ಸೋಮವಾರ, ನವೆಂಬರ್ 18, 2019
23 °C

ಪವಿತ್ರ ಕೋಟ್ಯಾನ್‌ ಆಲ್ಬಂ ಸಾಂಗ್‌ನಿಂದ ಸಿನಿಮಾಗೆ ಲಗ್ಗೆ

Published:
Updated:

ಬಿಡುವಿನ ಸಮಯದಲ್ಲಿ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದೇ ನಟಿ ಪವಿತ್ರ ಕೋಟ್ಯಾನ್‌ ಅವರಿಗೆ ವರವಾಯಿತು.

‘ಛೋಟಾ ಸಾ ಪ್ಯಾರ್‌’ ಎಂಬ ವಿಡಿಯೊ ಆಲ್ಬಂ ಸಾಂಗ್‌ನಲ್ಲಿ ಅವರ ನಟನೆಯನ್ನು ಮೆಚ್ಚಿಕೊಂಡ ಗೆಳೆಯನ ಒತ್ತಾಯದಿಂದ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟವರು ಈ ನಟಿ. ‘ಒಮ್ಮೆ ಪ್ರಯತ್ನಿಸಬಾರದೇಕೆ?’ ಎಂದು ತುಳು ಚಿತ್ರರಂಗಕ್ಕೆ ಕಾಲಿಟ್ಟ ಈ ಬೆಡಗಿಯನ್ನು ಸಿನಿಮಾ ಜಗತ್ತು ತೆಕ್ಕೆ ತೆರೆದು ಸ್ವಾಗತಿಸಿತು. ಈಗ ತುಳು, ಕನ್ನಡ ಹಾಗೂ ತಮಿಳು ಚಿತ್ರಗಳು ಸೇರಿ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

‘ಕಂಪನಿಯೊಂದರಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ನನಗೆ ಸಿನಿಮಾದಲ್ಲಿ ನಟಿಸುವ ಮನಸ್ಸೇನೂ ಇರಲಿಲ್ಲ. ಸ್ನೇಹಿತರೊಬ್ಬರ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದು ಬಿಟ್ಟರೆ ನಟನೆಯ ಗಂಧಗಾಳಿಯೂ ಇರಲಿಲ್ಲ.  ಹಳೆ ಹಿಂದಿ ಹಾಡುಗಳನ್ನು ಮಿಕ್ಸ್‌ ಮಾಡಿ ಆಲ್ಬಂ ಮಾಡಿದ್ದರು. ಇದರಲ್ಲಿ ನನ್ನ ನಟನೆಯನ್ನು ಮೆಚ್ಚಿಕೊಂಡ ಗೆಳೆಯ ರಾಜೇಶ್‌ ನಾಯಕ್‌  ತುಳು ಚಿತ್ರ ‘ಮಿಸ್ಟರ್‌. ಬೋರಿ’ ಸಿನಿಮಾದ ನಿರ್ದೇಶಕರಿಗೆ ನನ್ನನ್ನು ಪರಿಚಯಿಸಿದರು. ಅದರಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು.  ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಕನ್ನಡ ಸಿನಿಮಾವೊಂದರಲ್ಲಿ ಅವಕಾಶ ಲಭಿಸಿತು. ಆ ಸಿನಿಮಾ, ಚಿತ್ರೀಕರಣದ ಹಂತದಲ್ಲಿದ್ದು, ಅದಕ್ಕೆ ಇನ್ನು ಹೆಸರಿಡಬೇಕಷ್ಟೇ’ ಎಂದು ಸಿನಿಲೋಕಕ್ಕೆ ಪ್ರವೇಶಿಸಿದ್ದನ್ನು ವಿವರಿಸುತ್ತಾರೆ. 

ಪವಿತ್ರ ಈಗಾಗಲೇ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಾಗಿದೆ. ಅಲ್ಲಿ ‘ಅಡಿಯಾಳಂ’ ಚಿತ್ರದಲ್ಲಿ ನಟಿಸಿದ್ದಾರೆ. ಮತ್ತೆರಡು ತಮಿಳು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ. ‘ಉತ್ತಮ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬುದು ನನ್ನಿಚ್ಛೆ. ಸಾಂಪ್ರದಾಯಿಕ, ಆಧುನಿಕ ಹೀಗೆ ಯಾವ ಪಾತ್ರವಾದರೂ ಸೈ. ಆದರೆ ಪಾತ್ರ ಸವಾಲಿನದ್ದಾಗಿರಬೇಕು, ಅಭಿನಯಕ್ಕೆ ಅವಕಾಶ ಇರಬೇಕು’ ಎಂದು ಹೇಳುತ್ತಾರೆ. 

ಪವಿತ್ರ ಕೋಟ್ಯಾನ್‌ಗೆ ಮೊದಲ ಸಿನಿಮಾದಲ್ಲಿಯೇ ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಿದ ತೃಪ್ತಿ ಇದೆ. ‘ಮಿಸ್ಟರ್‌. ಬೋರಿ’ಯಲ್ಲಿ ಕುಡುಕ ಗಂಡನಿಂದ ಕಷ್ಟ ಅನುಭವಿಸುವ, ದಿಟ್ಟವಾಗಿ ಜೀವನ ಎದುರಿಸುವ ಮಹಿಳೆ ಪಾತ್ರ.  ಅದರಲ್ಲಿ ಅವರು ಬೇರೆ ಬೇರೆ ವಯಸ್ಸಿನ ಮಹಿಳೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರ.  ಮತ್ತಷ್ಟು ಪ್ರಯೋಗಾತ್ಮಕ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. 

ಉದ್ಯೋಗ ತೊರೆದು ಸಿನಿಮಾಲೋಕದಲ್ಲೇ ನೆಲೆಯೂರುವ ನಿರ್ಧಾರ ಮಾಡಿದ್ದಾರೆ ಪವಿತ್ರ. ಕಲಾವಿದನಿಗೆ ಪ್ರತಿಭೆ ಮುಖ್ಯ ಎಂದು ಹೇಳುವ ಅವರು, ನಟನೆಯಲ್ಲಿ ತಾನು ಇನ್ನೂ ಪಳಗಬೇಕಿದೆ ಎಂದು ವಿನಯದಿಂದ ನುಡಿಯುತ್ತಾರೆ. ‘ಹಿರಿತೆರೆ, ಕಿರುತೆರೆ ಎರಡೂ ನನಗಿಷ್ಟ. ಧಾರಾವಾಹಿಗಳಿಂದಲೂ ಕೆಲವು ಅವಕಾಶಗಳು ಬಂದಿದ್ದವು. ಆದರೆ ಸದ್ಯ ಸಿನಿಮಾ ಕಡೆಗೆ ಹೆಚ್ಚು ಗಮನ. ಕನ್ನಡ, ತಮಿಳಿನಲ್ಲಿ 2–3 ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ತಮಿಳಿನಿಂದ ಮತ್ತೆರಡು ಸಿನಿಮಾಗಳ ಅವಕಾಶಗಳು ಬಂದಿವೆ.  ಹಾಗಾಗಿ ಧಾರಾವಾಹಿಗಳನ್ನು ಒಪ್ಪಿಕೊಂಡಿಲ್ಲ. ಧಾರಾವಾಹಿಯಲ್ಲಿ ಉತ್ತಮ ಪಾತ್ರ ಸಿಕ್ಕರೆ, ಡೇಟ್ಸ್‌ ಹೊಂದಿಕೆಯಾದರೆ ಖಂಡಿತ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತೇನೆ ಎನ್ನುತ್ತಾರೆ.

ನಟನೆ ಜೊತೆಜೊತೆಗೆ ಮಾಡೆಲಿಂಗ್‌ನಲ್ಲೂ ಸಕ್ರಿಯರಾಗಿದ್ದಾರೆ ಪವಿತ್ರ. 

ಪ್ರತಿಕ್ರಿಯಿಸಿ (+)