ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಪ್ರಜ್ವಲ್‌ ‘ಅಬ್ಬರ’ - ಸಿನಿಪಯಣದ ಅವಲೋಕನ ಮತ್ತು ಏರಿಳಿತ

Last Updated 17 ನವೆಂಬರ್ 2022, 21:30 IST
ಅಕ್ಷರ ಗಾತ್ರ

18ರ ವಯಸ್ಸಲ್ಲೇ ಬಣ್ಣ ಹಚ್ಚಿ ಈಗ 35 ಚಿತ್ರಗಳನ್ನು ಮುಗಿಸಿರುವ ಪ್ರಜ್ವಲ್‌ ದೇವರಾಜ್‌ ಈಗ ‘ಅಬ್ಬರ’ದ ಮೂಲಕ ಇಂದು (ನ. 18) ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಚಿತ್ರಗಳು ಬಿಡುಗಡೆಯ ಸಾಲಿನಲ್ಲಿವೆ. ಈ ಹೊತ್ತಿನಲ್ಲಿ ಅವರ ಸಿನಿಪಯಣದ ಅವಲೋಕನ ಮತ್ತು ಏರಿಳಿತದ ಹಾದಿಯನ್ನು ಸಿನಿಮಾ ಪುರವಣಿ ಮುಂದೆ ತೆರೆದಿಟ್ಟರು.

ಇದೇನು ಹೊಸದಾಗಿ ‘ಅಬ್ಬರ’ ತೋರುತ್ತಿದ್ದೀರಿ?

‘ಅಬ್ಬರ’ ಚಿತ್ರಕ್ಕೆ ಕೋವಿಡ್‌ ಪೂರ್ವದಲ್ಲೇ ಶೂಟಿಂಗ್‌ ನಡೆದಿತ್ತು. ಎರಡು ಹಾಡುಗಳು ಬಾಕಿ ಇದ್ದವು. ಕೋವಿಡ್‌ ಸಮಯದಲ್ಲಿ ವಿದೇಶ ಪ್ರಯಾಣಕ್ಕೆ ನಿರ್ಬಂಧ ಇದ್ದ ಕಾರಣ ನಮಗೆ ಹೋಗಲಾಗಲಿಲ್ಲ. ಹಾಗಾಗಿ ಸ್ವಲ್ಪ ವಿಳಂಬವಾಯಿತು. ಒಟ್ಟಾರೆ ಕುಟುಂಬ ಸಮೇತ ನೋಡಬೇಕಾದ ಮನೋರಂಜನಾತ್ಮಕ ಚಿತ್ರವಿದು.

ಈ ಚಿತ್ರದಲ್ಲಿ ತಮ್ಮ ಪಾತ್ರ ವೈವಿಧ್ಯ ಏನೇನು?

ತುಂಬಾ ವೈವಿಧ್ಯಮಯವಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಕಲಾವಿದ, ಒಬ್ಬ ಪೊರ್ಕಿ ಹುಡುಗ ಮತ್ತು ಒಬ್ಬ ಕಾಲು ಮುರಿದುಕೊಂಡ ಸಹೃದಯಿ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೂರೂ ಪಾತ್ರಗಳಿಗೆ ಸಂಬಂಧವಿದೆ. ಮೂವರು ನಾಯಕಿಯರಿದ್ದಾರೆ. ಈ ಪಾತ್ರಗಳಲ್ಲಿ ಒಂದಕ್ಕೊಂದು ಸಂಬಂಧ ಏನು ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಮೊದಲಾರ್ಧ ಮುಗಿಯುತ್ತದೆ. ಎರಡನೇ ಭಾಗದಲ್ಲಿ ಈ ಕುತೂಹಲ, ಗೊಂದಲಗಳಿಗೆ ಉತ್ತರಿಸುತ್ತಾ ಹೋಗಿದ್ದೇವೆ. ಕ್ರಿಷ್‌ನಂಥ ಅವತಾರ ತಂದದ್ದು ಮಕ್ಕಳಿಗಾಗಿ. ಎಲ್ಲ ವಯೋಮಾನದವರನ್ನು ಗುರಿಯಾಗಿಟ್ಟುಕೊಂಡು ಈ ಚಿತ್ರ ತಂದಿದ್ದೇವೆ.

ಮೂರು ಪಾತ್ರಗಳಲ್ಲಿ ತೊಡಗಿಕೊಂಡಾಗ ಬಂದ ಸವಾಲುಗಳು?

ಕಲಾವಿದನ ಪಾತ್ರದಲ್ಲಿ ಉತ್ತರ ಕರ್ನಾಟಕದ ಶೈಲಿಯ ಸೊಗಡು ಹಾಗೂ ದೇಹಭಾಷೆ ಇದೆ. ಪೊರ್ಕಿಯಂಥ ಪಾತ್ರದಲ್ಲಿ ತಪ್ಪು ತಪ್ಪಾಗಿ ಇಂಗ್ಲಿಷ್‌ ಮಾತನಾಡುತ್ತಾ ಅನಿವಾಸಿ ಭಾರತೀಯ ಹುಡುಗಿಗೆ ಕಾಡುವ ಪಾತ್ರ. ಮೂರನೆಯದು ಅಂಗವಿಕಲನ ಪಾತ್ರ. ಇವುಗಳನ್ನೇನೋ ಒಪ್ಪಿಕೊಂಡೆ. ಆದರೆ ಒಂದು ಸಂದರ್ಭದಲ್ಲಿ ಏಕಕಾಲದಲ್ಲಿ ಮೂರೂ ಪಾತ್ರಗಳನ್ನು ನಿರ್ವಹಿಸಬೇಕಾಗಿ ಬಂತು. ಒಂದು ಷಾಟ್‌ ಮುಗಿಸಿ, ಇನ್ನೊಂದಕ್ಕೆ ಬದಲಾಗಬೇಕು. ಬಟ್ಟೆ, ಮೇಕ್‌ ಅಪ್‌ ಬದಲಾಯಿಸಿಕೊಂಡು ಮತ್ತೆ ಕ್ಯಾಮೆರಾ ಮುಂದೆ ನಿಲ್ಲಬೇಕಾಗುತ್ತಿತ್ತು. ಇನ್ನು ಇಂಥ ಪಾತ್ರ ಒಪ್ಪಿಕೊಳ್ಳಬೇಕಾದರೆ ಎಚ್ಚರ ವಹಿಸಬೇಕು.

‘ಅಬ್ಬರ’ ನೋಡಬೇಕಾದ ಕಾರಣ?

ಒಂದೊಳ್ಳೆ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ಹೋಗಿಬಂದ ಅನುಭವವಾಗುತ್ತದೆ. ಸಾಕಷ್ಟು ಹಾಸ್ಯ, ರಂಜನೆ ಇದೆ.ಕಮರ್ಷಿಯಲ್‌ ಅಂಶಗಳೂ ಬೇಕಲ್ಲವೇ? ಹಾಗಾಗಿ ಸಾಹಸ ದೃಶ್ಯಗಳೂ ಇವೆ. ವಿಶೇಷ ಪರಿಣಾಮಗಳ ಮೂಲಕ ಹಲವು ದೃಶ್ಯಗಳನ್ನು ಸಂಯೋಜಿಸಿದ್ದೇವೆ. ಒಟ್ಟಿನಲ್ಲಿ ಎಲ್ಲವೂ ಖುಷಿ ಕೊಡುತ್ತವೆ. ಥಾಯ್ಲೆಂಡ್‌ನ ಹೊಸ ತಾಣದಲ್ಲಿ ಚಿತ್ರೀಕರಿಸಿದ್ದೇವೆ. ಈ ಹಿಂದೆ ಚಿತ್ರಗಳಲ್ಲಿ ತೋರಿಸಿದ ತಾಣಗಳನ್ನೇ ತೋರಿಸುವುದು ಆಗಬಾರದು. ಅದಕ್ಕಾಗಿ ಎಚ್ಚರ ವಹಿಸಿದ್ದೇವೆ.

35 ಚಿತ್ರಗಳ ಹಾದಿಯನ್ನು ಅವಲೋಕಿಸುವುದಾದರೆ?

ನಾನು ಕನಸನ್ನು ಜೀವಿಸುತ್ತಿದ್ದೇನೆ. ಸೋಲು– ಗೆಲುವು ಇದ್ದದ್ದೇ. ಆದರೆ, ಈಗ ಈ ಕ್ಷೇತ್ರದಲ್ಲಿ ಸ್ಥಿರವಾಗುತ್ತಿದ್ದೇನೆ. ತುಂಬಾ ಖುಷಿಯಾಗಿದ್ದೇನೆ. ನನ್ನ ಅಪ್ಪ (ದೇವರಾಜ್‌) ಸಿನಿಮಾ ಕ್ಷೇತ್ರಕ್ಕೆ ಬಂದದ್ದೇ 32ನೇ ವಯಸ್ಸಿನಲ್ಲಿ. ನಾನು 18ನೇ ವಯಸ್ಸಿಗೇ ಬಂದುಬಿಟ್ಟೆ. ಈ ಬೆಳವಣಿಗೆ ನೋಡುವಾಗ ಖುಷಿಯೆನಿಸುತ್ತದೆ. ಅಪ್ಪನ ಮಾರ್ಗದರ್ಶನವೂ ಹೀಗೆಯೇ ಮುಂದುವರಿದಿದೆ. ಅವರೊಂದಿಗೆ ಕಥೆಗಳನ್ನು ಹಂಚಿಕೊಳ್ಳುತ್ತೇನೆ. ಅಭಿಪ್ರಾಯಪಡೆದು ಮುಂದುವರಿಯುತ್ತೇನೆ. ಜನರೂ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ದೇವರಾಜ್‌ ಅವರ ಮಗನ ಜೊತೆ ಅಭಿನಯಿಸುತ್ತಿದ್ದೇನೆ ಎಂದು.

ಹೆಚ್ಚಾಗಿ ಇನ್‌ಸ್ಪೆಕ್ಟರ್‌ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದೀರಿ. ಅಪ್ಪನ ಪ್ರಭಾವವೇ?

ಹಾಗೇನಿಲ್ಲ. ಅಪ್ಪನನ್ನು ಕಂಡ ಅನೇಕ ಪೊಲೀಸರು ಸಲ್ಯೂಟ್‌ ಹೊಡೆಯುತ್ತಿದ್ದರಂತೆ. ಅದ್ಯಾಕೋ ನನಗೆ ಅಂಥದ್ದೇ ಪಾತ್ರಗಳು ಬರುತ್ತಿವೆ. ನಾನು ಹೊಂದಿಕೊಳ್ಳುತ್ತಿರುವುದೂ ಕಾರಣವಿರಬಹುದು. ‘ಇನ್‌ಸ್ಪೆಕ್ಟರ್‌ ವಿಕ್ರಂ’ ಚಿತ್ರದ ನಂತರ ಪೊಲೀಸ್‌ ಪಾತ್ರಗಳೇ ಹುಡುಕಿಕೊಂಡು ಬಂದವು. ಮಾಫಿಯಾ ನಂತರ ಇನ್ನೊಂದು ಹಾರರ್‌ ಚಿತ್ರ, ಲೋಹಿತ್‌ ನಿರ್ದೇಶನದಲ್ಲಿ ಮೂಡಿಬರಲಿದೆ. ಅದರಲ್ಲಿಯೂ ಇನ್‌ಸ್ಪೆಕ್ಟರ್‌ ಪಾತ್ರ ಇದೆ. ಆ ಬಳಿಕ ಆ ಪಾತ್ರಕ್ಕೆ ಸ್ವಲ್ಪ ಬ್ರೇಕ್‌ ಹಾಕುತ್ತೇನೆ. ಬೇರೆ ರೀತಿಯ ಚಿತ್ರಗಳನ್ನು ಮಾಡಬೇಕು ಎಂಬ ಆಸೆ ಇದೆ.

ಪ್ರಜ್ವಲ್‌ ದೇವರಾಜ್‌
ಪ್ರಜ್ವಲ್‌ ದೇವರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT