ಮಂಗಳವಾರ, ಮಾರ್ಚ್ 2, 2021
23 °C

ಎಂಟು ಪಾತ್ರಕ್ಕೆ ಜೀವ ತುಂಬಿದ ‘ನವರಸ ರಾಜ’

ಪ್ರದೀಶ್‌ ಎಚ್‌. Updated:

ಅಕ್ಷರ ಗಾತ್ರ : | |

Deccan Herald

ತುಳು ರಂಗಭೂಮಿಯಲ್ಲಿ ‘ನವರಸ ರಾಜ’ ಎಂಬ ಬಿರುದನ್ನು ಪಡೆದಿರುವ ಭೋಜರಾಜ ವಾಮಂಜೂರು ಅವರ ಅಷ್ಟರಸಾಭಿನಯದ ‘ಉಮಿಲ್‌’ ಚಿತ್ರ ಶುಕ್ರವಾರ ತೆರೆಗೆ ಬಂದಿದೆ. ತುಳು ಚಿತ್ರರಂಗದಲ್ಲಿ ಕಲಾವಿದನೊಬ್ಬ ಒಂದೇ ಚಿತ್ರದಲ್ಲಿ ಎಂಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.

ರಂಗಭೂಮಿಯ ಮೇರು ಕಲಾವಿದ ಭೋಜರಾಜ ಅವರು 40ಕ್ಕೂ ಅಧಿಕ ತುಳು ಸಿನಿಮಾದಲ್ಲಿ ಬಣ್ಣ ಹಚ್ಚಿ
ದ್ದಾರೆ. ಬಹುತೇಕ ಹಾಸ್ಯ ಪಾತ್ರದಲ್ಲೇ ಕಾಣಿಸಿಕೊಳ್ಳುವ ಅವರು ತನ್ನ ವಿಭಿನ್ನ ಅಭಿನಯ ಮತ್ತು ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ನಕ್ಕುನಗಿಸುವ ಸಾಮರ್ಥ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಉಮಿಲ್‌ ಚಿತ್ರದಲ್ಲಿ ಬೋಳುತಲೆಯ ವೇಷದಲ್ಲಿ ಬಸ್‌ಸ್ಟ್ಯಾಂಡ್‌ನಲ್ಲಿ ಕುಳಿತಿರುವಾಗ ಕಂಡಕ್ಟರ್‌ ಬಂದು ಬಸ್‌ಗೆ ಕರೆಯುವ ಕಾಮಿಡಿ ದೃಶ್ಯವನ್ನು ಟ್ರೇಲರ್‌ನಲ್ಲಿ ಹಾಕಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಮೂಡಿಬಂದ ಅಷ್ಟರಸಾಭಿನಯ ಮತ್ತು ತುಳು ಚಿತ್ರರಂಗದ ಕುರಿತು ಅವರು ಅನುಭವ ಹಂಚಿಕೊಂಡಿದ್ದು ಹೀಗೆ.

‘ಉಮಿಲ್‌’ ನನಗೆ ವಿಶೇಷ ಚಿತ್ರ. ಎಂಟು ವಿಭಿನ್ನ ಗೆಟಪ್‌ನಲ್ಲಿ ಈ ಚಿತ್ರದಲ್ಲಿ ಮಾಡಿದ್ದೇನೆ. ಎಲ್ಲೂ ಒಂದು ಪಾತ್ರಕ್ಕೆ ಮತ್ತೊಂದು ಪಾತ್ರ ಎದುರು– ಬದುರಾಗುವುದಿಲ್ಲ. ಎಲ್ಲ ಪಾತ್ರಗಳು ಹ್ಯಾಸಮಯವಾಗಿದೆ. ಕೆಲವೊಂದು ಪಾತ್ರದಲ್ಲಿ ನನ್ನ ಗುರುತು ಸಿಗುತ್ತದೆ, ಕೆಲವು ಪಾತ್ರದಲ್ಲಿ ನನ್ನ ಗುರುತು ನನಗೆ ಸಿಗುವುದಿಲ್ಲ. ತುಂಬ ಖುಷಿಪಟ್ಟು ಎಲ್ಲ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದೇನೆ. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗೂ ಇದೆ’.

‘ತುಳು ಚಿತ್ರರಂಗ ವೇಗವಾಗಿ ಬೆಳೆಯುತ್ತಿದೆ ಎಂಬ ಖುಷಿಯ ನಡುವೆ, ಆಗಾಗ ಚಿತ್ರರಂಗ ಹಿಂದಕ್ಕೆ ಹೋಗುತ್ತಿ
ದೆಯೋ ಎಂಬ ಆತಂಕವೂ ನನ್ನನ್ನು ಕಾಡುತ್ತಿದೆ. ತುಳುನಲ್ಲಿ 100 ಚಿತ್ರ ಬಿಡುಗಡೆಯಾಗಿರುವುದು ಒಂದು ಮೈಲುಗಲ್ಲು. ಇವುಗಳಲ್ಲಿ ಸಾಕಷ್ಟು ಉತ್ತಮ ಗುಣಮಟ್ಟದ ಚಿತ್ರಗಳು ಬಂದಿವೆ. ಚಿತ್ರ ನಿರ್ಮಾಣ ಎಂಬುದು ಹುಡುಗಾಟದ ವಿಷಯವಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮ, ಪೂರ್ವ ತಯಾರಿ ಬೇಕು. ತುಂಬಾ ಯೋಚಿಸಿ, ಯೋಜಿಸಿ, ಸಮಯ ಪಡೆದು ತಯಾರಿಸಿದ ಚಿತ್ರಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಅಂತಹ ಚಿತ್ರಗಳ ಸಾಲಿನಲ್ಲಿ ‘ಉಮಿಲ್‌’ ನಿಲ್ಲಲಿದೆ ಎಂಬ ವಿಶ್ವಾಸ ನನ್ನದು’ ಎನ್ನುತ್ತಾರೆ ಅವರು.

ಕಲಾವಿದನಿಗೆ ಪಾತ್ರದ ಆಯ್ಕೆ ಕೂಡಾ ಸವಾಲಿನದ್ದು. ಚಿತ್ರವನ್ನು ಆಯ್ಕೆ ಮಾಡುವಾಗ ನನ್ನ ಪಾತ್ರ, ಸ್ಕ್ರಿಪ್ಟ್‌ ಬಗ್ಗೆ ಮೊದಲು ಮಾಹಿತಿ ಪಡೆಯುತ್ತೇನೆ. ನನಗೆ ಹಣಕ್ಕಿಂತ ಪಾತ್ರ ಮುಖ್ಯ. ನನ್ನ ಪಾತ್ರ ಉತ್ತಮವಾಗಿದ್ದು, ಅದಕ್ಕೆ ಜೀವ ತುಂಬಿದರೆ ಮುಂದೆ ನನಗೆ ಅವಕಾಶ ಹೆಚ್ಚು ಬರುತ್ತದೆ. ಈ ನಿಟ್ಟಿನಲ್ಲಿ ನಾನು ಯೋಚನೆ ಮಾಡುತ್ತೇನೆ.ಅಲ್ಲದೆ, ನಾನು ವಿಭಿನ್ನ ಪಾತ್ರಗಳನ್ನು ಬಯಸುತ್ತೇನೆ. ಬಣ್ಣದ ಬದುಕಿನಲ್ಲಿ ನಾನು ಇನ್ನೂ ವಿದ್ಯಾರ್ಥಿ. ಇಲ್ಲಿ ಜೀವನಪೂರ್ತಿ ಕಲಿಯಲು ಸಾಕಷ್ಟಿದೆ. ಹೀಗಿರುವಾಗ ಹೊಸತನಕ್ಕೆ ನನ್ನನ್ನು ಒಡ್ಡಲು ಬಯಸುತ್ತೇನೆ. ಉಮಿಲ್‌ ಚಿತ್ರವು ನನ್ನಲ್ಲಿ ಅಡಗಿದ್ದ ಕಲೆಯ ಪ್ರಭೆಯನ್ನು ಇನ್ನಷ್ಟು ತೋರಲು ವೇದಿಕೆಯಾಗಿದೆ.

‘ದೇವದಾಸ್‌ ಕಾಪಿಕಾಡ್‌ ನನಗೆ ಕಲಾ ಗುರು. ನಾಟಕ ಅಥವಾ ಚಿತ್ರದ ಮೂಲಕ ಅವರು ನನ್ನಲ್ಲಿ ಅಡಗಿದ್ದ ಹೊಸ ಪ್ರತಿಭೆಯನ್ನು ಹೊರ ತಂದಿದ್ದಾರೆ. ಕಲಾವಿದನಿಗೆ ಎಂತಹ ಪಾತ್ರ ನೀಡಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ನನ್ನ ಇಂದಿನ ಎಲ್ಲ ಯಶ‌ಸ್ಸಿನ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎನ್ನುತ್ತಾರೆ ಭೋಜರಾಜ.

ಬೇಡಿಕೆಯ ಕಲಾವಿದ

ಭೋಜರಾಜ ವಾಮಂಜೂರು ಅವರು ತುಳು ಚಿತ್ರರಂಗದ ಅತ್ಯಂತ ಬೇಡಿಕೆಯ ಹಾಸ್ಯ ಕಲಾವಿದ. ಅವರು ಅಭಿನಯಿಸಿರುವ ಗೋಲ್‌ಮಾಲ್‌, ಕಂಬಳಬೆಟ್ಟು ಭಟ್ರೆನ ಮಗಳ್‌, ಕಟಪಾಡಿ ಕಟ್ಟಪ್ಪ ಚಿತ್ರಗಳ ಚಿತ್ರೀಕರಣ ಕಾರ್ಯ ಪೂರ್ಣಗೊಂಡಿದೆ. ಇಲ್ಲೊಕ್ಕೆಲ್‌, ಲಾಸ್ಟ್‌ಬೆಂಚ್‌, ಪೆಪ್ಪರೆ ಪೆರೆಪರೆ, ಗಿರ್‌ಗಿಟ್‌, ಮಾಜಿ ಮುಖ್ಯಮಂತ್ರಿ, ಭೋಜರಾಜ ಹೀಗೆ ಹಲವು ಚಿತ್ರಗಳು ಕೈಯಲ್ಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು