ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಹು’ ಮೋಡಿಗೆ ಬಚ್ಚನ್ ಫಿದಾ...

Last Updated 28 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ವಿನೋದ್ ಕಪ್ರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಥ್ರಿಲ್ಲರ್ ಮೂವಿ ‘ಪಿಹು’. ಅದರ ಮುಖ್ಯ ಆಕರ್ಷಣೆ ಪುಟಾಣಿ ಮೈರಾ ವಿಶ್ವಕರ್ಮ. ಇಡೀ ಚಿತ್ರದಲ್ಲಿ ಈ ಪುಟಾಣಿಯೊಬ್ಬಳದ್ದೇ ಪಾತ್ರ.

ಮನೆಯಲ್ಲಿ ತಾಯಿ ಹಾಗೂ ಮಗಳಿಬ್ಬರೇ ಇರುತ್ತಾರೆ. ತಾಯಿ ಇದ್ದಕ್ಕಿದ್ದಂತೆ ಮೃತಪಡುತ್ತಾಳೆ. ಅದರ ಅರಿವಿರದ ಪುಟಾಣಿ ಮನೆಯಲ್ಲಿಯೇ ಹೇಗೆ ಕಾಲ ಕಳೆಯುತ್ತಾಳೆ, ಏನೆಲ್ಲಾ ಮಾಡುತ್ತಾಳೆ, ಹಸಿವು ನೀಗಿಸಲು ಏನು ಮಾಡುತ್ತಾಳೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿರುವ ಸಿನಿಮಾವಿದು.

2015ರಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾದ ಟ್ರೇಲರ್ ಈಚೆಗೆ ಬಿಡುಗಡೆ ಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದು ವ್ಯಾಪಕ ಮೆಚ್ಚುಗೆ ಪಡೆದಿದೆ. ಸಿನಿಮಾದ ಚಿತ್ರೀಕರಣದ ವೇಳೆ ಮೈರಾಗೆ ಎರಡು ವರ್ಷ.

ಟ್ರೇಲರ್‌ ವೀಕ್ಷಿಸಿದ ಸಾಕಷ್ಟು ದಿಗ್ಗಜರು, ‘ಪಿಹು’ನಲ್ಲಿ ಮೈರಾಳ ನಟನೆಗೆ ಫುಲ್ ಫಿದಾ ಆಗಿದ್ದಾರೆ. ‘ಒಬ್ಬಳೇ ನಟಿಯ ಚಿತ್ರ...ಅದು ಬಾಲಕಿ..!’ ಎಂದುಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರ ಜೊತೆಗೆ ಇನ್ನೂ ಸಾಕಷ್ಟು ಮಂದಿ ಟ್ವಿಟರ್‌ನಲ್ಲಿ ಮೆಚ್ಚುಗೆಯ ಸುರಿಮಳೆಯನ್ನು ಹರಿಸಿದ್ದಾರೆ.

ಬಿಡುಗಡೆಯಾದ ಮೂರೇ ದಿನಗಳಲ್ಲಿ ಟ್ರೇಲರ್ ಅನ್ನು 14 ಲಕ್ಷ ಮಂದಿ ವೀಕ್ಷಿಸಿದ್ದಾರೆ. ನವೆಂಬರ್ 16ರಂದು ತೆರೆಗೆ ಬರಲಿದೆ ‘ಪಿಹು’.

‘ಆಕೆಯನ್ನು ಕಂಡ ಕೂಡಲೇ ಆಕರ್ಷಿತನಾದೆ. ಚಿತ್ರೀಕರಣದ ವೇಳೆ ಮೈರಾಗೆ ಪ್ರಾರಂಭದಲ್ಲಿ ಹೆಚ್ಚು ಸಮಯ ನೀಡಿದ್ದೆವು. ಚಿತ್ರತಂಡದ ಪ್ರತಿ ಸಿಬ್ಬಂದಿಯೊಂದಿಗೆ ಬೆರೆಯಲು ಆಕೆಗೆ ಅನುವು ಮಾಡಿಕೊಟ್ಟೆವು. ಕ್ರಮೇಣ, ದಿನವೊಂದಕ್ಕೆ ಕೇವಲ ಎರಡು ಗಂಟೆ ಮಾತ್ರ ಚಿತ್ರೀಕರಣ ಮಾಡುತ್ತಿದ್ದೆವು’ ಎಂದು ಮೆಲುಕು ಹಾಕಿದ್ದಾರೆ ಕಪ್ರಿ.

‘ಸ್ವಾಭಾವಿಕವಾಗಿ ನಟಿಸಲು ಬೇಕಾದ ಪೂರಕ ವಾತಾವರಣವನ್ನು ಮಾಡಿದ್ದೆವು. ಎರಡು ವರ್ಷದ ಬಾಲೆಗೆ ಮತ್ತೊಂದು ಟೇಕ್ ಬೇಕು ಎಂದು ಕೇಳಲು ಸಾಧ್ಯವಾಗದ ಕಾರಣಕ್ಕೆ ಸೆಟ್‌ನಲ್ಲಿ ಮೂರು ಕ್ಯಾಮೆರಾಗಳನ್ನು ಇಟ್ಟಿದ್ದೆವು. ಇನ್ನೊಂದು ವಿಶೇಷವೆಂದರೆ, ಟ್ರೇಲರ್‌ನಲ್ಲಿ ಕಾಣುವ ಪ್ರತಿಯೊಂದು ಬೊಂಬೆಗಳು ಹಾಗೂ ಆಟದ ವಸ್ತುಗಳೂ ಮೈರಾಳವು’ ಎಂದು ಮಾಹಿತಿ ನೀಡಿದ್ದಾರೆ.

‘ಸ್ಕ್ರಿಪ್ಟ್‌ ಅನ್ನು ಮೈರಾಳ ವಯಸ್ಸಿಗೆ ಹಾಗೂ ಆಕೆಗೆ ಕಷ್ಟವಾಗದಂತೆ ಬರೆಯಲಾಗಿತ್ತು. ಆಕೆಯೊಂದಿಗೆ ಪದೇ ಪದೇ ಸಮಯ ಕಳೆಯುತ್ತಿದ್ದೆ. ಸೆಟ್‌ ಅನ್ನು ಆಕೆಗೆ ಇಷ್ಟವಾಗುವಂತೆ ಇರಿಸಲು ಅಪಾರ್ಟ್‌ಮೆಂಟ್‌ವೊಂದರ ಫ್ಲಾಟ್ ಅನ್ನು ಬಾಡಿಗೆ ಪಡೆದಿದ್ದೆವು. ಆಕೆಯ ತಂದೆ–ತಾಯಿಯೂ ಸಹ ಅದೇ ಫ್ಲಾಟ್‌ಗೆ ಸ್ಥಳಾಂತರಗೊಂಡಿದ್ದರು’ ಎಂದು ಹೇಳಿಕೊಂಡಿದ್ದಾರೆ.

‘ಒಬ್ಬಳೆ ಬಾಲ ನಟಿ ಇರುವ ಈ ಚಿತ್ರದ ವೀಕ್ಷಣೆಗೆ ನೂರು ನಿಮಿಷಗಳ ವರೆಗೆ ಪ್ರೇಕ್ಷಕರನ್ನು ಹೇಗೆ ಚಿತ್ರಮಂದಿರದಲ್ಲಿ ಕೂರುವಂತೆ ಮಾಡುತ್ತೀರಿ ಎಂದು ಸಾಕಷ್ಟು ಮಂದಿ ಪ್ರಶ್ನೆ ಕೇಳಿದ್ದರು. ಅವರೆಲ್ಲರಿಗೂ ಚಿತ್ರವೇ ಉತ್ತರ ನೀಡಲಿದೆ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT