ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಹೀದಾ ರೆಹಮಾನ್: ಶಾಂತಮುಖದ ಪ್ರತಿಭೆಗೆ ಫಾಲ್ಕೆ

Published 30 ಸೆಪ್ಟೆಂಬರ್ 2023, 23:32 IST
Last Updated 30 ಸೆಪ್ಟೆಂಬರ್ 2023, 23:32 IST
ಅಕ್ಷರ ಗಾತ್ರ

ಎನ್ವಿ

ತಮಿಳುನಾಡಿನ ಚೆಂಗಲ್‌ಪಟ್ಟು. ಅಲ್ಲಿ ಭರತನಾಟ್ಯ ಕಲಿಕೆಗೆ ಮುಂದಾಗುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು. ಅಂಥವರ ಸಾಲಿನಲ್ಲಿ ವಹೀದಾ ರೆಹಮಾನ್ ಹೆಸರೂ ಇತ್ತು. ಮುಸ್ಲಿಂ ಹುಡುಗಿ ಭರತನಾಟ್ಯ ಕಲಿಯುವುದನ್ನು ಕಂಡು ಅರಳಿದ ಕಣ್ಣುಗಳೇನೂ ಕಡಿಮೆ ಇರಲಿಲ್ಲ. ಈ ನೃತ್ಯವೇ ಮುಂದೆ ವಹೀದಾ ಅವರನ್ನು ಭಾರತದ ದೊಡ್ಡ ನಟಿಯಾಗಿಸಿದ್ದು ನೆನಪಿನಲ್ಲಿ ಇಡಬೇಕಾದ ಇತಿಹಾಸ. ಈಗ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದುಬಂದಿದೆ.

ವಹೀದಾ ಅವರ ತಂದೆ ಮೊಹಮ್ಮದ್ ಅಬ್ದುರ್ ರೆಹಮಾನ್ ಡಿಸ್ಟ್ರಿಕ್ಟ್‌ ಕಮಿಷನರ್ ಆಗಿ ಕೆಲಸ ಮಾಡಿದವರು. ತಮಿಳುನಾಡಿನಿಂದ ಹೈದರಾಬಾದ್‌ಗೆ ಅವರು ಕೆಲಸದ ಕಾರಣಕ್ಕೆ ಸ್ಥಳಾಂತರಗೊಂಡರು. ಮಗಳ ನೃತ್ಯ ಲಾಲಿತ್ಯಕ್ಕೆ ತಾಯಿ ಮುಮ್ತಾಜ್ ಬೇಗಂ ಅಲ್ಲಿಯೂ ನೀರೆರೆದರು. ಸಂಸ್ಕೃತಿಯಲ್ಲಿ ಆಸಕ್ತಿ ಇದ್ದ ಇಂತಹ ತಂದೆಯನ್ನು ಕಳೆದುಕೊಂಡಾಗ ವಹೀದಾ ಇನ್ನೂ ಹದಿನೇಳರ ಹುಡುಗಿ. ವೈದ್ಯೆಯಾಗಬೇಕೆಂದು ಸಂಕಲ್ಪ ಮಾಡಿ ಅಲ್ಲಿಯವರೆಗೆ ಓದುತ್ತಿದ್ದ ಅವರು ತಮ್ಮ ಗುರಿಯನ್ನು ಬದಿಗೊತ್ತಿದರು. ಅಕ್ಕಿನೇನಿ ನಾಗೇಶ್ವರರಾವ್ ನಾಯಕರಾಗಿ ನಟಿಸಿದ್ದ ‘ರೋಜುಲು ಮಾರಾಯಿ’ ತೆಲುಗು ಸಿನಿಮಾದಲ್ಲಿ ಒಂದು ಜನಪದ ಗೀತೆಗೆ ನೃತ್ಯ ಮಾಡುವ ಅವಕಾಶವನ್ನು ಮೊದಲು ಗಿಟ್ಟಿಸಿಕೊಂಡರು. ತಮ್ಮ ತಂದೆಯ ಸ್ನೇಹಿತರಾಗಿದ್ದ ಸಿ.ವಿ. ರಾಮಕೃಷ್ಣ ಪ್ರಸಾದ್ ಅವರನ್ನು ಖುದ್ದು ಸಂಪರ್ಕಿಸಿ ವಹೀದಾ ಇಂಥ ಅವಕಾಶ ಪಡೆದಿದ್ದರೆನ್ನುವುದು ವಿಶೇಷ. ಸಿನಿಮಾ ಸಿಲ್ವರ್‌ ಜ್ಯುಬಿಲಿ ಆಚರಿಸಿತು. ಆ ಸಮಾರಂಭದಲ್ಲಿ ವಹೀದಾ ಸ್ನಿಗ್ಧ ಸೌಂದರ್ಯ ನೋಡಲೆಂದೇ ಜನ ನೆರೆದಿದ್ದರು. ಅದು ಹಿಂದಿ ಸಿನಿಮಾ ನಿರ್ದೇಶಕ–ನಿರ್ಮಾಪಕ ಗುರುದತ್ ಅವರ ಕಣ್ಣಿಗೆ ಬಿದ್ದಿತು. ತಕ್ಷಣವೇ ಅವರು ಸ್ಕ್ರೀನ್‌ ಟೆಸ್ಟ್‌ಗೆ ಕರೆದರು. ವಹೀದಾ ಟೆಸ್ಟ್‌ಗೆ ಬರಲು ಒಪ್ಪಲಿಲ್ಲ. ಆದರೂ ಪಟ್ಟುಹಿಡಿದು ಗುರುದತ್ ತಮ್ಮ ಮೂರು ಸಿನಿಮಾಗಳಲ್ಲಿ ಅಭಿನಯಿಸುವಂತೆ ವಹೀದಾ ಮನ ಒಲಿಸಿದರು. ಮೊದಲು ಸಿದ್ಧಗೊಂಡ ಸಿನಿಮಾ ‘ಸಿಐಡಿ’. ದೇವಾನಂದ್‌ ಜೋಡಿಯಾಗಿದ್ದ ಆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದದ್ದೇ ವಹೀದಾ ತಾರೆಯಾದರು.

ಮೊದಲ ಸಿನಿಮಾ ಸೆಟ್ಟೇರಿದ್ದು ಸ್ವಲ್ಪ ವಿಳಂಬವಾಗಿ. ಕರಾರುಪತ್ರಕ್ಕೆ ಸಹಿ ಹಾಕುವ ಮೊದಲು ವಹೀದಾ ಷರತ್ತನ್ನು ಹಾಕಿದ್ದೇ ಇದಕ್ಕೆ ಕಾರಣ. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ತಮಗೆ ಇಷ್ಟವಾಗದ ವಸ್ತ್ರವನ್ನು ತೊಡುವುದಿಲ್ಲ, ರಾತ್ರಿ 9ರ ನಂತರ ಚಿತ್ರೀಕರಣ ಸಾಧ್ಯವಿಲ್ಲ ಎನ್ನುವ ಅಂಶಗಳನ್ನೂ ಕರಾರಿನಲ್ಲಿ ಸೇರಿಸಬೇಕು ಎಂದು ಅವರು ಪಟ್ಟುಹಿಡಿದಿದ್ದರು. ಅದು ಪಕ್ಕಾ ಆಗುವವರೆಗೆ ಸಹಿ ಹಾಕಿರಲಿಲ್ಲ.

‘ಸಿಐಡಿ’ ಯಶಸ್ಸಿನ ಅಲೆಯ ನಂತರ ವಹೀದಾ ನಡೆದದ್ದೇ ದಾರಿ. ‘ಗೈಡ್’, ‘ಪ್ಯಾಸಾ’, ‘ಚೌದುವೀ ಕಾ ಚಾಂದ್’, ‘ಸಾಹಿಬ್ ಬೀಬಿ ಔರ್ ಬೇಗಂ’, ‘ತೀಸ್ರಿ ಕಸಂ’ ತರಹದ ಸಿನಿಮಾಗಳಲ್ಲಿ ಅವರ ರೊಮ್ಯಾಂಟಿಕ್ ಹಾಗೂ ಭಾವುಕ ಅಭಿನಯ ಕಂಡು ಶಿಳ್ಳೆ ಹೊಡೆದವರೆಷ್ಟೊ. ಥ್ರಿಲ್ಲರ್‌ ‘ನೀಲ್ ಕಮಲ್’, ಹಾರರ್ ‘ಕೊಹ್ರಾ’ ಹಾಗೂ ಹಾಸ್ಯದ ತಿರುಳಿದ್ದ ‘ರಾಮ್ ಔರ್ ಶ್ಯಾಮ್’ ಸಿನಿಮಾಗಳಲ್ಲೂ ಅವರು ಅಭಿನಯ ಪ್ರಯೋಗಕ್ಕೆ ಒಡ್ಡಿಕೊಂಡರು. ನೃತ್ಯ ಹಾಗೂ ಅಭಿನಯಕ್ಕೆ ಸಮತೂಕದ ಅವಕಾಶ ಇರುವ ಚಿತ್ರಕಥೆಗಳನ್ನೇ ಅವರು ಹೆಚ್ಚು ಆಯ್ಕೆ ಮಾಡಿಕೊಂಡಿದ್ದು.

‘ರೇಷ್ಮಾ ಔರ್ ಶೇರಾ’ ಸಿನಿಮಾದ ಅಭಿನಯಕ್ಕಾಗಿ 1971ರಲ್ಲಿ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿಯಿತು. ಅನಂತರ ಅವರು ಇನ್ನೂ ಹೆಚ್ಚು ಪ್ರಯೋಗಮುಖಿಯಾದರು. ‘ಕಭಿ ಕಭಿ’, ‘ಚಾಂದಿನಿ’, ‘ಲಮ್ಹೆ’, ‘ನಮಕ್ ಹಲಾಲ್’ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಇದಕ್ಕೆ ಸಾಕ್ಷಿ. ‘ರಂಗ್‌ ದೇ ಬಸಂತಿ’, ‘ಡೆಲ್ಲಿ6’ ತರಹದ ಹೊಸಕಾಲದ ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ನಟಿಸಿದರು.

ನಯನಾಭಿನಯ, ಆಂಗಿಕ ಭಾಷೆಯಲ್ಲಿನ ನಿಯಂತ್ರಣ, ಶಾಂತರಸವನ್ನು ಹೊತ್ತು ನಿಂತಂತಹ ವದನ ವಹೀದಾ ಅವರನ್ನು ಮನೆಮಾತಾಗಿಸಿದವು. ಮೂರು ಫಿಲ್ಮ್‌ಫೇರ್‌ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾದರು. ಬಡತನ ನಿರ್ಮೂಲನೆಗಾಗಿ ಯತ್ನಿಸುತ್ತಿರುವ ‘ರಂಗ್‌ ದೆ’ ಎನ್ನುವ ಸೇವಾಸಂಸ್ಥೆಯ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಂಡವರು ಅವರು. ಸತ್ಯಜಿತ್ ರೇ ನಿರ್ದೇಶನದ ‘ಅಭಿಜ್ಞಾನ’ ಬಂಗಾಳಿ ಸಿನಿಮಾದಲ್ಲಿ ಕೂಡ ಅವರು ನಟಿಸಿದ್ದರು. ನಟ ಶಶಿ ರೇಖಿ ಅವರನ್ನು ಮದುವೆಯಾಗಿದ್ದ ವಹೀದಾ ಅವರಿಗೆ ಸೊಹೇಲ್ ರೇಖಿ, ಕೇಶ್ವಿ ರೇಖಿ ಎಂಬ ಇಬ್ಬರು ಮಕ್ಕಳು. ಈ ಇಬ್ಬರೂ ಬರಹಗಾರರು. ನೃತ್ಯ, ಗಾಯನ, ಅಭಿನಯ ಮೂರನ್ನೂ ಕಣ್ಣಿಗೊತ್ತಿಕೊಂಡು, ಕುಟುಂಬದ ನೊಗವನ್ನು ಹೊತ್ತುಕೊಂಡು ಬಂದ ಈ ಪ್ರತಿಭಾವಂತ ನಟಿಯ ಯಶೋಮುಕುಟಕ್ಕೀಗ ದಾದಾ ಸಾಹೇಬ್ ಫಾಲ್ಕೆ ಗರಿ.

ವಹೀದಾ ರೆಹಮಾನ್

ವಹೀದಾ ರೆಹಮಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT