ಶುಕ್ರವಾರ, ಅಕ್ಟೋಬರ್ 7, 2022
28 °C

ವಿಹಾನ್‌ ಇಲ್ಲಿ ಕ್ರಿಕೆಟ್‌ ಚಾಂಪಿಯನ್‌

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ನಟ ರಕ್ಷಿತ್‌ ಶೆಟ್ಟಿ ಅವರ ‘ಸೆವೆನ್‌ ಆಡ್ಸ್‌’ ತಂಡದಲ್ಲಿದ್ದ ಚಂದ್ರಜಿತ್‌ ಆ್ಯಕ್ಷನ್‌ ಕಟ್‌ ಹೇಳಲಿರುವ ಹೊಸ ಚಿತ್ರಕ್ಕೆ ‘ಪಂಚತಂತ್ರ’ ಖ್ಯಾತಿಯ ವಿಹಾನ್‌ ನಾಯಕರಾಗಿ ಆಯ್ಕೆಯಾಗಿದ್ದಾರೆ. ರೊಮ್ಯಾನ್ಸ್‌ ಡ್ರಾಮಾ ಕಥಾಹಂದರದ ಈ ಚಿತ್ರದ ಶೀರ್ಷಿಕೆ ಇನ್ನಷ್ಟೇ ಅನಾವರಣವಾಗಬೇಕಿದ್ದು, ಹೊಸ ಪ್ರಾಜೆಕ್ಟ್‌ ಬಗ್ಗೆ ವಿಹಾನ್‌ ಸಿನಿಮಾ ಪುರವಣಿ ಜೊತೆ ಮಾತಿಗಿಳಿದದ್ದು ಹೀಗೆ...

‘ಪಂಚತಂತ್ರ’ ಬಳಿಕ ತೆರೆಯಿಂದ ಕೊಂಚ ದೂರ ಉಳಿದಿದ್ದೇಕೆ? 

ನನಗೆ ಸಿನಿಮಾ ನಟನಾಗುವ ಯಾವುದೇ ಕನಸು ಇರಲಿಲ್ಲ. ನಾನು ಓದಿನಲ್ಲಿ ತೊಡಗಿಸಿಕೊಂಡಿದ್ದೆ. ನಿರ್ದೇಶಕ ಯೋಗರಾಜ್‌ ಭಟ್‌ ಅವರ ಮನೆ, ನಮ್ಮ ಮನೆಯ ಸಮೀಪವೇ ಇದೆ. ಅವರ ಮೂಲಕವೇ ಚಂದನವನದಲ್ಲಿ ನನ್ನ ಪಯಣ ಅನಿರೀಕ್ಷಿತವಾಗಿ ಆರಂಭವಾಯಿತು. ನಾನು ಯಾವುದೇ ನಟನೆಯ ತರಬೇತಿ ಪಡೆದಿಲ್ಲ. ನನಗೆ ಸಿನಿಮಾದ ಯಾವ ಹಿನ್ನೆಲೆಯೂ ಇಲ್ಲ. ಹೀಗಿರುವಾಗ ಯೋಗರಾಜ್‌ ಭಟ್‌ ಅವರಂತಹ ಮೇರು ನಿರ್ದೇಶಕರು ನನ್ನ ಬೆಂಬಲಕ್ಕೆ ನಿಂತಾಗ, ನಾನೂ ಇಲ್ಲಿ ತೊಡಗಿಸಿಕೊಂಡೆ. ‘ಕಾಲ್‌ ಕೆ.ಜಿ ಪ್ರೀತಿ’ ಸಿನಿಮಾ ಬಳಿಕ ಭಟ್ರೇ ನನಗೆ ‘ಪಂಚತಂತ್ರ’ದಲ್ಲಿ ಆ್ಯಕ್ಷನ್‌ ಕಟ್‌ ಹೇಳಿದರು. ವರ್ಷಕ್ಕೆ ನಾಲ್ಕೈದು ಸಿನಿಮಾ ಒಪ್ಪಿಕೊಳ್ಳಲು ನನಗೆ ಸಾಧ್ಯವಿಲ್ಲ. ಆಯ್ಕೆಯಲ್ಲಿ ನಾನು ಬಹಳ ಸೂಕ್ಷ್ಮ. ಒಂದು ಚಿತ್ರ ಒಪ್ಪಿಕೊಂಡರೆ, ಆ ಸಿನಿಮಾದಲ್ಲಿ ನಾನು ಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. 

‘ಪಂಚತಂತ್ರ’ ಬಳಿಕ ಬಹಳ ಜಾಗರೂಕತೆಯಿಂದ ಹೊಸ ಸಿನಿಮಾ ಆಯ್ಕೆ ಮಾಡುತ್ತಿದ್ದೇನೆ. ನಾನು ಪೂರ್ಣವಾಗಿ ಸಿನಿಮಾವನ್ನೇ ಅವಲಂಬಿಸಿಲ್ಲ. ನಾನು ಒಬ್ಬ ಉದ್ಯಮಿ. ಉದ್ಯಮದ ಜೊತೆಗೆ ವರ್ಷಕ್ಕೊಂದು ಸಿನಿಮಾ ಮಾಡಬೇಕು ಎನ್ನುವ ಗುರಿ ಇದೆ. ಆದರೆ ಇದಕ್ಕೇ ಅಂಟಿಕೊಂಡಿಲ್ಲ. ನಮ್ಮದು ಮಧ್ಯಮ ವರ್ಗದ ಕುಟುಂಬ. ಜೀವನವನ್ನು ಪ್ರ್ಯಾಕ್ಟಿಕಲ್‌ ಆಗಿ ನೋಡುತ್ತೇನೆ. ಹೀಗಾಗಿ ಒಂದನ್ನೇ ನಂಬಿಕೊಂಡು ಜೀವಿಸುವುದಿಲ್ಲ.

‘ಪರಂವಃ’ ನಿಮ್ಮನ್ನು ನಾಯಕನನ್ನಾಗಿ ಆಯ್ಕೆ ಮಾಡಿದ ಕುರಿತು...

‘ಪಂಚತಂತ್ರ’ ಬಳಿಕ, ಉತ್ತಮ ಕಥೆಯಿದ್ದರಷ್ಟೇ ಸಿನಿಮಾ ಆಯ್ಕೆ ಮಾಡಿಕೊಂಡು ನಟಿಸುವ ನಿರ್ಧಾರ ತೆಗೆದುಕೊಂಡಿದ್ದೆ. ಇಂತಹ ಸಂದರ್ಭದಲ್ಲಿ ಪರಂವಃ ಸ್ಟುಡಿಯೋಸ್‌ನಿಂದ ಈ ಆಫರ್‌ ಬಂತು. ಚಿತ್ರದ ಕಥೆ ನನ್ನನ್ನು ಕಾಡಿತು, ಇದೊಂದು ಡ್ರಾಮಾ/ಲವ್‌ ಸ್ಟೋರಿ. ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿ, ಕ್ರಿಕೆಟ್‌ ಆಟಗಾರ ಹಾಗೂ ಉದ್ಯಮಿ ಹೀಗೆ ಮೂರು ಶೇಡ್‌ಗಳಿವೆ. ನಾನು ಮಗನಾಗಿ ಇಲ್ಲಿ ಕಾಣಸಿಗುತ್ತೇನೆ. ಪ್ರೇಕ್ಷಕರು ನನ್ನಲ್ಲಿ ಮನೆಯ ಹುಡುಗನನ್ನು ಕಾಣಬಹುದು, ಒಬ್ಬ ಯಶಸ್ವಿ ಉದ್ಯಮಿಯನ್ನು ಕಾಣಬಹುದು. ಇಲ್ಲಿ ನಟನೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಜೊತೆಯಲ್ಲಿ ಪರಂವಃ ಸ್ಟುಡಿಯೋಸ್‌ನಿಂದ ನಿರ್ಮಾಣವಾಗುತ್ತಿರುವ ಸಿನಿಮಾ ಆಗಿರುವ ಕಾರಣ ಜವಾಬ್ದಾರಿ ಹೆಚ್ಚಿದೆ. ಪರಂವಃ ಎನ್ನುವುದು ದೊಡ್ಡ ಬ್ರ್ಯಾಂಡ್‌. ಇದರಡಿ ಬಂದಂತಹ ಎಲ್ಲ ಸಿನಿಮಾಗಳೂ ದೇಶದಾದ್ಯಂತ ಜನರನ್ನು ಸೆಳೆದಿವೆ. ಇವರ ಬ್ಯಾನರ್‌ನಡಿ ಬಂದ ಸಿನಿಮಾಗಳ ಕಥೆ, ಸಂಗೀತ, ಆ ಸಿನಿಮ್ಯಾಟಿಕ್‌ ಅನುಭವವೇ ಒಂದು ಮಜಾ. ಜನರು ಬೇಗ ಈ ಸಿನಿಮಾಗಳಿಗೆ ಕನೆಕ್ಟ್‌ ಆಗುತ್ತಿದ್ದಾರೆ. ಜೀವನಕ್ಕೆ ತುಂಬಾ ಹತ್ತಿರವಾದ ಕಥೆಗಳು ಇಲ್ಲಿವೆ. ಇದೇ ತಂಡದ, ನಿರ್ದೇಶಕರಾದ ಚಂದ್ರಜಿತ್‌ ಬೆಳ್ಳಿಯಪ್ಪ ಅವರು ಕಥೆಯಲ್ಲಿ ತುಂಬಾ ಸ್ಟ್ರಾಂಗ್‌. ಸಂಭಾಷಣೆಯಲ್ಲಿ ಬಹಳ ಹಿಡಿತ ಸಾಧಿಸಿದ್ದಾರೆ. ಇವರ ಬರವಣಿಗೆಯಲ್ಲಿ ಮಣಿರತ್ನಂ ಅವರ ಶೈಲಿಯಿದೆ. ಇಂಥ ಕಥೆಗೆ ಪರಂವಃ ಖಂಡಿತವಾಗಿಯೂ ನ್ಯಾಯ ದೊರಕಿಸಿಕೊಡುತ್ತದೆ. ಹೀಗಾಗಿ, ಈ ಸಿನಿಮಾಗೆ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಪರಂವಃಗೆ ಕೃತಜ್ಞತೆ.

ಹೊಸ ಚಿತ್ರಕ್ಕೆ ತಯಾರಿ ಹೇಗಿದೆ?

‘ಪಂಚತಂತ್ರ’ ನನ್ನ ಸಿನಿ ಜೀವನಕ್ಕೆ ತಿರುವು ನೀಡಿದ ಸಿನಿಮಾ. ಇಲ್ಲಿ 19–20 ವಯಸ್ಸಿನ ಹುಡುಗನಾಗಿ ಕಾಣಿಸಿಕೊಳ್ಳಲು 12 ಕೆ.ಜಿ ತೂಕ ಇಳಿಸಿಕೊಂಡಿದ್ದೆ. ಹೊಸ ಚಿತ್ರಕ್ಕೂ ದೈಹಿಕವಾಗಿ ನಾನು ಬಹಳಷ್ಟು ಬದಲಾವಣೆಗೆ ಒಳಗಾಗಬೇಕು. ಇದಕ್ಕೂ ಬಹಳ ಸಮಯ ಹಿಡಿಯಲಿದೆ. ಸದ್ಯಕ್ಕೆ ಈಗ ದೈಹಿಕವಾಗಿ ಹೇಗೆ ಇದ್ದೇನೋ ಅದೇ ಶೇಡ್‌ನ ಚಿತ್ರೀಕರಣ ಮೊದಲು ನಡೆಯಲಿದೆ. ಮೂರು ಶೇಡ್‌ಗಳನ್ನು ನಿಭಾಯಿಸುವ ದೊಡ್ಡ ಸವಾಲು ನನ್ನ ಮುಂದಿದೆ. ಇದಕ್ಕೆ ಪೂರಕವಾಗಿ ಹೋಂವರ್ಕ್‌ ಮಾಡಬೇಕು. ಸದ್ಯ ನಾಯಕಿಯರು, ಕಲಾವಿದರೊಂದಿಗೆ ಹೊಂದಾಣಿಕೆ ಬರಲು ಪೂರ್ವತಯಾರಿ ಆರಂಭವಾಗಿದೆ. ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಸಿನಿಮಾವಾದರೂ ಇಲ್ಲಿಯೂ ಸಾಹಸ ದೃಶ್ಯಗಳಿವೆ. ಸೆಪ್ಟೆಂಬರ್‌ನಿಂದ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ.

ಕ್ರಿಕೆಟ್‌ ಫೀಲ್ಡ್‌ಗೆ ಯಾವಾಗ ಇಳಿಯೋದು?

ಕ್ರಿಕೆಟ್‌ ಚಾಂಪಿಯನ್‌ ಆಗಿ ಚಿತ್ರದಲ್ಲಿ ನನ್ನ ಪಾತ್ರವಿದೆ. ಹೀಗಾಗಿ ತರಬೇತಿ ಅಗತ್ಯ. ನಾನು ಹಾರ್ಡ್‌ಬಾಲ್‌ ಕ್ರಿಕೆಟ್‌ ಆಟಗಾರ. ಜಿಲ್ಲಾ ಮಟ್ಟದಲ್ಲಿ ಆಡಿ ರಾಜ್ಯ ಮಟ್ಟಕ್ಕೂ ಆಯ್ಕೆ ಆಗಿದ್ದೆ. ಆದರೆ ಕಾರಣಾಂತರಗಳಿಂದ ಇದನ್ನು ಮುಂದುವರಿಸಲು ಆಗಲಿಲ್ಲ. ಇದೀಗ, ಕ್ರಿಕೆಟ್‌ ಆಡಿ ಬಹಳ ವರ್ಷಗಳೇ ಕಳೆದಿವೆ. ಹೀಗಾಗಿ ತರಬೇತಿ ಅಗತ್ಯ. ಈ ನಡುವೆ ‘ಜೆರ್ಸಿ’ ಸಿನಿಮಾವನ್ನೂ ನೋಡಿದ್ದೇನೆ. ಅದೇ ರೀತಿ ಕ್ರಿಕೆಟ್‌ ತರಬೇತಿ ಪಡೆಯಬೇಕು.

ಒಪ್ಪಿಕೊಂಡಿರುವ ಪ್ರಾಜೆಕ್ಟ್‌ ಹಾಗೂ ಹೊಸ ಪ್ರಾಜೆಕ್ಟ್‌ಗಳ ಮಾಹಿತಿ...

ಎಂ. ಸುಭಾಷ್‌ಚಂದ್ರ ನಿರ್ದೇಶನದ ‘ಲೆಗಸಿ’ ಸಂಪೂರ್ಣ ಆ್ಯಕ್ಷನ್‌ ಜಾನರ್‌ನ ಸಿನಿಮಾ. ಇದು ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಚಿತ್ರದ ಮೊದಲ ಭಾಗದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. 2023ರ ಆರಂಭದಲ್ಲಿ ಇದು ತೆರೆಕಾಣಲಿದೆ. ನಿರ್ದೇಶಕ ರವೀಂದ್ರನಾಥ್‌ ಅವರ ‘ಪುಷ್ಪಕ ವಿಮಾನ’ ಸಿನಿಮಾಗೂ ನಾನು ಕಾಲ್‌ಶೀಟ್‌ ನೀಡಿದ್ದೇನೆ. ಅದೂ ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಇದೂ ಕೂಡಾ ಆ್ಯಕ್ಷನ್‌ ಜಾನರ್‌ನ ಸಿನಿಮಾ.

ನನ್ನ ಸ್ಫೂರ್ತಿ ಮಣಿರತ್ನಂ: ಚಂದ್ರಜಿತ್‌

‘ಟೆಕ್ಕಿ ಆಗಿದ್ದವರ ಕೈ ಲೇಖನಿ ಏಕೆ ಹಿಡಿಯಿತು’ ಎನ್ನುವ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ, ‘ಫಿಲ್ಮ್‌ಮೇಕರ್‌ ಆಗುವ ಕನಸೇನೂ ಹೊಸದಲ್ಲ. ಬರೆಯುವ ಹವ್ಯಾಸವಿದೆ. ಎಂಜಿನಿಯರಿಂಗ್‌ ಸೇರಿದ ಬಳಿಕ ಕಿರುಚಿತ್ರಗಳನ್ನು ಮಾಡತೊಡಗಿದೆ. ಇಂಗ್ಲಿಷ್‌ನಲ್ಲಿ ಬ್ಲಾಗ್‌ ಬರೆಯುವ ಗೀಳು ಇತ್ತು. ಈಗ ನಿರ್ದೇಶನಕ್ಕೆ ಆಯ್ದುಕೊಂಡಿರುವ ಕಥೆಯನ್ನು ಬ್ಲಾಗ್‌ನಲ್ಲಿ ಬರೆದಿದ್ದೆ. ಅದನ್ನು 2015ರಲ್ಲಿ ರಕ್ಷಿತ್‌ ಶೆಟ್ಟಿ ಅವರಿಗೂ ಕಳುಹಿಸಿದ್ದೆ. ನಂತರದಲ್ಲಿ ಟೆಕ್ಕಿ ಜೀವನ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟೆ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ಕೆಲಸ ಮಾಡಿದ ಬಳಿಕ ನಿರ್ದೇಶಕನಾಗಬೇಕು ಎನ್ನುವ ದೃಢ ನಿರ್ಧಾರ ಮಾಡಿದೆ. ಬ್ಲಾಗ್‌ನಲ್ಲಿ ಬರೆದ ಕಥೆಗೇ ಸಿನಿಮಾಕಥೆಯ ಮರುಸ್ವರೂಪ ನೀಡಿದೆ. ಮಣಿರತ್ನಂ ಅವರ ಸಿನಿಮಾಗಳು ನನಗೆ ಬಹಳ ಇಷ್ಟ. ಇವರ ಪ್ರೇಮಕಥೆಗಳಿಗೆ ಸಾಟಿಯಿಲ್ಲ. ಚಿತ್ರದಲ್ಲಿ ಅಂಕಿತಾ ಅಮರ್‌ ಅವರು ಮೊದಲ ನಾಯಕಿ. ಮತ್ತೊಬ್ಬರು ಚಿತ್ರತಂಡ ಸೇರಿಕೊಳ್ಳಲಿದ್ದು, ಅದನ್ನು ಮುಂದಿನ ದಿನಗಳಲ್ಲಿ ಘೋಷಿಸುತ್ತೇವೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು