ಹೋರಾಟದಲ್ಲಿ ನಿಮ್ಮ ಅನುಕೂಲ, ಸಾಧ್ಯತೆಗೆ ತಕ್ಕಂತೆ ಸ್ವಯಂ ಪ್ರೇರಿತವಾಗಿ ಭಾಗವಹಿಸಿ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹೇಳಿಕೆಗಳನ್ನು ನೀಡಿದರೆ ಈ ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ’ ಎಂದು ನಟಿ ಉಮಾಶ್ರೀ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT