ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ಯಾರ ಮುಡಿಗೆ ಸಿನಿ ಸಮ್ಮಾನದ ಗರಿ?

Published 29 ಮೇ 2024, 1:23 IST
Last Updated 29 ಮೇ 2024, 1:23 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ವರ್ಷದ ಅತ್ಯುತ್ತಮ ಚಿತ್ರ’ವನ್ನು ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ.
https://www.prajavani.net/cinesamman/season2

ವರ್ಷದ ಅತ್ಯುತ್ತಮ ಚಿತ್ರ (2023) 

ಪಿಂಕಿ ಎಲ್ಲಿ 

ಇದು ಪೃಥ್ವಿ ಕೊಣನೂರು ನಿರ್ದೇಶಿಸಿದ ಚಿತ್ರ. ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿ ಬಾಚಿಕೊಂಡಿದ್ದ ಈ ಚಿತ್ರವು, 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದೆ. ಕಳೆದುಹೋದದ್ದನ್ನು ಹುಡುಕುತ್ತ ಸಾಗುವ ಮಾದರಿಯ ಕಥಾವಸ್ತು ಇದರಲ್ಲಿದೆ. ಕಳೆದುಹೋದ ಕೂಸು ‘ಪಿಂಕಿ’ಯನ್ನು ಹುಡುಕುವ ಪ್ರಕ್ರಿಯೆಯಲ್ಲಿ, ಹಲವು ಸೂಕ್ಷ್ಮ ಜಗತ್ತುಗಳನ್ನು ಪೃಥ್ವಿ ತೋರಿಸುತ್ತ ಹೋಗುತ್ತಾರೆ. ಇವುಗಳನ್ನು ಬಹಳ ಪರಿಣಾಮಕಾರಿಯಾಗಿ ಅವರು ತೆರೆಮೇಲೆ ತಂದಿದ್ದಾರೆ. ವೃತ್ತಿಪರ ನಟ-ನಟಿಯರು ಹಾಗೂ ವೃತ್ತಿಪರರಲ್ಲದವರನ್ನು  ಬಳಸಿಕೊಳ್ಳಲಾಗಿದೆ. ಎಲ್ಲರ ನಟನೆ ಬಹಳ ಸಹಜವಾಗಿದೆ. ಅಕ್ಷತಾ ಪಾಂಡವಪುರ, ದೀಪಕ್‌ ಸುಬ್ರಹ್ಮಣ್ಯ, ಅನೂಪ್‌ ಶೂನ್ಯರಂತಹ ಕಲಾವಿದರ ಜೊತೆಗೆ ಗುಂಜಲಮ್ಮ, ಸುಭದ್ರ, ಲಕ್ಷ್ಮಿ ಮೊದಲಾದ ವೃತ್ತಿಪರರಲ್ಲದ ನಟ-ನಟಿಯರ ಅಭಿನಯವೂ ಗಮನ ಸೆಳೆಯುತ್ತದೆ.

ಸ್ವಾತಿ ಮುತ್ತಿನ ಮಳೆ ಹನಿಯೇ

ಮಾಸ್‌ ಸಿನಿಮಾಗಳ ಭರಾಟೆಯ ನಡುವೆ ನಿರ್ದೇಶಕ ರಾಜ್‌ ಬಿ. ಶೆಟ್ಟಿ ಕಟ್ಟಿದ ತಿಳಿ ನೀರ ಕೊಳ ಈ ಸಿನಿಮಾ. ‘ನಂದಿ ಬಟ್ಟಲು’ ಹೂವಿನಂತೆ ಸ್ವಚ್ಛ, ಶುಭ್ರ. ಯಾವುದೇ ಆರ್ಭಟಗಳು ಇಲ್ಲಿಲ್ಲ. ಧಾವಂತವೂ ಇಲ್ಲ. ಮೌನಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ, ಇರುವ ಸಂಭಾಷಣೆಗಳಲ್ಲಿ ಗಾಢತೆ. ರೂಪಕಗಳ ಸರಪಳಿಯಲ್ಲಿ ಜೀವನದ ಕಥೆಯನ್ನು ರಾಜ್‌ ಬಿ.ಶೆಟ್ಟಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಹಾಸ್‌ಪಿಸ್‌’, ಎಂದರೆ ಗುಣ ಆಗದಂಥ ಕಾಯಿಲೆ ಇರುವವರು ತಂಗಿರುವ ಕೇಂದ್ರ ಕಥೆಯ ವೇದಿಕೆ. ಅಲ್ಲಿ ಕ್ಯಾನ್ಸರ್‌ನ ಕೊನೆಯ ಹಂತ ತಲುಪಿದ ವ್ಯಕ್ತಿಯ ಪಾತ್ರದಲ್ಲಿ ರಾಜ್‌, ಕೌನ್ಸಿಲರ್‌ ಪಾತ್ರದಲ್ಲಿ ಪ್ರೇರಣಾ ನಟಿಸಿದ್ದಾರೆ. ರಮ್ಯಾ ನಿರ್ಮಾಣದ ಈ ಚಿತ್ರದಲ್ಲಿ ರಾಜ್‍ ಮತ್ತು ಸಿರಿ ಜೊತೆಗೆ ಬಾಲಾಜಿ ಮನೋಹರ್‌, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಜೆ.ಪಿ. ತುಮ್ಮಿನಾಡು, ಸ್ನೇಹ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ. ಪ್ರವೀಣ್‌ ಶ್ರೀಯಾನ್‌ ಛಾಯಾಚಿತ್ರಗ್ರಹಣ, ಮಿಥುನ್‌ ಮುಕುಂದನ್‌ ಸಂಗೀತ ಉಕ್ಕುವ ಭಾವನೆಗಳಿಗೆ ಇಂಬು ನೀಡುವಂತಿದೆ. ಮನರಂಜನೆಗಾಗಿ ಈ ಸಿನಿಮಾವಿಲ್ಲ; ಒಂದಿಷ್ಟು ಆಲೋಚನೆಗಳು, ಪ್ರಶ್ನೆಗಳನ್ನು ಕೆದಕುತ್ತ ಸಾಗುವ ಪಯಣವಿದು. 

ವಿರಾಟಪುರ ವಿರಾಗಿ 

ಹಾನಗಲ್ ಕ್ಷೇತ್ರದ ವಿರಾಟಪುರದ ಶ್ರೀ ಕುಮಾರ ಶಿವಯೋಗಿಸ್ವಾಮಿ ಅವರ ಹೆಸರು ಚಿರಸ್ಥಾಯಿಯಾದುದು. ಜಾತಿ ತರತಮಗಳನ್ನು ಹೊಡೆದೋಡಿಸುತ್ತಾ, ಶರಣ ತತ್ತ್ವಗಳನ್ನು ನಿಜಾರ್ಥದಲ್ಲಿ ಅನುಷ್ಠಾನಗೊಳಿಸಿದವರಲ್ಲಿ ಅವರು ಪ್ರಮುಖರು. ಇಂತಹ ಅಪರೂಪದ ಚೇತನದ ಕುರಿತು ಸಾಕಷ್ಟು ಅಧ್ಯಯನ ನಡೆಸಿ, ಚಿತ್ರಕಥೆ ಸಿದ್ಧಪಡಿಸಿ ತಯಾರಿಸಿದ ಸಿನಿಮಾ ‘ವಿರಾಟಪುರದ ವಿರಾಗಿ’. ಬಿ.ಎಸ್. ಲಿಂಗದೇವರು ಈ ಸಿನಿಮಾ ನಿರ್ದೇಶಕರು. ಸುಚೇಂದ್ರ ಪ್ರಸಾದ್, ಕುಮಾರಸ್ವಾಮಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‍ಪುಟ್ಟರಾಜ ಗವಾಯಿಗಳಿಗೆ ಸಂಗೀತ ಸರಸ್ವತಿ ಒಲಿಯಲು ಕಾರಣರಾದ ಕುಮಾರಸ್ವಾಮಿಗಳ ಬದುಕಿನಲ್ಲಿ ಕಣ್ಣರಳಿಸುವಂತಹ ಸಾಮಾಜಿಕ ಕಥನಗಳಿವೆ. ಅವುಗಳಲ್ಲಿ ಮಹತ್ವವಾದ ಕೆಲವನ್ನು ಆಯ್ದು ಸಿನಿಮಾದಲ್ಲಿ ಸಾವಧಾನದಿಂದ ಕಟ್ಟಿಕೊಡಲಾಗಿದೆ. ಸಣ್ಣಪುಟ್ಟ ಹಾಡುಗಳೂ ಸೇರಿದಂತೆ ಹನ್ನೆರಡು ಗೀತೆಗಳಿಗೆ ಮಣಿಕಾಂತ್ ಕದ್ರಿ ಸ್ವರ ಸಂಯೋಜನೆ ಮಾಡಿದ್ದಾರೆ. ದೇಸಿ ವಾದ್ಯಗಳನ್ನು ಬಳಸಿ, ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡಿರುವುದು ಇನ್ನೊಂದು ವಿಶೇಷ. ಸಂಗೀತದ ದೃಷ್ಟಿಯಿಂದ, ಸಾಮಾಜಿಕ ಪರಿಣಾಮದ ಪಾಠವೂ ಆಗುವ ಕಾರಣದಿಂದ ಈ ಸಿನಿಮಾ ಭಿನ್ನವೂ ಹೌದು, ಮುಖ್ಯವೂ ಹೌದು.

ಕಾಟೇರ 

ತರುಣ್‌ಕಿಶೋರ್‌ ಸುಧೀರ್‌ ಹಾಗೂ ದರ್ಶನ್‌ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದು. ಭೂ ಸುಧಾರಣಾ ಕಾಯ್ದೆಯನ್ನು ಎಳೆಯಾಗಿಟ್ಟುಕೊಂಡು ದಬ್ಬಾಳಿಕೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಈ ಚಿತ್ರದ ಕಥೆ ಹೆಣೆಯಲಾಗಿದೆ. 1970–80ರಲ್ಲಿ ನಡೆಯುವ ಕಥೆ ಹೊತ್ತಿರುವ ಸಿನಿಮಾ ಇದಾಗಿದೆ. ‘ಕಾಟೇರ’ ಒಂದು ಭಿನ್ನ ಪ್ರಯೋಗ; ಗಟ್ಟಿ ಕಥೆಯಿದ್ದ ಕಮರ್ಷಿಯಲ್‌ ಪ್ಯಾಕೇಜ್‌. ನೆಲದ ಕಥೆ ಹೊತ್ತ ಈ ಸಿನಿಮಾದಲ್ಲಿ ದರ್ಶನ್‌–ಆರಾಧನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಸಿನಿಮಾದಲ್ಲಿ ಜಗಪತಿ ಬಾಬು, ಅವಿನಾಶ್‌, ಶ್ರುತಿ, ಕುಮಾರ್‌ ಗೋವಿಂದ್, ವೈಜನಾಥ ಬಿರಾದಾರ್‌, ಮಾಸ್ಟರ್‌ ರೋಹಿತ್‌ ಮುಂತಾದವರು ನಟಿಸಿದ್ದಾರೆ. 2023ರಲ್ಲಿ ಈ ಸಿನಿಮಾ ತನ್ನ ಗಟ್ಟಿಯಾದ ಕಥೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿತ್ತು. ‘ಕಾಟೇರ’ ಜಡೇಶ್‌ ಕೆ.ಹಂಪಿ ಹಾಗೂ ತರುಣ್‌ ಅವರ ಕಥೆ ಮತ್ತು ಮಾಸ್ತಿ ಅವರ ಸಂಭಾಷಣೆ ಸಿನಿಮಾದ ಆಸ್ತಿಯಾಗಿ ಮಾರ್ಪಟ್ಟಿತು. ಅದು ಪರಿಣಾಮಕಾರಿ ಅಸ್ತ್ರವೂ ಆಯಿತು. ಸಿನಿಮಾ ನೂರು ದಿನಗಳನ್ನು ಪೂರೈಸಿತು.

ಡೇರ್‌ಡೆವಿಲ್‌ ಮುಸ್ತಾಫಾ 

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳನ್ನು ಓದುವುದೇ ಒಂದು ರೀತಿಯಲ್ಲಿ ಸಿನಿಮಾ ನೋಡಿದ ಅನುಭವ. ಏಲಕ್ಕಿ ತೋಟದ ಘಮಲು ನಡುವೆ ನಡೆಯುವ ಶಿಕಾರಿಯಲ್ಲಿ ‘ಪುಂಗಿ ಎಂಕ್ಟ’ನಂತಹ ಅದೆಷ್ಟೋ ಪಾತ್ರಗಳು ಬಂದು ಹೋಗುತ್ತವೆ. ತೇಜಸ್ವಿಯವರ ಇಂತಹದ್ದೆ ಒಂದು ಕಥೆಯನ್ನಾಧರಿಸಿದ ಚಿತ್ರ ‘ಡೇರ್‌ಡೆವಿಲ್‌ ಮುಸ್ತಾಫಾ’. ಯುವ ನಿರ್ದೇಶಕ ಶಶಾಂಕ್‌ ಸೋಗಾಲ್‌ ಇದರ ರೂವಾರಿ. ಪೂರ್ತಿ ಹಿಂದೂಗಳೇ ಇರುವ ಮೂಡಿಗೆರೆಯ ಕಾಲೇಜಿಗೆ ಪ್ರವೇಶ ಪಡೆಯುವ ಏಕೈಕ ಮುಸ್ಲಿಂ ವಿದ್ಯಾರ್ಥಿ ‘ಮುಸ್ತಾಫಾ’ನ ಬದುಕಿನ ಸುತ್ತ ಚಿತ್ರ ಸಾಗುತ್ತದೆ. ಮುಸ್ತಾಫಾನ ಪಾತ್ರದಲ್ಲಿ ನಟ ಶಿಶಿರ್‌, ಅಯ್ಯಂಗಾರಿ ಪಾತ್ರದಲ್ಲಿ ನಟ ಆದಿತ್ಯ, ನಾಗಭೂಷಣ್‌ ಕನ್ನಡ ಪ್ರಾಧ್ಯಾಪಕರಾಗಿ ಕಾಣಿಸಿಕೊಂಡಿದ್ದಾರೆ. ಪೂರ್ಣಚಂದ್ರ ಮೈಸೂರು, ವಿಜಯ್‌ ಶೋಭರಾಜ್‌ ಮಂಡ್ಯ ರಮೇಶ್‌ ಮೊದಲಾದವರು ನಟಿಸಿದ್ದಾರೆ. ನವನೀತ್‌ ಶಾಮ್‌ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಬೆನ್ನೆಲುಬು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT