ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ ಆನೆ ಏರಿದ ನೀಲಗಿರಿಯ ಕಾರ್ತಿಕಿ ಗೊನ್ಸಾಲ್ವೆಸ್‌ ಅವರ ಕಥೆ...

Last Updated 13 ಮಾರ್ಚ್ 2023, 15:56 IST
ಅಕ್ಷರ ಗಾತ್ರ

ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಸಾಕ್ಷ್ಯಚಿತ್ರ ವಿಭಾಗದಲ್ಲಿ 95ನೇ ಆಸ್ಕರ್ ಪ್ರಶಸ್ತಿ ಲಭಿಸಿದೆ. ಇದರ ಹಿಂದಿನ ರೂವಾರಿ, ಈ ಸಾಕ್ಷ್ಯ ಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್‌. ವನ್ಯಜೀವಿ–ನೈಸರ್ಗಿಕ ಇತಿಹಾಸ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವ ಕಾರ್ತಿಕಿ ಮೂಲತಃ ನೀಲಗಿರಿ ಜಿಲ್ಲೆಯವರು. ಪ್ರಸ್ತುತ ಮುಂಬೈನಲ್ಲಿ ವಾಸವಾಗಿದ್ದಾರೆ.

ಕಾರ್ತಿಕಿ ಗೊನ್ಸಾಲ್ವೆಸ್, ಕ್ಯಾಮೆರಾ ಕಂಪನಿ ಸೋನಿ ಸಂಸ್ಥೆಯ ಅಧಿಕೃತ ಕಲಾವಿದೆ. ಸೋನಿ ಆಲ್ಫಾ ಸರಣಿಯ ಸೋನಿ ಇಮೇಜಿಂಗ್ ರಾಯಭಾರಿಯಾಗಿ ಭಾರತದಿಂದ ಆಯ್ಕೆಯಾದ ಮೊದಲ ಮಹಿಳೆ. ನೈಸರ್ಗಿಕ ಇತಿಹಾಸ ಮತ್ತು ಸಾಮಾಜಿಕ ಸಾಕ್ಷ್ಯಚಿತ್ರ ಛಾಯಾಗ್ರಾಹಕಿಯಾಗಿ ಮತ್ತು ಚಲನಚಿತ್ರ ನಿರ್ಮಾಪಕಯಾಗಿ ಅವರು ಆಯ್ಕೆಗೊಂಡಿದ್ದರು. ಭಾರತೀಯ ನೈಸರ್ಗಿಕ ಇತಿಹಾಸ, ಸಾಕ್ಷ್ಯಚಿತ್ರ ನಿರ್ಮಾಣದ ಜತೆಗೆ ಛಾಯಾಚಿತ್ರ ಪತ್ರಕರ್ತೆ ಕೂಡ ಹೌದು. ಇವರ ಅನೇಕ ಛಾಯಾಚಿತ್ರಗಳು ವನ್ಯಜೀವಿ ಮತ್ತು ಪ್ರಕೃತಿಗೆ ಸಂಬಂಧಿಸಿದ ಜಗತ್ತಿನ ಅನೇಕ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಪರಿಸರ, ಪ್ರಕೃತಿ ಮತ್ತು ವನ್ಯಜೀವಿಗಳ ವೈವಿಧ್ಯತೆ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಯೋಜನೆಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಸಂಸ್ಕೃತಿ, ಸಮುದಾಯ ಸಂಬಂಧಿತ ಮತ್ತೊಂದು ಯೋಜನೆಯಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ.
ಸಂಸ್ಕೃತಿ, ಸಮುದಾಯಗಳು, ಪ್ರಾಣಿಗಳು ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸಲು ಫೋಟೋಗಳು, ಕಥೆಗಳು ಮತ್ತು ವೀಡಿಯೊಗಳನ್ನು ಹುಡುಕುತ್ತಾ ಕಾರ್ತಿಕಿ ಸದಾ ಪ್ರಯಾಣಿಸುತ್ತಾರೆ. ಪ್ರಪಂಚದಾದ್ಯಂತದ ವಿಭಿನ್ನ ಸಂಸ್ಕೃತಿಗಳ ವಿಶಿಷ್ಟ ಅಂಶಗಳನ್ನು ಸೆರೆಹಿಡಿಯುವುದು ಅವರ ಇಷ್ಟದ ವಿಷಯ.

ಪಶ್ಚಿಮ ಘಟ್ಟಗಳ ಎತ್ತರದ ಪರ್ವತಗಳಲ್ಲಿ ವಾಸಿಸುವ ಕಾಡು ಬೆಕ್ಕುಗಳ ಕುರಿತಾದ ದೀರ್ಘಾವಧಿ ಯೋಜನೆಯಲ್ಲಿ ಸದ್ಯ ಅವರು ಕೆಲಸ ಮಾಡುತ್ತಿದ್ದಾರೆ. ಆದಿವಾಸಿ ಮತ್ತು ಬಿಯೆಲ್ ಸಮುದಾಯಗಳ ಸ್ಥಳೀಯ ಸಾಂಪ್ರದಾಯಿಕ ಕಲಾವಿದರ ಜೀವನ, ಕಥೆಗಳು ಮತ್ತು ಕಲೆಯನ್ನು ಪರಿಚಯಿಸುವ ಯೋಜನೆಯೊಂದನ್ನು ಪೂರ್ಣಗೊಳಿಸಿದ್ದಾರೆ. ಹಿಮಾಲಯದ ಭಾರತ-ಚೀನೀ ಗಡಿಯ ಎತ್ತರದ ಶೀತಮರುಭೂಮಿಗಳಲ್ಲಿನ ಜೀವನವನ್ನು ದಾಖಲಿಸುವ ಕೆಲಸ ಮಾಡಿದ್ದಾರೆ.

ಅನಾಥ ಆನೆಯ ಕಥೆ...
ಕಾರ್ತಿಕಿ ಗೊನ್ಸಾಲ್ವೆಸ್ ಅವರ ಚೊಚ್ಚಲ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ 95ನೇ ಆಸ್ಕರ್‌ ಪ್ರಶಸ್ತಿ ದೊರೆತಿದೆ. 41 ನಿಮಿಷಗಳ ಸಾಕ್ಷ್ಯಚಿತ್ರವು ದಕ್ಷಿಣ ಭಾರತದ ಮದುಮಲೈ ಹುಲಿ ಸಂರಕ್ಷಿತ ಅರಣ್ಯದಲ್ಲಿ ದಂಪತಿಗಳಾದ ಬೊಮ್ಮನ್ ಮತ್ತು ಬೆಳ್ಳಿ, ಅನಾಥ ಆನೆ ರಘುವನ್ನು ಸಾಕುವ ಕಥೆ ಹೊಂದಿದೆ.

ಸುಮಾರು ಆರು ವರ್ಷಗಳ ಹಿಂದೆ ಕಾರ್ತಿಕಿ ಈ ಕಾಡಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೊಮ್ಮನ್ ಕಣ್ಣಿಗೆ ಬೀಳುತ್ತಾರೆ. ತಮ್ಮ ಆನೆ ರಘುವನ್ನು ಅವರು ನದಿಗೆ ಸ್ನಾನಕ್ಕಾಗಿ ಕರೆದುಕೊಂಡು ಹೋಗುತ್ತಿರುತ್ತಾರೆ. ಅಲ್ಲಿ ಅವರಿಬ್ಬರ ಪ್ರೀತಿ ನೋಡಿ ಕಾರ್ತಿಕಿ ಮನಸೋಲುತ್ತಾರೆ. ತಂದೆ–ಮಗನಂತಿರುವ ರಘು ಮತ್ತು ಬೊಮ್ಮನ್‌ ಅವರ ಬದುಕನ್ನು ಸೆರೆ ಹಿಡಿಯುವ ನಿರ್ಧಾರ ಮಾಡುತ್ತಾರೆ. ಸುಮಾರು 5 ವರ್ಷ ಅವರ ಜತೆಗೆ ಒಡನಾಡಿ 2022ರಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾಣವಾಗುತ್ತದೆ. ಡಿಸೆಂಬರ್‌ನಲ್ಲಿ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿತ್ತರಗೊಳ್ಳುತ್ತದೆ.

ಏಷ್ಯಾದ ಕಪ್ಪು ಕರಡಿಗಳ ಕುರಿತಾದ ‘ಆನ್‌ ದಿ ಬ್ರಿಂಕ್‌’, ಉತ್ತರಾಖಂಡದ ‘ಓಕ್‌ ರಿಸ್ಟೋರೇಷನ್‌’, ಗೋವಾದ ಹಸಿರಿನ ಕುರಿತಾದ ‘ಮೈ ಮೊಲೆಮ್‌’ ಅವರ ಇತರ ಕಿರುಚಿತ್ರಗಳು.

ಪೂರಕ ಮಾಹಿತಿ: http://www.kartikigonsalves.com/conservation

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT