ಬುಧವಾರ, ನವೆಂಬರ್ 20, 2019
20 °C

ಪವನ್‌ ಕಲ್ಯಾಣ್‌ ಟಾಲಿವುಡ್‌ಗೆ ವಾಪಸ್‌?

Published:
Updated:
Prajavani

ತ್ರಿವಿಕ್ರಮ್ ಶ್ರೀನಿವಾಸ್‌ ನಿರ್ದೇಶನದ ‘ಅಜ್ಞಾತವಾಸಿ’ ಸಿನಿಮಾವು ಪವನ್‌ ಕಲ್ಯಾಣ್‌ ಅವರಿಗೆ ನಿರೀಕ್ಷಿಸಿದಂತಹ ಗೆಲುವು ತಂದುಕೊಡಲಿಲ್ಲ. ಈ ಚಿತ್ರದ ಬಳಿಕ ಪವನ್‌ ಕಲ್ಯಾಣ್‌ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ, ರಾಜಕೀಯದ ಕಡೆಗೆ ಪೂರ್ಣ ಗಮನ ಕೊಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಟಾಲಿವುಡ್‌ಗೆ ವಾಪಸ್ಸಾಗುವ ಮಾತುಗಳು ಕೇಳಿಬರುತ್ತಿವೆ.

ಈಚೆಗೆ ನಿರ್ದೇಶಕ ಕೃಶ್‌ ಅವರು ಪವನ್‌ ಕಲ್ಯಾಣ್‌ ಅವರನ್ನು ಭೇಟಿ ಮಾಡಿ ಹೊಸ ಚಿತ್ರದ ಕತೆಯೊಂದನ್ನು ಎಂಬ ಸುದ್ದಿ ಭಾರಿ ವೈರಲ್‌ ಆಗಿತ್ತು. ಈಗ ನಿರ್ದೇಶಕ ಹರೀಶ್‌ ಶಂಕರ್ ಅವರ ಚಿತ್ರದಲ್ಲಿ ಈ ನಟ ನಟಿಸಲಿದ್ದಾರೆ. ಪವನ್‌ ಕಲ್ಯಾಣ್‌ ಅವರಿಗೆ ಸಾಮಾಜಿಕ ಸಂದೇಶ ಇರುವ ಭಾವನಾತ್ಮಕ ಸಿನಿಮಾದಲ್ಲಿ ನಟಿಸಲು ಇಷ್ಟವಿತ್ತು. ಹರೀಶ್‌ ಶಂಕರ್‌ ಅವರು ಚಿತ್ರಕತೆ ವಿವರಿಸಿದ್ದು, ಪವನ್‌ ಅವರಿಗೆ ಕತೆ ಇಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಪವನ್‌ ಕಲ್ಯಾಣ್‌ ಹಾಗೂ ಹರೀಶ್‌ ಶಂಕರ್‌ ಅವರು ಈ ಹಿಂದೆಯೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹರೀಶ್‌ ನಿರ್ದೇಶನದ ‘ಗಬ್ಬರ್‌ ಸಿಂಗ್‌’ ಸಿನಿಮಾವು ಪವನ್‌ ಕಲ್ಯಾಣ್‌ ನಟನಾ ಜೀವನಕ್ಕೆ ಭಾರಿ ಬ್ರೇಕ್‌ ನೀಡಿದ ಚಿತ್ರ. ಒಂದು ವೇಳೆ ಈಗ ಹೊಸ ಸಿನಿಮಾವನ್ನು ಈ ಜೋಡಿ ಮಾಡಿದರೆ ಮತ್ತೊಂದು ಬಿಗ್‌ ಹಿಟ್‌ ಸಿಗಲಿದೆ ಎಂಬ ನಿರೀಕ್ಷೆ ಇದೆ. ಹಾಗೆಯೇ ಕೃಶ್‌ ಅವರ ಚಿತ್ರಕತೆಯೂ ಪವನ್‌ ಕಲ್ಯಾಣ್‌ಗೆ ಇಷ್ಟವಾಗಿದೆ. ಎಲ್ಲಾ ವಯಸ್ಸಿನವರು ನೋಡುವಂತಹ, ಸಾಮಾಜಿಕ ಸಂದೇಶವಿರುವ ಚಿತ್ರದ ಮೂಲಕ ಟಾಲಿವುಡ್‌ಗೆ ವಾಪಸ್ಸಾಗಲು ಪವನ್‌ ಯೋಚಿಸುತ್ತಿದ್ದಾರಂತೆ. ಅವರು ಸಿನಿಮಾ ಹಾಗೂ ರಾಜಕೀಯವನ್ನು ಸಮತೋಲನ ಮಾಡಿಕೊಂಡು ಮುಂದುವರಿಯಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯಕ್ಕೆ ರಾಜಕೀಯದಿಂದ ದೂರವಾಗುವ ಯಾವುದೇ ಯೋಜನೆಗಳು ಅವರಿಗಿಲ್ಲ. ರಾಜಕೀಯದಲ್ಲಿ ಇದ್ದು, ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುವ ಉತ್ಸಾಹ ಅವರದು.

ಪ್ರತಿಕ್ರಿಯಿಸಿ (+)