ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ಗೆ ಪ್ರಣೀತಾ ಎಂಟ್ರಿ

Last Updated 17 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘ಪೊರ್ಕಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ನಟಿ ಪ್ರಣೀತಾ ಸುಭಾಷ್‌. ಈ ಚಿತ್ರದಲ್ಲಿ ಅವರು ನಟ ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದರು. ಮೊದಲ ಚಿತ್ರದಲ್ಲಿಯೇ ಯಶಸ್ಸು ಕಂಡ ಅವರು ತೆಲುಗು, ತಮಿಳಿಗೂ ಹಾರಿದರು. ಅಲ್ಲಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿ ಮತ್ತೆ ‘ಜರಾಸಂಧ’ನಿಗಾಗಿ ಕನ್ನಡಕ್ಕೆ ಮರಳಿದರು.

ಕಾಲಿವುಡ್‌, ಟಾಲಿವುಡ್‌ನಲ್ಲಿ ಲಭಿಸಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಅಲ್ಲಿಯೇ ನೆಲೆಯೂರಲು ಪ್ರಯತ್ನಿಸಿದರು. ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅವರಿಗೆ ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ.

ಈ ನಡುವೆಯೇ ಅವರು ಹಿಂದಿಯ ಆಲ್ಬಂವೊಂದರಲ್ಲಿ ನಟಿಸಲು ಬಿಟೌನ್‌ ಅಂಗಳಕ್ಕೂ ಪ್ರವೇಶಿಸಿದರು. ಬಾಲಿವುಡ್‌ ನಿರ್ದೇಶಕ ಸುರೇಶ್‌ ತ್ರಿವೇಣಿ ನಿರ್ದೇಶನದ ‘ಚನ್ ಕಿತ್ತಾನ್’ ಹೆಸರಿನ ಮ್ಯೂಸಿಕ್ ವಿಡಿಯೊದಲ್ಲಿ ನಟ ಆಯುಷ್ಮಾನ್ ಖುರಾನಾ ಅವರಿಗೆ ಜೋಡಿಯಾಗಿ ಪ್ರಣೀತಾ ಹೆಜ್ಜೆಹಾಕಿದರು. ಇದರಿಂದ ಬಾಲಿವುಡ್‌ನಲ್ಲಿ ಅವಕಾಶದ ಬಾಗಿಲು ತೆರೆಯುತ್ತದೆ ಎಂದು ಆಕೆಯ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಆದರೆ, ಹಾಗಾಗಲಿಲ್ಲ. ಕೆಲವು ದಿನಗಳ ಕಾಲ ನಟನೆಯಿಂದ ದೂರ ಸರಿದ ಅವರು ಅಪ್ಪನ ಸಮಾಜಸೇವೆಗೆ ಕೈಜೋಡಿಸಿದರು. ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ನಟನೆಯ‌‘ಮಾಸ್‌ ಲೀಡರ್‌’ ಚಿತ್ರದಲ್ಲಿ ಶಿವಣ್ಣ ಅವರ ಪತ್ನಿಯಾಗಿ ಅವರು ಕಾಣಿಸಿಕೊಂಡಿದ್ದರು. ಇದು ಕನ್ನಡದಲ್ಲಿ ಅವರು ನಟಿಸಿದ ಕೊನೆಯ ಚಿತ್ರ.

ಸದ್ಯ ಪ್ರಣೀತಾಗೆ ಹಿಂದಿಯಲ್ಲಿ ಎರಡು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದೆಯಂತೆ. ‘ಹಿಂದಿಯಲ್ಲಿ ಅವಕಾಶ ಬಂದಿರುವುದು ನಿಜ. ಇನ್ನೂ ಅಂತಿಮಗೊಂಡಿಲ್ಲ. ಸದ್ಯದಲ್ಲಿಯೇ ಈ ಬಗ್ಗೆ ಮಾಹಿತಿ ಬಹಿರಂಗಪಡಿಸುತ್ತೇನೆ’ ಎನ್ನುತ್ತಾರೆ ಅವರು.

‘ಕನ್ನಡದ ಸಿನಿಮಾಗಳಲ್ಲಿ ನಟಿಸುವಂತೆ ನಿರ್ದೇಶಕರಿಂದ ಕೋರಿಕೆ ಬಂದಿತ್ತು. ಪಾತ್ರಗಳಲ್ಲಿ ಹೊಸತನ ಇರಲಿಲ್ಲ. ಹಾಗಾಗಿ, ನಟಿಸಲು ಒಪ್ಪಿಕೊಳ್ಳಲಿಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ನಟಿಸುತ್ತೇನೆ’ ಎಂಬುದು ಅವರ ಸ್ಪಷ್ಟ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT