ಮಂಗಳವಾರ, ಜನವರಿ 18, 2022
23 °C
ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ದೃಶ್ಯಕ್ಕೆ ಆಕ್ಷೇಪ

ಗರುಡ ಗಮನ ವೃಷಭ ವಾಹನ ದೃಶ್ಯದ ಹಿನ್ನೆಲೆಯಲ್ಲಿ ಮಹದೇಶ್ವರನ ಹಾಡು ಬಳಕೆಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಇತ್ತೀಚೆಗೆ ತೆರಕಂಡಿರುವ, ರಾಜ್‌ ಬಿ ಶೆಟ್ಟಿ ಅವರು ನಿರ್ದೇಶಿಸಿ ನಟಿಸಿರುವ ಗರುಡ ಗಮನ, ವೃಷಭ ವಾಹನ ಚಿತ್ರದಲ್ಲಿ ನಟ ರಾಜ್‌ ಬಿ.ಶೆಟ್ಟಿ ಅವರು (ಶಿವ) ಕೊಲೆ ಮಾಡಿ ಹುಲಿ ನೃತ್ಯ ಮಾಡುವ ದೃಶ್ಯದ ಹಿನ್ನಲೆಯಲ್ಲಿ ಸೂಜುಗಾದ ಸೂಜಿ ಮಲ್ಲಿಗೆ.. ಎಂಬ ಮಲೆ ಮಹದೇಶ್ವರಸ್ವಾಮಿಯ ಜಾನಪದ ಹಾಡನ್ನು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. 

ಮಹದೇಶ್ವರ ಬೆಟ್ಟದ ವ್ಯಾಪ್ತಿಯವರೇ ಆದ ಯುವ ಸಾಹಿತಿ ಸ್ವಾಮಿ ಪೊನ್ನಾಚಿ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಓದಿ: 

‘ಗರುಡ ಗಮನ, ವೃಷಭ ವಾಹನ ಚಿತ್ರ ಯಶಸ್ವಿಯಾಗಲಿ.. ಆದರೆ, ಕೊಲೆ ಮಾಡಿ ಕುಣಿಯೋ ದೃಶ್ಯವೊಂದರಲ್ಲಿ ಆ ದೃಶ್ಯಕ್ಕೆ ಸಂಬಂಧವೇ ಇರದ, ಅಸಹಜವಾಗಿ ಮಹದೇಶ್ವರನ ಹಾಡು ಸೂಜುಗಾದ ಸೂಜಿ ಮಲ್ಲಿಗೆಯನ್ನು ಬಳಸಿಕೊಳ್ಳಲಾಗಿದೆ. ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೇ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ? ಜಾನಪದ ಅಂದ ತಕ್ಷಣ ಏನಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಯಾರೂ ಕೇಳುವಂತಿಲ್ಲವೇ? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಸಣ್ಣ ಪ್ರಜ್ಞೆಯು ಇರಲಿಲ್ಲವೇ? ಮಾರ್ಕೆಟ್ ಬೇರೆ ರೀತಿಯಲ್ಲೇ ಮಾಡಿಕೊಳ್ಳಬಹುದು. ಹೀಗಲ್ಲ. ಚಿತ್ರ ತಂಡ ಗಮನಿಸಬೇಕು’ ಎಂದು ಅವರು ಬರೆದಿದ್ದಾರೆ. 

ಬರಹಗಾರ್ತಿ ಕುಸುಮಾ ಆಯರಹಳ್ಳಿ ಕೂಡ ತಮ್ಮ ಫೇಸ್‌ಬುಕ್‌ ಪುಟದಲ್ಲಿ, ‘ಕೊಂದು ಕುಣಿಯುವುದಕ್ಕೂ ಮಾದಪ್ಪನ ಸೂಜು ಮಲ್ಲಿಗೆಗೂ ಏನು ಸಂಬಂಧ? ಎಂಬ ಪ್ರಶ್ನೆಗೆ ಉತ್ತರ ಸಿಕ್ತಾ ಇಲ್ವ’ ಎಂದು ಪ್ರಶ್ನಿಸಿದ್ದಾರೆ.

ಇಬ್ಬರ ಪೋಸ್ಟ್‌ಗಳಿಗೂ ಪ್ರತಿಕ್ರಿಯಿಸಿರುವ ಹಲವು ಜಾಲತಾಣ ಬಳಕೆದಾರರು, ಆಗಿರುವ ತಪ್ಪನ್ನು ಚಿತ್ರತಂಡ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು