ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ದಿನಗಳಲ್ಲಿ ₹298.5 ಕೋಟಿ ಗಳಿಸಿದ ಪ್ರಭಾಸ್‌ ಅಭಿನಯದ ‘ಕಲ್ಕಿ 2898ಎಡಿ’

Published 29 ಜೂನ್ 2024, 10:46 IST
Last Updated 29 ಜೂನ್ 2024, 10:46 IST
ಅಕ್ಷರ ಗಾತ್ರ

ನವದೆಹಲಿ: ನಟ ಪ್ರಭಾಸ್‌ ಅಭಿನಯದ ‘ಕಲ್ಕಿ 2898ಎಡಿ’ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲಿಯೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ₹298.5 ಕೋಟಿ ಗಳಿಸಿದೆ ಎಂದು ಸಿನಿಮಾ ತಯಾರಕರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌, ‘ಚಿತ್ರ ತೆರೆಕಂಡ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ₹191.5 ಕೋಟಿಯನ್ನು ಗಳಿಸಿದೆ. ಎರಡನೇ ದಿನವಾದ ಶುಕ್ರವಾರ ₹107 ಕೋಟಿಯನ್ನು ಸಂಗ್ರಹಿಸಿದೆ. ಚಿತ್ರಕ್ಕೆ ಪ್ರಪಂಚದ ಮೂಲೆ ಮೂಲೆಗಳಿಂದ ಪ್ರೀತಿ ಹರಿದು ಬರುತ್ತಿದೆ. ‘ಕಲ್ಕಿ 2898 ಎಡಿ’ ಬಿಡುಗಡೆಯಾದ ಎರಡು ದಿನಗಳಲ್ಲಿ ಒಟ್ಟು ₹298.5 ಕೋಟಿ ಗಳಿಸಿದೆ’ ಎಂದು ತಿಳಿಸಿದೆ.

ವೈಜಯಂತಿ ಮೂವೀಸ್‌ ನಿರ್ಮಾಣದ ಈ ಸಿನಿಮಾ ಜೂನ್‌ 27ರಂದು ಎಲ್ಲ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲೀಷ್‌ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

ಸಿನಿಮಾವನ್ನು ನಾಗ್‌ ಅಶ್ವಿನ್‌ ಅವರು ನಿರ್ದೇಶನ ಮಾಡಿದ್ದು, ಸುಮಾರು ₹600 ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ನಟ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್‌ ಮತ್ತು ಕಮಲ್‌ ಹಾಸನ್‌ ಸೇರಿದಂತೆ ದಿಶಾ ಪಟಾನಿ, ಶಾಶ್ವತ ಚಟರ್ಜಿ ಹಾಗೂ ಶೋಭಾನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಲ್ಕಿ ಚಿತ್ರಕ್ಕೆ ಅಭಿಮಾನಿಗಳು ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕಲ್ಕಿ ಚಿತ್ರವನ್ನು ನೋಡಿದೆ. ವಾಹ್‌! ಎಂತಹ ಮಹಾಕಾವ್ಯ ಸಿನಿಮಾ! ನಿರ್ಮಾಪಕ ನಾಗ್‌ ಅಶ್ವಿನ್‌ ಅವರು ಭಾರತೀಯ ಚಿತ್ರರಂಗವನ್ನು ವಿಭಿನ್ನ ಹಂತಕ್ಕೆ ಕೊಂಡೊಯ್ದಿದ್ದಾರೆ. ಸ್ನೇಹಿತರಾದ ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ಅಶ್ವಿನಿದತ್ತ್, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ ಮತ್ತು ಚಿತ್ರ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಕಲ್ಕಿ ಭಾಗ 2 ನೋಡಲು ಕಾತುರನಾಗಿದ್ದೇನೆ. ದೇವರು ಒಳ್ಳೆಯದು ಮಾಡಲಿ’ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT