ಸೋಮವಾರ, ಫೆಬ್ರವರಿ 24, 2020
19 °C

ಹಳ್ಳಿ ರಾಜನ ಮೊಬೈಲ್‌ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಸಿನಿಮಾ ಉದ್ಯಮದ ಪಾಲಿಗೆ ನವೆಂಬರ್ ತಿಂಗಳು ‘ಚಿತ್ರೋತ್ಸವ’ದ ರೀತಿಯಲ್ಲಿ ಕಾಣಿಸುತ್ತಿದೆ! ಈ ತಿಂಗಳಲ್ಲಿ ಸಿನಿಮಾಗಳು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಆಗಿವೆ, ಆಗುತ್ತಿವೆ. ಅವುಗಳಲ್ಲಿ ಒಂದು ‘ನಾನೇ ರಾಜ’!

ಪ್ರತಿ ವ್ಯಕ್ತಿಗೂ ತನ್ನ ಕೆಲಸದಲ್ಲಿ ತಾನೇ ರಾಜ ಎಂಬ ನಂಬಿಕೆ ಇರುವುದು ಅಸಹಜವೇನೂ ಅಲ್ಲ. ಆ ನಂಬಿಕೆಯ ಎಳೆಯನ್ನು ಹೊಂದಿರುವ ಸಿನಿಮಾ ಇದು. ಸೂರಜ್ ಕೃಷ್ಣ ಇದರ ನಾಯಕ ನಟ, ಸೋನಿಕಾ ಗೌಡ ನಾಯಕಿ.

‘ಖುಷಿ ಮತ್ತು ಆತಂಕ ಎರಡೂ ಈ ಹೊತ್ತಿನಲ್ಲಿ ನಮ್ಮಲ್ಲಿ ಇವೆ. ಈ ಸಿನಿಮಾಕ್ಕಾಗಿ ಒಂದು ವರ್ಷದಿಂದ ಕೆಲಸ ಮಾಡಿದ್ದೇವೆ. ಸಿನಿಮಾ ಈಗ ಬಿಡುಗಡೆ ಆಗುತ್ತಿರುವುದು ಖುಷಿ ಸಂಗತಿ’ ಎಂದರು ನಿರ್ದೇಶಕ ಶ್ರೀನಿವಾಸ್ ಶಿವಾರ. ಶುಕ್ರವಾರ ಬಿಡುಗಡೆ ಆಗಲಿರುವ ಹಲವು ಚಿತ್ರಗಳಲ್ಲಿ ಪೈಕಿ ಯಾರು ಯಾವುದನ್ನು ನೋಡಿಯಾರು ಎಂಬುದು ಅವರಲ್ಲಿನ ಆತಂಕ.

‘ಎಷ್ಟೇ ಚಿತ್ರಗಳು ಬಿಡುಗಡೆ ಆಗುತ್ತಿದ್ದರೂ ಸರಿ, ನಾವು ನಮ್ಮ ಸಿನಿಮಾ ಬಗ್ಗೆ ವಿಶ್ವಾಸ ಕಳೆದುಕೊಂಡಿಲ್ಲ. ಹಾಗಾಗಿ, ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯದಾದ್ಯಂತ ಎಪ್ಪತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ನಾಯಕ ಸೂರಜ್ ಅವರನ್ನು ವೀಕ್ಷಕರು ಒಪ್ಪಿಕೊಳ್ಳುತ್ತಾರೋ ಎಂಬುದನ್ನು ನೋಡಬೇಕು’ ಎಂದರು ಶ್ರೀನಿವಾಸ್.

ಇದು ನಾಯಕ ಪ್ರಧಾನ ಸಿನಿಮಾ. ಚಿತ್ರದ ನಾಯಕ ಹಳ್ಳಿ ಹುಡುಗ. ಹಳ್ಳಿಯಲ್ಲಿ ಯಾರಿಗೇ ಕಷ್ಟ ಎದುರಾದರೂ ತಾನು ಮುಂದೆನಿಂತು ಅದನ್ನು ಬಗೆಹರಿಸಿಕೊಡುವ ಪ್ರವೃತ್ತಿ ಹೊಂದಿರುವವ. ಹೀಗಿರುವ ನಾಯಕನಿಗೆ ಬರುವ ಒಂದು ಮೊಬೈಲ್‌ ಕರೆ, ಅವನನ್ನು ಸಮಸ್ಯೆಯೊಂದಕ್ಕೆ ಸಿಲುಕಿಸುತ್ತಿದೆ. ಆತ ಅದರಿಂದ ಹೇಗೆ ಹೊರಬರುತ್ತಾನೆ ಎಂಬುದು ಸಿನಿಮಾ ಕಥೆ.

ಕಥೆ ನಡೆಯುವುದು ಹಳ್ಳಿಯ ಪರಿಸರದಲ್ಲಿ. ಬನ್ನೂರು, ಮದ್ದೂರು, ಹೊರನಾಡು ಕಡೆ ಚಿತ್ರೀಕರಣ ಆಗಿದೆ. ‘ಇದು ನನ್ನ ಮೊದಲ ಸಿನಿಮಾ. ಭಯವೂ ಇದೆ, ಖುಷಿಯೂ ಇದೆ. ಹಳ್ಳಿಯ ವ್ಯಕ್ತಿಯ ಪಾತ್ರಪ್ರವೇಶಕ್ಕಾಗಿ ಬಹಳಷ್ಟು ಸಿದ್ಧತೆ ನಡೆಸಬೇಕಾಗಿತ್ತು’ ಎನ್ನುವುದು ಸೂರಜ್ ಅವರ ಮಾತು.

ಸೋನಿಕಾ ಅವರು ಇದರಲ್ಲಿ ನಗರದಿಂದ ಹಳ್ಳಿಗೆ ಬಂದವಳ ಪಾತ್ರ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಹಾಸ್ಯ, ಥ್ರಿಲ್, ಭಾವುಕ ಸನ್ನಿವೇಶಗಳು ಇವೆ. ಕೊಡುವ ಹಣಕ್ಕೆ ಮೋಸ ಇಲ್ಲ ಎನ್ನುವ ಮನರಂಜನೆ ಸಿಗುತ್ತದೆ ಎಂಬುದು ಚಿತ್ರತಂಡದ ಹೇಳಿಕೆ. ಎಲ್. ಆನಂದ್ ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)