ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಗೆ ಪೊಗರು ದರ್ಬಾರ್

Last Updated 19 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಧ್ರುವ ಸರ್ಜಾ ನಟನೆಯ ‘ಅದ್ದೂರಿ’, ‘ಬಹದ್ದೂರ್‌’ ಮತ್ತು ‘ಭರ್ಜರಿ’ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ಈ ಚಿತ್ರಗಳು ನಿರ್ಮಾಣಗೊಂಡಿದ್ದು ಅವರ ಲವರ್‌ಬಾಯ್‌ ಇಮೇಜ್‌ನಲ್ಲಿಯೇ ಎಂದು ಬಿಡಿಸಿಹೇಳಬೇಕಿಲ್ಲ. ‘ಪೊಗರು’ ಚಿತ್ರದಲ್ಲಿ ಅವರದು ಈ ಇಮೇಜ್‌ನಿಂದ ಹೊರತಾದ ಪಾತ್ರವಂತೆ. ಪಕ್ಕಾ ಫ್ಯಾಮಿಲಿ ಕಮರ್ಷಿಯಲ್‌ ಚಿತ್ರ ಇದು. ಪ್ರೇರಣಾ ಶಂಕರ್‌ ಜೊತೆಗೆ ಅವರು ಸಪ್ತಪದಿ ತುಳಿದ ಬಳಿಕ ತೆರೆ ಕಾಣುತ್ತಿರುವ ಚಿತ್ರ ಇದಾಗಿದೆ. ಹಾಗಾಗಿ, ಅಭಿಮಾನಿಗಳಲ್ಲಿ ಕುತೂಹಲ ದ್ವಿಗುಣಗೊಂಡಿದೆ.

ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ನಂದ ಕಿಶೋರ್‌. ಈಗಾಗಲೇ, ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, 4 ಹಾಡುಗಳ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ.

‘ಚಿತ್ರದ ಡಬ್ಬಿಂಗ್‌ ಕೂಡ ಪೂರ್ಣಗೊಂಡಿದೆ. ಸಂಕ್ರಾಂತಿಗೆ ಥಿಯೇಟರ್‌ಗೆ ಬರುವ ಯೋಜನೆ ಇತ್ತು. ಆ ಅವಧಿಯಲ್ಲಿ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಹಲವು ಚಿತ್ರಗಳು ತೆರೆ ಕಾಣುತ್ತಿವೆ. ಉತ್ತಮವಾಗಿ ಚಿತ್ರ ಮಾಡಿದ್ದೇವೆ. ಹಾಗಾಗಿ, ಫೆಬ್ರುವರಿ ಎರಡನೇ ವಾರ ಜನರ ಮುಂದೆ ಬರಲು ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ನಂದ ಕಿಶೋರ್‌.

ಧ್ರುವ ಅವರು ಇದರಲ್ಲಿ ಎಕ್ಸ್‌ಟ್ರೀಮ್‌ ಆದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಾಯಿ ಮತ್ತು ಮಗನ ಸಂಬಂಧಗಳ ಕುರಿತು ಹೆಣೆದಿರುವ ಕಥನ ಇದಾಗಿದೆ. ಸಣ್ಣ ಭಿನ್ನಾಭಿಪ್ರಾಯವೊಂದು ಮನುಷ್ಯನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹಾಗೂ ನಾವು ಮಾಡುವ ತಪ್ಪುಗಳು ಕರ್ಮಫಲ ಆಧರಿಸಿರುತ್ತವೆ ಎನ್ನುವುದರ ಸುತ್ತವೇ ಕಥೆ ಸಾಗಲಿದೆ ಎಂಬುದು ಚಿತ್ರತಂಡದ ವಿವರಣೆ.

ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿ. ಸೂಕ್ಷ್ಮ ಮನಸ್ಥಿತಿಯ ಶಿಕ್ಷಕಿಯಾಗಿ ಅವರು ಬಣ್ಣ ಹಚ್ಚಿದ್ದಾರೆ. ನಾಯಕನದು ಇದಕ್ಕೆ ತದ್ವಿರುದ್ಧ ಸ್ಥಿತಿ. ಒಂದರ್ಥದಲ್ಲಿ ಇಬ್ಬರದು ಕ್ಯಾಟ್‌ ಅಂಡ್‌ ಮೌಸ್‌ ಗೇಮ್‌ ಮನಸ್ಥಿತಿ. ಹಾಗಾಗಿ, ಪರದೆ ಮೇಲೆ ಇಬ್ಬರ ಪಾತ್ರಗಳೂ ಕುತೂಹಲ ಹೆಚ್ಚಿಸಿವೆ.

ಬಿ.ಕೆ. ಗಂಗಾಧರ್‌ ಬಂಡವಾಳ ಹೂಡಿದ್ದಾರೆ. ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿಜಯ್‌ ಮಿಲ್ಟನ್‌ ಅವರದು. ರಾಘವೇಂದ್ರ ರಾಜ್‌ಕುಮಾರ್‌, ಧನಂಜಯ್‌, ರವಿಶಂಕರ್‌, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಧರ್ಮ, ತಬಲಾ ನಾಣಿ ನಟಿಸಿದ್ದಾರೆ. ಅಂದಹಾಗೆ ಫ್ರೆಂಚ್‌ನ ಮಾರ್ಗೆನ್ ಆಸ್ಟೆ, ಅಮೆರಿಕದ ಕಾಯ್‌ ಗ್ರೀನ್‌ ಕೂಡ ಇದರಲ್ಲಿ ನಟಿಸಿರುವುದು ಚಿತ್ರದ ಮತ್ತೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT