ಭಾನುವಾರ, ನವೆಂಬರ್ 29, 2020
21 °C

ಹಾಲಿವುಡ್‌ನಲ್ಲಿ ಪ್ರಿಯಾಂಕಾಗೆ ಬಹು ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Priyanka Chopra

2000ದಲ್ಲಿ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡ ಚೆಲುವೆ ಪ್ರಿಯಾಂಕ ಚೋಪ್ರಾ ತಮಿಳಿನ ‘ಥಮಿಝನ್‌’ ಸಿನಿಮಾದ ಮೂಲಕ ನಟನೆ ಆರಂಭಿಸಿದವರು. ‘ದಿ ಹೀರೊ: ಲವ್‌ ಸ್ಟೋರಿ ಆಫ್ ಎ ಸ್ಪೈ’ ಬಾಲಿವುಡ್‌ನಲ್ಲಿ ಪ್ರಿಯಾಂಕ ನಟಿಸಿದ ಮೊದಲ ಸಿನಿಮಾ. ಬಾಲಿವುಡ್‌ನಲ್ಲಿ ‘ಫ್ಯಾಷನ್‌, ಡಾನ್‌, ಅಂದಾಜ್‌, ಕಿಸ್ಮತ್‌, ದೋಸ್ತಾನಾ, ಬರ್ಫಿ, ಬಾಜಿರಾವ್‌ ಮಸ್ತಾನಿ’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ರಾಷ್ಟ್ರಪ್ರಶಸ್ತಿ, ಪದ್ಮಶ್ರೀಯಂತಹ ಗೌರವಕ್ಕೂ ಪಾತ್ರರಾಗಿದ್ದಾರೆ ಈ ಬೆಡಗಿ. ಇಂತಿಪ್ಪ ಪಿಗ್ಗಿ ‘ಬೇವಾಚ್’ ಸಿನಿಮಾದ ಮೂಲಕ ಹಾಲಿವುಡ್‌ ಅಂಗಳದಲ್ಲಿ ಕಮಾಲ್ ಮಾಡಿದ್ದರು. ಬೇವಾಚ್ ಮೂಲಕ ಹಾಲಿವುಡ್‌ನ ಅನೇಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ‘ಎ ಕಿಡ್‌ ಲೈಕ್ ಜೇಕ್‌’ ಹಾಗೂ ‘ಈಸಂಟ್‌ ಇಟ್ ರೊಮ್ಯಾಂಟಿಕ್’ ಚಿತ್ರಗಳಲ್ಲಿ ಪ್ರಿಯಾಂಕ ನಟಿಸಿದ್ದಾರೆ. ‘ವಿ ಕ್ಯಾನ್ ಬಿ ಹೀರೊಸ್’ ಹಾಗೂ ‘ದಿ ಮ್ಯಾಟ್ರಿಕ್ಸ್ 4’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಸದ್ಯದ ಸುದ್ದಿಯ ಪ್ರಕಾರ 38 ವರ್ಷದ ಈ ಬೆಡಗಿ ಇನ್ನೊಂದು ಹಾಲಿವುಡ್‌ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರಂತೆ. ಈ ಬಾರಿ ಆಕೆ ಮ್ಯೂಸಿಕ್ ಐಕಾನ್‌ ಹಾಗೂ 5 ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತೆ ಸೆಲಿನ್‌ ಡಿಯೋನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ‘ಟೆಕ್ಸ್ಟ್ ಫಾರ್ ಯು’ ಎಂಬ ತಾತ್ಕಾಲಿಕ ಹೆಸರು ಇರಿಸಿರುವ ಈ ಸಿನಿಮಾದಲ್ಲಿ ಔಟ್‌ಲ್ಯಾಂಡರ್ ಖ್ಯಾತಿಯ ಸ್ಯಾನ್ ಹೆಘನ್ ಕೂಡ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ಜಿಮ್ ಸೌಸ್ಟ್ರ್ ನಿರ್ದೇಶನವಿದೆ. 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾಂಕ ‘ಜಿಮ್ ಸೌಸ್ಟ್ರ್, ಸೆಲಿನ್‌ ಡಿಯೋನ್, ಸ್ಯಾನ್ ಹೆಘನ್‌ರಂತಹ ಘಟಾನುಘಟಿಗಳ ಜೊತೆ ನಟಿಸುತ್ತಿರುವುದಕ್ಕೆ ತುಂಬಾನೇ ಖುಷಿ ಇದೆ. ಈ ಸಿನಿಮಾದ ಆರಂಭಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ. ಸದ್ಯ ಬರ್ಲಿನ್‌ನಲ್ಲಿರುವ ಪ್ರಿಯಾಂಕ ‘ಮಾಟ್ರಿಕ್ಸ್ 4’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ‘ಹ್ಯಾಪಿನೆಸ್ ಕಂಟಿನ್ಯೂಸ್‌, ದಿ ವೈಟ್ ಟೈಗರ್’ ಸಿನಿಮಾಗಳು ಈಕೆಯ ಕೈಯಲ್ಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು