ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನಾ ಆತ್ಮಕತೆ: ಮಗಳು ಮಸಾಬಾ ಗುಪ್ತಾ ಜನಿಸುವಾಗ ಇದ್ದಿದ್ದು ಕೇವಲ ₹2,000

Last Updated 27 ಮೇ 2021, 13:52 IST
ಅಕ್ಷರ ಗಾತ್ರ

ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಸೋನಮ್‌ ನಾಯರ್‌ ನಿರ್ದೇಶನದ 'ಮಸಾಬಾ ಮಸಾಬಾ' ಎಂಬ ಅಮ್ಮ-ಮಗಳ ಸರಣಿ ಕಾರ್ಯಕ್ರಮದ ಮೂಲಕ ಜನಮನ ಸೆಳೆಯುತ್ತಿರುವ ಸೆಲೆಬ್ರಿಟಿ ಫ್ಯಾಶನ್‌ ಡಿಸೈನರ್‌ ಮಸಾಬಾ ಗುಪ್ತ ತಾನು ಹುಟ್ಟಿದ ಸಂದರ್ಭದ ಆಸಕ್ತಿಕರ ಭಾವನಾತ್ಮಕ ಸಂಗತಿಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ನಟಿ ನೀನಾ ಗುಪ್ತ ಅವರ ಆತ್ಮಕತೆ 'ಸಚ್‌ ಕಹುನ್‌ ತೊ' ಪುಸ್ತಕದ ಪುಟವನ್ನು ಹಂಚಿಕೊಂಡಿರುವ ಮಗಳು ಮಸಾಬಾ, ತಾನು ಜನಿಸುವ ಸಂದರ್ಭವನ್ನು ಭಾವುಕತೆಯಿಂದ ವಿವರಿಸಿದ್ದಾರೆ.

'ಅಮ್ಮನ ಬ್ಯಾಂಕ್‌ ಖಾತೆಯಲ್ಲಿ ಕೇವಲ ₹2,000 ಇತ್ತು. ಅದೇ ಸಮಯಕ್ಕೆ ಟ್ಯಾಕ್ಸ್‌ ರಿಎಂಬರ್ಸ್ಮೆಂಟ್‌ ಸಿಕ್ಕಿದ್ದರಿಂದ ₹12,000 ಖರ್ಚಿನೊಂದಿಗೆ ಆಸ್ಪತ್ರೆಯಲ್ಲಿ ಜನಿಸಿದೆ. ನಾನೂ ಸಿಸೇರಿಯನ್‌ ವಿಭಾಗದ ಮಗು' ಎಂದು ಬರೆದುಕೊಂಡಿದ್ದಾರೆ.

'ನಾನು ಅಮ್ಮನ ಆತ್ಮಕತೆಯನ್ನು ಓದುತ್ತ ಸಾಕಷ್ಟು ಸಂಗತಿಗಳನ್ನು ತಿಳಿದುಕೊಂಡೆ. ಆಕೆ ಎದುರಿಸಿದ ಅತ್ಯಂತ ಕಷ್ಟದ ದಿನಗಳ ಬಗ್ಗೆ ತಿಳಿದುಕೊಂಡೆ. ನನ್ನ ಜೀವನದ ಪ್ರತಿಯೊಂದು ದಿನವೂ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ನನ್ನನ್ನು ಈ ಜಗತ್ತಿಗೆ ತಂದ ಅಮ್ಮನಿಗೆ ಸಾಧನೆಯ ಮೂಲಕ ಪ್ರತಿಫಲವನ್ನು ನೀಡುತ್ತೇನೆ' ಎಂಬ ಮಸಾಬಾ ಅವರ ಸ್ಪೂರ್ತಿ ತುಂಬಿದ ಪೋಸ್ಟ್‌ ಸಾಮಾಜಿಕ ತಾಣದಲ್ಲಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.

''ಮಸಾಬಾ ಜನಿಸುವ ಸಂದರ್ಭ ಸುರಕ್ಷಿತ ಹೆರಿಗೆಗಾಗಿ ಆಸ್ಪತ್ರೆಗೆ ಕೊಡುವಷ್ಟು ಹಣವಿರಲಿಲ್ಲ. ತುಂಬಾ ಚಿಂತೆಯಾಗಿತ್ತು. ಮನೆಯಲ್ಲೇ ಜನ್ಮ ನೀಡಲು ನಿರ್ಧರಿಸಿದ್ದೆ. ನನ್ನ ಬಳಿಯಿದ್ದುದು ಕೇವಲ ₹2,000. ಸಿಸೇರಿಯನ್‌ ಹೆರಿಗೆಗೆ ₹10,000 ಖರ್ಚು ಆಗುತಿತ್ತು. ಅದೃಷ್ಟವೆಂಬಂತೆ ಅದೇ ಸಮಯಕ್ಕೆ ₹9,000 ಟ್ಯಾಕ್ಸ್‌ ರಿಎಂಬರ್ಸ್ಮೆಂಟ್‌ ಬಂತು. ಹಾಗಾಗಿ ಆಸ್ಪತ್ರೆ ಖರ್ಚು ನಿಭಾಯಿಸಲು ಸಾಧ್ಯವಾಯಿತು'' ಎಂದು ಪುಸ್ತಕದಲ್ಲಿ ನೀನಾ ವಿವರಿಸಿರುವ ಪುಟವನ್ನು ಮಸಾಬಾ ಪೋಸ್ಟ್‌ ಮಾಡಿದ್ದಾರೆ.

"ವೈದ್ಯರು ಸಿಸೇರಿಯನ್‌ ಹೆರಿಗೆಗೆ ಸಲಹೆ ನೀಡಿದ್ದರು. ಅದೇ ಸಮಯಕ್ಕೆ ದುಡ್ಡು ಬಂದಿದ್ದು ತುಂಬ ಒಳ್ಳೆಯದಾಯಿತು. ಹೆರಿಗೆ ಸಂದರ್ಭ ನನ್ನ ತಂದೆ ಬಂದು ಸಹಕರಿಸಿದರು. ಆಗ ಅವರು ಇದು ದುಡ್ಡು ಮಾಡಲು ಆಸ್ಪತ್ರೆಯವರ ಕುತಂತ್ರ ಎಂದು ಹೇಳಿದ್ದರು'' ಎಂದು ನೀನಾ ಬರೆದಿದ್ದಾರೆ.

ನೀನಾರ ಆತ್ಮಕತೆ ಜೂನ್‌ 14ಕ್ಕೆ ಬಿಡುಗಡೆಯಾಗುತ್ತಿದೆ. ದಿಲ್ಲಿಯ ಕರೋಲ್‌ ಬಾಗ್‌ನಲ್ಲಿ ಜನಿಸಿದ ನೀನಾ ಗುಪ್ತಾ ತಮ್ಮ ಬಾಲ್ಯದ ದಿನಗಳು, ಎದುರಾದ ಸವಾಲುಗಳು, 1980ರಲ್ಲಿ ಬಾಂಬೆಗೆ ಬಂದು ಜೀವನ ಕಟ್ಟಿಕೊಂಡಿದ್ದು, ಮದುವೆಯಾಗದೆ ಗರ್ಭಿಣಿಯಾಗಿದ್ದು, ಒಬ್ಬರೇ ಮಗಳನ್ನು ಬೆಳೆಸಿದ್ದು, ತಂದೆಯಿಲ್ಲದ ಮಗಳನ್ನು ಸಂರಕ್ಷಿಸಿದ್ದು, ಬಾಲಿವುಡ್‌ನಲ್ಲಿ ಎತ್ತರಕ್ಕೆ ಬೆಳೆದಿದ್ದು ಎಲ್ಲವನ್ನು 'ಸಚ್‌ ಕಹುನ್‌ ತೊ'ದಲ್ಲಿ ಮುಚ್ಚುಮರೆಯಿಲ್ಲದೆ ಬರೆದಿದ್ದು ಓದುಗರು ಕುತೂಹಲದಿಂದ ಕಾಯುವಂತೆ ಮಾಡಿದೆ.

ಅಂದಿನ ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ತಂಡದ ಹೆಸರಾಂತ ಆಟಗಾರ ವಿವಿಯನ್‌ ರಿಚರ್ಡ್ಸ್‌ ಜೊತೆ ಪ್ರೇಮದಲ್ಲಿದ್ದ ನೀನಾ ಗುಪ್ತಾ ಮದುವೆಗೂ ಮುನ್ನ ಗರ್ಭಿಣಿಯಾದರು. ವಿವಿಯನ್‌ ರಿಚರ್ಡ್ಸ್‌ ಮೊದಲೇ ವಿವಾಹಿತರಾಗಿದ್ದರಿಂದ ಮಗುವನ್ನು ಒಬ್ಬಳೇ ಬೆಳೆಸುವ ಗಟ್ಟಿ ನಿರ್ಧಾರಕ್ಕೆ ಬಂದರು. ವಿವಾಹಿತರಾಗದೆ ಮಗುವಿಗೆ ಜನ್ಮ ನೀಡಿ, ಆಕೆಯನ್ನು ಓರ್ವಳೇ ಬೆಳೆಸಿ, ಭಾರತದ ಖ್ಯಾತ ಫ್ಯಾಶನ್‌ ಡಿಸೈನರ್‌ ರನ್ನಾಗಿ ಮಾಡಿದ ನೀನಾ ಗುಪ್ತಾ ಬದುಕು ಸ್ಪೂರ್ತಿಯುತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT