ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನ: ‘ರಾಜಕುಮಾರ’ ಬಳಿಕ ಬದಲಾದ ‘ಪುನೀತ್‌’!

Last Updated 11 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಕಾರಣದಿಂದಾಗಿ ಮೈಸೂರಿನಲ್ಲಿ ಕಳೆದ ವರ್ಷ ಯುವದಸರಾ ಹಬ್ಬದ ಕಳೆ ಇರಲಿಲ್ಲ. ಈ ಬಾರಿ ದಸರಾ ಮುನ್ನವೇ ಸಾಂಸ್ಕೃತಿಕ ನಗರಿಯಲ್ಲಿ ‘ಯುವಸಂಭ್ರಮ’ ಇರಲಿದೆ. ಏ.1ರಂದು ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಯುವರತ್ನ ಚಿತ್ರವು ಬಿಡುಗಡೆಯಾಗಲಿದ್ದು, ಚಿತ್ರದ ಪ್ರಿರಿಲೀಸ್‌ ಕಾರ್ಯಕ್ರಮವು ಮಾರ್ಚ್‌ 20ಕ್ಕೆ ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆಯಲಿದೆ. ಚಿತ್ರದ ಕುರಿತು ಪುನೀತ್‌ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ...

***

ಸಂತೋಷ್‌ ಆನಂದರಾಮ್‌, ಪುನೀತ್‌ ಮತ್ತೆ ಜೊತೆಯಾಗಿದ್ದಾರೆ. ಹೇಗಿರಲಿದೆ ಯುವರತ್ನ?
ಹೌದು, ಸಂತೋಷ್‌ ಜೊತೆಗೆ ಇದು ನನ್ನ ಎರಡನೇ ಚಿತ್ರ. ಸಂತೋಷ್‌ ಈಗ ಕುಟುಂಬದ ಭಾಗವಾಗಿದ್ದಾರೆ. ಯುವರತ್ನ ಸಿನಿಮಾದಲ್ಲಿ ತುಂಬಾ ಅರ್ಥವಿದೆ. ಸಿನಿಮಾ ಜಾಗೃತಿ ಮೂಡಿಸುತ್ತದೆ, ಬದುಕು ಬದಲಾಯಿಸುತ್ತದೆ ಎಂದು ನಾನು ಈ ಹಿಂದೆ ಒಪ್ಪುತ್ತಿರಲಿಲ್ಲ. ಸಿನಿಮಾ ಒಂದು ಮನರಂಜನೆ, ಯಾಕಿಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬ ಮನಃಸ್ಥಿತಿ ಇತ್ತು. ಆದರೆ ‘ರಾಜಕುಮಾರ’ ಸಿನಿಮಾ ನಂತರದ ಅನುಭವಗಳು ನನ್ನನ್ನು ಬದಲಾಯಿಸಿದವು. ಚಿತ್ರವನ್ನು ಇಷ್ಟು ಗಂಭೀರವಾಗಿ ಜನರು ತೆಗೆದುಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿಸಿತು. ಹೀಗಾಗಿ ಯುವರತ್ನ ಒಪ್ಪಿಕೊಂಡೆ.

ತಂದೆಯವರ ಸಿನಿಮಾಗಳ ಬಗ್ಗೆ ಖಂಡಿತವಾಗಿಯೂ ಎರಡು ಮಾತಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಅಪ್ಪಾಜಿಯ ಹಲವು ಸಿನಿಮಾಗಳನ್ನು ಮತ್ತೆ ಮತ್ತೆ ನೋಡಿದೆವು. ಮೇಯರ್‌ ಮತ್ತಣ್ಣ, ಕವಿರತ್ನ ಕಾಳಿದಾಸ ಮುಂತಾದವುಗಳು. ಆ ಸಮಯದಲ್ಲಿ ಬಳಸುತ್ತಿದ್ದ ಭಾಷೆಯೇ ಚೆನ್ನಾಗಿತ್ತು. ಕಸ್ತೂರಿ ನಿವಾಸ, ನಾನು ಹುಟ್ಟುವ ಮೊದಲು ಬಂದ ಸಿನಿಮಾ. ಚಿಕ್ಕವರಾಗಿರುವಾಗ ಅಪ್ಪಾಜಿ ಜೊತೆ ಸಿನಿಮಾ ನೋಡುವಾಗ, ಅಪ್ಪಾಜಿ ಇರುವವರೆಗೂ ನೋಡುತ್ತಿದ್ದೆವು. ನಂತರ ಅರ್ಧಕ್ಕೆ ಟಿವಿ ಆಫ್‌ ಮಾಡುತ್ತಿದ್ದೆವು. ಏಕೆಂದರೆ ನಮಗೆ ಆಗ ಚಿತ್ರಗಳು ಇಷ್ಟವಾಗುತ್ತಿರಲಿಲ್ಲ, ಸಿಟ್ಟು ಬರುತ್ತಿತ್ತು. ಆದರೆ ಈಗ ಅದರ ಅರ್ಥ ತಿಳಿಯುತ್ತಿದೆ.

ಬಹಳ ವರ್ಷಗಳ ನಂತರ ಕಾಲೇಜು ವಿದ್ಯಾರ್ಥಿ ಪಾತ್ರಕ್ಕೆ ಬಣ್ಣಹಚ್ಚಿದ್ದೀರಿ. ಹೇಗಿತ್ತು ಸಿದ್ಧತೆ?
ಪ್ರತಿನಿತ್ಯದ ದೊಡ್ಡ ಎಫರ್ಟ್‌ ಎಂದರೆ ದೇಹದ ತೂಕ ತಗ್ಗಿಸುವುದು. ಏಕೆಂದರೆ ಊಟ ಎಂದರೆ ಇಷ್ಟ. ಸಿಕ್ಕಾಪಟ್ಟೆ ತಿಂದುಬಿಡುತ್ತೇನೆ. ಚಿತ್ರದ ಮೇಲೆ ಹೆಚ್ಚಿನ ಪ್ರೀತಿ ಇರುವ ಕಾರಣ, ಪಾತ್ರಕ್ಕೆ ಹೇಗೆ ಬೇಕೋ ಹಾಗೆ ಬದಲಾಗುತ್ತೇನೆ.ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯ ಪಾತ್ರ ನನ್ನದಾಗಿದ್ದು, ಅಪ್ಪು ಚಿತ್ರದ ನನ್ನ ಪಾತ್ರದ ಶೇಡ್‌ ಬಂದು ಹೋಗುತ್ತದೆ.

ಪಾಠಶಾಲಾ ಹಾಡು ಹಾಗೂ ನಿಮ್ಮ ನೆಚ್ಚಿನ ಗುರುಗಳ ಬಗ್ಗೆ ನಿಮ್ಮ ಮಾತು
ರಾಜಕುಮಾರ ಯಾವ ಮಟ್ಟಕ್ಕೆ ಹಿಟ್‌ ಆಯಿತು ಎಂದರೆ, ಜನ ಬಂದು ಮಾತನಾಡಿಸುತ್ತಿದ್ದ ರೀತಿ ಹೆಮ್ಮೆ ನೀಡಿತು. ಈ ಸಿನಿಮಾದಲ್ಲೂ ಇರುವ ಕೆಲವು ಮೌಲ್ಯಗಳು ವೈಯಕ್ತಿಕವಾಗಿ ನನಗೆ ಇಷ್ಟವಾಯಿತು. ಯುವರತ್ನ ಚಿತ್ರದ ಪಾಠಶಾಲಾ ಹಾಡಿನ ಪ್ರತಿ ವಾಕ್ಯವೂ ಮನಸ್ಸು ಮುಟ್ಟುತ್ತದೆ. ಇನ್ನು ನನ್ನ ನೆಚ್ಚಿನ ಟೀಚರ್‌ ವಿಜಯಲಕ್ಷ್ಮಿ. ನಾನು ಶಾಲೆಗೇ ಹೋಗಿಲ್ಲ. ಪ್ರೈವೇಟ್‌ ಟ್ಯೂಷನ್‌ನಲ್ಲಿ ಓದಿದ್ದು. ಆಗ ನನಗಿದ್ದಿದ್ದು, ಒಬ್ಬರೇ ಟೀಚರ್‌. ಹಾಗಾಗಿ, ಅವರ ಮೇಲೆ ಪ್ರೀತಿ. ಓದು, ಬರಹ ಕಲಿಸಿ, ಶಿಕ್ಷಣದ ಮೇಲೆ ನಿಗಾ ಇರಿಸಿದವರು ಅವರು.

ಈ ವರ್ಷದ ಸಿನಿಪಯಣ?
ಚೇತನ್‌ಕುಮಾರ್‌ ನಿರ್ದೇಶನದ ಜೇಮ್ಸ್‌ ಚಿತ್ರದ ಚಿತ್ರೀಕರಣ ಶೇ 55ರಷ್ಟು ಪೂರ್ಣಗೊಂಡಿದ್ದು, ಇದು ಈ ವರ್ಷಾಂತ್ಯಕ್ಕೆ ತೆರೆಯ ಮೇಲೆ ಬರಲಿದೆ. ನನ್ನ ಮುಂದಿನ ಚಿತ್ರವೂ ಹೊಂಬಾಳೆಯವರ ಜೊತೆ ಇರಲಿದೆ. ದಿನಕರ್‌ ತೂಗುದೀಪ ಅವರ ಜೊತೆಗೂ ಒಂದು ಚಿತ್ರದ ಮಾತುಕತೆ ನಡೆಯುತ್ತಿದ್ದು, ಅದು ಅಂತಿಮವಾಗುವ ಸಾಧ್ಯತೆ ಇದೆ.

ಲಾಕ್‌ಡೌನ್‌ನಲ್ಲಿ ಪುನೀತ್‌ ಏನ್ಮಾಡಿದ್ರು?
‘ಲಾಕ್‌ಡೌನ್‌ನಲ್ಲಿ ಟಿವಿ, ಇಂಟರ್‌ನೆಟ್‌ನಲ್ಲೇ ಅರ್ಧ ಸಮಯ ಹೋಯಿತು. ನಿರ್ಬಂಧ ಸಡಿಲಿಸಿದಾಗ ಚಿಕ್ಕಮಗಳೂರಿಗೆ ಹೋಗಿ ಬಂದೆವು. ಶೂಟಿಂಗ್‌ ಮಧ್ಯೆ ನಮಗೆ ರಜೆ ಸಿಕ್ಕಂತಾಯಿತು. ಇನ್ನು ಹೊಸ ಅಡುಗೆಯ ಪ್ರಯೋಗ. ಪಕ್ಕಾ ನಾನ್‌ವೆಜಿಟೇರಿಯನ್‌, ಮಟನ್‌, ಚಿಕನ್‌, ಫಿಶ್‌, ಬೇಳೆ ಸಾರು, ಮನೆ ರೆಸಿಪಿಯಾದ ಮಸಾಲೆ ಚಿತ್ರಾನ್ನ ಮಾಡಿದೆ. ಯೂಟ್ಯೂಬ್‌ನಲ್ಲಿ ಫುಡ್‌ಬ್ಲಾಗಿಂಗ್‌ ಶೋ ಹೆಚ್ಚಾಗಿ ನೋಡುತ್ತೇನೆ. ಬೆಂಗಳೂರಿನವರೇ ಆದ ಕೃಪಾಲ್‌ ಅಮನ್ನಾ ಅವರ ಫುಡ್‌ಶೋ ಶೋ ಇಷ್ಟಪಡುತ್ತೇನೆ. ಇಷ್ಟೆಲ್ಲ ತಿಂದು, ದೇಹದ ತೂಕ ತಗ್ಗಿಸುವುದು ತುಂಬಾ ಕಷ್ಟ. ಕಳೆದ ವರ್ಷ ಮಾರ್ಚ್‌ 2 ಅಥವಾ 3ಕ್ಕೆ ಯುವರತ್ನದ ಚಿತ್ರೀಕರಣಕ್ಕೆ ನಾವು ವಿದೇಶಕ್ಕೆ ಹೋಗಬೇಕಿತ್ತು. ಆದರೆ ಅದು ರದ್ದಾಯಿತು. ಮೂಗಿನಲ್ಲಿರುವ ಸಮಸ್ಯೆಯಿಂದ ಬೆಳಗ್ಗೆ ಎದ್ದತಕ್ಷಣ ನನಗೆ 20 ಬಾರಿ ಸೀನಬೇಕು. ಇನ್ನು ವಿದೇಶಕ್ಕೆ ಹೋಗಿ, ಅಲ್ಲಿ ಈ ರೀತಿ ಸೀನಿದರೆ ಕೊರೊನಾ ಅಂತಾ ಕ್ವಾರಂಟೈನ್‌ ಮಾಡಿರೋರು ಎಂಬ ಭಯವಿತ್ತು.

ತಮಿಳು, ಮಲಯಾಳಂ ಹಿಂದಿಗೂ ಯುವರತ್ನ?
‘ಕಥೆಗೆ ಪೂರಕವಾಗಿ ಧಾರವಾಡ ವಿಶ್ವವಿದ್ಯಾಲಯದಲ್ಲಿ ಚಿತ್ರೀಕರಣ ನಡೆದಿದೆ. ನಗರದಲ್ಲಿರುವ ಕಾಲೇಜುಗಳು ಕಾಂಪ್ಲೆಕ್ಸ್‌ ರೀತಿ ಇವೆ. ಜ್ಞಾನಪೀಠ ಪ್ರಶಸ್ತಿ ಪಡೆದ ಆರು ಜನರು ಆ ವಿ.ವಿಯಲ್ಲಿ ಓದಿದ್ದಾರೆ. ಅಪ್ಪು ಅವರನ್ನೇ ತಲೆಯಲ್ಲಿಟ್ಟುಕೊಂಡು ಬರೆದ ಕಥೆ ಇದು. ಯುವರತ್ನ ಚಿತ್ರದಲ್ಲಿ ಪವರ್‌ ಅನ್ನು ಹೇಗೆ ಬಳಸಿದ್ದೇವೆ ಎಂದರೆ ಒಳ್ಳೆಯ ರೀತಿಯಲ್ಲಿ ಬಂದರೆ ಬೆಳಕು, ತಿರುಗಿಬಿದ್ದರೆ ಶಾರ್ಟ್‌ ಸರ್ಕ್ಯೂಟ್‌ ಆಗುತ್ತದೆ’ ಎಂದು ನಿರ್ದೇಶಕ ಸಂತೋಷ್‌ ಆನಂದರಾಮ್‌ ಹೇಳಿದರು.

‘ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಹಳ ಸಾಮ್ಯತೆ ಇದ್ದ ಕಾರಣ ತೆಲುಗಿಗೆ ಮಾತ್ರ ಡಬ್‌ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಯುವರತ್ನ ತಮಿಳು, ಮಲಯಾಳಂ, ಹಿಂದಿಯಲ್ಲಿ ನಿರ್ಧಾರವನ್ನು ನಿರ್ಮಾಪಕರು ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.

ಮಾರ್ಚ್‌ 17ಕ್ಕೆ ಪುನೀತ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರದ ‘ಫೀಲ್‌ ದ ಪವರ್‌’ ಲಿರಿಕಲ್‌ ಟೀಸರ್‌ ಬಿಡುಗಡೆಯಾಗಲಿದ್ದು, ಮಾರ್ಚ್ 27ಕ್ಕೆ ಹೈದರಾಬಾದ್‌ನಲ್ಲಿ ಪ್ರಿರಿಲೀಸ್‌ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT