ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕಲವ್ಯನಂತೆ ಧ್ರುವ: ಅರ್ಜುನ್‌ ಸರ್ಜಾ

Published : 9 ಆಗಸ್ಟ್ 2024, 0:30 IST
Last Updated : 9 ಆಗಸ್ಟ್ 2024, 0:30 IST
ಫಾಲೋ ಮಾಡಿ
Comments

ಎ.ಪಿ. ಅರ್ಜುನ್‌ ನಿರ್ದೇಶನದ, ‘ಆ್ಯಕ್ಷನ್‌ ಪ್ರಿನ್ಸ್‌’ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್‌’ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಮೊದಲ ಟ್ರೇಲರ್‌ ಮುಂಬೈನಲ್ಲಿ ಆಗಸ್ಟ್‌ 5ರಂದು ಬಿಡುಗಡೆಯಾಯಿತು. 

ಮುಂಬೈನ ಪಿವಿಆರ್‌ ಚಿತ್ರಮಂದಿರದಲ್ಲಿ ವಿದೇಶಗಳಿಂದ ಬಂದಿದ್ದ ಪತ್ರಕರ್ತರ ಸಮ್ಮುಖದಲ್ಲಿ ಟ್ರೇಲರ್‌ ರಿಲೀಸ್‌ ಆಯಿತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ‘ಮಾರ್ಟಿನ್‌’ ಚಿತ್ರಕ್ಕೆ ಕಥೆ ಬರೆದ ನಟ ಅರ್ಜುನ್‌ ಸರ್ಜಾ, ಧ್ರುವ ಸರ್ಜಾ ಅವರನ್ನು ‘ಏಕಲವ್ಯ’ನಿಗೆ ಹೋಲಿಸಿದರು.

‘ನಿಮಗೆ ಯಾರು ಸ್ಫೂರ್ತಿ’ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಧ್ರುವ ಸರ್ಜಾ, ‘ಅರ್ಜುನ್‌ ಸರ್ಜಾ ಅವರ ವರ್ಚಸ್ಸು ನನಗೆ ಅವರನ್ನು ಹಿಂಬಾಲಿಸುವಂತೆ ಮಾಡಿತು. ಸಾಕಷ್ಟು ಕಲಾವಿದರಿಗೆ ಅರ್ಜುನ್‌ ಸರ್ಜಾ ಅವರು ಸ್ಫೂರ್ತಿಯಾಗಿದ್ದಾರೆ. ಅವರಲ್ಲಿ ನಾನೂ ಒಬ್ಬ. ನಾನು ಹೀರೊ ಆಗಬೇಕು ಎಂದು ಅವರಲ್ಲಿ ಹೇಳಿದಾಗ ಎರಡು ದಿನ ಅವರು ನನ್ನೊಂದಿಗೆ ಮಾತನಾಡಿರಲಿಲ್ಲ. ಯಾರು ಬೇಕಿದ್ದರೂ ಹೀರೊ ಆಗಬಹುದು, ಮೊದಲು ನಟನಾಗು ಎಂದು ಅವರು ಹೇಳಿದ್ದರು. ನನಗೆ ಅವರು ಎಂದಿಗೂ ಸೂಪರ್‌ ಹೀರೊ’ ಎಂದರು. 

ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಅರ್ಜುನ್‌ ಸರ್ಜಾ, ‘ಧ್ರುವನ ಅಣ್ಣ ಚಿರಂಜೀವಿಯನ್ನು ನಾನು ಎಲ್ಲ ವಿಭಾಗಗಳಲ್ಲಿ ತರಬೇತಿ ನೀಡಿ ನಟನಾಗಿ ಸಿದ್ಧಪಡಿಸಿದ್ದೆ. ಆದರೆ ಧ್ರುವನಿಗೆ ನಾನು ಯಾವುದೇ ತರಬೇತಿ ನೀಡಿಲ್ಲ. ಧ್ರುವ ಏಕಲವ್ಯನಂತೆ. ಎಲ್ಲವನ್ನೂ ಆತನೇ ಕಲಿತ. ನಾನು ಅವನನ್ನು ಲಾಂಚ್ ಕೂಡಾ ಮಾಡಿಲ್ಲ. ಧ್ರುವ ಒಬ್ಬ ಉತ್ತಮ ಬಾಕ್ಸಿಂಗ್‌ ಪಟು. ಆತ ನನಗೆ ಸಣ್ಣ ಹುಡುಗನಾದರೂ, ಆತನಿಂದ ನಾನು ಕೆಲ ವಿಷಯಗಳನ್ನು ಕಲಿಯುತ್ತಿದ್ದೇನೆ. ಆತನ ಶ್ರದ್ಧೆ, ಆಸಕ್ತಿ ಕೆಲವೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ’ ಎಂದರು. 

ಜಾಗತಿಕ ಮಟ್ಟಕ್ಕೆ ಹೆಜ್ಜೆ ಇಡುವ ಸಮಯ: ‘ಇದು ನಾವು ಹೇಳುವ ಅದ್ಭುತವಾದ ಕಥೆಗಳನ್ನು ಜಗತ್ತು ನೋಡುವ ಸಮಯ. ನಮ್ಮ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಸಮಯ ಇದಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಟನಾಗಿ ನನ್ನನ್ನು ನಾನು ಸ್ಥಿರವಾಗಿ ಸ್ಥಾಪಿಸಬೇಕಿತ್ತು. ಹಾಗೆಯೇ ನಿರ್ಮಾಪಕನಾಗಿ ಹೆಚ್ಚಿನ ಗಳಿಕೆಯ ಉದ್ದೇಶದಿಂದಲೇ ಸಿನಿಮಾವನ್ನು ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ಈ ಸಿನಿಮಾವನ್ನು ನೋಡಿದ ಬಳಿಕ ಎಲ್ಲರೂ ಭಾರತೀಯ ಸಿನಿಮಾದ ಬಗ್ಗೆ ಹೆಮ್ಮೆಪಡಲಿದ್ದಾರೆ. Good things do take time...ನಾವು 150 ನಿಮಿಷಕ್ಕಾಗಿ 250 ದಿನ ಚಿತ್ರದ ಚಿತ್ರೀಕರಣ ನಡೆಸಿದೆವು’ ಎನ್ನುತ್ತಾರೆ ಧ್ರುವ ಸರ್ಜಾ.  

ಮಸ್ಟಾಂಗ್‌ ಉಡಾಯಿಸಿದ ರವಿ ವರ್ಮಾ!: ಮುಂಬೈನ ರೈಲು ನಿಲ್ದಾಣವೊಂದರ ಬಳಿ ಕಾರು ಚೇಸಿಂಗ್‌ ದೃಶ್ಯದ ಚಿತ್ರೀಕರಣದ ವೇಳೆ ಭಾರಿ ಮೌಲ್ಯದ ಮಸ್ಟಾಂಗ್‌ ಕಾರೊಂದು ಹಾನಿಯಾಗಿ ನಿರ್ಮಾಪಕರಿಗೆ ಬಹಳ ನಷ್ಟವಾಗಿದ್ದಕ್ಕೆ ಸಾಹಸ ನಿರ್ದೇಶಕ ರವಿವರ್ಮಾ ವೇದಿಕೆಯಲ್ಲೇ ಕ್ಷಮೆ ಕೋರಿದರು.

ಚಿತ್ರದ ನಿರ್ಮಾಪಕ ಉದಯ್‌ ಕೆ.ಮೆಹ್ತಾ, ನಟಿಯರಾದ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಛಾಯಾಚಿತ್ರಗ್ರಾಹಕ ಸತ್ಯ ಹೆಗಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಸಾಮಾನ್ಯ ಕನ್ನಡ ಸಿನಿಮಾ ಮಾಡಬೇಕು ಎಂದು ಹೊರಟಿದ್ದೆವು. 20 ದಿನದ ಚಿತ್ರೀಕರಣದ ಬಳಿಕ ಪ್ಯಾನ್‌ ಇಂಡಿಯಾ ಮಟ್ಟಕ್ಕೆ ಸಿನಿಮಾ ಕೊಂಡೊಯ್ಯಲು ನಿರ್ಧರಿಸಿದೆವು. ಪ್ಯಾನ್‌ ವರ್ಲ್ಡ್‌ಗೆ ಸಿನಿಮಾ ಕೊಂಡೊಯ್ಯಬೇಕು ಎನ್ನುವ ಕಲ್ಪನೆ ಧ್ರುವ ಅವರದ್ದು.
–ಎ.ಪಿ.ಅರ್ಜುನ್‌ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT