ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಡಿಸೈನಿನ ‘ನಾಗರಹಾವು’

ಮತ್ತೆ ಬಂದಿದ್ದಾರೆ ರಾಮಾಚಾರಿ, ಜಲೀಲ್, ಅಲಮೇಲು, ಮಾರ್ಗರೆಟ್‌, ಚಾಮಯ್ಯ ಮೇಷ್ಟ್ರು!
Last Updated 25 ಜುಲೈ 2018, 8:12 IST
ಅಕ್ಷರ ಗಾತ್ರ

ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಮತ್ತೆ ಡಬ್ಬಾದಿಂದ ಹೊರಗೆ ಬಂದಿದೆ. ಕಾಲಕ್ಕೆ ತಕ್ಕಂತೆ ಹಾವಿನ ಡಿಸೈನು ಬದಲಾಗಿದೆ. ಈ ಡಿಸೈನು ತಾಂತ್ರಿಕತೆಗೆ ಸಂಬಂಧಿಸಿದ್ದು.

‘ನಾಗರಹಾವು’ ಚಿತ್ರದ ಯಶಸ್ಸು ಗಲ್ಲಾಪೆಟ್ಟಿಗೆಯಲ್ಲಿನ ಲೆಕ್ಕಾಚಾರಕ್ಕೆ ಸೀಮಿತವಾದುದಲ್ಲ. ಆ ಚಿತ್ರದಲ್ಲಿ ನಟಿಸಿದ ಕಲಾವಿದರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದ ಪ್ರಖ್ಯಾತ ತಾರೆಗಳಾಗಿ ಗುರ್ತಿಸಿಕೊಂಡಿದ್ದರ ಹಿನ್ನೆಲೆಯಲ್ಲೂ ಸಿನಿಮಾದ ಗೆಲುವನ್ನು ನೋಡಬೇಕು. ‘ನಾಗರಹಾವು’ ಒಂದು ರೂಪಕದ ರೀತಿಯಲ್ಲಿ ಒಂದಷ್ಟು ಚಿತ್ರಗಳನ್ನು ಪ್ರಭಾವಿಸಿದ್ದನ್ನೂ ಗಮನಿಸಬೇಕು. ಅಷ್ಟುಮಾತ್ರವಲ್ಲ – ಸಿನಿಮಾದ ಆಶಯ ಹಾಗೂ ಅದು ಕಟ್ಟಿಕೊಟ್ಟ ಪರಿಸರ ಕೂಡ ಮುಖ್ಯವಾದುದು.

ಮೊದಲಿಗೆ ಚಿತ್ರದ ಕೆಲವು ವಿಶೇಷಗಳನ್ನು ಗಮನಿಸೋಣ. ‘ನಾಗರಹಾವು’, ‘ಎರಡು ಹೆಣ್ಣು, ಒಂದು ಗಂಡು’ ಹಾಗೂ ‘ಸರ್ಪ ಮತ್ಸರ’ ಎನ್ನುವ ಮೂರು ಕಾದಂಬರಿಗಳನ್ನು ಆಧರಿಸಿ ರೂಪುಗೊಂಡ ಸಿನಿಮಾ ಇದು. ಈ ಕಾದಂಬರಿಗಳ ಹಕ್ಕು ಪಡೆಯಲು ನಿರ್ಮಾಪಕ ಎನ್‌. ವೀರಾಸ್ವಾಮಿ ಅವರು ಕಾದಂಬರಿಕಾರ ತ.ರಾ.ಸು. ಅವರಿಗೆ ದೊಡ್ಡ ಮೊತ್ತವನ್ನು ನೀಡಿದ್ದರಂತೆ. ಒಂದು ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡುವುದೇ ಕಷ್ಟವಾಗಿರುವಾಗ, ಮೂರು ಕಾದಂಬರಿಗಳನ್ನು ಒಂದೇ ಸಿನಿಮಾಕ್ಕೆ ಅಳವಡಿಸಿರುವುದು ವಿಶೇಷ. ಈ ತ್ರಿವಳಿ ಸೂತ್ರ ಮತ್ತೆ ಮುಂದುವರೆದುದು ರಾಜ್‌ಕುಮಾರ್‌ ನಟನೆಯ ‘ಆಕಸ್ಮಿಕ’ ಚಿತ್ರದ ವಿಷಯದಲ್ಲಿ. ಆಗ ಕೂಡ ತ.ರಾ.ಸು. ಅವರ ಕಾದಂಬರಿಗಳನ್ನೇ ಸಿನಿಮಾರೂಪಕ್ಕೆ ಅಳವಡಿಸಿದ್ದು ವಿಶೇಷ. ತ.ರಾ.ಸು. ಅವರ ‘ಆಕಸ್ಮಿಕ’, ‘ಅಪರಾಧಿ’ ಹಾಗೂ ‘ಪರಿಣಾಮ’ ಕಾದಂಬರಿಗಳನ್ನು ಆಧರಿಸಿ ನಿರ್ದೇಶಕ ಟಿ.ಎಸ್‌. ನಾಗಾಭರಣ ‘ಆಕಸ್ಮಿಕ’ ಸಿನಿಮಾ ರೂಪಿಸಿದ್ದರು.ಕಾದಂಬರಿಗಳಿಗೆ ನೀಡಿದ ದೊಡ್ಡ ಮೊತ್ತದ ಗೌರವಧನದ ಕಾರಣದಿಂದಾಗಿ ಸುದ್ದಿಯಾದ ಸಿನಿಮಾ, ಸಿದ್ಧಗೊಂಡ ನಂತರ ಕಾದಂಬರಿಕಾರರ ಹೇಳಿಕೆಯಿಂದಾಗಿ ವಿವಾದಕ್ಕೂ ಗುರಿಯಾಯಿತು.

ಸಿನಿಮಾಕ್ಕಾಗಿ ಪುಟ್ಟಣ್ಣನವರು ಮಾಡುಕೊಂಡಿದ್ದ ಬದಲಾವಣೆಗಳು ತ.ರಾ.ಸು. ಅವರ ಅಸಮಾಧಾನಕ್ಕೆ ಕಾರಣವಾಗಿದ್ದವು. ‘ಸಿನಿಮಾದಲ್ಲಿ ಮೂಲಕಥೆಯ ಮಾನಭಂಗ ನಡೆದಿದೆ. ಸಿನಿಮಾ ಅದ್ದೂರಿಯಾಗಿದ್ದರೂ ಕಾದಂಬರಿಯ ಕೊಲೆ ಆಗಿದೆ. ಸಿನಿಮಾದಲ್ಲಿ ದೃಶ್ಯ–ಸಂಭಾಷಣೆಗಳು ಕಾದಂಬರಿಗೆ ದ್ರೋಹ ಬಗೆದಿವೆ’ ಎಂದು ತ.ರಾ.ಸು. ಸಿಟ್ಟು ಮಾಡಿಕೊಂಡಿದ್ದರು. ‘ಸಿನಿಮಾದಲ್ಲಿನ ರಾಮಾಚಾರಿ ಪಾತ್ರವೇ ಒಂದು ಅಪಭ್ರಂಶ’ ಎಂದು ಟೀಕಿಸಿದ್ದರು. ಅಷ್ಟು ಮಾತ್ರವಲ್ಲ – ನಾನು ಸೃಷ್ಟಿಸಿದ್ದು ನಾಗರಹಾವು, ಪುಟ್ಟಣ್ಣ ರೂಪಿಸಿದ್ದು ಕೇರೆಹಾವು’ ಎಂದು ಮುಖ ತಿರುಗಿಸಿಕೊಂಡರು.

ತ.ರಾ.ಸು. ಟೀಕೆ, ಪುಟ್ಟಣ್ಣನವರ ಸಮರ್ಥನೆ ವೈಯಕ್ತಿಕ ಮಟ್ಟದಲ್ಲಿ ನಿಲ್ಲಲಿಲ್ಲ. ಈ ಚರ್ಚೆ ಚಿತ್ರರಸಿಕರ ನಡುವೆಯೂ ಜರುಗಿತು. ಪರ–ವಿರೋಧದ ಚರ್ಚೆ ಮಾಧ್ಯಮಗಳಲ್ಲಿ ನಡೆಯಿತು. ಇದೆಲ್ಲದರ ನಡುವೆ ಸಿನಿಮಾ ತೆರೆಕಂಡು ಬಹುದೊಡ್ಡ ಯಶಸ್ಸು ಪಡೆಯಿತು. ಕಾದಂಬರಿಕಾರ ಒಪ್ಪಿಕೊಳ್ಳದೆ ಹೋದರೇನು, ಜನ ಪುಟ್ಟಣ್ಣನವರ ಚಿತ್ರವನ್ನು ಮೆಚ್ಚಿಕೊಂಡರು. ಈ ಯಶಸ್ಸನ್ನು ಕಂಡು ತ.ರಾ.ಸು. ಅವರು ಮೆದುವಾಗಿರಬೇಕು. ‘ನಿರ್ಮಾಪಕರೊಂದಿಗೆ ತಮಗೆ ಯಾವ ರೀತಿಯ ವೈಮನಸ್ಸೂ ಇಲ್ಲ’ ಎಂದು ಸಿನಿಮಾದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದರು. ಈ ವಿವಾದವೇನೇ ಇರಲಿ – ಸಾಹಿತ್ಯಕೃತಿಯೊಂದರ ಅನನ್ಯತೆ ಹಾಗೂ ನಿರ್ದೇಶಕನ ಸ್ವಾತಂತ್ರ್ಯ, ಸೃಜನಶೀಲತೆ ಕುರಿತ ಚರ್ಚೆಯನ್ನು ‘ನಾಗರಹಾವು’ ದೊಡ್ಡ ರೀತಿಯಲ್ಲಿ ಬೆಳೆಸಿತು.

ತ.ರಾ.ಸು. ಅವರ ಕಾದಂಬರಿಯಲ್ಲಿ ಕಥೆ ಮುಖ್ಯವಾಗಿ ನಡೆಯುವುದು ಒಳಾಂಗಣದಲ್ಲಿ. ಈ ಕಥೆಯನ್ನು ಪುಟ್ಟಣ್ಣ ಕಣಗಾಲ್‌ ಬಯಲಿಗೆ ತಂದರು. ಚಿತ್ರದುರ್ಗದ ಕೋಟೆ ಬಯಲಿಗೆ ತಂದರು. ದುರ್ಗದ ಸೇರ್ಪಡೆ ಸಿನಿಮಾಕ್ಕೆ ವಿಶೇಷ ಶೋಭೆಯನ್ನು ತಂದುಕೊಟ್ಟಿತು. ಆದರೆ, ತೆರೆಯ ಹಿಂದಿನ ಕಥೆ ಇಷ್ಟು ಸುಂದರವಾಗಿರಲಿಲ್ಲ. ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಸುವುದು ಪುಟ್ಟಣ್ಣನವರ ಬಳಗಕ್ಕೆ ಸುಲಭದ ಸಂಗತಿಯಾಗಿರಲಿಲ್ಲ.

ಕೇಂದ್ರ ಪ್ರಾಚ್ಯ ಸಂಶೋಧನಾ ಇಲಾಖೆ ಚಿತ್ರೀಕರಣಕ್ಕಾಗಿ ಅನುಮತಿ ನೀಡಲು ಹಿಂದೆಮುಂದೆ ನೋಡಿತು, ಒಂದೆರಡು ತಿಂಗಳು ಸತಾಯಿಸಿತು. ಕೊನೆಗೆ ಎಸ್‌.ಎಂ. ಕೃಷ್ಣ ಅವರ ಮಧ್ಯಸ್ಥಿಕೆಯಿಂದಾಗಿ ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಣಕ್ಕೆ ಅನುಮತಿ ದೊರೆಯಿತು. ಇದರಿಂದ ಸಿನಿಮಾಕ್ಕೆ ಅನುಕೂಲವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಷ್ಟೇ ಅನುಕೂಲ ದುರ್ಗಕ್ಕೂ ಆಯಿತು. ‘ನಾಗರಹಾವು’ ಚಿತ್ರೀಕರಣದ ನಂತರ ಚಿತ್ರದುರ್ಗದ ಕೋಟೆ ಪ್ರವಾಸಿಗರ ನೆಚ್ಚಿನ ಸ್ಥಳವಾಯಿತು.

ಬಜೆಟ್‌ ದೃಷ್ಟಿಯಿಂದ ಕೂಡ ‘ನಾಗರಹಾವು’ ದುಬಾರಿಯಾದುದು. ಕೋಟೆಯ ತಪ್ಪಲಲ್ಲಿ ನಿರ್ಮಿಸಿದ್ದ ಮಾರ್ಗರೆಟ್‌ ಮನೆ ಹಾಗೂ ಸುತ್ತಮುತ್ತಲಿನ ಎರಡು ಪುಟ್ಟ ಮನೆಗಳ ಸೆಟ್‌ಗೆ 13 ಸಾವಿರ ರೂ‍ಪಾಯಿಗಳು ಖರ್ಚಾಗಿದ್ದು ಆಗ ದೊಡ್ಡ ಸುದ್ದಿಯಾಗಿತ್ತು.

ವಿಷ್ಣುವರ್ಧನ್‌ ಹಾಗೂ ಅಂಬರೀಶ್‌ ‘ನಾಗರಹಾವು’ ಮೂಲಕ ಕನ್ನಡ ಚಿತ್ರರಂಗಕ್ಕೆ ದೊರೆತ ಕೊಡುಗೆಗಳು. ‘ವಂಶವೃಕ್ಷ’ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದ ಕುಮಾರ್‌ ಎನ್ನುವ ತರುಣನನ್ನು ‘ನಾಗರಹಾವು’ ಚಿತ್ರಕ್ಕೆ ಕರೆತಂದ ಪುಟ್ಟಣ್ಣ, ತಮ್ಮ ಚಿತ್ರದ ನಾಯಕನನ್ನು ‘ವಿಷ್ಣುವರ್ಧನ’ ಎಂದು ಕರೆದರು. ಒರಟುತನವೇ ಮೈತಾಳಿದಂತಿದ್ದ ರಾಮಾಚಾರಿಯ ಪಾತ್ರದಲ್ಲಿ ವಿಷ್ಣು ನಟನೆ ಚಿತ್ರರಸಿಕರಿಗೆ ರೋಮಾಂಚನ ಮೂಡಿಸುವಂತಿತ್ತು. ‘ರಾಮಾಚಾರಿ’ ಬೇರೆಯಲ್ಲ, ವಿಷ್ಣುವರ್ಧನ್‌ ಬೇರೆಯಲ್ಲ ಎನ್ನುವಂತಾಯಿತು. ವಿಷ್ಣು ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ‘ನಾಗರಹಾವು’ವಿಗೆ ಮೊದಲ ಸ್ಥಾನ.

ನಾಯಕಿಯನ್ನು ಚುಡಾಯಿಸುವ ಜಲೀಲ್‌ ಎನ್ನುವ ತರುಣನ ಪಾತ್ರದಲ್ಲಿ ಅಂಬರೀಶ್‌ ಮನೆಮಾತಾದರು. ‘ಬುಲ್‌ ಬುಲ್‌ ಮಾತಾಡಕಿಲ್ವಾ...’ ಎನ್ನುವ ಜಲೀಲನ ಸಂಭಾಷಣೆ ಈಗಲೂ ಜನಪ್ರಿಯ. ಬಹುಶಃ ಜಲೀಲನಷ್ಟು ಸುಂದರವಾಗಿ ಹುಡುಗಿಯರನ್ನು ಚುಡಾಯಿಸಿದ ಮತ್ತೊಂದು ಸನ್ನಿವೇಶ ಕನ್ನಡ ಸಿನಿಮಾಗಳಲ್ಲಿ ಇರಲಿಕ್ಕಿಲ್ಲ. ಚಿತ್ರದಲ್ಲಿ ವಿರೋಧಿಗಳಾಗಿ ಕಾಣಿಸಿಕೊಂಡ ವಿಷ್ಣು ಹಾಗೂ ಅಂಬರೀಶ್‌ ನಂತರದ ದಿನಗಳಲ್ಲಿ ಪ್ರಾಣಮಿತ್ರರಾದರು. ಕೊನೆಯವರೆಗೂ ‘ಕುಚಿಕು’ಗಳಾಗಿ ಉಳಿದರು.

ಕೆ.ಎಸ್‌. ಅಶ್ವತ್ಥ್ ಅವರ ಚಾಮಯ್ಯ ಮೇಷ್ಟ್ರ ಪಾತ್ರ ಚಿತ್ರರಂಗ ರೂಪಿಸಿದ ಮಹೋನ್ನತ ಪಾತ್ರಗಳಲ್ಲೊಂದು. ಪಂತುಲು ಅವರ ‘ಸ್ಕೂಲ್‌ ಮಾಸ್ಟರ್‌’ ಹೊರತುಪಡಿಸಿದರೆ ಕನ್ನಡ ಸಿನಿಮಾಗಳಲ್ಲಿನ ಮೇಷ್ಟ್ರು ಪಾತ್ರಗಳಲ್ಲಿ ನೆನಪಿಗೆ ಬರುವುದು ಚಾಮಯ್ಯನವರದೇ. ರಾಮಾಚಾರಿಯನ್ನು ತಿದ್ದುವ, ಸಲಹುವ, ನಿಯಂತ್ರಿಸುವ, ಕೊನೆಗೆ ಪರೋಕ್ಷವಾಗಿ ಅವನ ಅವನತಿಗೂ ಕಾರಣವಾಗುವ ತೀರ್ಥರೂಪು ಸದೃಶ ಮೇಷ್ಟ್ರು ಪಾತ್ರಕ್ಕೆ ಅಶ್ವತ್ಥ್‌ ಜೀವತುಂಬಿದ್ದರು. ‘ರಾಮಾಚಾರಿ’ ಎನ್ನುವ ಅಶ್ವತ್ಥರ ಪ್ರೇಮಪೂರಿತ ಧ್ವನಿ ಹಾಗೂ ‘ಮೇಷ್ಟ್ರೇ’ ಎನ್ನುವ ವಿಷ್ಣುವರ್ಧನ್‌ರ ಗಡುಸುಧ್ವನಿಗಳ ಸೆಳೆತಕ್ಕೆ ಸಿನಿಮಾ ನೋಡಿದ ಯಾರಾದರೂ ಒಳಗಾಗದಿರುವುದುಂಟೆ?

ತಾಂತ್ರಿಕವಾಗಿ ಕೂಡ ‘ನಾಗರಹಾವು’ 1972ರ ಕಾಲಕ್ಕೆ ಸಾಕಷ್ಟು ಸುದ್ದಿ ಮಾಡಿತ್ತು. ಚಿಟ್ಟಿಬಾಬು ಅವರ ಛಾಯಾಗ್ರಹಣ ರಮ್ಯ ರೋಚಕ ಲೋಕವೊಂದನ್ನು ಸೃಷ್ಟಿಸಿತ್ತು. ಪುಟ್ಟಣ್ಣನವರು ಹಾಡುಗಳಲ್ಲಿ ಬಳಸಿದ ಸ್ಲೋ ಮೋಷನ್ ಟೆಕ್ನಿಕ್ ಇತರ ಭಾಷೆಗಳ ತಂತ್ರಜ್ಞರ ಗಮನವನ್ನೂ ಸೆಳೆಯಿತು. ತಂತ್ರಜ್ಞಾನ ಬಳಸಿಯೇ ಚುಂಬನ ದೃಶ್ಯವನ್ನು ರೂಪಿಸಿದ್ದು ಚಿತ್ರರಸಿಕರಿಗೆ ಕಚಗುಳಿಯಿಟ್ಟಿತು.

ಗೀತೆಗಳು ಕೂಡ ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸುವಂತಿದ್ದವು. ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು. ಎರಡು ಕಥನಗೀತೆಗಳಂತೂ ಚಿತ್ರದ ಚೌಕಟ್ಟನ್ನು ದಾಟಿ ನೋಡುಗರ ಮನಸ್ಸಿನಲ್ಲಿ ಉಳಿದುಬಿಟ್ಟವು. ರಾಮಾಚಾರಿಯ ಪ್ರೇಮದ ನಿರಾಕರಣೆಗೆ ಒಳಗಾಗಿ ಬಲವಂತದ ಮದುವೆಗೆ ಒಪ್ಪಿಕೊಳ್ಳಬೇಕಾಗಿ ಬಂದ ಅಲಮೇಲು, ಆ ಮದುವೆಯ ಕಾರಣದಿಂದಾಗಿಯೇ ತನ್ನ ಬಾಳು ನರಕಸದೃಶವಾದುದನ್ನು ‘ಕಥೆ ಹೇಳುವೆ ನನ್ನ ಕಥೆ ಹೇಳುವೆ’ ಎನ್ನುವ ಹಾಡಿನ ಮೂಲಕ ಕಟ್ಟಿಕೊಡುತ್ತಾಳೆ. ಹಾಡು ಮುಗಿಯುವ ಮುನ್ನವೇ, ಗೋಳಿನ ಕಥೆ ಕೇಳಲಾರೆ ಎನ್ನುವಂತೆ ಅಲಮೇಲುವಿನ ಬಾಯನ್ನು ರಾಮಾಚಾರಿ ಮುಚ್ಚುತ್ತಾನೆ. ರಾಮಾಚಾರಿಯ ಮನಸ್ಸು ಮಾತ್ರವೇನು, ನೋಡುಗರ ಮನಸ್ಸನ್ನೂ ಭಾರವಾಗಿಸಿ ಕಣ್ಣುಗಳನ್ನು ತೇವವಾಗಿಸುವ ಗೀತೆಯದು.

‘ಕನ್ನಡ ನಾಡಿನ ವೀರ ರಮಣಿಯ’ ಚಿತ್ರದಲ್ಲಿನ ಮತ್ತೊಂದು ಕಥನಗೀತೆ. ಹೈದರಾಲಿಯ ಸೈನ್ಯದ ವಿರುದ್ಧ ಹೋರಾಡಿದ ಓಬವ್ವ ಎನ್ನುವ ವೀರ ವನಿತೆಯ ಸಾಹಸಗಾಥೆಯನ್ನು ಬಣ್ಣಿಸುವ ಹಾಡಿನಲ್ಲಿ ಓಬವ್ವನಾಗಿ ಜಯಂತಿ ನಟಿಸಿದ್ದರು. ಈ ಪಾತ್ರದಲ್ಲಿ ನಟಿಸುವಂತೆ ಕಲ್ಪನಾ ಅವರನ್ನು ಪುಟ್ಟಣ್ಣ ಕೇಳಿಕೊಂಡಿದ್ದರಂತೆ. ಆದರೆ, ಹಾಡೊಂದರಲ್ಲಿ ಬಂದುಹೋಗುವ ಪಾತ್ರವನ್ನು ಕಲ್ಪನಾ ನಿರಾಕರಿಸಿದರು. ‘ಪಾತ್ರ ಸಣ್ಣದಾದರೂ ಕಲಾವಿದೆಯಾಗಿ ನಿನಗೆ ದೊಡ್ಡ ಹೆಸರು ತಂದುಕೊಡುತ್ತದೆ’ ಎಂದು ಪುಟ್ಟಣ್ಣನವರು ಮನವೊಲಿಸಿದ್ದರಿಂದಾಗಿ ಓಬವ್ವನಾಗಿ ಜಯಂತಿ ಕಚ್ಚೆ ಉಟ್ಟು ಒನಕೆ ಹಿಡಿದಿದ್ದರು. ಈ ಗೀತೆಯ ಚಿತ್ರೀಕರಣದಲ್ಲಿ ಸೈನಿಕರ ಪಾತ್ರಗಳಿಗೆ ನೂರಾರು ಮಂದಿ ಹೋಂ ಗಾರ್ಡ್‌ಗಳನ್ನು ಬಳಸಲಾಗಿತ್ತು.

‘ಸಂಗಮ ಸಂಗಮ’ ಗೀತೆಯನ್ನು ಧಾರ್ಮಿಕ ಸಾಮರಸ್ಯದ ರೀತಿಯಲ್ಲಿ ಸಂಗೀತ ನಿರ್ದೇಶಕ ವಿಜಯಭಾಸ್ಕರ್‌ ಸಂಯೋಜಿಸಿದ್ದು ಚಿತ್ರದ ವಿಶೇಷಗಳಲ್ಲೊಂದು. ಈ ಸಾಮರಸ್ಯವನ್ನು ಪುಟ್ಟಣ್ಣನವರು ದೃಶ್ಯದಲ್ಲೂ ತರಲು ಪ್ರಯತ್ನಿಸಿದ್ದಾರೆ. ಚಿತ್ರಕಥೆ ಕೂಡ ಧಾರ್ಮಿಕ ಸಾಮರಸ್ಯದ ಅಗತ್ಯವನ್ನೇ ಪ್ರತಿಪಾದಿಸುತ್ತದೆ. ಹಿಂದೂ ತರುಣ ಹಾಗೂ ಕ್ರಿಶ್ಚಿಯನ್‌ ಯುವತಿಯ ಪ್ರೇಮದ ಕಥನ, ಪ್ರೇಮದ ಮೂಲಕ ಧಾರ್ಮಿಕ ಅಡೆತಡೆಗಳನ್ನು ಮೀರುವ ಸಾಧ್ಯತೆಯನ್ನು ಹೇಳುತ್ತದೆ. ಅದೇ ಹೊತ್ತಿಗೆ ಸಮಾಜದಲ್ಲಿನ ಕಠೋರ ಸಾಂಪ್ರದಾಯಿಕತೆಯನ್ನೂ ಅನಾವರಣಗೊಳಿಸುತ್ತದೆ.

‘ನಾಗರಹಾವು’ ಚಿತ್ರದ ಪ್ರಭೆ ನಂತರದ ಅನೇಕ ಸಿನಿಮಾಗಳಲ್ಲಿ ಮುಂದುವರೆದಿರುವುದು ಅದರ ಶ್ರೇಷ್ಠತೆಯನ್ನು ಸೂಚಿಸುವಂತಿದೆ. ರಾಮಾಚಾರಿ ಎನ್ನುವ ಪಾತ್ರದ ಹೆಸರು ರವಿಚಂದ್ರನ್‌ ಸಿನಿಮಾದ ಶೀರ್ಷಿಕೆಯಾಯಿತು. ರಾಮಾಚಾರಿ–ಮಾರ್ಗರೆಟ್‌ ಪ್ರೇಮಕಥನವನ್ನು ಹೊಸಕಾಲಕ್ಕೆ ಒಗ್ಗಿಸುವ ರೂಪದಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್‌ ‘ಮಿಸ್ಟರ್‌ ಅಂಡ್‌ ಮಿಸೆಸ್ ರಾಮಾಚಾರಿ’ ರೂಪಿಸಿದರು. ಎರಡೂ ಚಿತ್ರಗಳದ್ದೂ ಭರ್ಜರಿ ಗೆಲುವು. ರೋಮಿಯೊ ಜೂಲಿಯೆಟ್‌ನಂತೆ ರಾಮಾಚಾರಿ–ಮಾರ್ಗರೆಟ್‌ ಕನ್ನಡದ ಪ್ರೇಮಿಗಳ ಪಾಲಿಗೆ ರೂಪಕವಾಗಿದ್ದಾರೆ.

ಸುಮಾರು ನಾಲ್ಕೂವರೆ ದಶಕಗಳ ನಂತರ ‘ನಾಗರಹಾವು’ ಈಗ ಮತ್ತೆ ಪ್ರೇಕ್ಷಕರಿಗೆ ಮುಖಾಮುಖಿಯಾಗಿದೆ. ಸಿನಿಮಾಸ್ಕೋಪ್‌ ರೂಪದಲ್ಲಿ, ಶಾಬ್ದಿಕವಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹೊಸಗಾಲದ ಪ್ರೇಕ್ಷಕರನ್ನೂ ‘ನಾಗರಹಾವು’ ಮೋಡಿಮಾಡಬಲ್ಲದು. ಏಕೆಂದರೆ, ಕ್ಲಾಸಿಕ್‌ಗಳು ಎಲ್ಲ ಕಾಲಕ್ಕೂ ಕ್ಲಾಸಿಕ್‌ಗಳೇ.

ಲೋಕನಾಥ್‌ ಅಂಕಲ್ ಹೇಳಿದ ‘ಸತ್ತು ಬದುಕಿದ’ ಕಥೆ

‘ನಾಗರಹಾವು’ ಅಂದಾಗ ನನಗೆ ನನ್ನ ಬದುಕಿನಲ್ಲಿ ನಡೆದ ಕೆಲವು ಘಟನೆಗಳು ಪಕ್ಕನೆ ನೆನಪಾಗುತ್ತವೆ. ಆ ಚಿತ್ರ ಮಾಡುವಾಗ ನಾನೊಂದು ಫ್ಯಾಕ್ಟರಿ ನಡೆಸುತ್ತಿದ್ದೆ. ನಾಲ್ಕೈದು ದಿನಗಳ ಶೂಟಿಂಗ್ ಮುಗಿಸಿಕೊಂಡು ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದೆ. ಆದರೆ ನನ್ನ ಹಿಂದೆಯೇ ಮತ್ತೊಂದು ಕಾರು ಬಂತು. ‘ನಿರ್ದೇಶಕರು ಯಾವ್ದೋ ಒಂದು ಶಾಟ್ ತೆಗೆಯಲು ಮರ್ತಿದಾರೆ. ಹಾಗಾಗಿ ಮತ್ತೆ ಬರಬೇಕಂತೆ’ ಎಂದರು. ‘ಈಗಾಗಲೇ ನಾಲ್ಕೈದು ದಿನ ಫ್ಯಾಕ್ಟರಿ ಬಿಟ್ಟು ಇದ್ದೇನೆ. ಮತ್ತೆ ಹೇಗೆ ಬರುವುದು’ ಎಂದು ಕೇಳಿದೆ. ‘ಬರ್ಲೇ ಬೇಕಂತೆ. ಬಹಳ ಮುಖ್ಯವಾದ ದೃಶ್ಯವಂತೆ ಅದು. ಸಂಜೆಯೇ ತಿರುಗಿ ಕಳಿಸಿಕೊಟ್ಟುಬಿಡ್ತಾರಂತೆ’ ಎಂದು ಒತ್ತಾಯಿಸಿದರು.

ಇನ್ಮೇನ್ಮಾಡೋದು? ಮತ್ತೆ ಹೊರಟು ಮಧ್ಯಾಹ್ನ ಎರಡು ಗಂಟೆಯಷ್ಟೊತ್ತಿಗೆ ಚಿತ್ರದುರ್ಗಕ್ಕೆ ಹೋದೆ. ಮೂರು ಗಂಟೆ ಆಯ್ತು, ನಾಲ್ಕಾಯ್ತು, ಐದು ಗಂಟೆ ಆಯ್ತು... ರಾತ್ರಿ ಎಂಟು ಗಂಟೆಗೆ ಒಂದು ಶಾಟ್ ತೆಗೆದರು. ನನ್ನನ್ನು ಕಂಬಕ್ಕೆ ಕಟ್ಟಿ ಬಟ್ಟೆ ಬಿಚ್ಚಿ ಹೊಡೆಯುವ ದೃಶ್ಯ ಇದೆಯಲ್ಲ, ಅದೇ ದೃಶ್ಯ ಆಗ ಶೂಟ್ ಮಾಡಿದ್ದು. ಶಾಟ್ ಮುಗಿದಾಗ ರಾತ್ರಿ ಎರಡು ಗಂಟೆ. ‘ಮನೆಗೆ ಕಳಿಸಿಕೊಡಿ’ ಎಂದೆ. ‘ಸರ್, ನಿಮ್ಮನ್ನು ಕರ್ಕೊಂಡು ಬಂದ ಡ್ರೈವರ್ ಚೆನ್ನಾಗಿ ಮೊಸರು ತಿಂದು ಮಲ್ಕೊಂಬಿಟ್ಟಿದಾನೆ. ಬೆಳಿಗ್ಗೆ ನಸುಕಿಗೆ ಕಳಿಸಿಕೊಡ್ತೀವಿ’ ಎಂದರು. ಆದರೆ ಪ್ಯಾಕ್ಟರಿ ಬೀಗದ ಕೈ ನನ್ನ ಬಳಿಯೇ ಇದೆ. ಏನ್ಮಾಡೋದು? ಕೆಲಸದ ಹುಡುಗರು ನಾಲ್ಕೂವರೆ ಐದು ಗಂಟೆಗೆ ಬಂದುಬಿಡ್ತಾರೆ. ‘ನಾನು ಹೇಗಾದ್ರೂ ಹೋಗ್ಲೇಬೇಕು. ಮುಖ್ಯರಸ್ತೆ ಹತ್ರ ಬಿಡಿ ಯಾವ್ದಾದ್ರೂ ಗಾಡಿ ಹತ್ಕೊಂಡುಹೋಗ್ತೀನಿ’ ಅಂದೆ.

ಮುಖ್ಯರಸ್ತೆಗೆ ತಂದು ಯಾವ್ದೋ ವ್ಯಾನ್‌ ಹತ್ತಿಸಿ ಕಳಿಸಿದರು. ಒಳಗಡೆ ಏಳೆಂಟು ಜನ ಕಳ್ಳು ಕುಡಿದುಕೊಂಡು, ಬೀಡಿ ಸಿಗರೇಟು ಸೇದುತ್ತ ಕೂತಿದ್ದರು... ಕೂತುಕೊಳ್ಳಲಿಕ್ಕೇ ಸಾಧ್ಯವಿಲ್ಲ. ಮೂಗು ಒತ್ತಿಕೊಂಡು ಕೂತೆ. ನಾಲ್ಕಗಂಟೆಯಷ್ಟೊತ್ತಿಗೆ ತುಮಕೂರು ಬಸ್‌ಸ್ಟ್ಯಾಂಡ್ ಇದ್ಯಲ್ಲ, ಅಲ್ಲಿ ಬಂದು ಗಾಡಿ ನಿಲ್ಲಿಸಿದರು. ನಾನೂ ಇಳಿದೆ. ನನ್ನ ನೋಡಿದ ಡ್ರೈವರ್ ನನ್ನ ಗುರ್ತು ಹಿಡಿದು, ‘ಏನಣ್ಣಾ ನೀವಿಲ್ಲಿದ್ದೀರಾ? ಮುಂದುಗಡೆ ಕೂತುಕೊಳ್ಳಿ’ ಎಂದ. ‘ಸದ್ಯ ಇಲ್ಲಿ ಗಾಳಿ ಸೇವಿಸ್ತಾ ಇರ್ತೀನಿ. ನೀನು ಹೋಗು ಟೀ ಕುಡ್ಕೊಂಡು ಬಾ, ಕಾಯ್ತಿರ್ತೀನಿ’ ಎಂದೆ. ಸಾಮಾನ್ಯವಾಗಿ ತುಮಕೂರಿನಲ್ಲಿ ಬೆಳಿಗ್ಗೆ ನಾಲ್ಕು ಗಂಟೆಯಷ್ಟೊತ್ತಿಗೆ ಯಾವ ಬಸ್ಸುಗಳೂ ಬಸ್‌ಸ್ಟ್ಯಾಂಡ್‌ ಹೋಟೆಲ್ ಹತ್ತಿರ ಬರುವುದಿಲ್ಲ. ಅವತ್ತು ಯಾವ್ದೋ ಬಸ್‌ ಬಂತು. ‘ಯಾರ್ರೀ.. ಬೆಂಗಳೂರು’ ಎಂದು ಕೂಗುತ್ತಿದ್ದುದನ್ನು ನೋಡಿ, ಹೇಳದೆ ಕೇಳದೆ ಬಸ್‌ ಹತ್ತಿಬಿಟ್ಟೆ.

ಬೆಂಗಳೂರು ಸೇರಿಕೊಂಡೆ, ಫ್ಯಾಕ್ಟರಿ ಹೊಸ್ತಿಲಲ್ಲಿ ಹುಡುಗರು ಕಾಯ್ತಿದ್ರು. ಬೀಗ ತೆಗೆದುಕೊಟ್ಟೆ. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಮನೆಗೆ ಹೋದೆ. ಅಷ್ಟರಲ್ಲಾಗಲೇ ಮನೆಗೆ ಎರಡು ಮೂರು ಸಲ ಫೋನ್‌ ಬಂದುಹೋಗಿದೆ. ‘ಲೋಕನಾಥ್ ಬಂದ್ರಾ’ ಎಂದು ಕೇಳಿದ್ದಾರೆ. ಮನೆಯಲ್ಲಿ ‘ಇಲ್ಲ ಇನ್ನೂ ಬಂದಿಲ್ಲ’ ಎಂದು ಹೇಳಿದ್ದಾರೆ. ನಾನು ಮನೆಗೆ ಹೋದ ತಕ್ಷಣ ಪೋನ್ ಬಂದ ಸುದ್ದಿ ಹೇಳಿದರು. ‘ಸುಮ್ನಿರಮ್ಮಾ, ನಿನ್ನೆ ಬಂದ ಹಾಗೆಯೇ ಮತ್ತೆ ಕರೆದುಕೊಂಡು ಹೋದರು. ಈಗ ಮತ್ತೆ ಕರೀತಾರೋ ಏನೋ.. ನಾನು ಆಮೇಲೆ ವೀರಾಸ್ವಾಮಿ ಅವರ ಆಫೀಸಿಗೇ ಹೋಗ್ತೀನಿ’ ಎಂದು ಸುಮ್ಮನಾದೆ. ಮರುದಿನ ಬೆಳಿಗ್ಗೆ ಎದ್ದು ವೀರಾಸ್ವಾಮಿ ಅವರ ಆಫೀಸಿಗೆ ಹೋದೆ. ಅವರು ಬೆಳಿಗ್ಗೆ ಒಂಬತ್ತು ಗಂಟೆಗೆಲ್ಲ ಆಫೀಸಿಗೆ ಬಂದು ಕೂತಿರುತ್ತಿದ್ದರು.

ಬಹಳ ಚಿಂತಾಕ್ರಾಂತರಾಗಿ ಕೂತಿದ್ದರು. ನಾನು ‘ಯಾಕ್‌ ಸಾರ್? ಏನಾಯ್ತು?’ ಎಂದು ಕೇಳಿದೆ. ಅವರು ಥಟ್ಟನೆ ತಲೆಯೆತ್ತಿ ದುರುಗುಟ್ಟಿ ನೋಡಿದರು. ಮೇಲಿಂದ ಕೆಳಗಿನವರೆಗೆ ಹತ್ತಾರು ಬಾರಿ ನೋಡಿದರು. ‘ಯಾಕ್ ಸಾರ್ ಹಾಗೆ ನೋಡ್ತಿದೀರಿ?’ ಕೇಳಿದೆ. ಮೈ ಚಿವುಟಿಕೊಂಡರು. ಅಚ್ಚರಿಯಿಂದ ‘ಏನ್ರೀ... ಬದ್ಕಿದೀರೇನ್ರೀ ನೀವು?’ ಎಂದು ಕೇಳಿದರು. ‘ಯಾಕ್‌ ಸಾರ್?’ ಅಂದೆ. ‘ಅಯ್ಯೋ ನೋಡಿ ಇಲ್ಲಿ’ ಎಂದು ಪೇಪರ್ ಮುಖಕ್ಕೆ ಹಿಡಿದರು. ಅದರಲ್ಲಿ ‘ವ್ಯಾನ್‌ ಅಪಘಾತ; ಎಂಟು ಜನರ ದುರ್ಮರಣ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು!

ಅದೃಷ್ಟ ಅಂತ ಇದಕ್ಕೆ ಹೇಳುವುದು. ಅವತ್ತು ವ್ಯಾನ್ ಬಿಟ್ಟು ಬಸ್‌ ಯಾಕೆ ಹತ್ತಿದೆನೋ ಗೊತ್ತಿಲ್ಲ. ಬದುಕಿಕೊಂಡೆ.

ಆ ನಂತರ ಎಲ್ಲಿ ಯಾರು ‘ನಾಗರಹಾವು’ ಎಂದರೆ ಸಾಕು, ಈ ಘಟನೆ ನೆನಪಾಗುತ್ತದೆ. ಇಂಥ ಹಲವು ಘಟನೆಗಳು ನಡೆದಿವೆ. ಇವೆಲ್ಲದಕ್ಕಿಂತ ಆ ಸಿನಿಮಾ ತುಂಬ ಚೆನ್ನಾಗಿದೆ. ಈಗ ಮತ್ತೆ ಬಿಡುಗಡೆಯಾಗುತ್ತಿದೆ. ಜನರು ನೋಡಲಿ ಎಂದು ಆಶಿಸುತ್ತೇನೆ.

ಜಲೀಲ್ ಅಂಬರೀಶ್ ಕಂಡ ಪುಟ್ಟಣ್ಣನ ಶಿಸ್ತಿನ ಚಿತ್ರ

ಪುಟ್ಟಣ್ಣ ಕಣಗಾಲ್ ಅವರದು ಸಮಯದ ವಿಷಯದಲ್ಲಿ ತುಂಬ ಶಿಸ್ತು. ರಿಷಿ ಕಪೂರ್ ಇರಲಿ, ಧಾರಾ ಸಿಂಗ್ ಅಥವಾ ನೀತು ಸಿಂಗ್‌ ಯಾರೇ ಇರಲಿ, ಬೆಳಿಗ್ಗೆ ಒಂಬತ್ತು ಗಂಟೆ ಆಗ್ತಿದ್ದಂತೆ ‘ಕ್ಯಾಪ್ಟನ್‌ ಜೀ’ ಅಂತ ವಿತ್ ಮೇಕ್ಅಪ್‌ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಇರ್ತಿದ್ರು.

ನಾನು ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಉಳಿದುಕೊಂಡಿರುತ್ತಿದ್ದೆ. ಹೋಟೆಲ್‌ನಿಂದ ಹೊರಡುವಾಗ ಯಾರಾದ್ರು ದೊಡ್ಡ ಪ್ರೊಡ್ಯೂಸರ್ ಬಂದುಬಿಡ್ತಿದ್ರು. ಬಂದ ತಕ್ಷಣ ಹೊರಡಂಗಿಲ್ವಲ್ಲಾ. ಟಿಫಿನ್ನಿಗೆ ಅಂತ ಕೂತು ಒಂದು ಇಡ್ಲಿ ವಡಾ ತಿಂದ್ರೆ ಅರ್ಧ ಗಂಟೆ ಹೋಯ್ತು. ಅದಾದಮೇಲೆ ಕಾಫಿ ಹೇಳ್ಬೇಕಲ್ಲಾ... ಒಂದು ತಾಸು ಲೇಟಾಗಿಬಿಡ್ತಿತ್ತು.

ಕಾರಲ್ಲಿ ರಸ್ತೆ ಉದ್ದಕ್ಕೂ ಥೂ.. ಥೂ.. ಅಂತ ಉಗಿದುಕೊಂಡು ಚಚ್ಕೊಂಡು ಹೋಗ್ತಿದ್ದೆ. ಹೋಗ್ಬಿಟ್ಟು ಟಕಟಕ ಮೇಕ್‌ಅಪ್‌ ಹಾಕಿಕೊಂಡು ಮೆತ್ತಗೆ ಬಾಗಿಲು ತೆಗೆದು ನೋಡ್ತಾ ಇದ್ರೆ ಹೀಗೆ ತಿರುಗಿ ನೋಡೋರು. ‘ಸಾರ್... ಪಂಕ್ಚರ್ ಆಗ್ಬಿಟ್ಟಿತ್ತು ಸಾರ್‌... ಇಂಪೊರ್ಟೆಡ್ ಕಾರು ರಿಮ್‌ ಮೇಲೇ ಓಡಿಸ್ಕೊಂಡು ಬಂದೆ. ಮೂವತ್ತೈದು ಸಾವಿರ ರೂಪಾಯಿ ಹೋಗ್ಬಿಡ್ತು ಸಾರ್‌...’ ಅಂತಿದ್ದೆ. ಅವರು ಕ್ಯಾಮೆರಾಮೆನ್ ಕರೆದು ತೆಲುಗಿನಲ್ಲಿ ‘ಇವ್ನಿಗೆ ಹೇಳು, ನಾನು ಇವ್ನ ಕಥೆ ಕೇಳಕ್ಕೆ ಬಂದಿಲ್ಲ. ನನ್ನ ಕಥೆ ಹೇಳೋಕೆ ಬಂದಿರೋದು’ ಅಂತಿದ್ರು.

ಇಷ್ಟೆಲ್ಲ ಅಂದರೂ ನನ್ನ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. ಲೇಟಾಗಿ ಬಂದ್ರೂ ಅಡ್ಜೆಸ್ಟ್‌ ಮಾಡಿಕೊಳ್ತಿದ್ರು.

ಜಯಂತಿ ಅವರ ‘ಓಬವ್ವ’ನ ನೆನಪು

’ನಾಗರಹಾವು’ ಬಿಡಗುಡೆಯಾಗಿ 45 ವರ್ಷ ಆಯ್ತು ಅಂತ ರವಿಮಾಮ ಹೇಳ್ತಿದ್ರು... ನಲ್ವತ್ತೈದು ವರ್ಷ! ಇಷ್ಟು ವರ್ಷ ಆದದ್ಮೇಲೆ ಈಗ ಮತ್ತೆ ನೋಡ್ತಿದ್ರೆ ಮೈಯೆಲ್ಲ ಜುಮ್‌ ಅಂತಿದೆ. ಯಾಕೆಂದರೆ ಸೌಂಡೆಲ್ಲ ಸ್ವಲ್ಪ ಸ್ವಲ್ಪ ಕೇಳಿಸತ್ತೆ. ಈಗ ಸುತ್ತಲಿಂದ ಸೌಂಡು ಬರ್ತದೆ. ಆ ವಿಷ್ಣುವರ್ಧನ್‌ ಅವರಂತೂ ಅಷ್ಟು ಚೆನ್ನಾಗಿ ಕಾಣ್ತಾರೆ.

ಸುಮ್ನೆ ಹೇಳ್ಬಾರ್ದು. ನನ್ನ ಹಾಡು (ಕನ್ನಡ ನಾಡಿನ ವೀರ ರಮಣಿಯ...) ತುಂಬ ಚೆನ್ನಾಗಿದೆರೀ...

ಈ ಹಾಡಿನಲ್ಲಿ ನಟಿಸುವಂತೆ ಪುಟ್ಟಣ್ಣ ಮೊದಲು ಕಲ್ಪನಾ ಅವರನ್ನು ಕೇಳಿದ್ದರಂತೆ. ಆಗ ಅವ್ರು ‘ಈ ತುಕಡಾ ಕ್ಯಾರೆಕ್ಟರ್ ಯಾರು ಮಾಡ್ತಾರೆ. ನಾಯಕಿಯ ಪಾತ್ರ ಕೊಡಿ ಮಾಡ್ತೀನಿ’ ಎಂದು ತಿರಸ್ಕರಿಸಿದ್ದರಂತೆ. ಆಮೇಲೆ ವೀರಸ್ವಾಮಿ ಅವರು ಮತ್ತು ಪುಟ್ಟಣ್ಣ ಅವರು ನಮ್ಮ ಮನೆಗೆ ಬಂದು ನನ್ನನ್ನು ಕೇಳಿದರು. ‘ಯಾರಾದ್ರೂ ಬೇಡ ಅಂದ್ರೆ ಮಾತ್ರ ನೀವು ನನ್ನತ್ರ ಬರ್ತೀರಾ’ ಎಂದು ಸುಮ್ಮನೇ ಕೋಪ ನಟಿಸಿದ್ದೆ. ಆದರೆ ನನಗೆ ಚಾಲೆಂಜಿಂಗ್ ಕ್ಯಾರೆಕ್ಟರ್‌ಗಳೆಂದರೆ ತುಂಬ ಇಷ್ಟ. ಆದ್ದರಿಂದಲೇ ಒಪ್ಪಿಕೊಂಡೆ.

ಪುಟ್ಟಣ್ಣ ಅವರ ತಲೆಯಲ್ಲಿ ಏನಿತ್ತೋ ಅದಕ್ಕಿಂತ ಉತ್ತಮವಾಗಿ ಆ ಹಾಡು ಮೂಡಿಬಂತು. ಆ ಪ್ರಯತ್ನ ಈಗ 7.1 ಧ್ವನಿಯಲ್ಲಿ ಕೇಳ್ತಾ ಇದ್ರೆ ಈ ಹಾಡನ್ನು ಪುಟ್ಟಣ್ಣ ತೆಗೆದಿದ್ದಾ, ಅದರಲ್ಲಿ ನಟಿಸಿದ್ದು ನಾನೇನಾ ಅನ್ನಿಸಿಬಿಡ್ತು. ಅದೊಂಥರ ಹೊಸ ಅನುಭವ.

ಈ ಚಿತ್ರ ಮತ್ತೆ ನೂರು ದಿನ ಹೋಗಬೇಕು. ತಿರುಗಾ ಈಶ್ವರಿ ಸಂಸ್ಥೆಯ ರವಿಮಾಮ ಮತ್ತು ಬಾಲಾಜಿ ಕಡೆಯಿಂದ ಶೀಲ್ಡ್‌ ತಗೋಬೇಕು ಎನ್ನುವುದೇ ನನ್ನ ಆಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT