ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Oscars 2022 | ‘ಕೋಡ’ ಅತ್ಯುತ್ತಮ ಚಿತ್ರ, ವಿಲ್‌ ಸ್ಮಿತ್‌ ಅತ್ಯುತ್ತಮ ನಟ

‘ಸ್ಲ್ಯಾಪ್‌ಗೇಟ್‌’ಗೆ ಸಾಕ್ಷಿಯಾದ 94ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ
Last Updated 28 ಮಾರ್ಚ್ 2022, 19:20 IST
ಅಕ್ಷರ ಗಾತ್ರ

ಲಾಸ್‌ ಏಂಜಲಿಸ್‌: ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣದೋಷವುಳ್ಳ ಕಲಾವಿದರೇ ಅಭಿನಯಿಸಿದ್ದ, ‘ಕೋಡ’(CODA-ಚೈಲ್ಡ್‌ ಆಫ್‌ ಡೆಫ್‌ ಅಡಲ್ಟ್ಸ್‌) ಸಿನಿಮಾವು 94ನೇ ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿ ಇತಿಹಾಸ ಬರೆಯಿತು.

ಕೋವಿಡ್‌ ಸಾಂಕ್ರಾಮಿಕ ಕಾಣಿಸಿ ಕೊಂಡ ಮೂರು ವರ್ಷಗಳ ಬಳಿಕ ನಡೆದ ಮೊದಲ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ಸಂಜೆ ಇಲ್ಲಿನ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ನಡೆ ಯಿತು. ಮೂವರು ಮಹಿಳೆಯರೇ ಈ ಬಾರಿಯ ಸಮಾರಂಭವನ್ನು ನಿರೂಪಣೆ ಮಾಡಿದ್ದು ವಿಶೇಷ.

ಶಾನ್‌ ಹೇಡರ್‌ ನಿರ್ದೇಶನದ ‘ಕೋಡ’ ಚಿತ್ರವು, ‘ದಿ ಪವರ್‌ ಆಫ್‌ ದಿ ಡಾಗ್‌’, ‘ಡ್ಯೂನ್‌’, ‘ಕಿಂಗ್‌ ರಿಚರ್ಡ್‌’, ‘ವೆಸ್ಟ್‌ ಸೈಡ್‌ ಸ್ಟೋರಿ’ ಮುಂತಾದ ಚಿತ್ರಗಳನ್ನು ಹಿಂದಿಕ್ಕಿ ಆಸ್ಕರ್‌ ಬಾಚಿಕೊಂಡಿದೆ. ಇದೇ ಚಿತ್ರದ ನಟನೆಗಾಗಿ, ಟ್ರಾಯ್‌ ಕಾಟ್ಸರ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಒಲಿದಿದೆ. ಟ್ರಾಯ್‌, ಶ್ರವಣದೋಷವುಳ್ಳ ಮೊದಲ ಆಸ್ಕರ್‌ ಪುರಸ್ಕೃತ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

‘ಕೋಡ’ ನಾಲ್ವರು ಸದಸ್ಯರಿರುವ ಕುಟುಂಬದ ಕಥೆಯಾಗಿದ್ದು, ಇದರಲ್ಲಿ ಮೂವರಿಗೆ ಶ್ರವಣದೋಷವಿರುತ್ತದೆ. ಹಾಡುಗಾರ್ತಿಯಾಗಬೇಕು ಎಂಬ ಹಂಬಲವಿರುವ ಶ್ರವಣದೋಷವಿರದ ಮಗಳ ತಂದೆಯಾಗಿ ಟ್ರಾಯ್‌ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೇ ಚಿತ್ರದಲ್ಲಿ ನಟಿಸಿದ್ದ ನಟಿ ಮಾರ್ಲಿ ಮ್ಯಾಟ್ಲಿನ್‌ 1987ರಲ್ಲಿ ಆಸ್ಕರ್‌ ಪಡೆದಿದ್ದರು.

‘ಕಿಂಗ್‌ ರಿಚರ್ಡ್‌’ ಚಿತ್ರದಲ್ಲಿ ಟೆನಿಸ್‌ ತಾರೆಗಳಾದ ವೀನಸ್‌ ಹಾಗೂ ಸೆರೇನಾ ವಿಲಿಯಮ್ಸ್‌ ತಂದೆ ‘ರಿಚರ್ಡ್‌ ವಿಲಿಯಮ್ಸ್‌’ ಪಾತ್ರಕ್ಕಾಗಿ ನಟ ವಿಲ್‌ ಸ್ಮಿತ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇದು ವಿಲ್‌ ಸ್ಮಿತ್‌ ಅವರಿಗೆ ಚೊಚ್ಚಲ ಆಸ್ಕರ್‌ ಪ್ರಶಸ್ತಿ.

ಡುನಿ ವಿಲುನವ್‌ ನಿರ್ದೇಶನದ ಸೈಂಟಿಫಿಕ್‌ ಫಿಕ್ಷನ್‌ ಸಿನಿಮಾ ‘ಡೂನ್‌’, ತಾಂತ್ರಿಕ ವಿಭಾಗದಲ್ಲಿ ಆರು ಆಸ್ಕರ್‌ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರವೇಶ ಪಡೆದಿದ್ದ ಭಾರತದ ‘ರೈಟಿಂಗ್ ವಿದ್‌ ಫೈರ್’ ಸಾಕ್ಷ್ಯಚಿತ್ರವು ‘ಸಮ್ಮರ್ ಆಫ್ ಸೋಲ್’ ಚಿತ್ರದ ವಿರುದ್ಧ ಸೋತಿತು.

ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್‍ ರಚಿಸಿದ್ದ ಈ ಸಾಕ್ಷ್ಯಚಿತ್ರವು, ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರೇ ನಡೆಸುತ್ತಿರುವ ‘ಖಬರ್ ಲೆಹರಿಯಾ’ ಪತ್ರಿಕೆಯ ಕಥೆಯನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಮೌನಾಚರಣೆ ಮಾಡುವ ಮೂಲಕ ಉಕ್ರೇನ್‌ಗೆ ಬೆಂಬಲವನ್ನು ನೀಡಲಾಯಿತು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT