ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾದಲ್ಲಿ‌ ಪೊಲೀಸರ ಕೈಗೆ‌ ಮಚ್ಚು ಕೊಡಬೇಡಿ: ಭಾಸ್ಕರ್ ರಾವ್ 

ನಿರ್ದೇಶಕರಿಗೆ ಪೊಲೀಸ್ ಕಮಿಷನರ್ ಸಲಹೆ
Last Updated 26 ಅಕ್ಟೋಬರ್ 2019, 20:54 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಿನಿಮಾಗಳಲ್ಲಿ ಚಿತ್ರವಿಚಿತ್ರವಾಗಿ ಪೊಲೀಸ್ ಅಧಿಕಾರಿಗಳನ್ನು ತೋರಿಸಲಾಗುತ್ತಿದೆ. ಅವರ ಕೈಗೆ ಮಚ್ಚು ನೀಡಲಾಗುತ್ತದೆ. ಅದರಿಂದ ರಕ್ತ ತೊಟ್ಟಿಕ್ಕುತ್ತಿರುತ್ತದೆ. ಅವರನ್ನು ದೊಡ್ಡ ಗಂಡಸು ಎಂದು‌ ಬಿಂಬಿಸಲಾಗುತ್ತದೆ. ಇಂತಹ ಸಿನಿಮಾಗಳಿಂದ ಸಮಾಜಕ್ಕೆ ‌ನಿರ್ದೇಶಕರು‌‌ ನೀಡುವ ಸಂದೇಶವಾದರೂ ಏನಿದೆ’ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಎಸ್ಆರ್‌ವಿಥಿಯೇಟರ್‌ನಲ್ಲಿಶನಿವಾರ ನಡೆದ‌ 'ಕುಥಸ್ಥ' ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‌‘ಸಿನಿಮಾದಲ್ಲಿ ಬರುವ ಇಂತಹ ದೃಶ್ಯಗಳು ಸಮಾಜಕ್ಕೆ ಮಾರಕ. ಅದನ್ನು ನೋಡಿದ ಪುಡಿ ರೌಡಿಗಳು ತಾವೂ ದೊಡ್ಡ ಹೀರೊ ಆಗಲು ಹೋಗುತ್ತಾರೆ. ಸಣ್ಣಪುಟ್ಟ ವೈಷಮ್ಯಕ್ಕೆ ಎದುರಾಳಿಗಳನ್ನು ಕುಂಬಳಕಾಯಿ ಕೊಚ್ಚಿದಂತೆ ಕೊಚ್ಚುತ್ತಾರೆ. ಇಂತಹ ಸಿನಿಮಾಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ’ ಎಂದರು.

‌ಇತ್ತೀಚೆಗೆ ಫಿನಿಕ್ಸ್ ಮಾಲ್ ಬಳಿ ರೌಡಿಯೊಬ್ಬನ ಕೊಲೆಯಾಯಿತು. ನಾನು ಕ್ರೌರ್ಯಭರಿತ ‌ಸಿನಿಮಾ‌‌‌ಗಳನ್ನು‌‌ ನೋಡುತ್ತೇನೆ.‌ ಇದೇ ಕೊಲೆಗೆ ಪ್ರೇರಣೆ ಎಂದು ಆರೋಪಿ ಹೇಳಿದಾಗ ನನಗೆ ಅಚ್ಚರಿಯಾಯಿತು ಎಂದರು.

'ನಾನೊಮ್ಮೆ ದೆಹಲಿಗೆ‌ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಆ ವಿಮಾನದಲ್ಲಿಯೇ ಕನ್ನಡದ ಖ್ಯಾತ ನಟರೊಬ್ಬರು ಪ್ರಯಾಣಿಸುತ್ತಿದ್ದರು. ಉಭಯಕುಶಲೋಪರಿಯ ಬಳಿಕ ಮಚ್ಚು, ಲಾಂಗ್ ಹಿಡಿದು ಹಿಂಸೆ ವೈಭವೀಕರಿಸುವ‌ ಸಿನಿಮಾಗಳು ಸಮಾಜಕ್ಕೆ ಅಗತ್ಯ ಇದೆಯೇ ಎಂದು‌ ನಾನು ಅವರಿಗೆ ಪ್ರಶ್ನಿಸಿದೆ. ಅಂತಹ‌ ದೃಶ್ಯಗಳು ಜನರಿಗೆ ಇಷ್ಟ ಎಂದು ಅವರು ಹೇಳಿದಾಗ ನಾನು ಅಚ್ಚರಿಪಟ್ಟೆ. ಆದರೆ, ಯಾವ ವರ್ಗದ‌ ಜನರಿಗೆ ಅಂತಹ ‌ಸಿನಿಮಾಗಳು ಇಷ್ಟ ಎಂಬುದು‌‌ ನನಗೆ ಇಂದಿಗೂ ಗೊತ್ತಿಲ್ಲ' ಎಂದ ಅವರು, ಆ‌ ನಟನ ಹೆಸರನ್ನು ಬಹಿರಂಗಪಡಿಸಲಿಲ್ಲ.
ನಾವು ವರನಟ ರಾಜ್ ಕುಮಾರ್, ಗಿರೀಶ ಕಾರ್ನಾಡ ಅವರ‌ ಸಿನಿಮಾಗಳನ್ನು‌ ನೋಡಿಕೊಂಡು‌ ಬೆಳೆದಿದ್ದೇವೆ. ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿನ ಆದರ್ಶಗಳು ನಮಗೆ‌ ಮಾದರಿಯಾಗಿದ್ದವು. ಸಮಾಜಕ್ಕೆ ಉತ್ತಮ ಶಿಕ್ಷಣ ‌ಮತ್ತು ಸಂದೇಶ ನೀಡುವ‌ ಸಿನಿಮಾಗಳನ್ನು ನಿರ್ಮಿಸಬೇಕು ಎಂದು‌ ಸಲಹೆ‌ ನೀಡಿದರು.

ರೋಮ್ಯಾನ್ಸ್ ಬಗ್ಗೆ ಜನರಿಗೆ ಆಸಕ್ತಿ ಇರುತ್ತದೆ. ರಿಯಲಿಸ್ಟಿಕ್ ಆದ ರೋಮ್ಯಾನ್ಸ್ ಇರುವ ಸಿನಿಮಾಗಳನ್ನು‌‌ ನಿರ್ಮಿಸಬೇಕು. ಸಂಗೀತಮಯ ಚಿತ್ರಗಳಿಗೂ ಒತ್ತು‌ ನೀಡಬೇಕು ಎಂದು‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT