ಶನಿವಾರ, ಜುಲೈ 24, 2021
21 °C

ನಮ್ರತಾ ಹೊಸ ಟ್ಯಾಟೂ ಸುದ್ದಿಯಾಗಿದೆ ಯಾಕೆ ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಟ್ಯಾಟೂಗಳೆಂದರೆ ಟಾಲಿವುಡ್‌ ‘ಪ್ರಿನ್ಸ್’ ಮಹೇಶ್‌ ಬಾಬು ತಾರಾಪತ್ನಿ ನಮ್ರತಾ ಶಿರೋಡ್ಕರ್ ಅವರಿಗೆ ಎಲ್ಲಿಲ್ಲದ ಕ್ರೇಜ್. ಪದೇ ಪದೇ ಬದಲಾಯಿಸುವ ಅವರ ನಾನಾ ಬಗೆಯ ಟ್ಯಾಟೂಗಳು ಎಲ್ಲರ ಗಮನ ಸೆಳೆಯುತ್ತವೆ. ಸದ್ದು ಮಾಡುತ್ತಿರುವ ಹೊಸ ಟ್ಯಾಟೂದಲ್ಲಿ ಅಂಥ ವಿಶೇಷ ಏನಿದೆ?

ಈ ಬಾರಿ ನಮ್ರತಾ ಹಾಕಿಸಿಕೊಂಡಿರುವ ಟ್ಯಾಟೂ ಯಾವುದೇ ಚೆಂದದ ಡಿಸೈನ್‌ಗಳನ್ನಲ್ಲ. ಇಡೀ ಕುಟುಂಬದ ಹೆಸರುಗಳನ್ನು! ಪತಿ ಮಹೇಶ್ ಬಾಬು ಮತ್ತು ಮಕ್ಕಳಾದ ಗೌತಮ್‌ ಹಾಗೂ ಸಿತಾರಾ ಹೆಸರು ನಮ್ರತಾ ಮುಂಗೈ ಅಲಂಕರಿಸಿವೆ. 

ನಮ್ರತಾ ಟ್ಯಾಟೂ ಹಾಕಿಸಿಕೊಂಡಿರುವ ವಿಷಯ ತಿಳಿದ ಮಹೇಶ್‌ ಬಾಬು ಅಭಿಮಾನಿಗಳು ಆ ಚಿತ್ರವನ್ನು ಹಂಚಿಕೊಳ್ಳುವಂತೆ ದುಂಬಾಲು ಬಿದ್ದಿದ್ದರು. ಅಭಿಮಾನಿಗಳ ಒತ್ತಡಕ್ಕೆ ಕಟ್ಟುಬಿದ್ದು ನಮ್ರತಾ, ದೇವನಾಗರಿಯಲ್ಲಿರುವ ಟ್ಯಾಟೂ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ಯಾಟೂ ಚಿತ್ರ ವೈರಲ್‌ ಆಗಿದ್ದು, ತಮ್ಮ ನೆಚ್ಚಿನ ನಟನ ಹೆಸರು ಕಂಡು ‘ಪ್ರಿನ್ಸ್‌’ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.  

ಲಾಕ್‌ಡೌನ್‌ ಶುರುವಾದಾಗಿನಿಂದ ಮಹೇಶ್‌ ಬಾಬು ತಮ್ಮ ಮಕ್ಕಳೊಂದಿಗೆ ಆಟವಾಡುತ್ತಿರುವ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಎಂಟು ವರ್ಷದ ಮುದ್ದು ಮಗಳು ಸಿತಾರಾ ಜತೆ ತುಂಟಾಟವಾಡುವ ಮತ್ತು ಎದೆ ಎತ್ತರ ಬೆಳೆದ ನಿಂತ 13 ವರ್ಷದ ಮಗ ಗೌತಮ್‌ ಜತೆ ಭುಜಕ್ಕೆ ಭುಜ ತಾಗಿಸಿಕೊಂಡು ನಿಂತು ಎತ್ತರ ಪರೀಕ್ಷಿಸಿಕೊಳ್ಳುತ್ತಿರುವ ವಿಡಿಯೊ ಎಲ್ಲರ ಮೆಚ್ಚುಗೆ ಗಳಿಸಿದ್ದವು. ಅದಕ್ಕಿಂತಲೂ ಹೆಚ್ಚಾಗಿ ನಮ್ರತಾ ಹಂಚಿಕೊಂಡಿದ್ದ ಕುಟುಂಬದ ಹಳೆಯ ಫೋಟೊಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು.

ಬಾಕ್ಸಾಫೀಸ್ ಕೊಳ್ಳೆ ಹೊಡೆದ‌ ‘ಸರಿಲೇರು ನೀಕೆವ್ವರು’ ಬ್ಲಾಕ್‌ಬಸ್ಟರ್‌ ಚಿತ್ರದ ನಂತರ ಮಹೇಶ್‌ ಬಾಬು, ‘ಸರ್ಕಾರು ವಾರಿ ಪಾಠ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪರಶುರಾಮ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು