ಸೋಮವಾರ, ಮೇ 23, 2022
21 °C
‘ಆದಿಪುರುಷ್‌’ ಹೊಸ ಸಿನಿಮಾ ಘೋಷಣೆ

‘ಬಾಹುಬಲಿ’ ಬಳಿಕ ಈಗ ರಾಮನ ಅವತಾರಕ್ಕೆ ಸಜ್ಜಾದ ನಟ ಪ್ರಭಾಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಸ್ತುತ ನಟ ಪ್ರಭಾಸ್‌ ‘ರಾಧೆ ಶ್ಯಾಮ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ನಿರ್ದೇಶಿಸುತ್ತಿರುವುದು ರಾಧಾ ಕೃಷ್ಣಕುಮಾರ್‌. ಪೂಜಾ ಹೆಗ್ಡೆ ಇದರ ನಾಯಕಿ. ಇದಾದ ಬಳಿಕ ಅವರು ‘ಮಹಾನಟಿ’ ಚಿತ್ರದ ಖ್ಯಾತಿಯ ನಾಗ್‌ ಅಶ್ವಿನ್‌ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಈ ನಡುವೆಯೇ ಪ್ರಭಾಸ್‌ ನಟನೆಯ ಹೊಸ ಚಿತ್ರ ‘ಆದಿಪುರುಷ್’ ಘೋಷಣೆಯಾಗಿದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ‘ತಾನಾಜಿ’ ಚಿತ್ರದ ಖ್ಯಾತಿಯ ಓಂ ರಾವುತ್.

ಹಿಂದಿ ಮತ್ತು ತೆಲುಗಿನಲ್ಲಿ ಇದು ನಿರ್ಮಾಣವಾಗಲಿದೆ. ಬಳಿಕ ತಮಿಳು, ಮಲಯಾಳ, ಕನ್ನಡ ಸೇರಿದಂತೆ ಕೆಲವು ವಿದೇಶಿ ಭಾಷೆಗಳಿಗೂ ಡಬ್‌ ಆಗಲಿದೆಯಂತೆ. ಟಿ ಸೀರಿಸ್‌ನ ಭೂಷಣ್‌ ಕುಮಾರ್‌ ಇದಕ್ಕೆ ಬಂಡವಾಳ ಹೂಡಲಿದ್ದಾರೆ. 2022ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಭಾರತೀಯ ಪುರಾಣದ ಪ್ರಕಾರ ರಾಮನೇ ಆದಿಪುರುಷ. ಇದರಲ್ಲಿ ಪ್ರಭಾಸ್‌ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಪೌರಾಣಿಕ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸುವುದು ಅವರಿಗೆ ಹೊಸದೇನಲ್ಲ. ‘ಬಾಹುಬಲಿ’ ಸರಣಿ ಸಿನಿಮಾಗಳಲ್ಲಿ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಪಾತ್ರದ ಮೂಲಕ ಅವರು ಸಿನಿಪ್ರಿಯರ ಹೃದಯ ಗೆದ್ದಿರುವುದೇ ಇದಕ್ಕೆ ಸಾಕ್ಷಿ. ಈ ಎಪಿಕ್‌ ಡ್ರಾಮಾ ದುಷ್ಟಶಕ್ತಿಯ ವಿರುದ್ಧದ ಹೋರಾಟದ ಕಥನವನ್ನು ಕಟ್ಟಿಕೊಡಲಿದೆ. 3ಡಿ ತಂತ್ರಜ್ಞಾನದಡಿ ಇದು ನಿರ್ಮಾಣವಾಗುತ್ತಿದೆ.

‘ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸವಾಲುಗಳಿರುತ್ತವೆ. ಆದರೆ, ಆದಿಪುರುಷ್‌ ಸಿನಿಮಾದಂತಹ ಪಾತ್ರ ನಿಭಾಯಿಸುವಾಗ ಜವಾಬ್ದಾರಿ ದೊಡ್ಡದಿರುತ್ತದೆ. ಓಂ ರಾವುತ್‌ ಅವರ ವಿನ್ಯಾಸದಲ್ಲಿ ರೂಪುಗೊಂಡಿರುವ ಈ ಪಾತ್ರವನ್ನು ಪರದೆ ಮೇಲೆ ನಿಭಾಯಿಸಲು ನಾನೂ ಕಾತರದಿಂದ ಕಾಯುತ್ತಿರುವೆ. ದೇಶದ ಯುವಜನರು ಈ ಸಿನಿಮಾವನ್ನು ಇಷ್ಟಪಡಲಿದ್ದಾರೆ’ ಎಂದು ಪ್ರಭಾಸ್‌ ಪ್ರತಿಕ್ರಿಯಿಸಿದ್ದಾರೆ.

‘ಪ್ರಭಾಸ್‌ ನನ್ನ ‍ಪ್ರಾಜೆಕ್ಟ್‌ಗೆ ಸಮ್ಮತಿಸಿದ್ದು ಖುಷಿ ನೀಡಿದೆ. ನನ್ನ ಕನಸಿನ ಯೋಜನೆ ಇದು. ನನ್ನ ಮತ್ತು ಭೂಷಣ್‌ ಕುಮಾರ್‌ ಮನವಿಗೆ ಯಾವುದೇ ಷರತ್ತು ವಿಧಿಸದೆ ಅವರು ಒಪ್ಪಿಕೊಂಡಿದ್ದಾರೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ನೀಡುವುದೇ ನಮ್ಮ ಗುರಿ’ ಎಂದಿದ್ದಾರೆ ಓಂ ರಾವುತ್‌.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು