ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಂತ್ಯ ಬರಲಿದ್ದಾರೆ ‘ದರೋಡೆಕೋರರು’

Last Updated 8 ಫೆಬ್ರುವರಿ 2019, 8:00 IST
ಅಕ್ಷರ ಗಾತ್ರ

ನಿರ್ದೇಶಕ ದೀಪಕ್‌ ಅವರು ನಿರ್ದೇಶಿಸಿರುವ ‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾ ಫೆಬ್ರುವರಿ ಅಂತ್ಯದಲ್ಲಿ ತೆರೆಗೆ ಬರಲಿದೆ.

ಚಿತ್ರದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ, ‘ಓಯ್‌ ಕಮಲಿ...’ ಹಾಡನ್ನು ಬಿಡುಗಡೆ ಮಾಡಿ ನಿರ್ದೇಶಕ ದೀಪಕ್‌ ಅವರು ಚಿತ್ರದ ಬಗ್ಗೆ ಮಾತನಾಡಿದರು. ‘ಇದು ಕಾದಂಬರಿ ಆಧರಿತ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಬಳಿಕ ಕಾದಂಬರಿ ಆಧರಿತ ಚಿತ್ರ ಬರುತ್ತಿದೆ. ಹನಗೋಡು ಎಂಬ ಊರಿನ ಜನರ ನಂಬಿಕೆಯೊಂದನ್ನು ಆಧಾರವಾಗಿಟ್ಟು ಬರೆದ ಕಥೆ ಇದರಲ್ಲಿದೆ. ಅಲ್ಲಿನ ಬೆಟ್ಟವೊಂದರಲ್ಲಿ ದರೋಡೆಕೋರರು ಇದ್ದರು ಎಂಬ ಐತಿಹ್ಯ ಇದೆ. ಅದನ್ನು ಎಳೆಯಾಗಿಟ್ಟುಕೊಂಡು ಊರಿನ ಎರಡು ಓಣಿಗಳ ಯುವಕರ ನಡುವಿನ ಜಗಳ, ಹಳ್ಳಿ ರಾಜಕೀಯ, ಪ್ರೀತಿ– ಪ್ರೇಮ... ಇವೆಲ್ಲವನ್ನೂ ಹೆಣೆದು ಚಿತ್ರ ಮಾಡಿದ್ದೇವೆ ಎಂದು ಕಥೆಯ ಸಣ್ಣ ಝಲಕ್‌ ನೀಡಿದರು.

‘ಅನುಷ್‌ ಶೆಟ್ಟಿ ಅವರು ಬರೆದ ಅದೇ ಹೆಸರಿನ ಕಾದಂಬರಿಯನ್ನು ಪರದೆಯ ಮೇಲೆ ತರಲಾಗಿದೆ. ಕಮರ್ಷಿಯಲ್‌ ಟಚ್‌ ಕೊಡುವ ಸಲುವಾಗಿ ಲೇಖಕರ ಅನುಮತಿ ಪಡೆದು ಕತೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದ್ದೇವೆ. ಆದರೂ ಶೇ 70ರಷ್ಟು ಭಾಗ ಕಾದಂಬರಿಯನ್ನೇ ಆಧರಿಸಿದೆ’ ಎಂದರು ದೀಪಕ್‌.

‘ಚಿತ್ರವನ್ನು ಇನ್ನೂ ನೋಡಿಲ್ಲ. ಆದರೆ ನನ್ನ ಕಾದಂಬರಿಯ ಆಶಯಕ್ಕೆ ಧಕ್ಕೆಯಾಗದಂತೆ ಚಿತ್ರ ಮೂಡಿಬಂದಿದೆ ಎಂಬುದು ಚಿತ್ರದ ಟೀಸರ್‌ ಹಾಗೂ ಹಾಡುಗಳನ್ನು ನೋಡುವಾಗ ಮನವರಿಕೆಯಾಗಿದೆ’ ಎದರು ಲೇಖಕ ಅನುಷ್‌ ಶೆಟ್ಟಿ.

ನಾಯಕ ನಟನಾಗಿ ‘ರಾಮಾ ರಾಮಾ ರೆ’ ಖಾತಿಯ ನಟರಾಜ್‌ ಅಭಿನಯಿಸಿದ್ದಾರೆ. ‘ರಾಧಾರಮಣ’ ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಶ್ವೇತಾ ಈ ಚಿತ್ರದ ನಾಯಕಿ. ಹೇಮಂತ್‌, ಗೌತಮ್‌, ಸಿದ್ದರಾಜ್‌ ಕಲ್ಯಾಣಕರ ಮುಂತಾದವರ ತಾರಾಗಣವಿದೆ. ಅನೂಪ್‌ ಅವರು ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT