ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಾಗಿ ಸಿನಿಮಾ ಮಾಡಲ್ಲ: ಪಿ.ಶೇಷಾದ್ರಿ

ಮೋಹನದಾಸ ಬಿಡುಗಡೆ ಅ.2ಕ್ಕೆ; ಮೂರು ಭಾಷೆಗಳಲ್ಲಿ ಚಿತ್ರೀಕರಣ ಪೂರ್ಣ
Last Updated 21 ಸೆಪ್ಟೆಂಬರ್ 2019, 14:21 IST
ಅಕ್ಷರ ಗಾತ್ರ

ಮೈಸೂರು: ‘ಸಿನಿಮಾ ನಿರ್ದೇಶಿಸುವುದು ನನ್ನ ಫ್ಯಾಷನ್‌. ಪ್ರಶಸ್ತಿಗೋಸ್ಕರವೇ ನಾನು ಸಿನಿಮಾ ಮಾಡಲ್ಲ’ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ತಿಳಿಸಿದರು.

‘ಸಿನಿಮಾದ ಯಶಸ್ಸಿನ ಮಾನದಂಡ ಬೇರೆ ಬೇರೆ ಇದೆ. ಒಟ್ಟಾರೆ ಕನ್ನಡ ಚಲನಚಿತ್ರದ ವಾರ್ಷಿಕ ಸಕ್ಸಸ್‌ ರೇಟ್‌ ಶೇ.3ರಿಂದ 4ರಷ್ಟಿದೆ. ಇಷ್ಟಿದ್ದರೂ ಬಾಲಿವುಡ್‌ಗಿಂತಲೂ ಹೆಚ್ಚು ಸಿನಿಮಾ ಏಕೆ ನಿರ್ಮಾಣವಾಗುತ್ತಿವೆ ಎಂಬುದು ನಿಗೂಢವಾಗಿ ಕಾಡುತ್ತಿದೆ’ ಎಂದು ಶನಿವಾರ ನಗರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೆಲವರು ತಮ್ಮ ಪುತ್ರ, ಅಣ್ಣ, ತಮ್ಮ, ಚಿಕ್ಕಪ್ಪನನ್ನು ನಾಯಕ ನಟನನ್ನಾಗಿ ಮಾಡಲು ಚಿತ್ರ ನಿರ್ಮಿಸುತ್ತಾರೆ. ಹಲವರು ಬೇರೆ ಬೇರೆ ಉದ್ಯಮದಲ್ಲಿ ದುಡಿದ ಹಣವನ್ನು ಅಧಿಕೃತ ಮಾಡಿಕೊಳ್ಳಲು ಸಿನಿಮಾ ಮಾಡುವವರು ಇದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಶತದಿನೋತ್ಸವದ ಸಂಭ್ರಮ ಚಿತ್ರರಂಗದಿಂದಲೇ ಮರೆಯಾಗಿದೆ. ಇದೀಗ 25 ದಿನದ ಪೋಸ್ಟರ್‌ ಬಿಡುಗಡೆಯಾಗುವುದೇ ಸಡಗರ ಎನಿಸಿದೆ. ಈಚೆಗೆ ಕುಳಿತಲ್ಲೇ ಮನರಂಜನೆಯ ಜಗತ್ತಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚಿದಂತೆ ಚಿತ್ರಮಂದಿರದತ್ತ ಜನ ಬರುವುದು ಕ್ಷೀಣಿಸುತ್ತಿದೆ. ಕೆಲ ಹೊತ್ತಿನ ಕತ್ತಲೆಯನ್ನು ಹುಡುಕಿ ಚಲನಚಿತ್ರ ಮಂದಿರಕ್ಕೆ ಬರುವ ಬೆರಳೆಣಿಕೆಯ ಯುವ ಸಮೂಹವೇ ಇದೀಗ ಪ್ರೇಕ್ಷಕ ವರ್ಗವಾಗಿದೆ. ಇವರ ನಿರೀಕ್ಷೆಯ ಮನರಂಜನೆ ಸಹ ಅತಿ ಕೀಳುಮಟ್ಟದ್ದಾಗಿದೆ’ ಎಂದು ಪಿ.ಶೇಷಾದ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೋನಿಯಾ: ‘ಗಾಂಧಿ ಬಗ್ಗೆ ಇದೂವರೆಗೂ ಎರಡು ಕಥಾನಕ ಚಿತ್ರಗಳಷ್ಟೇ ನಿರ್ಮಾಣಗೊಂಡಿವೆ. ಬಾಲ್ಯ ಪರಿಚಯಿಸಬೇಕು ಎಂಬ ಸದುದ್ದೇಶದಿಂದ, ಹೆಚ್ಚು ಜನರನ್ನು ತಲುಪಬೇಕು ಎಂಬ ನಿರೀಕ್ಷೆಯಿಂದ ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಮೋಹನದಾಸ ಎಂಬ ಚಲನಚಿತ್ರ ನಿರ್ದೇಶಿಸಿರುವೆ. ಅ.2ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.

‘ಗುಜರಾತ್‌ನಲ್ಲೇ ಚಲನಚಿತ್ರದ ಚಿತ್ರೀಕರಣ ನಡೆದಿದೆ. ಗಾಂಧಿಯ ಬಾಲ್ಯದ ಪಾತ್ರವನ್ನು ಇಬ್ಬರು ಬಾಲಕರು ಅಭಿನಯಿಸಿದ್ದಾರೆ. ಮೈಸೂರಿನ ಪರಮಸ್ವಾಮಿ ಮೋನಿಯಾ ಪಾತ್ರದಲ್ಲಿ ನಟಿಸಿದ್ದರೆ, ಬೆಂಗಳೂರಿನ ಸಮರ್ಥ ಮೋಹನದಾಸ ಪಾತ್ರದಲ್ಲಿ ನಟಿಸಿದ್ದಾನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT