ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ನಗ ಸಿದ್ಧಪಡಿಸಿದ ಫ್ರೆಂಚ್ ಬಿರಿಯಾನಿ

Last Updated 25 ಜೂನ್ 2020, 8:45 IST
ಅಕ್ಷರ ಗಾತ್ರ

ಪನ್ನಗ ಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಸಿನಿಮಾ ಹೆಸರಿನಿಂದಲೇ ಸಿನಿಮಾ ಪ್ರಿಯರ ಗಮನ ಸೆಳೆದಿತ್ತು. ಇದರ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡಿದವರು ಪುನೀತ್ ರಾಜ್‌ಕುಮಾರ್. ಇದು ಕೂಡ ಈ ಸಿನಿಮಾ ಬಗ್ಗೆ ಕುತೂಹಲ ಗರಿಗೆದರಲು ಕಾರಣವಾಗಿತ್ತು. ಚಿತ್ರಮಂದಿರಗಳ ಮೂಲಕ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈಗ, ಅಮೆಜಾನ್‌ ಪ್ರೈಮ್‌ ಮೂಲಕ ತೆರೆಗೆ ಬರಲಿದೆ.

‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದ ಪನ್ನಗ ಭರಣ ಅವರು ತಮ್ಮ ಸಿನಿಮಾ ಕುರಿತು ಒಂದಿಷ್ಟು ವಿವರ ನೀಡಿದ್ದಾರೆ. ಇದರಲ್ಲಿ ನಾಯಕ ನಟನಾಗಿ ಡ್ಯಾನಿಶ್ ಸೇಟ್ ಅಭಿನಯಿಸಿದ್ದಾರೆ. ಡ್ಯಾನಿಶ್ ಅವರಿಗೆ ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್‌’ ನಂತರ ನಾಯಕನಾಗಿ ಇದು ಎರಡನೆಯ ಸಿನಿಮಾ.

ಡ್ಯಾನಿಶ್ ಸೇಟ್ ಇದ್ದಾರೆ ಎಂದಾದರೆ ಅದು ಹಾಸ್ಯಮಯ ಸಿನಿಮಾ ಎಂಬುದರಲ್ಲಿ ಅನುಮಾನ ಇರುವುದಿಲ್ಲ. ‘ಈ ಚಿತ್ರದಲ್ಲಿ ಇರುವುದು ಹಾಸ್ಯಮಯ ಕಥೆ. ಫ್ರೆಂಚ್ ನಾಗರಿಕನೊಬ್ಬ ಬೆಂಗಳೂರಿಗೆ ಮೊದಲ ಬಾರಿಗೆ ಬರುತ್ತಾನೆ. ಆತ ಶಿವಾಜಿನಗರದ ಆಟೊ ಚಾಲಕನೊಬ್ಬನನ್ನು ಭೇಟಿ ಆಗುತ್ತಾನೆ. ಆ ಆಟೊ ಚಾಲಕ ಮುಸ್ಲಿಂ. ನಂತರದ ಮೂರು ದಿನಗಳಲ್ಲಿ ಏನಾಗುತ್ತದೆ ಎಂಬುದೇ ಸಿನಿಮಾ ಕಥೆಯ ಹೂರಣ’ ಎಂದು ತಿಳಿಸಿದರು ಪನ್ನಗ ಭರಣ.

ಇದು ಕಥೆಯ ಮುಖ್ಯ ಹಳಿ. ಇದಕ್ಕೆ ಸಮಾನಾಂತರದಲ್ಲಿ ಇನ್ನೂ ಒಂದೆರಡು ಕಥೆಗಳು ಸಾಗುತ್ತಿರುತ್ತವೆಯಂತೆ. ಈ ಚಿತ್ರದಲ್ಲಿ ರಂಗಾಯಣ ರಘು ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೈಕಲ್ ಮಧು ಅವರು ಡಾನ್‌ ಆಗಿ ನಟಿಸಿದ್ದಾರೆ. ಫ್ರೆಂಚ್‌ ಪ್ರಜೆಯ ಪಾತ್ರದಲ್ಲಿ ಸ್ಯಾಲ್‌ ಯೂಸಫ್ ನಟಿಸಿದ್ದಾರೆ. ಅವರು ವಾಸ್ತವದಲ್ಲಿ ಬ್ರಿಟಿಷ್ ಪ್ರಜೆ. ಅಂದಹಾಗೆ, ಚಿತ್ರತಂಡವು ಸ್ಯಾಲ್ ಅವರ ಬಾಯಿಂದ ಕನ್ನಡದ ಪದಗಳನ್ನು ಆಡಿಸುವ ಪ್ರಯತ್ನ ಮಾಡಿಲ್ಲ!

‘ನಮ್ಮ ಸಿನಿಮಾದಲ್ಲಿನ ಮುಸ್ಲಿಂ ಪಾತ್ರವು ತನ್ನ ಮನೆಯಲ್ಲಿ ಉರ್ದು ಭಾಷೆಯಲ್ಲಿ ಮಾತನಾಡುತ್ತದೆ. ಮನೆಯ ಹೊರಗಡೆ ತನ್ನದೇ ಆದ ಶೈಲಿಯ ಕನ್ನಡದಲ್ಲಿ ಮಾತನಾಡುತ್ತದೆ. ಬೆಂಗಳೂರಿಗೆ ಬರುವ ಫ್ರೆಂಚ್ ನಾಗರಿಕ, ಅರ್ಧ ಇಂಗ್ಲಿಷ್– ಅರ್ಧ ಫ್ರೆಂಚ್ ಭಾಷೆಯಲ್ಲಿ ಮಾತಾಡುತ್ತಾನೆ. ಬೆಂಗಳೂರಿನಲ್ಲಿ ಒಂದೊಂದು ಏರಿಯಾದಲ್ಲಿ ಒಂದೊಂದು ಭಾಷೆ ಕೇಳಿಸುತ್ತದೆ ಎಂಬ ಮಾತಿದೆ. ಆ ಏರಿಯಾದವರು ಬೇರೆಯವರ ಜೊತೆ ಕನ್ನಡದಲ್ಲಿ ಮಾತನಾಡಿದರೂ ಅವರೆಲ್ಲರಿಗೂ ಅವರದ್ದೇ ಆದ ಮಾತಿನ ಶೈಲಿ ಇರುತ್ತದೆ. ಇವನ್ನೆಲ್ಲ ನಾವು ಸಾಧ್ಯವಾದಷ್ಟರಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿ ಚಿತ್ರೀಕರಿಸಿದ್ದೇವೆ’ ಎಂದು ಚಿತ್ರದ ಕಪ್ತಾನ ತಿಳಿಸಿದರು.

ಈ ಚಿತ್ರವನ್ನು ಸಿನಿಮಾ ಮಂದಿರಗಳ ಮೂಲಕವೇ ತೆರೆಗೆ ತರುವ ಉದ್ದೇಶ ಈ ಚಿತ್ರತಂಡಕ್ಕೆ ಇತ್ತು. ಆದರೆ, ಬದಲಾದ ಸನ್ನಿವೇಶವು ಒಟಿಟಿ ಕಡೆ ಮುಖ ಮಾಡುವಂತೆ ಮಾಡಿತು. ಇದು ಜುಲೈ 24ಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಒಟಿಟಿ ಬಗ್ಗೆ: ‘ಸಿನಿಮಾ ಸಂಸ್ಕೃತಿ ಯಾವತ್ತೂ ಅಳಿಯದು. ಸಿನಿಮಾ ಮಂದಿರಗಳ ಬಾಗಿಲು ತೆರೆದಿದ್ದರೆ ನಾವು ಅಲ್ಲೇ ಬಿಡುಗಡೆ ಮಾಡುತ್ತಿದ್ದೆವು. ಒಟಿಟಿ ಮೂಲಕ ಮಾತ್ರವೇ ಸಿನಿಮಾ ಬಿಡುಗಡೆ ಆಗಬೇಕು ಎಂದಿದ್ದರೆ ಅಂತಹ ಸಿನಿಮಾ ವಿನ್ಯಾಸ ಬೇರೆಯ ರೀತಿಯಲ್ಲಿ ಇರಬೇಕಾಗುತ್ತದೆ. ಒಟಿಟಿ ಅನ್ನೋದೇ ಬೇರೆ ಪ್ರಕಾರ. ಚಿತ್ರಮಂದಿರಕ್ಕೆ ಸೂಕ್ತವಾಗಿದ್ದು ಒಟಿಟಿಗೆ ಸೂಕ್ತ ಆಗುತ್ತದೆ ಎನ್ನಲಾಗದು’ ಎಂದರು.

‘ಅಮೆಜಾನ್ ಪ್ರೈಮ್‌ ಸೇರಿದಂತೆ ಹಲವು ಒಟಿಟಿ ವೇದಿಕೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಚಂದಾದಾರರು ಇದ್ದಾರೆ. ಒಟಿಟಿ ಮೂಲಕ ನಮ್ಮ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತದೆ. ಆದರೆ, ಚಿತ್ರವನ್ನು ಸಿನಿಮಾ ಮಂದಿರಗಳ ಮೂಲಕ ಹೊರ ದೇಶಗಳಲ್ಲಿ ಬಿಡುಗಡೆ ಮಾಡುವುದು ಬಹಳ ಕಷ್ಟದ ಕೆಲಸ. ಸಿನಿಮಾ ಮಂದಿರಗಳ ಮೂಲಕ ಚಿತ್ರವನ್ನು ತೆರೆಗೆ ತಂದರೆ ಹೆಚ್ಚು ಹಣ ಸಂಪಾದಿಸುವ ಸಾಧ್ಯತೆ ಇದೆ’ ಎಂದು ಈ ಎರಡು ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುವಲ್ಲಿ ತಾವು ಕಂಡುಕೊಂಡ ವ್ಯತ್ಯಾಸವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT