ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿನಮನ: ಅಗಲಿದ ಸಿನಿಮಾ ‘ಆಪ್ತಮಿತ್ರ’ ದ್ವಾರಕೀಶ್

ಆಗಿನ್ನೂ ದ್ವಾರಕೀಶ್ ಅವರಿಗೆ ಎಪ್ಪತ್ತು ತುಂಬುತ್ತಿದ್ದ ಸಮಯ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ ಮನೆಯ ಎದುರು ಕೆಲವರು ವಿನೈಲ್‌ ಬೋರ್ಡ್‌ ಹಾಕಲು ಎಡತಾಕುತ್ತಿದ್ದರು.
Published 17 ಏಪ್ರಿಲ್ 2024, 0:15 IST
Last Updated 17 ಏಪ್ರಿಲ್ 2024, 0:15 IST
ಅಕ್ಷರ ಗಾತ್ರ

ಆಗಿನ್ನೂ ದ್ವಾರಕೀಶ್ ಅವರಿಗೆ ಎಪ್ಪತ್ತು ತುಂಬುತ್ತಿದ್ದ ಸಮಯ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ ಮನೆಯ ಎದುರು ಕೆಲವರು ವಿನೈಲ್‌ ಬೋರ್ಡ್‌ ಹಾಕಲು ಎಡತಾಕುತ್ತಿದ್ದರು. ಪಿಳಿಪಿಳಿ ಕಣ್ಣು ಬಿಡುತ್ತಾ ಅದನ್ನು ಸುಖಿಸುತ್ತಿದ್ದ ದ್ವಾರಕೀಶ್, ಮಾತಿಗೆ ಕುಳಿತಾಗ ಕಣ್ಣುಮುಚ್ಚುತ್ತಿದ್ದರು. ಹಾಗೆ ಕಣ್ಣುಮುಚ್ಚಿಕೊಂಡರೆ, ಹಳೆಯ ಸೀನ್‌ಗಳು ಸ್ಮೃತಿಪಟಲದ ಮೇಲೆ ಕಾಣಿಸಿಕೊಳ್ಳುತ್ತವೆ ಎನ್ನುತ್ತಿದ್ದರು. ಅವರ ಮಾತು ಸಿನಿಮೀಯ. ತಮ್ಮದೇ ಹಳೆಯ ಸಾಹಸಗಳನ್ನು ಹೇಳಿಕೊಳ್ಳುವಾಗ ಮಗುತನ. ಕೆಲವೊಮ್ಮೆ ಅದು ನಿಸ್ಸಂಕೋಚದ ಧೋರಣೆಯಂತೆ ಕಂಡರೆ, ಬಹುತೇಕ ಸಲ ಮುಗ್ಧತೆಯ ಅಭಿವ್ಯಕ್ತಿಯಂತೆ ಕಾಣುತ್ತಿತ್ತು.

‘ಒಬ್ಬನೇ ಕೂತು ಯೋಚಿಸಿದರೆ, ನನ್ನ ಬದುಕಿನ ಸಿನಿಮಾ ತೆರೆದುಕೊಳ್ಳುತ್ತದೆ. ಅದರಲ್ಲಿ ಗುಡ್‌ ಸೀನ್ಸ್‌, ಬ್ಯಾಡ್‌ ಸೀನ್ಸ್‌, ಕಾಮಿಡಿ, ಫೈಟ್‌, ಥ್ರಿಲ್‌ ಎಲ್ಲವೂ ಇದೆ’ ಎಂದು ಆಗ ಅವರು ಚುಟುಕಾಗಿ ಹೇಳಿದ್ದರು. 

ಮೈಸೂರಿನಲ್ಲಿ ಆಟೊಮೊಬೈಲ್ ಅಂಗಡಿಯ ಗಲ್ಲಾದ ಮೇಲೆ ಕುಳಿತಿದ್ದ ಶೋಕೀಲಾಲ ಆಮೇಲೆ ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟನಾಗಿಯೂ ಛಾಪು ಮೂಡಿಸಿದ್ದು ಸಾಹಸಗಾಥೆಯೇ ಹೌದು.

ದ್ವಾರಕೀಶ್ ಸೋದರಮಾವ ಹುಣಸೂರು ಕೃಷ್ಣಮೂರ್ತಿ. ಸಿನಿಮಾ ಬರಹಗಾರರಾಗಿದ್ದ ಅವರಿಗೆ ಅವಕಾಶ ಸಿಕ್ಕಾಗಲೆಲ್ಲ ದ್ವಾರಕೀಶ್ ತುಪ್ಪ ಬಡಿಸುತ್ತಿದ್ದರು. ಪಕ್ಕದಲ್ಲಿ ಚಮಚ ಹಿಡಿದು ನಿಲ್ಲುತ್ತಿದ್ದರು. ‘ಸಿನಿಮಾದಲ್ಲಿ ಸಣ್ಣ ಅವಕಾಶ ಕೊಡಿಸು... ಮಾವ’ ಎಂದು ದುಂಬಾಲು ಬೀಳುತ್ತಿದ್ದರು. ಅದರ ಫಲವೇ ‘ಕನ್ನಿಕಾ ಪರಮೇಶ್ವರಿ’ ಸಿನಿಮಾದಲ್ಲಿ ನರಸಿಂಹರಾಜು ಅವರ ಹಿಂದೆ ನಿಂತು ಸಣ್ಣ ಪಾತ್ರವೊಂದರಲ್ಲಿ ಮೊದಲು ಕಾಣಿಸಿಕೊಂಡಿದ್ದು. ಅದಕ್ಕೆ ಆ ಕಾಲದಲ್ಲಿಯೇ ₹250 ಸಂಭಾವನೆ ಸಿಕ್ಕಿತ್ತು. 

‘ವೀರಸಂಕಲ್ಪ’ ಸಿನಿಮಾದಲ್ಲಿ ಹಾಸ್ಯಪಾತ್ರದಲ್ಲಿ ಅಭಿನಯಿಸಿದ ಎರಡೇ ವರ್ಷಗಳಲ್ಲಿ ‘ಮಮತೆಯ ಬಂಧನ’ ಚಿತ್ರದ ಮೂಲಕ ನಿರ್ಮಾಪಕರಾದರು. ಸಿನಿಮಾ ರುಚಿ ಹತ್ತಿದ್ದೇ ರಾಜಕುಮಾರ್ ಕಾಲ್‌ಷೀಟ್‌ ಪಡೆದು, ‘ಮೇಯರ್ ಮುತ್ತಣ್ಣ’ ಚಿತ್ರ ನಿರ್ಮಿಸಿದರು. ಎಷ್ಟೋ ಸಿನಿಮಾ ಮಂದಿಯ ಎದುರು ಮೂದಲಿಕೆಗೆ ಗುರಿಯಾಗಿದ್ದ ಸಿದ್ಧಲಿಂಗಯ್ಯ ಅವರ ವೃತ್ತಿಬದುಕಿಗೆ ಓ ನಾಮ ಹಾಡಿದ ಚಿತ್ರ ಅದು. ಮುಂದೆ ಸಿದ್ಧಲಿಂಗಯ್ಯ ಪ್ರತಿಭಾವಂತ ನಿರ್ದೇಶಕರಾಗಿ ಬೆಳೆದದ್ದು ಗೊತ್ತೇ ಇದೆ. 

‘ಮೇಯರ್‌ ಮುತ್ತಣ್ಣ’ದ ನಿರ್ಮಾಣ ಲೆಕ್ಕಾಚಾರವೆಲ್ಲ ಕಳೆದು, ₹50 ಸಾವಿರ ಕೈಲಿ ಉಳಿದಿತ್ತು. ರಾಜಕುಮಾರ್ ಕಾಲ್‌ಷೀಟ್‌ ಮತ್ತೆ ಸಿಗದೇ ಇದ್ದಾಗ ದ್ವಾರಕೀಶ್ ಕಂಗಾಲಾದರು. ಮದ್ರಾಸ್‌ನಲ್ಲಿ ನೋಡಿದ್ದ ‘ಆಪರೇಷನ್ ಲವ್‌ ಬರ್ಡ್ಸ್‌’ ಎಂಬ ಡ್ಯಾನಿಷ್‌ ಸಿನಿಮಾ ತಲೆಯಲ್ಲಿ ಬಿಟ್ಟ ಹುಳದ ಪರಿಣಾಮ ತಾವೇ 60 ಸೀನ್‌ಗಳನ್ನು ಬರೆದರು. ಅದೇ ‘ಕುಳ್ಳ ಏಜೆಂಟ್‌ 000’ ಬಾಂಡ್ ಸಿನಿಮಾ ಆದದ್ದು. ಕೆ.ಎಸ್.ಎಲ್. ಸ್ವಾಮಿ ಅದರ ನಿರ್ದೇಶಕ. ದ್ವಾರಕೀಶ್ ನಿರ್ಮಾಪಕ ಹಾಗೂ ನಾಯಕ.

ರಾಜಕುಮಾರ್ ಕಾಲ್‌ಷೀಟ್‌ ಸಿಗದೇಹೋದಾಗ, ವಿಷ್ಣುವರ್ಧನ್ ಸ್ನೇಹದ ಚುಂಗು ಹಿಡಿದರು. ಇಬ್ಬರ ಕಾಂಬಿನೇಷನ್‌ನಲ್ಲಿ ಹಲವು ಸಿನಿಮಾಗಳು ಯಶಸ್ವಿಯಾದವು. ತಮಿಳಿನಲ್ಲಿ ಗೆದ್ದ ಎಷ್ಟೋ ಸಿನಿಮಾಗಳ ರೀಮೇಕ್ ಹಕ್ಕುಗಳನ್ನು ಚಕ್ಕನೆ ಹಿಡಿದು ಕನ್ನಡಕ್ಕೆ ಒಗ್ಗಿಸುವುದರಲ್ಲಿ ದ್ವಾರಕೀಶ್ ನಿಷ್ಣಾತರು. ‘ಮನೆ ಮನೆ ಕಥೆ’, ‘ಮದುವೆ ಮಾಡು ತಮಾಷೆ ನೋಡು’ ಕಡಿಮೆ ಅವಧಿಯಲ್ಲಿ ತಯಾರಾಗಿ ಹೆಚ್ಚು ಗಳಿಕೆ ಕಂಡ ಅಂತಹ ರೀಮೇಕ್ ಸಿನಿಮಾಗಳಿಗೆ ಉದಾಹರಣೆಗಳಷ್ಟೆ. ‘ನೀ ಬರೆದ ಕಾದಂಬರಿ’ ಸಿನಿಮಾದಿಂದ ನಿರ್ದೇಶನಕ್ಕೆ ಇಳಿದಿದ್ದೂ ವಿಷ್ಣು ಗೆಳೆತನ ಹಸಿರಾಗಿದ್ದಾಗಲೇ. ‘ಸಿಂಗಪೂರ್‌ನಲ್ಲಿ ರಾಜಾ ಕುಳ್ಳ’ ಸಿನಿಮಾ ಚಿತ್ರೀಕರಿಸಲು ವಿದೇಶಕ್ಕೆ ಹೋದದ್ದು, ‘ಆಫ್ರಿಕಾದಲ್ಲಿ ಶೀಲಾ’ ಹುಚ್ಚಿಗೆ ಬಿದ್ದು ಆಫ್ರಿಕಾ ಕಾಡಿಗೆ ಹೋಗಿ ಸಾಕಷ್ಟು ಹಣ ಕಳೆದುಕೊಂಡಿದ್ದು, ಕುದುರೆಗೆ ಬಣ್ಣ ಹಚ್ಚಿ ಝೀಬ್ರಾ ಮಾಡಿಸಿದ್ದು... ಇವೆಲ್ಲವೂ ದ್ವಾರಕೀಶ್ ಸಾಹಸಗಳ ಟ್ರೇಲರ್‌ ಇದ್ದಂತೆ. 

ನಟನಾಗಿಯೂ ಅವರ ಟೈಮಿಂಗ್ ಛಾಪುಮೂಡಿಸಿತ್ತು. ‘ಕಳ್ಳ–ಕುಳ್ಳ’, ‘ಕುಳ್ಳ–ಕುಳ್ಳಿ’, ‘ಪ್ರಚಂಡಕುಳ್ಳ’, ‘ನ್ಯಾಯ ಎಲ್ಲಿದೆ’, ‘ಗುರು ಶಿಷ್ಯರು’ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುವ ಗಟ್ಟಿ ಕಾಳುಗಳು. 

1970ರ ದಶಕದಲ್ಲೇ ಹಡಗಿನಲ್ಲಿ ಹೋಂಡಾ ಕಾರನ್ನು ಆಮದು ಮಾಡಿಸಿಕೊಂಡಿದ್ದ ದ್ವಾರಕೀಶ್, ಮದ್ರಾಸ್‌ನ ತಮ್ಮ ಮನೆಯಲ್ಲಿ ಅಣಿಗೊಳಿಸಿದ್ದ ಬಾರ್‌ನೊಟ್ಟಿಗೆ ಬೆರೆತ ಕಥೆಗಳನ್ನು ತುಂಬುಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ₹120ಕ್ಕೆ ಮೊದಲು ಮದ್ರಾಸ್‌ನಲ್ಲಿ ಬಾಡಿಗೆ ಮನೆ ಮಾಡಿದ್ದ ಅವರು ಒಂದೇ ಸಿನಿಮಾ ನಿರ್ಮಾಣ ಮುಗಿದ ನಂತರ ದುಪ್ಪಟ್ಟು ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು. ಸಿನಿಮಾದ ಲಾಭ–ನಷ್ಟದ ಬಾಬತ್ತಿಗೂ ಅವರು ಮನೆಗಳನ್ನು ಬದಲಿಸುತ್ತಿದ್ದ ರೀತಿಗೂ ಸಂಬಂಧ ಇರುತ್ತಿತ್ತು. ಕೆಲವೇ ವರ್ಷಗಳ ಹಿಂದೆ ಅವರು ಎಚ್‌ಎಸ್‌ಆರ್‌ ಲೇಔಟ್‌ನ ಮನೆಯನ್ನು ಮಾರಾಟ ಮಾಡಿ, ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದರು. 

ಸಿನಿಮಾ ನಟನಾಗಿ ಹೆಸರು ಮಾಡುವ ಮೊದಲೇ ಅಂಬುಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದನ್ನು ಹಾಗೂ ಐವತ್ತು ವರ್ಷ ಕಳೆದ ನಂತರ ಶೈಲಜಾ ಅವರನ್ನು ಪ್ರೇಮಿಸಿ, ಅವರನ್ನೂ ವರಿಸಿದ್ದನ್ನು ಕೂಡ ದ್ವಾರಕೀಶ್ ಸಿನಿಮೀಯವಾಗಿ ಹೇಳುತ್ತಿದ್ದರು. ‘ಮೂರನೇ ರೀಲಿನಲ್ಲಿ ಅಂಬುಜಾ ಬದುಕಿಗೆ ಬಂದರೆ, ಹನ್ನೆರಡನೇ ರೀಲಿನಲ್ಲಿ ಶೈಲಜಾ ಬಂದಳು’ ಎಂದು ನಗುನಗುತ್ತಾ ನೆನಪಿಸಿಕೊಳ್ಳುತ್ತಿದ್ದರು. ಮೂರು ವರ್ಷಗಳ ಹಿಂದೆ ಅಂಬುಜಾ ನಿಧನರಾದರು. 

ದೈವಭಕ್ತರಾಗಿದ್ದ ದ್ವಾರಕೀಶ್, ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಹುಂಡಿ ಹಣವನ್ನು ಎಣಿಸುವ ಅವಕಾಶ ಸಿಕ್ಕಿದ ಪ್ರಸಂಗವನ್ನು ವಿವರವಾಗಿ ಹಂಚಿಕೊಂಡಿದ್ದರು. ತಮ್ಮ ಹೃದಯ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆ ಶುಲ್ಕ ಕಟ್ಟಿದ ಜಾಫರ್ ಷರೀಫ್ ಅವರನ್ನು ತಮ್ಮ ಪಾಲಿನ ಅಲ್ಲಾಹು ಎಂದೇ ಬಣ್ಣಿಸುತ್ತಿದ್ದರು. 

ವ್ಯವಹಾರ ಹಾಗೂ ಸ್ನೇಹದ ವಿಷಯದಲ್ಲಿ ಆಗಾಗ ಹದ ತಪ್ಪುತ್ತಿತ್ತು ಎನ್ನುವುದಕ್ಕೆ ವಿಷ್ಣು ಹಾಗೂ ದ್ವಾರಕೀಶ್ ನಡುವಿನ ಸುದೀರ್ಘ ಮುನಿಸು ದೊಡ್ಡ ಉದಾಹರಣೆ. ಆಮೇಲೆ ಇಬ್ಬರೂ ಸೇರಿ ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಿದರು. ‘ಆಪ್ತಮಿತ್ರ’ ಅಂತೂ ನಿರ್ಮಾಪಕರಾಗಿ ದ್ವಾರಕೀಶ್ ಅವರಿಗೆ ಪುನರ್ಜನ್ಮ ಕೊಟ್ಟ ಸಿನಿಮಾ. ನಂತರ ಮಕ್ಕಳನ್ನೇ ನಿರ್ಮಾಣಕ್ಕೆ ಇಳಿಸಿ, ‘ದ್ವಾರಕೀಶ್ ಚಿತ್ರ’ ಬ್ಯಾನರ್‌ನ ಮೂಲಕ ಇನ್ನಷ್ಟು ಮನರಂಜನೆ ಕೊಡಲು ಯತ್ನಿಸಿದರು. ತಮ್ಮ ಗಮನಕ್ಕೇ ತಾರದೆ ‘ಆಪ್ತಮಿತ್ರ’ ಸಿನಿಮಾವನ್ನು ರಜನೀಕಾಂತ್ ತಮಿಳಿನಲ್ಲಿ ರೀಮೇಕ್ ಮಾಡಿದ್ದಕ್ಕೆ ಬೇಸರಿಸಿದ್ದರು. 

ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್‌, ರಜನೀಕಾಂತ್ ಹೀಗೆ ದಿಗ್ಗಜರ ಜೊತೆಗಿನ ದ್ವಾರಕೀಶ್ ಸಿನಿಮಾ ನೆನಪು ಚಿರಂತನ. ‘ಗುರು ಶಿಷ್ಯರು’ ಸಿನಿಮಾದ ಗಟ್ಟಿ ಹಾಸ್ಯವು ತಲೆಮಾರುಗಳನ್ನು ರಂಜಿಸಿರುವುದು ಸಣ್ಣ ಕಾಣ್ಕೆಯೇನೂ ಅಲ್ಲ. ನಟಿ ಶೃತಿ ಅವರಿಗೆ ಆ ಹೆಸರನ್ನು ಇರಿಸಿ, ಅದೇ ಹೆಸರಿನಲ್ಲಿ ಚಿತ್ರ ನಿರ್ಮಿಸಿ ಗೆದ್ದವರು ಅವರು. ಹಳಬರು ಮುನಿಸಿಕೊಂಡರೆ, ಹೊಸಬರನ್ನು ಕರೆದು ಸಿನಿಮಾ ಮಾಡಿ, ನಕ್ಕವರು. ಕುಣಿಯುವ ಸ್ಟಾರ್‌ ಸಿಗದೇ ಹೋದರೇನಂತೆ ಎಂದು ವಿನೋದ್ ರಾಜ್ ಅವರನ್ನೇ ಹಾಕಿಕೊಂಡು ‘ಡಾನ್ಸ್‌ ರಾಜಾ ಡಾನ್ಸ್‌’ ಮಾಡಿದರು. ಹಟಕ್ಕೆ ಬಿದ್ದು ಶಿವರಾಜಕುಮಾರ್‌ ಕಾಲ್‌ಷೀಟ್ ಪಡೆದು ‘ಆಯುಷ್ಮಾನ್‌ಭವ’ ಚಿತ್ರ ನಿರ್ಮಿಸಿದರು. ವಿಷ್ಣು ಅಗಲಿದ ಮೇಲೆ ‘ವಿಷ್ಣುವರ್ಧನ’ ಎಂಬ ಸಿನಿಮಾ ನಿರ್ಮಿಸಿ, ಸುದೀಪ್‌ಗೆ ತಮ್ಮ ಗೆಳೆಯನ ಅಂಗಿ ತೊಡಿಸಲೂ ಯತ್ನಿಸಿದರು. 

ದ್ವಾರಕೀಶ್ ವೃತ್ತಿಬದುಕಿನ ಒಂದೊಂದು ರೀಲ್‌ನಲ್ಲೂ ಹೀಗೆ ಸಾಹಸದ ಲೇಪವಿದೆ. ಸಿನಿಮಾ ಪ್ರೀತಿ ಇದೆ. ಇನ್ನು ಉಳಿದಿರುವುದು ಅವುಗಳ ನೆನಪಿನ ಮೆರವಣಿಗೆಯಷ್ಟೆ.

Kannada actor Dwarakeesh seen with co actress B Jaya in a film Photo_DH/PV Archives

Kannada actor Dwarakeesh seen with co actress B Jaya in a film Photo_DH/PV Archives

‘ಸದಾ ನಗಿಸುತ್ತಿದ್ದ...’

‘ಸಂಬಂಧದಿಂದ ನನ್ನ ಭಾವ. ಚಿಕ್ಕವರಿದ್ದಾಗಿನಿಂದ ಒಟ್ಟಿಗೆ ಬೆಳೆದವರು. ನಾನು ಡಿಗ್ರಿ ಓದುತ್ತಿದ್ದಾಗ ಅವನು ಪಿಯುಸಿಯಲ್ಲಿದ್ದ. ಯಾವಾಗಲೂ ಅವನಿಗೆ ಸಿನಿಮಾ ಹುಚ್ಚು. ಆದರೆ ಮನೆಯಲ್ಲಿ ವಿದ್ಯಾಭ್ಯಾಸ ಮೊದಲು ಎಂಬ ತತ್ವವಿತ್ತು. ಹೀಗಾಗಿ ಅವನು ಆಟೋಮೊಬೈಲ್‌ನಲ್ಲಿ ಎಂಜಿನಿಯರಿಂಗ್‌ ಮುಗಿಸಿದ’ ಎಂದು ದ್ವಾರಕೀಶ್‌ ಜೊತೆಗಿನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು ಹೆಸರಾಂತ ನಿರ್ದೇಶಕ ಭಾರ್ಗವ. 

‘ಅವನ ನಿರ್ಮಾಣದ ‘ಮೇಯರ್‌ ಮುತ್ತಣ್ಣ’, ‘ಕೌ ಬಾಯ್‌ ಕಳ್ಳ’ ಚಿತ್ರಗಳಿಗೆ ನಾನು ಸಹಾಯಕ ನಿರ್ದೇಶಕನಾಗಿದ್ದೆ. ಸಿದ್ಧಲಿಂಗಯ್ಯನವರಿಗೆ ನಿರ್ದೇಶಕರಾಗಿ ಅವಕಾಶ ನೀಡಿದ. ಅದೇ ರೀತಿ ನನ್ನ ಚೊಚ್ಚಲ ಸಿನಿಮಾಕ್ಕೂ ಅವನ ನಿರ್ಮಾಣ ಸಂಸ್ಥೆಯಿಂದಲೇ ಅವಕಾಶ ನೀಡಿದ. ಬಳಿಕ ಆ ನಿರ್ಮಾಣ ಸಂಸ್ಥೆಯಲ್ಲಿ 5–6 ಸಿನಿಮಾಗಳನ್ನು ಮಾಡಿದೆ’ ಎಂದು ಹೇಳಿದರು.

‘ದ್ವಾರಕೀಶ್‌ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ನಗಿಸುತ್ತಿದ್ದ ಲವಲವಿಕೆಯ ವ್ಯಕ್ತಿ. ಸಾಕಷ್ಟು ತರ್ಲೆ ಘಟನೆಗಳಿವೆ. ಆದರೆ ಈ ಹೊತ್ತಿನಲ್ಲಿ ಅದರ ಮೆಲುಕು ಬೇಡ. ನಗಿಸೋದೆ ಅವನ ಜೀವನ. ಕಷ್ಟವಿದ್ದರೂ ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ಸಿನಿಮಾವೇ ಅವನ ಪ್ರಪಂಚ. ಸತತ 17 ಸಿನಿಮಾಗಳಲ್ಲಿ ಸೋತು ಸಾಕಷ್ಟು ಕಳೆದುಕೊಂಡ. ಆದರೂ ಛಲ ಬಿಡಲಿಲ್ಲ. ಮತ್ತೆ ಗೆದ್ದ. ತಮಿಳಿನಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸಿತ್ತು. ಹೀಗಾಗಿ ರಜನಿಕಾಂತ್‌-ಶ್ರೀದೇವಿ ಜೊತೆ ‘ನಾನ್‌ ಅಡಿಮೈ ಇಲ್ಲೈ’, ‘ಅದುತ ವಾರಿಸು’ ಸಿನಿಮಾ ಮಾಡಿದ. ಒಟ್ಟಿನಲ್ಲಿ ಚಿತ್ರರಂಗದ ಧೀಮಂತ ಅವನು’ ಎಂದು ಮಾತಿಗೆ ವಿರಾಮ ಹಾಕಿದರು.

******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT