ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2 | ‘ಅತ್ಯುತ್ತಮ ನಿರ್ದೇಶನ’ ವಿಭಾಗದ ನಾಮನಿರ್ದೇಶಿತರು

Published 2 ಜೂನ್ 2024, 23:36 IST
Last Updated 2 ಜೂನ್ 2024, 23:36 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರು ಮತ್ತು ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ನಿರ್ದೇಶನ’ ವಿಭಾಗಕ್ಕೆ ನಾಮ ನಿರ್ದೇಶಿತರಾದವರನ್ನು ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ. https://www.prajavani.net/cinesamman/season2

ಬಿ.ಎಸ್‌.ಲಿಂಗದೇವರು

ಬಿ.ಎಸ್‌.ಲಿಂಗದೇವರು

ಬಿ.ಎಸ್‌.ಲಿಂಗದೇವರು ‘ವಿರಾಟಪುರ ವಿರಾಗಿ’ ಚಿತ್ರದ ನಿರ್ದೇಶನಕ್ಕಾಗಿ ನಾಮ
ನಿರ್ದೇಶನಗೊಂಡಿದ್ದಾರೆ. ಇವರು ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಟ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಇವರು ‘ಮೌನಿ’, ‘ಕಾಡ ಬೆಳದಿಂಗಳು’, ‘ನಾನು ಅವನಲ್ಲ...ಅವಳು’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಾಮಾಜಿಕ ಕಳಕಳಿಯ ಕಥಾ ಹಂದರ ಹೊಂದಿರುವ ಚಿತ್ರಗಳಿಗೆ ಜನಪ್ರಿಯರಾಗಿರುವ ಇವರ ಚಿತ್ರಗಳು ರಾಷ್ಟ್ರ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದೆ. ವಿಭಿನ್ನ ಕಥಾಹಂದರ ಹೊಂದಿರುವ ‘ನಾನು ಅವನಲ್ಲ...ಅವಳು’ ಚಿತ್ರ ಬಿಡುಗಡೆ ಬಳಿಕ ಜನಮನ್ನಣೆಯನ್ನು ಗಳಿಸಿತು. ವಿರಾಟಪುರ ವಿರಾಗಿ ಚಿತ್ರ ಕೂಡ ಈಗಾಗಲೇ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿ ಪಡೆದಿದೆ.

ಹೇಮಂತ್‌ ಎಂ.ರಾವ್‌

ಹೇಮಂತ್‌ ಎಂ.ರಾವ್‌

‘ಸಪ್ತ ಸಾಗರದಾಚೆ ಎಲ್ಲೋ–Side A’ ಸಿನಿಮಾ ನಿರ್ದೇಶನಕ್ಕಾಗಿ ಹೇಮಂತ್‌ ಎಂ.ರಾವ್‌ ನಾಮನಿರ್ದೇಶನಗೊಂಡಿದ್ದಾರೆ. ಎಂಜಿನಿಯರಿಂಗ್‌ ಕಲಿತು ‘ಗುಲಾಬಿ ಟಾಕೀಸ್‌’ನಲ್ಲಿ ಗಿರೀಶ ಕಾಸರವಳ್ಳಿ ಅವರ ಸಹಾಯಕನಾಗಿ ಸಿನಿಪಯಣ ಆರಂಭಿಸಿದರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ನಿರ್ದೇಶನದತ್ತ ಮೊದಲ ಹೆಜ್ಜೆ ಇಟ್ಟ ಹೇಮಂತ್‌, ‘ಕವಲುದಾರಿ’  ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯ ಸಾಬೀತುಪಡಿಸಿದರು. ಇವರು ದೃಶ್ಯಗಳ ಹೆಣಿಗೆಯಲ್ಲಿ ಸಾವಧಾನ ತೋರುವ ನಿರ್ದೇಶಕ. ಸೂಕ್ಷ್ಮವಾದ ಬರವಣಿಗೆ, ನಿರೂಪಣೆ ಇವರ ಅಸ್ತ್ರ. ಇದಕ್ಕೆ ಸಾಕ್ಷ್ಯ ‘ಸಪ್ತ ಸಾಗರದಾಚೆ ಎಲ್ಲೋ’. ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಹೇಮಂತ್‌, ಸದ್ಯ ಶಿವರಾಜ್‌ಕುಮಾರ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲು ಸಿದ್ಧತೆ ನಡೆಸುತ್ತಿದ್ದಾರೆ.

ಪೃಥ್ವಿ ಕೊಣನೂರು

ಪೃಥ್ವಿ ಕೊಣನೂರು

ಪೃಥ್ವಿ ಕೊಣನೂರು ‘ಪಿಂಕಿ ಎಲ್ಲಿ?’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಪೃಥ್ವಿ, 2007ರಲ್ಲಿ ಇಂಗ್ಲಿಷ್‌ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದರು. 2012ರಲ್ಲಿ ತಯಾರಾದ ಇವರ ಚೊಚ್ಚಲ ನಿರ್ದೇಶನದ ಸಿನಿಮಾ ‘ಅಲೆಗಳು’ ಟೊರಂಟೊ ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಎರಡನೆ ಚಿತ್ರ ‘ರೈಲ್ವೆ ಚಿಲ್ಡ್ರನ್‌’ ರಾಷ್ಟ್ರಪ್ರಶಸ್ತಿ, ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ ಮುಂಬೈ ಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಗೋಲ್ಡನ್‌ ಗೇಟ್‌ವೇ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿತ್ತು. ಬೂಸಾನ್‌ ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡ ‘ಪಿಂಕಿ ಎಲ್ಲಿ?’ ಚಿತ್ರ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ನಾಮನಿರ್ದೇಶನಗೊಂಡು, ಪ್ರಶಸ್ತಿಗಳನ್ನು ಗಳಿಸಿದೆ. ಇವರ ‘ಹದಿನೇಳೆಂಟು’ ಚಿತ್ರಕ್ಕೆ ಮೆಲ್ಬೋರ್ನ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ‘ರಶೀದ್‌’ ಇವರ ಮುಂದಿನ ಚಿತ್ರ. 

ಶಶಾಂಕ್ ಸೋಗಾಲ್

ಶಶಾಂಕ್ ಸೋಗಾಲ್

ಶಶಾಂಕ್ ಸೋಗಾಲ್ ‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಮೈಸೂರಿನವರಾದ ಇವರು ಸಾಹಿತ್ಯ, ಸಿನಿಮಾ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಕಳೆದೊಂದು ದಶಕದಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ‘ಡೇರ್‌ ಡೆವಿಲ್‌ ಮುಸ್ತಾಫಾ’ ಇವರ ಚೊಚ್ಚಲ ನಿರ್ದೇಶನದ ಸಿನಿಮಾ. 2015ರಲ್ಲಿ ‘ಫಟ್ಟಿಂಗ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿ ಜನಮನ್ನಣೆ ಗಳಿಸಿದ್ದರು. ಮನರಂಜನಾ ಚಾನಲ್‌ಗಳಲ್ಲಿಯೂ ಕೆಲಸ ಮಾಡಿ ಅನುಭವ ಹೊಂದಿರುವ ಶಶಾಂಕ್‌ ಸದ್ಯ ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ. 

ಸಿಂಧು ಶ್ರೀನಿವಾಸಮೂರ್ತಿ

ಸಿಂಧು ಶ್ರೀನಿವಾಸಮೂರ್ತಿ

ನಟಿ, ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ‘ಆಚಾರ್‌ ಆಂಡ್‌ ಕೋ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ತಮ್ಮ 16ನೇ ವಯಸ್ಸಿನಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇವರು ನಟಿಯಾಗಿ ಚಿತ್ರರಂಗಕ್ಕೆ ಬಂದವರು. ‘ಫ್ರೆಂಚ್‌ ಬಿರಿಯಾನಿ’, ತೆಲುಗಿನ ‘ಸಿನಿಮಾ ಬಂಡಿ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರವಣಿಗೆ, ನಿರ್ದೇಶನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು ಸಿನಿಮಾ, ವೆಬ್‌ಸೀರೀಸ್‌, ಜಾಹೀರಾತುಗಳಲ್ಲಿ ನಟಿಸಿ ನಂತರ ಚಿತ್ರಕಥೆ ಬರವಣಿಗೆ ಕಲಿಯಲು ಮುಂಬೈಗೆ ಪಯಣಿಸುತ್ತಾರೆ. 2017ರಲ್ಲಿ ‘ಆಚಾರ್‌ ಆಂಡ್‌ ಕೋ’ ಚಿತ್ರದ ಬರವಣಿಗೆ ಪ್ರಾರಂಭಿಸುತ್ತಾರೆ. ವಿಭಿನ್ನ ಕಥೆ ಮತ್ತು ನಿರೂಪಣೆ ಹೊಂದಿರುವ, ಪಿಆರ್‌ಕೆ ಸಂಸ್ಥೆ ನಿರ್ಮಿಸಿರುವ ಈ ಚಿತ್ರ 2023ರಲ್ಲಿ ತೆರೆಕಂಡು ಜನಮನ್ನಣೆ ಗಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT