ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿ ಶೀಘ್ರ

Published 23 ಮಾರ್ಚ್ 2024, 23:43 IST
Last Updated 23 ಮಾರ್ಚ್ 2024, 23:43 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ದಿನಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ಒಡನಾಟ ಆರು ದಶಕದಿಂದಲೂ ಗಾಢವಾಗಿದೆ. ಇತಿಹಾಸದ ಪುಟಗಳನ್ನು ತಿರುವಿದರೆ ಹತ್ತಾರು ನಿದರ್ಶನಗಳು ಸಿಕ್ಕುತ್ತವೆ. ಚಿತ್ರೋದ್ಯಮದ ನಾಡಿಮಿಡಿತವನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತಾ, ಅಲ್ಲಿನ ಪಲ್ಲಟಗಳನ್ನು ಹೊಣೆಗಾರಿಕೆಯಿಂದ ದಾಟಿಸುತ್ತಾ, ಸಾಂಸ್ಕೃತಿಕ ದೃಷ್ಟಿಯಲ್ಲಿಯೂ ಸಿನಿಮಾಗಳನ್ನು ನೋಡುವಂತಹ ಗಾಂಭೀರ್ಯವನ್ನು ‘ಪ್ರಜಾವಾಣಿ’ ಉಳಿಸಿಕೊಂಡಿದೆ. ಹೀಗಾಗಿಯೇ ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ, ಬೆಸೆಯುವ ವೇದಿಕೆಯೊಂದನ್ನು 2023ರಲ್ಲಿ ‘ಪ್ರಜಾವಾಣಿ’ ಸೃಷ್ಟಿಸಿತು. ತನ್ನ ‘ಅಮೃತ ಸಂಭ್ರಮ’ದ ಸಂದರ್ಭದಲ್ಲಿ ಪ್ರಾರಂಭಿಸಿದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕನ್ನಡ ಚಿತ್ರರಂಗದ ಪ್ರೀತಿಗೆ ಪಾತ್ರವಾಗಿದೆ. ಚೊಚ್ಚಲ ಆವೃತ್ತಿಯಲ್ಲೇ ಮೆಚ್ಚುವಂತಹ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಪ್ರಜಾವಾಣಿ’ ಇದೀಗ ಎರಡನೇ ಆವೃತ್ತಿಗೆ ಸಜ್ಜಾಗುತ್ತಿದೆ. 

ಆಶಯ...

ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿಹಿಡಿಯಲು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ವೇದಿಕೆಯಾಗಬೇಕೆಂಬುದೇ ಆಶಯ. ಸ್ಯಾಂಡ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಿ ಚಿತ್ರರಂಗದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಎರಡನೇ ಆವೃತ್ತಿಗೂ ಅಣಿಯಾಗುತ್ತಿದೆ. 

ಸಿದ್ಧತೆ ಹೀಗಿದೆ?

2023ರಲ್ಲಿ ಇನ್ನೂರಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಕಂಡಿವೆ. ಚಿತ್ರರಂಗದ ಪಿಆರ್‌ಒಗಳ ಸಹಕಾರದೊಂದಿಗೆ ಈ ಚಿತ್ರಗಳ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಸಿನಿಮಾಗಳ ಸಂಗ್ರಹ ಪ್ರಕ್ರಿಯೆ ಶುರುವಾಗಿದ್ದು, ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ಸ್ವೀಕರಿಸಲಾಗಿದೆ. ಈ ಸಂದರ್ಭದಲ್ಲಿ ಆಡಿಟ್‌ ಪಾರ್ಟ್‌ನರ್‌ ಆಗಿ ‘ಇವೈ’ ಸಂಸ್ಥೆ ಜೊತೆಯಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

2023ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕೃತಗೊಂಡು ಬಿಡುಗಡೆಯಾದ ಚಿತ್ರಗಳನ್ನು ಎರಡನೇ ಆವೃತ್ತಿಗೆ ಪರಿಗಣಿಸಲಾಗಿದೆ. ಆಯ್ಕೆ ಪ್ರಕ್ರಿಯೆ ವಿಶಿಷ್ಟವಾಗಿದೆ. ಚಿತ್ರರಂಗದವರು ಹಾಗೂ ಪ್ರೇಕ್ಷಕರನ್ನು ಒಳಗೊಳ್ಳುವಂತಹ ಆಲೋಚನೆಯಿದು. ನಾಮನಿರ್ದೇಶಿತರ ಹಾಗೂ ವಿಜೇತರ ಕುರಿತಂತೆ ಯಾವುದೇ ಪೂರ್ವಗ್ರಹ ಇರಕೂಡದು ಎಂಬ ಎಚ್ಚರಿಕೆ ಇದಾಗಿದೆ. ಆಯ್ಕೆಯು ಯಾವುದೇ ವ್ಯಕ್ತಿಗಳು, ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಅತ್ಯಂತ ಪಾರದರ್ಶಕ ಮತ್ತು ವೃತ್ತಿಪರವಾಗಿ ನಡೆಯುತ್ತದೆ. ಇಡೀ ಆಯ್ಕೆ ಪ್ರಕ್ರಿಯೆಯನ್ನು ಮೂರು ಸ್ತರಗಳಲ್ಲಿ ನಡೆಸಲಾಗುತ್ತದೆ. ಚಿತ್ರಗಳನ್ನು ಸುಮಾರು 20 ಪರಿಣತರ ತಾಂತ್ರಿಕ ತೀರ್ಪುಗಾರರ ಮಂಡಳಿ ವೀಕ್ಷಿಸಲಿದ್ದು, ಪ್ರತಿ ವಿಭಾಗದಲ್ಲಿ ತಲಾ ಐದು ನಾಮನಿರ್ದೇಶನ ಮಾಡಲಿದೆ.

ಖ್ಯಾತ ನಿರ್ದೇಶಕ ಟಿ.ಎಸ್‌.ನಾಗಾಭರಣ ಮುಖ್ಯ ತೀರ್ಪುಗಾರರ ಸಮಿತಿಯಲ್ಲಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಬೆಂಗಳೂರು ಚಿತ್ರೋತ್ಸವದ ಸಂಸ್ಥಾಪಕ ಎನ್‌. ವಿದ್ಯಾಶಂಕರ್‌, ನಟಿಯರಾದ ಸುಧಾರಾಣಿ, ರಕ್ಷಿತಾ, ಶ್ರುತಿ ಹರಿಹರನ್‌, ನಿರ್ದೇಶಕಿ ಸುಮನಾ ಕಿತ್ತೂರು, ಸಂಗೀತ ನಿರ್ದೇಶಕ ವಿ.ಮನೋಹರ್‌ ಸಮಿತಿಯಲ್ಲಿರುವ ಮುಖ್ಯ ತೀರ್ಪುಗಾರರು. ಎರಡನೇ ಹಂತದಲ್ಲಿ ಮುಖ್ಯ ತೀರ್ಪುಗಾರರ ಮಂಡಳಿಯಿಂದ ನಾಮನಿರ್ದೇಶನಗಳಿಗೆ ಅಂತಿಮರೂಪ ದೊರೆಯಲಿದೆ. ಮೂರನೇ ಹಂತದಲ್ಲಿ, ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಜನರಿಂದ ಮತದಾನ ನಡೆಯಲಿದೆ. ಚಿತ್ರರಂಗದ ಪ್ರಮುಖ ‌ಸಂಘ-ಸಂಸ್ಥೆಗಳ ‌ಸದಸ್ಯರು ಮತದಾನದ ಮೂಲಕ ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ನಂತರ ಮುಖ್ಯ ತೀರ್ಪುಗಾರರ ಮಂಡಳಿಯಿಂದ ಮೇಲಿನ ಮೂರು ಸ್ತರಗಳಿಂದಾದ ಆಯ್ಕೆಗೆ ಅಂತಿಮ ಅನುಮೋದನೆ ದೊರೆಯುತ್ತದೆ. ‘ಪ್ರಜಾವಾಣಿ ಸಿನಿ ಸಮ್ಮಾನ’ದ ಎರಡನೇ ಆವೃತ್ತಿಯ ಕಾರ್ಯಕ್ರಮ ಮತ್ತಷ್ಟು ವಿಜ್ರಂಭಣೆಯಿಂದ ಶೀಘ್ರದಲ್ಲೇ ನಡೆಯಲಿದೆ.

ಟಿ.ಎಸ್‌. ನಾಗಾಭರಣ

ಟಿ.ಎಸ್‌.ನಾಗಾಭರಣ 
ಟಿ.ಎಸ್‌.ನಾಗಾಭರಣ 

ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಅಭಿನಯ ಮತ್ತು ನಿರ್ದೇಶನದ ಸಾಮರ್ಥ್ಯದಿಂದ ಗುರುತಿಸಿಕೊಂಡವರು. ‘ಬೆನಕ’ದಿಂದ ಹೊಮ್ಮಿದ ಹೊಂಗಿರಗಣಗಳಲ್ಲಿ ಇವರು ಪ್ರಮುಖರು. ಕಲಾತ್ಮಕ ಮತ್ತು ಮುಖ್ಯವಾಹಿನಿ ಸಿನಿಮಾಗಳನ್ನು ನಿರ್ದೇಶಿಸಿ ಛಾಪು ಮೂಡಿಸಿದ್ದಾರೆ. 1978 ರಲ್ಲಿ ತೆರೆಕಂಡ ‘ಗ್ರಹಣ’ ಚಿತ್ರದ ಮೂಲಕ ನಿರ್ದೇಶಕರಾದರು. ಈ ಚಿತ್ರ ಎರಡು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ‘ಬಂಗಾರದ ಜಿಂಕೆ’, ‘ಅನ್ವೇಷಣೆ’ ಬಳಿಕ ನಿರ್ದೇಶಿಸಿದ ‘ಬ್ಯಾಂಕರ್ ಮಾರ್ಗಯ್ಯ’ ಚಿತ್ರವೂ ರಾಷ್ಟ್ರ ಪ್ರಶಸ್ತಿ ಪಡೆಯಿತು. ಇವರ ಸಿನಿಮಾಗಳಿಗೆ ಒಟ್ಟು ಎಂಟು ರಾಷ್ಟ್ರ ಪ್ರಶಸ್ತಿಗಳು ದೊರಕಿವೆ. ‘ಆಕ್ಸಿಡೆಂಟ್’ ಚಿತ್ರದಲ್ಲಿನ ನಟನೆ ಮೂಲಕ ಜನಮನ್ನಣೆ ಗಳಿಸಿಕೊಂಡರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಎನ್. ವಿದ್ಯಾಶಂಕರ್

ಎನ್‌. ವಿದ್ಯಾಶಂಕರ್  ವಿಮರ್ಶಕ
ಎನ್‌. ವಿದ್ಯಾಶಂಕರ್ ವಿಮರ್ಶಕ

ಸಾಹಿತ್ಯದ ವಿದ್ಯಾರ್ಥಿ ಆಗಿದ್ದುಕೊಂಡೇ ಸಿನಿಮಾವನ್ನು ಆಳವಾಗಿ ಅಭ್ಯಸಿಸಿದವರು. ಇವರು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ವರ್ಷಗಳ ಕಾಲ ಕೆಲಸ ಮಾಡಿ, ಅದಕ್ಕೆ ಗುಣಮಟ್ಟ ದಕ್ಕಿಸಿಕೊಟ್ಟವರು. ಅದರ ಸಂಸ್ಥಾಪಕ ಸದಸ್ಯರೂ ಹೌದು. ಕಾನ್‌, ಬೂಸಾನ್‌ನಂತಹ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಅವರದ್ದು. ಭಾರತೀಯ ಚಲನಚಿತ್ರಗಳ ಸೂಕ್ಷ್ಮಗಳನ್ನೂ ಅರಿತವರು ವಿದ್ಯಾಶಂಕರ್.

ಸುಧಾರಾಣಿ

ಸುಧಾರಾಣಿ 
ಸುಧಾರಾಣಿ 

ಜಾಹೀರಾತು, ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯ. 1986ರಲ್ಲಿ ಶಿವರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ‘ಆನಂದ್‌’ ಮೂಲಕ 14ನೇ ವಯಸ್ಸಿನಲ್ಲೇ ನಾಯಕಿಯಾಗಿ ಬೆಳ್ಳಿತೆರೆಯ ಪಯಣ ಆರಂಭಿಸಿದರು. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳ, ತುಳು ಚಿತ್ರಗಳಲ್ಲೂ ನಟಿಸಿದ್ದಾರೆ. 80 ಮತ್ತು 90ರ ದಶಕಗಳಲ್ಲಿ ಕನ್ನಡದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಅಭಿನಯಿಸಿದ ಹೆಗ್ಗಳಿಕೆ ಇವರದು. ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಪ್ರಮುಖ ಪಾತ್ರಗಳಲ್ಲಿ ಛಾಪು ಮೂಡಿಸಿದ್ದಾರೆ.

ರಕ್ಷಿತಾ ಪ್ರೇಮ್‌

ರಕ್ಷಿತಾ ಪ್ರೇಮ್‌ 
ರಕ್ಷಿತಾ ಪ್ರೇಮ್‌ 

ಪುನೀತ್ ರಾಜ್‌ಕುಮಾರ್ ಅಭಿನಯದ ‘ಅಪ್ಪು’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದವರು ಇವರು. ದರ್ಶನ್‌ ಜೊತೆಗಿನ ‘ಕಲಾಸಿಪಾಳ್ಯ’ ದೊಡ್ಡ ಹಿಟ್ ಆಗಿ ಇವರ ವೃತ್ತಿ ಬದುಕಿನಲ್ಲಿ ಮಹತ್ವದ ತಿರುವು ನೀಡಿತು. ಕನ್ನಡ, ತೆಲುಗು ಚಿತ್ರಗಳ ಟಾಪ್‌ ನಾಯಕರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದು. ತಮ್ಮದೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಪ್ರಸ್ತುತ ಇವರು ಕಿರುತೆರೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಸಕ್ರಿಯ.

ಸುಮನಾ ಕಿತ್ತೂರು

ಸುಮನಾ ಕಿತ್ತೂರು ನಿರ್ದೇಶಕಿ
ಸುಮನಾ ಕಿತ್ತೂರು ನಿರ್ದೇಶಕಿ

ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದ ‘ಎದೆಗಾರಿಕೆ’ ಸಿನಿಮಾ ನಿರ್ದೇಶಿಸಿದವರು. ದಕ್ಷಿಣ ಭಾರತದ ಕೆಲವೇ ಗಟ್ಟಿ ನಿರ್ದೇಶಕಿಯರ ಪೈಕಿ ಇವರೂ ಒಬ್ಬರು. ‘ಕಳ್ಳರ ಸಂತೆ’ ಸಿನಿಮಾ ಮೂಲಕ ನಿರ್ದೇಶಕಿಯಾದರು. ಅದಕ್ಕೂ ಮೊದಲು ಪತ್ರಕರ್ತ ಅಗ್ನಿ ಶ್ರೀಧರ್‌ ಅವರ ಜೊತೆ ‘ಆ ದಿನಗಳು’ ಸಿನಿಮಾದಲ್ಲೂ ಕೆಲಸ ಮಾಡಿ ಅನುಭವ ಗಿಟ್ಟಿಸಿಕೊಂಡವರು. 2016ರಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರವನ್ನು ನಿರ್ದೇಶಿಸಿದರು. ಇವರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಗಳು ದೊರಕಿವೆ.

ಶ್ರುತಿ ಹರಿಹರನ್‌

ಶ್ರುತಿ ಹರಿಹರನ್‌ 
ಶ್ರುತಿ ಹರಿಹರನ್‌ 

‘ಲೂಸಿಯಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ‘ನಾತಿಚರಾಮಿ’ ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ತೆರೆಯಿಂದ ಕೊಂಚ ಸಮಯ ಬಿಡುವು ಪಡೆದುಕೊಂಡಿದ್ದ ಇವರು, ಇದೀಗ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಕನ್ನಡದಲ್ಲಿ ‘ಸ್ಟ್ರಾಬೆರಿ’ ಅವರ ಮುಂದಿನ ಚಿತ್ರ. ಜೊತೆಗೆ ಎರಡು ಹೊಸ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ. ನಿರ್ದೇಶನದ ತಾಲೀಮಾಗಿ ಒಂದು ಮ್ಯೂಸಿಕ್‌ ವಿಡಿಯೊ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ.

ವಿ.ಮನೋಹರ್‌

ವಿ. ಮನೋಹರ್‌ 
ವಿ. ಮನೋಹರ್‌ 

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಷ್ಟೇ ಅಲ್ಲದೆ ನಟ, ನಿರ್ದೇಶಕ, ಗೀತ ರಚನಾಕಾರರಾಗಿಯೂ ಇವರು ಪರಿಚಿತರು. ‘ತರ್ಲೆ ನನ್ಮಗ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ‘ಜನುಮದ ಜೋಡಿ’, ‘ಚಿಗುರಿದ ಕನಸು’, ‘ಸೂರ್ಯವಂಶ’ ಚಿತ್ರಗಳ ಮೂಲಕ ಜನಪ್ರಿಯರಾದರು. ಇಲ್ಲಿತನಕ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ‘ಓ ಮಲ್ಲಿಗೆ, ‘ಇಂದ್ರಧನುಷ್‌’ ಸೇರಿ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. 

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಮೊದಲ ಆವೃತ್ತಿಯಲ್ಲಿ ನಟಿ ಭಾವನಾ ರಾವ್ ಹೆಜ್ಜೆ ಹಾಕಿದರು.  
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಮೊದಲ ಆವೃತ್ತಿಯಲ್ಲಿ ನಟಿ ಭಾವನಾ ರಾವ್ ಹೆಜ್ಜೆ ಹಾಕಿದರು.  
ನನ್ನ ದಿಕ್ಕುಗಳನ್ನು ನಿಗದಿಪಡಿದ ಪತ್ರಿಕೆ ‘ಪ್ರಜಾವಾಣಿ’. ‘ಗ್ರಹಣ’ಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಾಗ ಪ್ರಜಾವಾಣಿ ಕೊಟ್ಟ ಪ್ರೋತ್ಸಾಹ ನೆನಪಿನಲ್ಲಿದೆ. ವಿಚಾರ ವೈಚಾರಿಕತೆ ಆಲೋಚನೆ ಭವಿಷ್ಯದ ಬಗ್ಗೆ ಚಿಂತನೆಯನ್ನು ನನಗೆ ಪ್ರಜಾವಾಣಿ ಕೊಟ್ಟಿದೆ. ಇದೀಗ ಪ್ರಜಾವಾಣಿಯ ಕನ್ನಡ ಸಿನಿ ಸಮ್ಮಾನದ ಎರಡನೇ ಆವೃತ್ತಿಯ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಭೂಮಿಕೆಯಲ್ಲಿ ಇದ್ದೇನೆ. ಪ್ರತಿಯೊಬ್ಬರಿಗೂ ಗೌರವ ಪುರಸ್ಕಾರ ಜೊತೆಗೆ ಹೆಗಲಿಗೆ ಏರುವ ಜವಾಬ್ದಾರಿಯನ್ನು ಕೊಡುವ ಕೆಲಸವನ್ನು ಪ್ರಜಾವಾಣಿ ನಿರಂತರವಾಗಿ ಮಾಡುತ್ತಿದೆ. ನನ್ನ ಕೆಲವು ಕ್ಷಣಗಳನ್ನು ಇದರೊಂದಿಗೆ ನಾನು ಕಳೆಯಲಿದ್ದೇನೆ.
ಟಿ.ಎಸ್‌.ನಾಗಾಭರಣ ನಿರ್ದೇಶಕ.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಟ್ರೋಫಿ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಟ್ರೋಫಿ 

ಪ್ರಶಸ್ತಿಯ ವಿಭಾಗಗಳು:

ಒಟ್ಟು 26 ಪ್ರತಿಭಾನ್ವಿತ ಕಲಾವಿದರು 

  • ಅತ್ಯುತ್ತಮ ನಟ

  • ಅತ್ಯುತ್ತಮ ನಟಿ

  • ವರ್ಷದ ಅತ್ಯುತ್ತಮ ಚಿತ್ರ

  • ಅತ್ಯುತ್ತಮ ಪೋಷಕ ನಟ

  • ಅತ್ಯುತ್ತಮ ಪೋಷಕ ನಟಿ

  • ಅತ್ಯುತ್ತಮ ನಿರ್ದೇಶನ

  • ಅತ್ಯುತ್ತಮ ಚೊಚ್ಚಲ ನಿರ್ದೇಶನ

  • ಅತ್ಯುತ್ತಮ ಸಂಗೀತ ನಿರ್ದೇಶನ

  • ಅತ್ಯುತ್ತಮ ಛಾಯಾಚಿತ್ರಗ್ರಹಣ

  • ಅತ್ಯುತ್ತಮ ಸಂಕಲನ

  • ಅತ್ಯುತ್ತಮ ಚಿತ್ರಕಥೆ

  • ಅತ್ಯುತ್ತಮ ಹಿನ್ನೆಲೆ ಗಾಯಕ

  • ಅತ್ಯುತ್ತಮ ಹಿನ್ನೆಲೆ ಗಾಯಕಿ

  • ಅತ್ಯುತ್ತಮ ಗೀತ ಸಾಹಿತ್ಯ

  • ಅತ್ಯುತ್ತಮ ನೃತ್ಯ ನಿರ್ದೇಶನ

ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು

  • ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ

  • ಅತ್ಯುತ್ತಮ ನಿರ್ಮಾಣ ವಿನ್ಯಾಸ

  • ಅತ್ಯುತ್ತಮ ವಿಎಫ್‌ಎಕ್ಸ್‌ ಪೋಸ್ಟ್‌ ಪ್ರೊಡಕ್ಷನ್‌ ಹಾಗೂ ಆ್ಯನಿಮೇಷನ್‌

  • ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ

ಜನಮೆಚ್ಚಿದ ವಿಭಾಗದ ಪ್ರಶಸ್ತಿ

  • ಜನಮೆಚ್ಚಿದ ಸಿನಿಮಾ

  • ಜನಮೆಚ್ಚಿದ ನಟ

  • ಜನಮೆಚ್ಚಿದ ನಟಿ

  • ಜನಮೆಚ್ಚಿದ ಸಂಗೀತ

ಸಂಪಾದಕರ ಆಯ್ಕೆ 

  • ವರ್ಷದ ಗಮನಾರ್ಹ ಸಾಧನೆ  

  • ಕನ್ನಡ ಸಿನಿಮಾಗೆ ಶ್ರೇಷ್ಠ ಕೊಡುಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT